ಏನನ್ನಾದರೂ ಸಂಶೊಧನೆ ಮಾಡಿದವರು, ಯಾವುದಾದರೂ ವಿಷಯದಲ್ಲಿ ಪಿಎಚ್‌ಡಿ ‌ಪಡೆದವರಿಗೆ ಗೌರವ ಡಾಕ್ಟರೇಟ್ ನೀಡುವುದು ಸಾಮಾನ್ಯ. ಆದರೆ ರಕ್ತದಾನ ಮಾಡಿರುವುದಕ್ಕೆ ಗೌರವ ಡಾಕ್ಟರೇಟ್ ಸಿಕ್ಕಿರುವುದು ನಿಜಕ್ಕೂ ಅಪರೂಪ.

ಅನ್ನ ದಾನ, ವಿದ್ಯಾ ದಾನ ಮಹಾ ಶ್ರೇಷ್ಠ  ದಾನಗಳು. ಅಂತೆಯೇ ಬೇರೊಬ್ಬರ ಜೀವ ಉಳಿಸುವ ರಕ್ತದಾನವೂ ಅಷ್ಟೇ ಶ್ರೇಷ್ಠ.

ಹೀಗೆ ರಕ್ತದಾನ ಮಾಡುವ ಮೂಲಕವೇ ಮೈಸೂರಿನಲ್ಲಿ ಮನೆಮಾತಾಗಿರುವ ರಕ್ತದಾನಿ ಗಣೇಶ್ ಶರ್ಮ ಅವರಿಗೆ ರಕ್ತದಾನಕ್ಕಾಗಿಯೇ ಗೌರವ ಡಾಕ್ಟರೇಟ್ ಲಭ್ಯವಾಗಿರುವುದು ನಿಜಕ್ಕೂ ಸಂತೋಷದ ವಿಷಯ.

ಗಣೇಶ್ ಕುಮಾರ್ ಶರ್ಮ ಅವರು 2008 ರಿಂದ ರಕ್ತದಾನ ಮಾಡಲು ಆರಂಭಿಸಿದ್ದಾರೆ. 2016 ರಲ್ಲಿ ಅವರು ಅಪಘಾತಕ್ಕೀಡಾದ ಕಾರಣ ಅನಿವಾರ್ಯವಾಗಿ ಒಂದು ಕಾಲು ತೆಗೆಯಬೇಕಾಯಿತು.

ಒಂದು ಕಾಲಿಲ್ಲದಿದ್ದರೂ ಅವರು ಸುಮ್ಮನೆ ಕೂರದೆ ಇಲ್ಲಿಯವರೆಗೆ 38 ಬಾರಿ ರಕ್ತದಾನ ಮಾಡಿದ್ದಾರೆ. ಹಾಗಾಗಿ ಅವರು ರಕ್ತದಾನಿ ಗಣೇಶ್ ಎಂದೇ ಮೈಸೂರಿನಲ್ಲಿ ಗುರುತಿಸಿ ಕೊಂಡಿದ್ದಾರೆ.

ಈಗಾಗಲೇ 150 ಜನರಿಗೆ ರಕ್ತದ ಏರ್ಪಾಟು ಮಾಡಿಕೊಟ್ಟಿದ್ದಾರೆ. ಇದಿಷ್ಟೇ ಅಲ್ಲದೆ ಗಣೇಶ್ ಶರ್ಮ ಅವರು ಚುಟುಕು ಕವನಗಳನ್ನು ಬರೆಯುತ್ತಾರೆ. ಚುಟುಕು ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ಜತೆಗೆ ತಮ್ಮ ಕೈಲಾದ ಮಟ್ಟಿಗೆ ರೀಲ್ಸ್ ಗಳನ್ನು ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ.

ಗಣೇಶ್ ಅವರ ಸೇವೆಯನ್ನು ಗುರುತಿಸಿ ಸಂಘ-ಸಂಸ್ಥೆಗಳು ಅವರಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ‌ಪ್ರೋತ್ಸಾಹಿಸಿವೆ. ಈಗ ಈ ವಿಕಲಚೇತನನ ಸಾಧನೆಯನ್ನು ಗುರುತಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಅವರು ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದ್ದಾರೆ.

ಡಾಕ್ಟರೇಟ್ ಪದವಿ ಸ್ವೀಕರಿಸಿದ ಗಣೇಶ್ ಅವರು ಸಂತಸ ವ್ಯಕ್ತಪಡಿಸಿದ್ದು, ನನ್ನ ದೇಹದಲ್ಲಿ ಶಕ್ತಿ ಇರುವತನಕ ಬಡವರಿಗೆ ರಕ್ತದಾನ ಮಾಡುತ್ತೇನೆ ಎಂದು ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ