ಹಿಂದಿ ಬಿಗ್​ಬಾಸ್​ ಸೀಸನ್ 12ರ ವಿನ್ನರ್​, ಕಿರುತೆರೆ ನಟಿ ದೀಪಿಕಾ ಕಾಕರ್ ಅವರಿಗೆ ಲಿವರ್ ಕ್ಯಾನ್ಸರ್ ಇರುವುದು ಖಚಿತಪಡಿಸಿದ್ದಾರೆ. ಈ ಬಗ್ಗೆ ಖುದ್ದು ನಟಿ ತಮ್ಮ ಇನ್ಸ್​ಟಾಗ್ರಾಮ್​ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿದ್ದು ತಾನು ಎರಡನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಗೊತ್ತಾಗುತ್ತಿದ್ದಂತೆ ದೀಪಿಕಾ ಕಾಕರ್ ಶೀಘ್ರ ಗುಣಮುಖವಾಗಲಿ ಎಂದು ಅನೇಕ ಕಲಾವಿದರು ಮತ್ತು ಅಭಿಮಾನಿಗಳು ಹಾರೈಸಿದ್ದಾರೆ.ಕಳೆದ ಕೆಲವು ದಿನಗಳು ನನಗೆ ತುಂಬಾ ಕಷ್ಟಕರವಾಗಿದ್ದವು. ಹೊಟ್ಟೆಯ ಮೇಲ್ಭಾಗದಲ್ಲಿ ಬಹಳ ನೋವು ಕಾಣಿಸಿಕೊಳ್ಳುತ್ತಿತ್ತು. ಹಾಗಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿದೆ. ಆಗ ನನ್ನ ಯಕೃತ್ತಿನಲ್ಲಿ ಟೆನಿಸ್‌ ಚೆಂಡಿನ ಗಾತ್ರದ ಗೆಡ್ಡೆ ರೂಪುಗೊಂಡಿರುವುದು ಕಂಡುಬಂತು. ಇದು ಎರಡನೇ ಹಂತದ ಲಿವರ್‌ ಕ್ಯಾನ್ಸರ್‌ನ ಲಕ್ಷಣ. ನನಗೆ ಮತ್ತು ನನ್ನ ಕುಟುಂಬಕ್ಕೆ ಈಗ ಕಷ್ಟಕರ ಸಮಯವಾಗಿದೆ. ಆದರೆ ನಾನು ಹತಾಶಳಾಗಿಲ್ಲ. ನನಗೆ ಮತ್ತು ನನ್ನ ಕುಟುಂಬಕ್ಕೆ ನಿಮ್ಮ ಪ್ರಾರ್ಥನೆಗಳು ಬೇಕು. ನಾನು ಇದರಿಂದ ಹೊರಬರುತ್ತೇನೆ. ದೇವರಲ್ಲಿ ನನಗೆ ನಂಬಿಕೆ ಇದೆ ಎಂದು ದೀಪಿಕಾ ಕಾಕರ್‌ ಬರೆದುಕೊಂಡಿದ್ದಾರೆ.

ಮೂಲತಃ ಪುಣೆಯವರಾದ ದೀಪಿಕಾ ಕಾಕರ್, ಮೊದಲು ವಿಮಾನದಲ್ಲಿ ಅಟೆಡೆಂಟ್‌ ಆಗಿ ಕೆಲಸ ಆರಂಭಿಸಿ, ನಂತರ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. 2010ರಲ್ಲಿ ಪ್ರಸಾರವಾಗುತ್ತಿದ್ದ ‘ನೀರ್ ಭರೆ ತೇರೆ ನೈನಾ ದೇವಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ವೃತ್ತಿ ಆರಂಭಿಸಿದ್ದರು. ಆನಂತರ ಸಾಕಷ್ಟು ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ 2011ರಲ್ಲಿ ಬಿಗ್ ಬಾಸ್ ಹಿಂದಿ 5ರಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಝಲಕ್ ದಿಖ್ಲಾ ಜಾ, ನಾಚ್ ಬಲಿಯೆ ಮುಂತಾದ ಶೋಗಳಲ್ಲಿ ಕಾಣಿಸಿಕೊಂಡರು. 2018ರಲ್ಲಿ ‘ಬಿಗ್ ಬಾಸ್‌’ ಹಿಂದಿ ಸೀಸನ್ 12ರಲ್ಲಿ ಸ್ಪರ್ಧಿಯಾಗಿದ್ದ ಅವರು, ಆ ಸೀಸನ್‌ನ ವಿನ್ನರ್ ಆಗಿದ್ದರು.

2011ರಲ್ಲಿ ರೋನಕ್ ಸ್ಯಾಮ್ಸನ್ ಅವರನ್ನು ಮದುವೆಯಾಗಿದ್ದ ಈ ನಟಿ, 2015ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡರು. ಬಳಿಕ 2018ರಲ್ಲಿ ನಟ ಶೋಯೆಬ್‌ ಇಬ್ರಾಹಿಂ ಅವರ ಜೊತೆಗೆ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ನಟಿ ದೀಪಿಕಾ ಕಾಕರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ