ಪುನೀತ್‌ ರಾಜ್‌ಕುಮಾರ್‌ ನಟನೆಯ ʻಹುಡುಗರುʼ ಸಿನಿಮಾದಲ್ಲಿ ʻಪಂಕಜಾʼ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಶೆಫಾಲಿ ಜರಿವಾಲಾ ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನ ಚಿತ್ರರಂಗದಲ್ಲಿ ಶೋಕದ ಅಲೆ ಎಬ್ಬಿಸಿದೆ. 42ನೇ ವಯಸ್ಸಿನಲ್ಲಿ ನಟಿ ಶೆಫಾಲಿ ಇದೀಗ ಇಹಲೋಕ ತ್ಯಜಿಸಿದ್ದಾರೆ.
ʻಬಿಗ್‌ ಬಾಸ್‌ 13ರʼ ಸ್ಪರ್ಧಿ, ಬಾಲಿವುಡ್‌ನ ನಟಿ ಹಾಗೂ ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದ ಶೆಫಾಲಿ ಜರಿವಾಲಾ ಅವರ ಹಠಾತ್‌ ನಿಧನದ ಸುದ್ದಿ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ಆಘಾತ ತಂದಿದೆ.ಮುಂಬೈನಲ್ಲಿ ನಟಿ ಮತ್ತು ಮಾಡೆಲ್‌ ಶೆಫಾಲಿ ಜರಿವಾಲಾ ನಿಧನರಾಗಿದ್ದಾರೆ. 42 ವರ್ಷದ ಶೆಫಾಲಿ ಹೃದಯಾಘಾತದಿಂದ ಶೆಫಾಲಿ ಇಹಲೋಕ ತ್ಯಜಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜೂನ್‌ 27 ರಂದು ಅವರಿಗೆ ಹೃದಯಾಘಾತ ಸಂಭವಿಸಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಆಸ್ಪತ್ರೆ ಆಗಮಿಸುವುದಕ್ಕೂ ಮುನ್ನವೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ʻಪಂಕಜಾʼ ಹಾಡಿಗೆ ಹೆಜ್ಜೆ ಹಾಕಿದ್ದ ಶೆಫಾಲಿ ಶೆಫಾಲಿ ಅವರು ಅನೇಕ ಮ್ಯೂಸಿಕ್‌ ಆಲ್ಬಮ್‌ಗಳು ಮತ್ತು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ʻಕಾಂತಾ ಲಗಾʼ ರೀಮಿಕ್ಸ್‌ ವಿಡಿಯೋ ಮೂಲಕ ಅವರು ಹೆಚ್ಚು ಪ್ರಸಿದ್ಧರಾಗಿದ್ದರು. ಆ ನಂತರ ಸಲ್ಮಾನ್‌ ಖಾನ್‌ ನಟನೆಯ ʻಮುಜ್ಸೆ ಶಾದಿ ಕರೋಗಿʼ ಚಿತ್ರದಲ್ಲಿ ಕಾಣಿಸಿಕೊಂಡರು. ಶೆಫಾಲಿ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ʻನಾಚ್‌ ಬಲಿಯೇʼ ಕಾರ್ಯಕ್ರಮದಲ್ಲಿ ಪತಿ ಪರಾಗ್‌ ಅವರೊಂದಿಗೆ ಮತ್ತು ʻಬಿಗ್‌ ಬಾಸ್‌ 13’ರಲ್ಲಿ ಭಾಗವಹಿಸುವ ಮೂಲಕ ಜನಪ್ರಿಯತೆ ಗಳಿಸಿದರು. ಇನ್ನೂ ʻಹುಡುಗರುʼ ಸಿನಿಮಾದ ʻಪಂಕಜಾʼ ಹಾಡಿನಲ್ಲಿ ಪುನೀತ್‌ ರಾಜ್‌ಕುಮಾರ್‌, ಯೋಗೇಶ್‌, ಶ್ರೀನಗರ ಕಿಟ್ಟಿ ಜೊತೆಗೆ ಬಿಂದಾಸ್‌ ಆಗಿ ಹೆಜ್ಜೆ ಹಾಕಿದ್ದರು.
ನಟಿ ಶೆಫಾಲಿ ಜರಿವಾಲಾ ಅವರ ಪತಿ ಪರಾಗ್‌ ತ್ಯಾಗಿ. ಇವರಿಬ್ಬರು 4 ವರ್ಷಗಳ ಕಾಲ ಪ್ರೀತಿಸಿ, ಆಗಸ್ಟ್‌ 2014ರಲ್ಲಿ ವಿವಾಹವಾಗಿದ್ದರು. ಈ ದಂಪತಿ ಹಲವಾರು ರಿಯಾಲಿಟಿ ಶೋಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಪರಾಗಿ ತ್ಯಾಗಿ ಅವರು ಮೂಲತಃ ಉತ್ತರ ಪ್ರದೇಶದವರಾಗಿದ್ದು, ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.
ʻಕಾಂತಾ ಲಗಾʼ ಹಾಡಿನ ಮೂಲಕ ಮನೆ ಮಾತಾಗಿದ್ದ ಶೆಫಾಲಿ ಜರಿವಾಲಾ ಅವರ ನೃತ್ಯ ಮತ್ತು ಅಭಿನಯದ ಶೈಲಿಯನ್ನು ಅನೇಕರು ಅನುಸರಿಸುತ್ತಿದ್ದರು. ಅಲ್ಲದೇ ʻಬಿಗ್‌ ಬಾಸ್‌ʼ ರಿಯಾಲಿಟಿ ಶೋನಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹೇಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಅವರ ಹಠಾತ್‌ ನಿಧನದ ಸುದ್ದಿ ಅಭಿಮಾನಿಗಳು, ಕುಟುಂಬಸ್ಥರಿಗೆ ನೋವನ್ನುಂಟು ಮಾಡಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ