ಶಾಂತ, ಸೌಮ್ಯ, ಸ್ಪಷ್ಟಭಾಷಿ ಕೃಷ್ಣಾಯಿ ಪ್ರಭಾಕರ್ ಉಲೇಕರ್, ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳುಜಾಪುರದ ನಿವಾಸಿ. ರೈತನ ಮಗಳಾದ ಈಕೆ ಭಾರೂಡ್ ಜಾನಪದ ಕಲೆಯಿಂದ ಸಮಾಜದಲ್ಲಿ ಹರಡಿರುವ ಕುರೀತಿ, ಮೂಢನಂಬಿಕೆಗಳ ಕುರಿತಾಗಿ ಸಾಮಾನ್ಯ ಗ್ರಾಮೀಣರಲ್ಲಿ ಜಾಗೃತಿ ಮೂಡಿಸುತ್ತಾರೆ. ಈ ಮಾಧ್ಯಮದಿಂದ ಈಕೆ ನಮ್ಮ ಸಮಾಜದಲ್ಲಿ ಹರಡಿರುವ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಕುಡಿತ, ನಶೆ, ಅತ್ಯಾಚಾರ ಇತ್ಯಾದಿ ಸಾಮಾಜಿಕ ಸಮಸ್ಯೆಗಳ ವಿರುದ್ಧ ತಮ್ಮ ನಾಟಕಗಳಿಂದ ವೇದಿಕೆ ಮೇಲೆ ಸಿಡಿದೇಳುತ್ತಾರೆ. ಈ ಕಲೆ ಬೆಳೆಸುತ್ತಾ ಜೊತೆಗೆ ಕೃಷ್ಣಾಯಿ ರಂಗಪ್ರಯೋಗದಲ್ಲೂ ನಿಪುಣರಾಗಿ, ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ಪದವಿ ಗಳಿಸಿದ್ದಾರೆ. ಈಕೆಗೆ ಹೆತ್ತವರು, ಅಣ್ಣ ಸಹ ಬಹಳ ನೆರವಾಗಿದ್ದಾರೆ. ತನ್ನ ಎಲ್ಲಾ ಕ್ರೆಡಿಟ್ ನ್ನೂ ಈಕೆ ಮನೆಯವರಿಗೇ ಕೊಡಬಯಸುತ್ತಾರೆ. ಇದರಿಂದಾಗಿ ಈಕೆ ಮಹಾರಾಷ್ಟ್ರದಲ್ಲಿ ಖ್ಯಾತಿ ಗಳಿಸಲು ಸಾಧ್ಯವಾಗಿದೆ.
ಸಂದ ಸನ್ಮಾನಗಳು
ಈಕೆಯ ನೆರೆಹೊರೆ ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ತೊಡಗುತ್ತಿದ್ದರು. ಎಲ್ಲೆಲ್ಲೂ ಬರಗಾಲದ ಸಮಸ್ಯೆ. ಹೀಗಾಗಿ ಕೃಷ್ಣಾಯಿ ಭಾರೂಡ್ ಕಲೆ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲು ಆರಂಭಿಸಿದರು. “ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಅವರ ಮನೋಬಲ ಹೆಚ್ಚಿಸುವ ಅಗತ್ಯವಿದೆ. ಹೀಗಾಗಿ ಎಲ್ಲರೂ ಈ ಕುರಿತು ಜಾಗೃತರಾಗಬೇಕು!” ಎನ್ನುತ್ತಾರೆ. ಈಕೆಯ ಈ ಸಮಾಜ ಸೇವೆಗಾಗಿ ಅನೇಕ ಪ್ರಶಸ್ತಿಗಳು ಬಂದಿವೆ. `ರಾಜ್ಯ ಯುವ ಪುರಸ್ಕಾರ, ಮರಾಠವಾಡಾ ಭೂಷಣ, ಮರಾಠವಾಡಾ ಸಮನ್ವಯ ಸಮಿತಿ ಪುಣೆ, ಸಾಮಾಜಿಕ ಲೋಕ ಕಲಾ ಪುರಸ್ಕಾರ, ಬಾನಡಾ ಸಾತಾರಾ, ಆವಿಷ್ಕಾರ ಪುರಷ್ಕಾರ’ ಪ್ರಮುಖವಾದವು.
ಪ್ರೇರಣೆಯ ಮೂಲ
ಕೃಷ್ಣಾಯಿ ಹೇಳುತ್ತಾರೆ, ಬಾಲ್ಯದಿಂದಲೂ ನನಗೆ ಈ ಜಾನಪದ ಕಲೆ ಎಂದರೆ ಬಹಳ ಇಷ್ಟ. ಇಂಥ ಎಷ್ಟೋ ಜಾನಪದ ನೃತ್ಯಗಳನ್ನು ನೋಡಿ ಬಲ್ಲೆ. ನಾನು ಮೊದಲು ಈ ಜಾನಪದದ ಮೂಲಕ ಕೇವಲ ಪೌರಾಣಿಕ ಕಥೆ ಹೇಳುವ ಬದಲು ನಶೆಮುಕ್ತಿ, ಸ್ತ್ರೀ ಭ್ರೂಣಹತ್ಯೆ, ವರದಕ್ಷಿಣೆ ಇತ್ಯಾದಿ ಸಾಮಾಜಿಕ ಪಿಡುಗುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಲಾವಣಿ ಹಾಡು, ಗೀಗೀ ಪದಗಳಿಂದ ಆರಂಭಿಸಿದೆವು. ವಯಸ್ಸು ಬೆಳೆದಂತೆ ಇವನ್ನೆಲ್ಲ ಡ್ಯಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಳಸತೊಡಗಿದೆ. ಇದರಿಂದ ನನ್ನ ನೆಂಟರಿಗೆ ಇರುಸುಮುರುಸಾಗಿ ಆಕ್ಷೇಪಿಸ ತೊಡಗಿದರು. ಆಗ ನನಗೆ 10-12ರ ವಯಸ್ಸು. ಅಪ್ಪಾಜಿ ಆಗ ಭಾರೂಡ್ ಜಾನಪದ ಕಲೆಯಲ್ಲಿ ಪ್ರಸಿದ್ಧರೆನಿಸಿದ ಡಿ. ನಿರಂಜನ್ ಭಾಕಡೆಯವರ ನೃತ್ಯಗಳ ಬಗ್ಗೆ ತೋರಿಸಿಕೊಟ್ಟರು. ಅದು ನನಗೆ ಬಹಳ ಹಿಡಿಸಿ, ಅದರಲ್ಲಿನ ಡ್ಯಾನ್ಸ್, ಹಾಡು, ಕಥೆಗಳನ್ನು ಬೆರೆಸಿ ಬಳಸಬಾರದೇಕೆ ಎಂದು ಮನೆಯವರ ಜೊತೆ ಚರ್ಚಿಸಿ ಪ್ಲಾನ್‌ಮಾಡತೊಡಗಿದೆ. ಕ್ರಮೇಣ ನನಗೆ ಬೇಕಾದ ಹಾಡುಗಳನ್ನು ಅಣ್ಣನ ನೆರವಿನೊಂದಿಗೆ ನಾನೇ ಬರೆದು ಇದಕ್ಕಾಗಿ ಬಳಸ ತೊಡಗಿದೆ, ಡ್ಯಾನ್ಸ್ ಹೀಗೆ ಶುರುವಾಯ್ತು.
ಅನೇಕ ಸವಾಲುಗಳು
ಭಾರೂಡ್ ಕಲೆಯ ಮೂಲಕ ಸಮಾಜದ ಅಂಕುಡೊಂಕು ತಿದ್ದುವುದನ್ನೇ ಕೃಷ್ಣಾಯಿ ಮುಖ್ಯ ಉದ್ದೇಶ ಆಗಿಸಿಕೊಂಡರು. ಇದನ್ನು ಪ್ರದರ್ಶಿಸಲು ನಾನೆಲ್ಲೂ ತರಬೇತಿ ಪಡೆಯಲಿಲ್ಲ, 12ರ ವಯಸ್ಸಿನಿಂದಲೇ ಇದನ್ನು ನನಗೆ ತಿಳಿದ ಮಟ್ಟಿಗೆ ವೇದಿಕೆ ಮೇಲೆ ಪ್ರದರ್ಶಿಸುತ್ತಾ, ಕ್ರಮೇಣ ಸುಧಾರಣೆ ಮಾಡಿಕೊಂಡೆ. ಇದರಲ್ಲಿ ಯಾವುದೇ ಸಮಸ್ಯೆ ತೆಗೆದುಕೊಂಡು, ಅದರ ಕುಕೃತ್ಯಗಳ ಬಗ್ಗೆ ಹೇಳಿ, ಕೊನೆಗೆ ನಿವಾರಣೆ ಮಾಡಿಸಲಾಗುತ್ತದೆ. ಹಿಂದೆಲ್ಲ ಸ್ಟೇಜ್ ಶೋ ಸಿಗುವುದು ಬಹಳ ಕಷ್ಟವಾಗುತ್ತಿತ್ತು. ನನ್ನ ಬಗ್ಗೆ ಗೊತ್ತಿಲ್ಲದ ಜನ ಕೇಳಿದೊಡನೆ ನಿರಾಕರಿಸುತ್ತಿದ್ದರು. ಬೀದಿ ನಾಟಕಗಳ ತರಹ ಇದನ್ನೂ ಬೀದಿ ನೃತ್ಯ ಎಂಬಂತೆ ಪ್ರದರ್ಶಿಸುತ್ತಾ ನಂತರ ವೇದಿಕೆ ಏರಿ, ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಇಂಥದ್ದನ್ನೆಲ್ಲ ಮಾಡುವವರನ್ನು ಹಳ್ಳಿಯಲ್ಲಿ ಬಹಳ ಮಾಕರಿಸುತ್ತಿದ್ದರು, ನೃತ್ಯ ಪ್ರದರ್ಶನದಿಂದ ನನಗೆ ಹಣ ಸಿಗುತ್ತದೆಂದು ಅಸೂಯೆ ಪಡುತ್ತಿದ್ದರು, ಬಾಯಿಗೆ ಬಂದಂತೆ ಆಡಿಕೊಳ್ಳುತ್ತಿದ್ದರು. ನನ್ನದು ಮರಾಠಾಡ ಪ್ರದೇಶದ ಗ್ರಾಮೀಣ ಮರಾಠಿ ಭಾಷೆಯಾದ್ದರಿಂದ ಅದನ್ನು ಕೀಳಾಗಿ ಕಾಣುತ್ತಿದ್ದರು. ಆದರೆ ಇದು ಗ್ರಾಮೀಣರಿಗೆ ಸುಲಭವಾಗಿ ಅರ್ಥವಾಗುತ್ತಿತ್ತು. ಇಲ್ಲಿ ಸಾಹಿತ್ಯಕ್ಕಿಂತಲೂ ಭಾವನೆಗಳು ಹೆಚ್ಚು ಪರಿಣಾಮ ಬೀರುತ್ತವೆ. 3 ಗಂಟೆಗಳ ಒಂದು ಶೋನಲ್ಲಿ ಭಾರೂಡ್ ಕಲೆಯಿಂದ ಯಾವುದೇ ವಿಷಯದ ಕುರಿತಾಗಿ ಮಹಾರಾಷ್ಟ್ರದ ಎಲ್ಲಾ ಜಾನಪದ ಹಾಡುಗಳೂ ಅಂದ್ರೆ ಗಣಗಳಣ, ಅಭಂಗ್ ಪಿಂಗ್ಲಾ, ವಾಸುವದೇ ತುಂಬಡಿ ಇತ್ಯಾದಿಗಳನ್ನು ಕ್ರೋಢೀಕರಿಸಿ ಪ್ರಸ್ತುತಪಡಿಸುತ್ತಿದ್ದೆ. ಮುಂದೆ ಇಂಥವನ್ನು ವಿಡಿಯೋಗಳಲ್ಲಿ ಗಮನಿಸಿ ಇನ್ನಷ್ಟು ಸುಧಾರಣೆ ಮಾಡುತ್ತಿದ್ದೆವು.
ಹೆಚ್ಚಿನ ಕೆಲಸ ಆಗಬೇಕಿದೆ
ಮುಂದೆ ಕೃಷ್ಣಾಯಿ ಮರಾಠಿ, ಹಿಂದಿ ನಾಟಕಗಳಲ್ಲೂ ಪಾಲ್ಗೊಂಡರು. ನಟನೆಗಿಂತ ಈಕೆಗೆ ನಿರ್ದೇಶನದತ್ತಲೇ ಹೆಚ್ಚು ಒಲವು. ಭಾರೂಡ್ ನ ಮತ್ತೊಂದು ಪ್ರಕಾರವನ್ನೂ ಪರಿಚಯಿಸುತ್ತೇನೆ. ಅದನ್ನು ನಾನು ಪುಣೆ, ಕತಾರಾ, ಪಾಲಘರ್, ಠಾಣೆ ಇತ್ಯಾದಿಗಳಲ್ಲಿ ನೋಡಿ ಪ್ರಯೋಗ ಮಾಡುತ್ತಿದ್ದೇನೆ. ಈ ಕಲೆಯಲ್ಲಿ ಪರಿಣಿತಳಾಗಿ ಪದ್ಮಶ್ರೀ ಪ್ರಶಸ್ತಿ ಪಡೆಯಬೇಕೆಂಬುದೇ ನನ್ನ ಗುರಿ! ಹಿಂದೆ ಕೇವಲ 15 ಜನರಿದ್ದ ನಮ್ಮ ತಂಡ ಈಗ 100 ಸಮೀಪಿಸಿದೆ. ನಾನು ಹೊದ ಕಡೆಯಲ್ಲೆಲ್ಲ ಈ ಕಲೆ ಕರಗತ ಮಾಡಿಕೊಂಡವರನ್ನು ನಮ್ಮ ತಂಡಕ್ಕೆ ಸೇರಿಸಿಕೊಂಡು, ಅವರಿಗೂ ಐಡೆಂಟಿಟಿ ಕೊಡಿಸುತ್ತೇನೆ.
ಎಚ್ಚೆತ್ತ ಮಂದಿ
ನನ್ನ ಈ ಗ್ರಾಮೀಣ ಕಲಾ ಪ್ರದರ್ಶನಗಳಿಂದ ಎಷ್ಟೋ ಹಳ್ಳಿಗಳಲ್ಲಿ ಜನ ಎಚ್ಚೆತ್ತು ಪರಿಣಾಮಕಾರಿ ಸುಧಾರಣೆ ಕಂಡುಕೊಂಡಿರುವುದನ್ನು ಗಮನಿಸಿದ್ದೇನೆ. ಜನ ಕುಡಿತ ಕಡಿಮೆ ಮಾಡಿದ್ದಾರೆ, ಹೆಣ್ಣು ಭ್ರೂಣಹತ್ಯೆ ಬಹುತೇಕ ನಿಂತಿದೆ, ಬಾಲ್ಯ ವಿವಾಹಕ್ಕೆ ಹೆಣ್ಣುಗಂಡು ಮಕ್ಕಳು ಸಿದ್ಧರಿಲ್ಲ. ಎಷ್ಟೋ ಜನ ನನ್ನ ನಟನೆ ಕಂಡು ಅದರಲ್ಲಿ ತಮ್ಮ ವೈಯಕ್ತಿಕ ಕಥೆ ಗುರುತಿಸಿ ಅತ್ತಿದ್ದಾರೆ! ಹೀಗಾಗಿ ಹೆಣ್ಣುಮಕ್ಕಳು ಎಂದೂ ತಮ್ಮ ಆತ್ಮವಿಶ್ವಾಸ ಬಿಟ್ಟುಕೊಡಬಾರದು ಎಂದು ಹೇಳುತ್ತಲೇ ಇರುತ್ತೇನೆ. ಇದಕ್ಕೆ ಉತ್ತಮ ಶಿಕ್ಷಣ ಒಂದೇ ಅವರ ಏಳಿಗೆಗೆ ದಾರಿ.
– ಪ್ರತಿನಿಧಿ





