ಇಡೀ ಭೂಲೋಕದ ಸ್ವರ್ಗವೆಂದೇ ಖ್ಯಾತಿವೆತ್ತ ಕಾಶ್ಮೀರ ಅತ್ಯಂತ ರಮಣೀಯ ಕಣಿವೆಗಳು ಸುಂದರ ಉದ್ಯಾನವನಗಳಿಂದ ನಂದನವನದಂತೆ ರಾರಾಜಿಸುತ್ತದೆ. ಇದರ ಸಂಪೂರ್ಣ ಪರಿಚಯ ಪಡೆಯೋಣವೇ….?

ಅಮೆರಿಕಾದಲ್ಲಿರುವ ಚಿಕ್ಕ ಮಗ ವರ್ಷಕ್ಕೊಮ್ಮೆ ಭಾರತಕ್ಕೆ ಬಂದಾಗ ಮನೆ ಮಂದಿಯೆಲ್ಲಾ ಸೇರಿ ಎಲ್ಲಿಗಾದರೂ ಪ್ರವಾಸ ಹೋಗುವ ರೂಢಿ. ಈ ಬಾರಿ ಅವನು ಬಂದಾಗ ಎಲ್ಲಿಗೆ ಹೋಗಬೇಕೆನ್ನುವ ಬಗ್ಗೆ ಬಹಳ ಚರ್ಚೆಯಾಗಿ ಕೊನೆಗೆ ಕಾಶ್ಮೀರಕ್ಕೆ ಹೋಗುವುದೆಂದು ನಿರ್ಧಾರವಾಯಿತು.

ನನಗೆ ಜೀವನದಲ್ಲಿ ಒಮ್ಮೆಯಾದರೂ ಕಾಶ್ಮೀರ ನೋಡಬೇಕಲ್ಲವೇ ಎನ್ನುವ ಮನಸ್ಸಿತ್ತು. ಆದರೂ ನಾವು ಈ ಹಿಂದೆ ಮನಾಲಿ ಮತ್ತು ಸ್ವಿಡ್ಝರ್‌ ಲ್ಯಾಂಡ್‌ ಗೆ ಹೋಗಿದ್ದೆ, ಅಲ್ಲೂ ಹಿಮಾಚ್ಛಾದಿತ ಶಿಖರಗಳೇ ಅಲ್ಲವೇ? ಹೀಗಾಗಿ ಕಾಶ್ಮೀರ ಅಷ್ಟೆ ತಾನೇ ಎನ್ನುವ ಭಾವನೆಯೂ ಇತ್ತು. ಆದರೂ ನಮ್ಮ ದೇಶದ ನಾವು ಕೈಲಾಸವೆಂದು ಭಾವಿಸುವ ಪೂಜ್ಯ ಹಿಮಾಲಯಕ್ಕೆ ಹತ್ತಿರವಿರುವ ಕಾಶ್ಮೀರಕ್ಕೆ ಹೋಗುವುದು ಎಂದಾಗ ಖುಷಿಯೂ ಆಯಿತು.

ಆದರೆ ಅಲ್ಲಿ ಯಾವಾಗ ಏನಾಗುತ್ತದೋ ಎನ್ನುವ ಭಯ! ಯಾವಾಗ ಯಾರು ಗುಂಡಿನ ಮಳೆ ಸುರಿಸುತ್ತಾರೋ ಎನ್ನುವ ಆತಂಕ. ಅದರ ಜೊತೆಗೆ ಅಲ್ಲಿ ತುಂಬಾ ಚಳಿ ಎಂದು ಗೊತ್ತಿತ್ತು. ಹವಾಮಾನದ ಬಗ್ಗೆ ಗೂಗಲ್ ನಲ್ಲಿ ತಡಕಾಡಿದ್ದೇ ತಡಕಾಡಿದ್ದು. ಏನೇ ಆದರೂ ಅಲ್ಲಿ ಚಳಿ ಎನ್ನುವುದು ಗಟ್ಟಿ ಇತ್ತು. ನಾವು ಹೊರಟಿದ್ದು ಬೇಸಿಗೆಯಾದರೂ ಅಲ್ಲಿ ಚಳಿಯೇ! ಜೊತೆಗೆ ನನ್ನ ವಯಸ್ಸು, ಹೀಗಾಗಿ ಹೊರಡುವ ಬಗ್ಗೆ ನನಗೆ ಎರಡು ಮನಸ್ಸಿತ್ತು. ಆದರೆ ಮಕ್ಕಳೆಲ್ಲಾ ಸೇರಿ, “ಅಮ್ಮಾ…. ಯಾವಾಗಲೂ ಹಾಗೆಯೇ, ಯಾವುದನ್ನು ಒಂದೇ ಸಲಕ್ಕೆ ಒಪ್ಪುವುದಿಲ್ಲ,” ಎನ್ನುವ ಬಿರುದನ್ನೂ ಕೊಟ್ಟು, ವಿಮಾನದ ಟಿಕೆಟ್‌ ಗಳನ್ನು ಬುಕ್‌ ಮಾಡಿದರು. ಇನ್ನು ಮಾತನಾಡುವ ಹಾಗೆಯೇ ಇರಲಿಲ್ಲ. ಹಾಗಾದರೆ ಚಳಿ ತಡೆಯಲು ಸಿದ್ಧತೆ ಪ್ರಾರಂಭವಾಯಿತು. ನನ್ನ ಸೊಸೆ ನೀವು ಥರ್ಮ್ಸ್ ತೆಗೆದುಕೊಳ್ಳಿ, ನಿಮಗೆ ಚಳಿ ಆಗುವುದಿಲ್ಲ ಎಂದಳು. ಅವಳ ಮಾತನ್ನು ಮೀರಲುಂಟೆ? ಬೆಚ್ಚನೆಯ ಉಡುಪಿನ ಸಿದ್ಧತೆ ಆಯಿತು. ಆಗ ತಾನೇ ಗ್ಯಾಂಗ್‌ ಟಾಕ್‌ ಗೆ ಹೋಗಿ ಬಂದ ತಂಗಿ, ನಮಗೆ ಅಲ್ಲಿಯ ಥಂಡಿಯನ್ನು ತಡೆಯಲು ಕಷ್ಟ ಕಣೆ ಎಂದು ಉಲಿದಳು.

ಒಟ್ಟಾರೆ ಯುದ್ಧಕ್ಕೆ ಹೋಗುವಂತೆ ಸಿದ್ಧತೆ ಆಯಿತು. ವಿಮಾನದ ಟಿಕೆಟ್‌ ಗಳ ಜೊತೆ ಅಲ್ಲಿ ಹೋಗಬೇಕಾದ ಸ್ಥಳಗಳು, ಅದನ್ನು ವೀಕ್ಷಿಸುವ ಐಟಿನರಿ ಸಿದ್ಧವಾಯಿತು. ಒಟ್ಟು ಏಳು ದಿನದ ಪ್ರವಾಸ. ನಾವು ಮೊದಲೇ ನಿರ್ಧಾರ ಮಾಡಿದ್ದರಿಂದ ವಿಮಾನದ ಟಿಕೆಟ್‌ ಗಳು ದುಬಾರಿಯಾಯಿತು. ಆದರೂ ಮಗ ಬಂದಾಗ ತಾನೇ ಪೂರ್ಣ ಪ್ರಮಾಣದ ಕುಟಂಬದ ಪಯಣ….. ಹಾಗಾಗಿ ಏನೂ ಮಾಡುವಂತಿರಲಿಲ್ಲ. ಅಲ್ಲಿಯ ಬಗ್ಗೆ ಅನೇಕ ವಿಷಯಗಳ ಸಂಗ್ರಹಣೆ ಆಯಿತು. ನನ್ನ ಸೊಸೆ ಮೊದಲೇ ತುಂಬಾ ಕ್ಲೀನ್‌. ಸ್ವಲ್ಪ ಅತಿಯೇ ಎನ್ನಬಹುದು. ಈ ರೀತಿ ಅವಳ ಗೆಳತಿಯರಿಂದ ಅನೇಕ ವಿಷಯಗಳು ತಿಳಿಯಿತು. ಇವೆಲ್ಲದರ ಜೊತೆಗೆ ನನ್ನ ಸೊಸೆಗೆ ಅಲ್ಲಿ ಟೆರರಿಸ್ಟ್ ಗಳ ಬಗ್ಗೆ ಭಯ ಮತ್ತು ನೈಸರ್ಗಿಕ ಅಪಘಾತಗಳ ಬಗ್ಗೆಯೂ ಭಯ. ಎಲ್ಲರೂ ಅವಳಿಗೆ ಧೈರ್ಯ ತುಂಬಿ ಹೊರಡಿಸಿದ್ದಾಯಿತು. ಅಂತೂ ಒಂಬತ್ತು ಜನರ ದಂಡು ಹೊರಟಿತು ಕಾಶ್ಮೀರಕ್ಕೆ.

shops-in-srinagar

ಕಾಶ್ಮೀರದ ಬಗ್ಗೆ ಕನಸು

ಜೀವನದಲ್ಲಿ ಎಲ್ಲರಿಗೂ ಒಂದು ಬಾರಿ ಕಾಶ್ಮೀರ ನೋಡಬೇಕೆಂಬ ಆಸೆ ಇದ್ದೇ ಇರುತ್ತದೆ. ನಾವು ಹದಿಹರೆಯದಲ್ಲಿದ್ದಾಗ ಶಮ್ಮಿ ಕಪೂರ್‌ ನ `ಕಾಶ್ಮೀರ್‌ ಕಿ ಕಲಿ,’  ಹಾಗೆ ಅವನ ತಮ್ಮ ಶಶಿ ಕಪೂರ್‌ ನ `ಜಬ್‌ ಜಬ್‌ ಪ್‌ಕಿಿ,’ ಚಿತ್ರವನ್ನು ನೋಡಿದಾಗ ಕಾಶ್ಮೀರದ ಬಗ್ಗೆ ಬಹಳ ಕನಸುಗಳನ್ನು ಕಟ್ಟಿಕೊಂಡಿದ್ದು ಉಂಟು. ನಂತರ ಸಾಕಷ್ಟು ವಿದೇಶಗಳನ್ನು ಸುತ್ತಿ ಬಂದರೂ, ಕಾಶ್ಮೀರಕ್ಕೆ ಹೋಗಿಲ್ಲ ಎನ್ನುವ ಒಂದು ಭಾವ ಇದ್ದೇ ಇತ್ತು. ಆದರೂ ಎಲ್ಲ ಪರ ವಿರೋಧಗಳ ನಡುವೆ ಈ ಬಾರಿ ಕಾಶ್ಮೀರಕ್ಕೆ ಹೊರಟಿದ್ದಾಯಿತು.

ನಮ್ಮ ಇಡ್ಲಿ ದೋಸೆ ಸವಿದದ್ದು

ಒಂಬತ್ತು ಜನ ಎರಡು ಕಾರುಗಳಲ್ಲಿ ಸಾಲುವುದಿಲ್ಲ, ಮೂರು ಜಾಸ್ತಿಯಾಗುತ್ತದೆ. ಅಂತೂ ಮೂರು ಕಾರುಗಳು ಬೆಳಗ್ಗೆ ಆರು ಗಂಟೆಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಹೊರಟವು. ನಮ್ಮ ಮನೆಯಿಂದ ಏರ್‌ ಪೋರ್ಟ್‌ ತಲುಪಲು ಕನಿಷ್ಠ ಒಂದೂ ಕಾಲು ಗಂಟೆಯಾದರೂ ಬೇಕು. ಅಷ್ಟರಲ್ಲಿ ಎಲ್ಲರಿಗೂ ಹಸಿವು. ನಮ್ಮ ಕಾರಿನಲ್ಲಿದ್ದವರು ನಾನು ಎಮರ್ಜೆನ್ಸಿಗೆಂದು ಇಟ್ಟುಕೊಂಡಿದ್ದ ಡ್ರೈ ಫ್ರೂಟ್ಸ್ ನ್ನೇ ತಿಂದರು. ಅಲ್ಲಿ ವಿಮಾನ ನಿಲ್ದಾಣದ ಹೊರ ಭಾಗದಲ್ಲೇ ಎಲ್ಲರೂ ಲಗೇಜನ್ನು ಹಿಡಿದುಕೊಂಡೇ ಇಡ್ಲಿ, ದೋಸೆ ತಿಂದೆವು. ಒಳ್ಳೆಯದೇ ಆಯಿತು. ನಂತರ ಏಳು ದಿನ ಇಡ್ಲಿ, ದೋಸೆಗಳ ಗಂಧ ನಮಗೆ ಸಿಗಲಿಲ್ಲ.

view-from-top

ವಿಮಾನದೊಳಗೆ

ಹೊಟ್ಟೆ ಭರ್ತಿಯಾದ ಮೇಲೆ ಏರ್‌ ಪೋರ್ಟಿನ ಒಳ ಹೋದೆವು. ಕ್ಯೂ ದೊಡ್ಡದಾಗಿತ್ತು. ಲಗೇಜುಗಳನ್ನು ಚೆಕ್‌ ಇನ್‌ ಮಾಡಿ, ನಮ್ಮ ಮಿಕ್ಕ ತಪಾಸಣೆಗೆ ಸಾಗಿದೆವು. ಗುಂಪು ದೊಡ್ಡದಲ್ಲವೇ, ಹಾಗೆಯೇ ಮಾತನಾಡುತ್ತಾ, ಫೋಟೋ ತೆಗೆಯುತ್ತಾ ಸಾಗುವುದು ನಿಧಾನವಾಯಿತು. ಅಷ್ಟರಲ್ಲಿ ನಮ್ಮ ಹೆಸರುಗಳನ್ನೂ ಕೂಗಿದರು. ಎಲ್ಲರೂ ಓಟದ ನಡಿಗೆಯಲ್ಲಿ ಹೋದೆವು. ಅಲ್ಲಿ ಹೋಗಿ ನಮ್ಮ ಸೀಟುಗಳ ಮೇಲೆ ಕುಳಿತಿದ್ದಾಯಿತು. ನಮ್ಮ ಟಿಕೆಟ್‌ ಗಳ ಜೊತೆಗೆ ಊಟವನ್ನೂ ಸೇರಿಸಿದ್ದರು. ಹೀಗಾಗಿ ಊಟ ಬಂದಿತು. ಆದರೆ ನಿಜಕ್ಕೂ ಹೇಳಬೇಕೆಂದರೆ ಏನನ್ನೂ ಬಾಯಿಗೆ ಇಡುವಂತಿರಲಿಲ್ಲ. ವಿಮಾನದಲ್ಲಿ ಕೊಡುವ ಊಟ ಅದೇಕೆ ಅಷ್ಟು ಸುಮಾರಾಗಿ ಇರುತ್ತದೆ ಎನ್ನುವುದು ಇವತ್ತಿಗೂ ಒಂದು ರಹಸ್ಯವೇ ಸರಿ. ವಿಮಾನದ ಪ್ರಯಾಣಿಕರಿಗಾಗಿ ಆಹಾರ ತಯಾರಿಸುವವರಿಗೆ ಒಂದು ತರಗತಿಯನ್ನಾದರೂ ತೆಗೆದುಕೊಳ್ಳಬೇಕು ಎನಿಸಿತು.

ನಮ್ಮ ವಿಮಾನ ಬೆಂಗಳೂರಿನಿಂದ ಅಮೃತಸರಕ್ಕೆ ಹೋಗಿ ಅಲ್ಲಿ ಅರ್ಧ ಗಂಟೆ ನಿಂತು ನಂತರ ಶ್ರೀನಗರಕ್ಕೆ ಸಾಗುತ್ತದೆ. ಅಮೃತಸರದಲ್ಲಿ ಇಳಿಯುವವರು ಇಳಿದರು. ಸ್ವಲ್ಪ ಜನ ಅಲ್ಲಿಯೂ ಹತ್ತಿದರು. ನಮಗೆ ಮತ್ತೆ ಊಟ ಕೊಟ್ಟರು. ಆದರೆ ಬಾಯಿಗಿಡಲಾಗದು ಅಷ್ಟೆ. ಅಂತೂ ನಾವು ಶ್ರೀನಗರ ತಲುಪಿದೆವು. ಅಲ್ಲಿ ಮಳೆ ಬರುತ್ತಿತ್ತು. ಮಳೆಯ ಸಿಂಚನದ ಸ್ವಾಗತವೋ ಅಥವಾ ಚಳಿಯ ಜೊತೆ ಮಳೆಯೂ ಇದ್ದರೆ ಹೇಗಿರುತ್ತದೆ ನೋಡಿ ಎನ್ನುವ ಸವಾಲೋ ಗೊತ್ತಾಗಲಿಲ್ಲ.

mogal-garden-4

ಶ್ರೀನಗರ ತಲುಪಿದಾಗ

ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಯಾವುದೇ ಫೋಟೋ ತೆಗೆಯ ಬಾರದೆಂದು, ವಿಮಾನದದಲ್ಲೇ ಗಗನಸಖಿ ಹೇಳಿದ್ದಳು. ಆದ್ದರಿಂದ ನಮ್ಮ ಕೆಲಸ ಸ್ವಲ್ಪ ಚುರುಕಾಯಿತು. ನಮಗಾಗಿ ನಮ್ಮ ಗೈಡ್‌ ಮತ್ತು ಅಷ್ಟೂ ಜನರನ್ನು ಹಿಡಿಸುವ ಟಿ.ಟಿ. ಸಿದ್ಧವಿತ್ತು. ನಮ್ಮ ಗೈಡ್‌ ಹೆಸರು ಇನಾಯಿತ್‌. ಇಪ್ಪತ್ತೈದರ ಸುಂದರ ಯುವಕ. ಬಹಳ ಸ್ವಾರಸ್ಯವಾಗಿ ತಮಾಷೆಯಾಗಿ ಮತ್ತು ಬಹಳ ಸಂಯಮದಿಂದ ಮಾತನಾಡುತ್ತಿದ್ದ. ನಮ್ಮ ಏಳು ದಿನದ ಪ್ರವಾಸದಲ್ಲಿ ಅವನು ಒಮ್ಮೆಯೂ ಕೋಪ ಮಾಡಿಕೊಂಡಿದ್ದು ನಿಜಕ್ಕೂ ನಾವು ಕಾಣೆವು.

ವಿಮಾನ ನಿಲ್ದಾಣದಿಂದ ಜೀಲಂ ನದಿಯ ದಡದ ಪಕ್ಕದಲ್ಲಿ ಸಾಗುತ್ತಾ ಶ್ರೀನಗರದ ಹೃದಯ ಭಾಗವನ್ನು ತಲುಪಿದೆ. ಆಗ ಶಾಲೆ ಬಿಡುವ ಹೊತ್ತು, ನಾವು ಸಾಗುವ ದಾರಿಯಲ್ಲಿ ಡೆಲ್ಲಿ ಪಬ್ಲಿಕ್‌ಶಾಲೆಯ ವ್ಯಾನುಗಳು ಸಿಕ್ಕಿದವು. ನೋಡಲು ಎಲ್ಲ ಮಕ್ಕಳು, ಹುಡುಗ, ಹುಡುಗಿಯರು ಬಹಳ ಮುದ್ದಾಗಿದ್ದರು. ಕಾಶ್ಮೀರಿಗಳ ಸೌಂದರ್ಯದ ಬಗ್ಗೆ ಕೇಳಿದ್ದೆವು, ನೋಡಿದ್ದಾಯಿತು. ಇನ್ನು ಮಕ್ಕಳು ಯಾವಾಗಲೂ ನೋಡಲು ಬಲು ಚೆನ್ನ, ಶಾಲೆಯಿಂದ ವಾಪಸ್‌ ಬರುತ್ತಿರುವ ಮಕ್ಕಳು, ನಮಗೆ ಟಾಟಾ ‌ಮಾಡಿದರು. ಅಲ್ಲಲ್ಲಿ ಗನ್ ಹಿಡದ ಸಿಪಾಯಿಗಳು ಪ್ರತಿಯೊಂದು ರಸ್ತೆಯಲ್ಲೂ ಇದ್ದರು. ರಕ್ಷಣೆಯ ದೃಷ್ಟಿಯಿಂದ ಇರಬೇಕು. ಆದರೆ ನಾವು ಹೋದ ಸ್ಥಳಗಳಿಗೆಲ್ಲಾ ಪ್ರವಾಸಿಗರು ತುಂಬಿ ತುಳುಕುತ್ತಿದ್ದರು.

garden-(3)

ಉದ್ಯಾನಗಳ ನಗರಿ ಶ್ರೀನಗರ

ಉದ್ಯಾನವನಗಳು ಮತ್ತು ಕೊಳಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿಯ ಉದ್ಯಾನವನಗಳ ಸುತ್ತಲೂ ಎತ್ತ ಕಡೆ ಕಣ್ಣು ಹಾಯಿಸಿದರೂ ಹಸುರಿನ ಗಿರಿ ಶಿಖರಗಳು ನೋಡ ಸಿಗುತ್ತವೆ. ಅರಳಿ ನಿಂತ ಗಿಡ ಮರಗಳು, ಮೈತುಂಬಾ ಹೂಗಳನ್ನು ತುಂಬಿಸಿಕೊಂಡಿರುವ ಸಸ್ಯ ರಾಶಿ. ಜೊತೆಗೆ ಅಲ್ಲಲ್ಲಿ ನೀರಿನ ಚಿಲುಮೆಗಳು ತುಂಬಿಕೊಂಡಿವೆ. ಒಂದು ಉದ್ಯಾನವನದ ಒಳ ಹೊಕ್ಕರೆ ಅದು ಹಂತ ಹಂತವಾಗಿ ನಿಮ್ಮನ್ನು ಮೇಲೇರಿಸಿ ಕರೆದುಕೊಂಡು ಹೋಗುತ್ತದೆ. ಶ್ರೀನಗರದ ತುಂಬಾ ಉದ್ಯಾನವನಗಳೇ ತುಂಬಿದ್ದರೂ ಅಥವಾ ಶ್ರೀನಗರವೇ ಒಂದು ಉದ್ಯಾನವನದಂತೆ ಕಂಡರೂ ಕೆಲವು ಉದ್ಯಾನವನಗಳ ಹೆಸರನ್ನು ಹೇಳಲೇಬೇಕು. ಅವುಗಳಲ್ಲಿ ಮುಖ್ಯವಾದವುಗಳು :

ಶಾಲಿಮಾರ್‌ ಬಾಗ್‌, ನಿಶತ್‌ ಬಾಗ್‌, ಚಸ್ಮಾ ಸಾಹಿ ಗಾರ್ಡನ್‌, ಪರಿ ಮಹಲ್, ನೆಹರು ಗಾರ್ಡನ್‌ ಮತ್ತು ಟುಲಿಪ್‌ ಗಾರ್ಡನ್‌. ಈ ಉದ್ಯಾನವನಗಳು ಮೊಘಲರ ಕಾಲದಲ್ಲೇ ಆಗಿದ್ದರಿಂದ ಅವುಗಳನ್ನು ಮೊಘಲ್ ಗಾರ್ಡನ್ಸ್ ಎಂದೇ ಕರೆಯುತ್ತಾರೆ.

mogal-garden--5

ನಿಶತ್ಬಾಗ್

ದಾಲ್ ‌ಸರೋವರದ ಸುತ್ತಲೂ ತನ್ನನ್ನು ತಾನು ಹರಡಿಕೊಂಡು, ಸುತ್ತಲೂ ಫಿರ್‌ ಪಂಜಾಬಿ ಶ್ರೇಣಿ ಆರಿಸಿಕೊಂಡು ದಾಲ್ ‌ಸರೋವರದ ಕಡೆಯಿಂದ ಸುಂದರ ಸೂರ್ಯಾಸ್ತಮಾನದ ದೃಶ್ಯವನ್ನು ಬಿಂಬಿಸುತ್ತದೆ. ಈ ಉದ್ಯಾನವನದಲ್ಲಿ 12 ಅಂತಸ್ತುಗಳಿವೆ. ಪ್ರತಿಯೊಂದು ಅಂತಸ್ತು ಒಂದೊಂದು ಸಸ್ಯ ರಾಶಿಯನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಅಂತಸ್ತಿನಲ್ಲೂ ಸುಂದರ ಹೂರಾಶಿ ತುಂಬಿಕೊಂಡಿದೆ. ಉದ್ಯಾನವನದ ಮಧ್ಯದಲ್ಲಿ ಸುಂದರ ನೀರಿನ ಚಿಲುಮೆ ಹರಿಯುತ್ತದೆ. ಗಾರ್ಡನ್ನಿನ ಹೊರಗಡೆ ಶಿಕಾರ್‌ ರೇಡ್ ಅಂದರೆ ದಾ್ಲ ಲೇಕಿನಲ್ಲಿ ದೋಣಿ ವಿಹಾರ ಮಾಡಬಹುದು.

McLeod_Ganj_Dharamkot_Dharmsala_Himachal_Pradesh_India_April_2014

ಚಶ್ಮೆ ಶಾಹಿ ಗಾರ್ಡನ್

ಇಲ್ಲಿಯ ಮತ್ತೊಂದು ಸುಂದರ ಉದ್ಯಾನವನ ಎಂದರೆ ಚಶ್ಮೆ ಶಾಹಿ ಗಾರ್ಡನ್‌. ಇಲ್ಲಿಯೂ ಸಹ ವಿಭಿನ್ನ ಅಂತಸ್ತುಗಳನ್ನು ರೂಪಿಸಿ. ಅಲ್ಲಿ ಬಗೆ ಬಗೆಯ ಹೂ ರಾಶಿಯನ್ನು ತುಂಬಿದ್ದಾರೆ. ಇದೂ ಸಹ ದಾಲ್ ಲೇಕ್‌ ನ ದಡದಲ್ಲೇ ಇದೆ. ಒಟ್ಟಾರೆ ದಾಲ್ ಲೇಕಿನ ಸುತ್ತಲೂ ಉದ್ಯಾನವನಗಳೇ ತುಂಬಿಕೊಂಡಿವೆ.

ನೆಹರು ಬೊಟಾನಿಕ್ಗಾರ್ಡನ್

ಜ್ಯಬರ್ ವಾನ್‌ ಪರ್ವತ ಶ್ರೇಣಿಯ ತಪ್ಪಲಲ್ಲಿ ಬಹಳ ಆಧುನಿಕ ಉದ್ಯಾನವನವಿದು. 80 ಹೆಕ್ಟೇರ್‌ ಗಳಷ್ಟು ವಿಸ್ತಾರವಾದ ಆವರಣವನ್ನು ಆವರಿಸಿರುವ ಈ ಉದ್ಯಾನವನವನ್ನು 1969ರಲ್ಲಿ ಸಿದ್ಧಪಡಿಸಲಾಯಿತು. ಇಲ್ಲಿ ನಾಲ್ಕು ವಿಭಿನ್ನ ವಿಭಾಗಗಳಿವೆ. ಮನರಂಜನಾ ವಿಭಾಗ, ಸಸ್ಯ ವಿಭಾಗ, ಸಸ್ಯ ಸಂದರ್ಶನಾ ಕೇಂದ್ರ ಮತ್ತು ಸಂಶೋಧನಾ ವಿಭಾಗ. ಮುನ್ನೂರು ಜಾತಿಯ ಹೂ ರಾಶಿಯನ್ನು ಒಂದೇ ಸ್ಥಳದಲ್ಲಿ ನೋಡಬಹುದು. ವಸಂತ ಮಾಸದಲ್ಲಿ ಯಾವ ಹೂ ಯಾವ ಬಣ್ಣದ್ದು, ಯಾವ ಹೂವಿನ ಪರಿಮಳ ಯಾವುದು ಎನ್ನುವ ಗೊಂದಲಲೇ ಸೃಷ್ಟಿಯಾಗುವಷ್ಟು ಬಗೆ ಬಗೆಯ ಸಸ್ಯ ರಾಶಿ, ಹೂಗಳನ್ನು ನೋಡುತ್ತಾ…. ದೋಣಿ ವಿಹಾರವನ್ನೂ ಮಾಡಬಹುದು.

ಪರಿ ಮಹಲ್

ಪ್ರವಾಸಕ್ಕೆ ಬಂದವರನ್ನು ಕಾಶ್ಮೀರ ಯಾವ ರೀತಿಯಲ್ಲೂ ನಿರಾಶೆಗೊಳಿಸುವುದಿಲ್ಲ. ಪರಿ ಮಹಲ್ ಸಹ ಅತ್ಯಂತ ಪ್ರಮುಖ ಆಕರ್ಷಣೆ ಎನ್ನಬಹುದು. ಜ್ಯಬರ್ ಲಾನ್‌ ಪರ್ವತ ಶ್ರೇಣಿಯ ಮೇಲ್ಭಾಗದಲ್ಲಿರುವ ಈ ಪರಿ ಮಹಲ್ ನೈಸರ್ಗಿಕ ಸೌಂದರ್ಯ ಮತ್ತು ಕಾಂತಿಯನ್ನು ಹೊಂದಿದೆ. ಇದೊಂದು ಸುಂದರ ಐತಿಹಾಸಿಕ ಸ್ಮಾರಕವೆನಿಸಿಕೊಂಡಿದೆ. ಮೊಘಲ್ ಚಕ್ರವರ್ತಿ ಶಹಜಹಾನ್‌ ನ ಕಾಲದಲ್ಲಿ ನಿರ್ಮಾಣಗೊಂಡ ಈ ಸ್ಮಾರಕ ಇಸ್ಲಾಮಿಕ್‌ ಶೈಲಿ ಮತ್ತು ವಿನ್ಯಾಸವನ್ನು ಹೊಂದಿದೆ. ಈ ಸ್ಮಾರಕ ಏಳು ಅಂತಸ್ತುಗಳಲ್ಲಿ ರೂಪುಗೊಂಡು ಇದರ ಸೌಂದರ್ಯವನ್ನು ದುಪ್ಪಟ್ಟು ಮಾಡಿದೆ. ವಿಧ ವಿಧವಾದ ಹೂಗಳು, ಮರಗಳು, ಗಿಡಗಳನ್ನು ಹೊಂದಿರುವ  ಉದ್ಯಾನವನ ಶಾಂತ ವಾತಾವರಣವನ್ನು ನಿರ್ಮಿಸಿದೆ. ದಾಲ್ ‌ಸರೋವರದ ಸುತ್ತಲೂ ಆರಿಸಿಕೊಂಡಿರುವ ಚಿನಾರ್‌ ಮರಗಳು ಇಲ್ಲಿನ ರಮ್ಯತೆಗೆ ಇಂಬು ಕೊಡುತ್ತವೆ. ಇಡೀ ವರ್ಷ ಇಲ್ಲಿಗೆ ಭೇಟಿ ನೀಡಬಹುದಾದರೂ ಆಹ್ಲಾದಕರ ಹವಾ ಬೇಕಾದರೆ ಏಪ್ರಿಲ್ ‌ನಿಂದ ಅಕ್ಟೋಬರ್‌ ವರೆಗೆ ಹೋಗುವುದು ಸೂಕ್ತ.

 

ಶಾಲಿಮಾರ್ಬಾಗ್

ದಾಲ್ ಸರೋವರದ ತಟದಲ್ಲಿರುವ ಮತ್ತೊಂದು ಸುಂದರ  ಉದ್ಯಾನವನವಿದು. ಇದರ ಹೆಸರೇ ಹೇಳುವಂತೆ ಇದು ಪ್ರೀತಿಯ ಆವಾಸ ಸ್ಥಾನ ಹೌದು. ಮುಘಲ್ ರಾಜ ಜಹಾಂಗೀರನು ತನ್ನ ಹೆಂಡತಿ ನೂರ್‌ ಜಹಾನ್‌ ಳ ನೆನಪಿನಲ್ಲಿ ನೂರು ವರ್ಷಗಳ ಹಿಂದೆ ಕಟ್ಟಿಸಿದ ಸ್ಮಾರಕ ಹೌದು. ತಾರಸಿ ಹುಲ್ಲುಹಾಸುಗಳ ವಿನ್ಯಾಸವನ್ನು ಹೊಂದಿರುವ ಈ ತಾಣ ಹಚ್ಚ ಹಸಿರನ್ನು ತುಂಬಿಕೊಂಡಿರುವುದೇ ಅಲ್ಲದೆ, ನೀರಿನ ಕಾರಂಜಿಗಳು, ವಿವಿಧ ವರ್ಣದ ಹೂರಾಶಿ, ಜೊತೆಗೆ ಚಿನಾರ್‌ ಮರಗಳು, ಮಂಟಪಗಳನ್ನು ಹೊಂದಿದೆ. ಎಲ್ಲಕ್ಕಿಂತ ಮೇಲಿನ ಅಂತಸ್ತು ಅತ್ಯಂತ ಸುಂದರವಾಗಿದ್ದು, ಅಂತಃಪುರದ ಸ್ತ್ರೀಯರಿಗಷ್ಟೇ ಮೀಸಲಾಗಿತ್ತು.

garden-in-stages

ಬದಲಾಗುವ ಬಣ್ಣಗಳು

ಶರತ್ಕಾಲ ಮತ್ತು ವಸಂತ ಕಾಲದಲ್ಲಿ ಚಿನಾರ್‌ ವೃಕ್ಷದ ಎಲೆಗಳು ಹಸಿರಿನಿಂದ ಕೇಸರಿ ಬಣ್ಣಕ್ಕೆ ತಿರುಗಿ ಪೂರ್ಣ ಉದ್ಯಾನವನವನ್ನೇ ಕೇಸರಿಮಯವನ್ನಾಗಿ ಮಾಡುತ್ತವೆ. ಆಕಾಶದಿಂದ ನೋಡಿದಾಗ ಈ ತೋಟಕ್ಕೆ ಕೇಸರಿ ಶಾಲನ್ನು ಹೊದಿಸಿದಂತೆ ಕಾಣುತ್ತದೆ. ರಮ್ಯ ಸುಂದರ ನೋಟವದು. ಒಟ್ಟಾರೆ ದಾಲ್ ಲೇಕಿನ ಸುತ್ತಲೂ ಸುಂದರ ತೋಟಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.

ನಾವು ವಿಮಾನದಿಂದ ಶ್ರೀನಗರದಲ್ಲಿ ಇಳಿದಾಗ ಮಳೆ ಬರುತ್ತಿತ್ತು. ಸಣ್ಣನೆಯ ತುಂತುರು ಮಳೆಯದು. ನಾವು ಮೊದಲ ಉದ್ಯಾನವನಕ್ಕೆ ಹೋದಾಗ ಸಣ್ಣಗಿದ್ದ ಮಳೆ ಮತ್ತೆ ಜೋರಾಯಿತು. ಮುಂದಿನ ಉದ್ಯಾನವನವನ್ನು ನಾವು ಸರಿಯಾಗಿ ನೋಡಲಾಗಲಿಲ್ಲ. ನಮಗೆ ಛತ್ರಿ ತೆಗೆದುಕೊಂಡು ಹೋಗಿ ಎಂದು ಎಲ್ಲರೂ ಹೇಳಿದ್ದರು. ಆದರೆ ಹೊರಡುವ ಅವಸರದಲ್ಲಿ ನಮಗೆ ಮರೆತೇಹೋಯಿತು ಆದರೇನು? ಹಣವಿದ್ದರೆ ಎಲ್ಲ ದೊರಕುತ್ತದೆ. ಪಾರ್ಕಿನ ಹೊರಗಡೆ ಒಬ್ಬ ಛತ್ರಿಗಳನ್ನು ಇಟ್ಟುಕೊಂಡು  ಮಾರುತ್ತಿದ್ದ. ಕೊಂಡುಕೊಳ್ಳಬಹುದಿತ್ತು ಅಥವಾ ಬಾಡಿಗೆಗೂ ತೆಗೆದುಕೊಳ್ಳಬಹುದಿತ್ತು. ಒಂದೆರಡು ಛತ್ರಿಗಳನ್ನು ಕೊಂಡುಕೊಂಡು ಸುರಿಯುತ್ತಿದ್ದ ಮಳೆಯಲ್ಲಿ ನಮ್ಮ ಗಾಡಿಯನ್ನು ತಲುಪಿ ಕುಳಿತಿದ್ದಾಯಿತು.

ಪೆಹೆಲ್ ಗಾಲ್ ‌ಮತ್ತು ಗುಲಾಮ್ ಮಾರ್ಗ್‌ ಗೆ ಹೋಗಿ ಬಂದ ಮೇಲೆ ನಾವು ಮಾರನೆಯ ದಿನ ಸೋನ್ಮಾರ್ಗ್‌ ಗೆ ಹೋಗಬೇಕಿತ್ತು. ಹಿಮದಲ್ಲಿ ಅತ್ಯಂತ ಹೆಚ್ಚು ಹೊತ್ತು ಇದ್ದ ನನ್ನ ಸೊಸೆಗೆ ಸನ್‌ ಬರ್ನ್‌ ಮತ್ತು ಕಣ್ಣುಗಳಿಗೆ ಸ್ವಲ್ಪ ಶ್ರಮವಾಯಿತು. ಜೊತೆಗೆ ಅಲ್ಲಿ ಹೋಗಿ ಬಂದರು ಅಷ್ಟೇನೂ ಚೆನ್ನಾಗಿಲ್ಲ.

ಗುಲಾಮ್ ಮಾರ್ಗ್‌ ನೋಡಿದ ಮೇಲೆ ಅಲ್ಲಿಗೆ ಹೋಗುವ ಅಗತ್ಯವಿಲ್ಲ ಎಂದರು. ಹೀಗಾಗಿ ನಾವು ಸೋನ್ಮಾರ್ಗ್‌ ಗೆ ಹೋಗುವುದನ್ನು ಕ್ಯಾನ್ಸಲ್ ಮಾಡಿದೆವು.

20230430_121639

ದೇವಾಲಯಗಳ ದರ್ಶನ

ನಮ್ಮ ಮಕ್ಕಳು ಅಂತರ್ಜಾಲವನ್ನು ತಡಕಾಡಿ ಅಲ್ಲಿ ಹರಿ ಪ್ರಭಾತ್‌ ಎನ್ನುವ ಬೆಟ್ಟವಿದೆ, ಅದರ ಮೇಲಿನಿಂದ ಕಾಶ್ಮೀರದ ದೃಶ್ಯಾವಳಿಯನ್ನು ಸವಿಯಲು ಚೆನ್ನಾಗಿರುತ್ತದೆ, ಜೊತೆಗೆ ಅಲ್ಲೊಂದು ದೇವಸ್ಥಾನವಿದೆ ಎಂದರು. ಹೀಗಾಗಿ ನಮ್ಮ ಸವಾರಿ ಹರಿ ಪ್ರಭಾತ್‌ ಶಿಖರದ ಮೇಲಿರುವ ಶಾರಿಕಾ ದೇವಿಯ ದೇವಸ್ಥಾನಕ್ಕೆ ಹೊರಟಿತು. ಅಲ್ಲೂ ಸಹ ಒಂದಷ್ಟು ಮೆಟ್ಟಿಲು ಹತ್ತಬೇಕಿತ್ತು. ಒಂದು ಹಂತದವರೆಗೂ ಹತ್ತಿ ನಾನು ಅಲ್ಲೇ ವಿಶ್ರಮಿಸಿಕೊಂಡೆ. ಮಕ್ಕಳೆಲ್ಲಾ ಮೇಲೆ ಹೋದರು. ಆ ದೇವಸ್ಥಾನಕ್ಕೆ ಬಿಗಿಯಾದ ಭದ್ರತೆ ಇತ್ತು. ಮಿಲಿಟರಿಯವರಿಗೆ ಅಲ್ಲೊಂದು ಪುಟ್ಟ ಮನೆಯನ್ನೇ ಮಾಡಿಕೊಟ್ಟಿದ್ದರು.

ಸರದಿಯ ಮೇಲೆ ಅವರು ಆ ದೇವಸ್ಥಾನವನ್ನು ಕಾಯುತ್ತಿದ್ದರು. ನಾನು ಆ ಸಿಪಾಯಿಗಳೊಡನೆ ಮಾತನಾಡುತ್ತಾ ಕಾಲ ಕಳೆದದ್ದಾಯಿತು. ಅವರದು ಪಾಪ, ತಮ್ಮ ಸಂಸಾರ ಮಕ್ಕಳನ್ನು ಬಿಟ್ಟು ನಮ್ಮ ದೇಶವನ್ನು, ನಮ್ಮ ದೇವಸ್ಥಾನಗಳನ್ನು, ನಮ್ಮ ಜನರನ್ನು ಕಾಯುವ ಕೆಲಸ. ನಮಗೆ ರಕ್ಷಣೆ ನೀಡುವ ಕೆಲಸ ಮಾಡುತ್ತಾರಲ್ಲಾ, ಅವರಿಗೆ ನಾವು ಎಷ್ಟು ಕೃತಜ್ಞತೆ ತೋರಿಸಿದರೂ ಸಾಲದು. ನಿಜಕ್ಕೂ ಅವರೊಡನೆ ಒಂದಷ್ಟು ಹೊತ್ತು ಕಳೆದ ಸಮಯ ಅವಿಸ್ಮರಣೀಯ. ಅವರೂ ಸಹ ಬಹಳ ಪ್ರೀತಿಯಿಂದ ನಮ್ಮನ್ನು ಮಾತನಾಡಿಸಿದರು. ಹದಿನೆಂಟು ಕೈಗಳಿರುವ ಶಾರಿಕಾ ದೇವಿಯ ಮೂರ್ತಿಯನ್ನು ಹೊಂದಿರುವ ಬಹಳ ಪುರಾತನ ದೇವಾಲಯವಿದು. ಜೋಭ ಎನ್ನುವ ರಾಕ್ಷಸ ಪಾರ್ವತಿ ದೇವಿಯ ಮೇಲೆ ಎಸೆದ ಕಲ್ಲು ತಿರುಗಿ ಬಂದು ಹರಿ ಪ್ರಭಾತ್‌ ಶಿಖರವಾಯಿತು ಎನ್ನುವ ನಂಬಿಕೆ ಇದೆ.

shankara-temp

ಶಂಕರಾಚಾರ್ಯರ ಶಿವನ ದೇವಾಲಯ

ಶಂಕರಾಚಾರ್ಯರು ಶಿವನಿಗೆ ಆರ್ಪಿಸಿದ ದೇವಾಲಯವಿದು. ಹತ್ತು ಸಾವಿರ ಅಡಿ ಎತ್ತರದಲ್ಲಿದೆ ಮತ್ತು ಅಲ್ಲಿಗೆ ಹೋಗಲು 250 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಆದರೆ ಅಷ್ಟು ಎತ್ತರದಿಂದ ವೀಕ್ಷಿಸಿದಾಗ, ಅತ್ಯಂತ ಪ್ರಶಾಂತ ಮತ್ತು ಒಂದು ಕ್ಷಣ ನಮ್ಮ ಉಸಿರೇ ನಿಂತುಹೋಯಿತೇನೋ ಎನ್ನುವಷ್ಟು ಅದ್ಭುತ ದೃಶ್ಯ ನಮ್ಮ ಕಣ್ಮುಂದೆ ಬರುತ್ತದೆ. ಒಟ್ಟಾರೆ ಎತ್ತಲಿಂದ ನೋಡಿದರೂ ಯಾವ ಶಿಖರದಿಂದ ನೋಡಿದರೂ ವರ್ಣಿಸಲು ಯಾವುದೇ ಪದಗಳಿಗೆ ನಿಲುಕದಂತಹ, ಯಾವುದೇ ವಿಶೇಷಣಗಳು ಸಾಲದು ಎನಿಸುವಷ್ಟು ಸುಂದರ ತಾಣ ನಮ್ಮ ಕಾಶ್ಮೀರ!

ಆದರೆ ಸಮುದ್ರದ ತುಂಬಾ ನೀರಿದ್ದರೂ ಒಂದು ಹನಿಯಷ್ಟೂ ಕುಡಿಯಲಾಗದು ಎಂಬಂತೆ, ಎಲ್ಲವನ್ನೂ ನಮ್ಮ ಕಣ್ಣುಗಳಲ್ಲಿ ತುಂಬಿಕೊಂಡು ಸಾಧ್ಯವಾದಷ್ಟು ಮೊಬೈಲ್ ‌ನಲ್ಲಿ ಸೆರೆಹಿಡಿದುಕೊಂಡು ಹೋಟೆಲ್ ‌ಗೆ ಹಿಂದಿರುಗಿದೆ. ಈ ಮಧ್ಯೆ ನಮ್ಮ ಗೈಡ್ ನಮ್ಮನ್ನು ಒಂದು ಕ್ರಿಕೆಟ್‌ ಬ್ಯಾಟ್‌ ನ ಫ್ಯಾಕ್ಟರಿಗೆ ಕರೆದುಕೊಂಡು ಹೋದ. ಆದರೆ ಅದರ ಪಕ್ಕದಲ್ಲಿದ್ದ ದೊಡ್ಡ ಶೋರೂಮ್ ನಲ್ಲಿ ವ್ಯಾಪಾರ ಮಾಡಿಸುವ ಉದ್ದೇಶ ಅಲ್ಲಿ ಇತ್ತು. ಅಲ್ಲೂ ಅವರು ಬಿಟ್ಟಿ ಕೊಟ್ಟ ಕಾಲಾ ಕುಡಿದು ಒಂದಷ್ಟು ವ್ಯಾಪಾರ ಮಾಡಿ ಬಂದೆವು. ನಂತರ ನಮ್ಮ ಹೋಟೆಲ್ ‌ಗೆ ಹತ್ತಿರವೇ ಇದ್ದ ಮಾರ್ಕೆಟ್‌ ನಲ್ಲಿ ಮಕ್ಕಳು ಬಹಳ ವ್ಯಾಪಾರ ಮಾಡಿದರು. ರಾತ್ರಿ ಊಟ ಮಾಡಿ ಮಲಗಿ ಎದ್ದ ಮೇಲೆ ಬೆಳಗ್ಗೆಯೂ ಮತ್ತೊಂದಷ್ಟು ವ್ಯಾಪಾರ, ಚೌಕಾಶಿ ನಡೆಯಿತು.

ನಂತರ ಏರ್‌ ಪೋರ್ಟಿಗೆ ಹೋಗಲು ಹೊತ್ತಾಗುತ್ತದೆ ಎಂದು ಅಲ್ಲಿಂದ ಹೊರಟಿದ್ದಾಯಿತು. ಕಾಶ್ಮೀರಕ್ಕೆ ವಿದಾಯ ಹೇಳುವ ಸಮಯ ಬಂದೇಬಿಟ್ಟಿತು. ಅಲ್ಲಿನ ವಿಮಾನ ನಿಲ್ದಾಣದಲ್ಲಿ ಎರಡೆರಡು ಬಾರಿ ಚೆಕಿಂಗ್‌ ಆದ ನಂತರ ನಮ್ಮ ಲಗೇಜ್‌ ನ್ನು ಚೆಕಿನ್ ಮಾಡಿ ವಿಮಾನದೊಳಗೆ ಹೋದೆವು. ಈ ಬಾರಿ ಅವರು ನಮಗೆ ಊಟ ಕೊಡಲೇ ಇಲ್ಲ. ಬೇಕಾದವರು ಕೊಂಡುಕೊಂಡು ತಿಂದರು. ಅಂತೂ ನಮ್ಮ ಬೆಂಗಳೂರನ್ನು ತಲುಪಿಯೇ ಬಿಟ್ಟೆವು. ನಿಜಕ್ಕೂ ಬೆಂಗಳೂರು ಎಷ್ಟು ಸುಂದರ ಎನಿಸಿತು. ಮತ್ತೊಮ್ಮೆ ದೋಸೆ, ಇಡ್ಲಿ ತಿಂದು ಮನೆ ಸೇರಿದೆವು. ಕೊನೆಗೂ ನಮ್ಮ ಕಾಶ್ಮೀರ ಪ್ರವಾಸಕ್ಕೆ ಮುಕ್ತಾಯ ಹಾಡಿದ್ದಾಯಿತು.

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ