ಕಥೆ - ಪದ್ಮಾ ಕುಲಕರ್ಣಿ
ಮದುವೆಯಾದ ಹೊಸತರಲ್ಲಿದ್ದ ಪ್ರೀತಿ ಪ್ರೇಮಗಳೆಲ್ಲಾ ಎರಡು ಮೂರು ದಶಕ ಕಳೆಯುವಷ್ಟರಲ್ಲಿ ಎಲ್ಲಿ ಮಾಯವಾಗುತ್ತದೆ.....? ಇದಕ್ಕೆ ವೈದ್ಯರೇನೋ ಹೆಣ್ಣಿಗೆ ಮೆನೋಪಾಸ್ ಹೆಸರಿಟ್ಟು, ಔಷಧಿ ಸೂಚಿಸಬಹುದು. ಈ ಮನೋವೇದನೆಗೆ ನಿಜಕ್ಕೂ ಮದ್ದುಂಟೇ.....?
ಆಫೀಸ್ ಗೆ ಹೊರಟ ಗಂಡನ ಹಿಂದೆ ಬಾಗಿಲವರೆಗೆ ಬಂದಳು ಸರಿತಾ. ಅವಳ ಉದ್ದೇಶ ಗಂಡನನ್ನು ಆಫೀಸ್ ಗೆ ಕಳಿಸಿ ಬಾಗಿಲು ಮುಚ್ಚಿಕೊಂಡು ಬರುವುದಾಗಿತ್ತು. ಅವಳು ಎಂದಿನಂತೆ ತನ್ನ ಮನೆ ಗೇಟಿನ ಬಳಿ ನಿಂತಳು.
ಅಷ್ಟರಲ್ಲಿ ಎದುರು ಮನೆಯವಳು ಅವನನ್ನು ಕಾಣುತ್ತಲೇ ಹಲ್ಲು ಕಿರಿಯುತ್ತಾ, ``ಹಾಯ್.....'' ಎಂದಳು. ಅವನೂ, ``ಹಾಯ್....'' ಎನ್ನುತ್ತಾ ಅವಳತ್ತ ಕೈ ಬೀಸಿದ. ಹಾಗೆ ಅವಳತ್ತ ನೋಡುತ್ತಲೇ, ``ನಾವು ಹೋಗ್ಬರ್ತಿನಿ ಡಾರ್ಲಿಂಗ್.....'' ಎನ್ನುತ್ತಾ ಕಾರು ಹತ್ತಿ ಭುರ್ರೆಂದು ಹೊರಟುಹೋದ.
ಸರಿತಾಳಿಗೆ ಅಲ್ಲಿನ ನಾಟಕ ನೋಡಿ ನಖಶಿಖಾಂತ ಉರಿಯಿತು. ಇವಳ್ಯಾರೋ ಎದುರು ಮನೆಯವಳು, ದಿನ ಅವನು ಆಫೀಸ್ ಗೆ ಹೋಗುವ ಸಮಯಕ್ಕೆ ಸರಿಯಾಗಿ ಮನೆ ಗೇಟಿನ ಬಳಿ ನಿಲ್ಲುತ್ತಾಳೆ. ಅವನು ಹೊರ ಬರುತ್ತಲೇ ಹಲ್ಲು ಕಿರಿಯುತ್ತಾ ಕೈ ಬೀಸುತ್ತಿದ್ದಳು. ಅವನಂತೂ ರಸಿಕ ಶಿಖಾಮಣಿ, ತಾನೂ ಹಲ್ಲು ಕಿರಿಯುತ್ತಾ ಅವಳಿಗೆ ಕೈ ಬೀಸುತ್ತಿದ್ದ. ಸರಿತಾಳಿಗೆ ದಿನ ಇದನ್ನು ನೋಡುವ ಕರ್ಮ. ಹಾಗಂತ ಎದುರು ಮನೆಯವಳೇನೂ ಹರೆಯದ ಹುಡುಗಿಯಲ್ಲ! ಎರಡು ಮಕ್ಕಳಿರುವ ಹೆಂಗಸರು. ಮೇಲಾಗಿ ಹೇಳಿಕೊಳ್ಳುವಂತಹ ಸುಂದರಿಯೂ ಅಲ್ಲ..... ತೀರಾ ಸಾಮಾನ್ಯ ರೂಪಿನ ಹೆಂಗಸು. ಇದು ಇತ್ತೀಚಿನ ಕೆಲವು ದಿನಗಳಿಂದ ದಿನ ನಡೆಯುತಿತ್ತು.
ಕೆಲವು ಮನುಷ್ಯರಿಗೆ ತಮ್ಮ ತಟ್ಟೆಯಲ್ಲಿ ಏನಿದೆಯೋ ಅದನ್ನು ಬಿಟ್ಟು ಬೇರೆಯವರ ತಟ್ಟೆಯಲ್ಲಿ ಹಣಕುವುದೊಂದು ಕೆಟ್ಟ ಚಟ. ಮನೆಯ ಮೃಷ್ಟಾನ್ನವನ್ನು ಕಡೆಗಣಿಸಿ ಪರರ ಎಲೆಯ ಎಂಜಲೂಟಕ್ಕೆ ಬಾಯ್ದೆರೆದಂತೆ!
ಗಂಡನನ್ನು ಕಳಿಸಿ ಮುಂಬಾಗಿಲು ಮುಚ್ಚಿದ ಸರಿತಾ, ದುಮ್ಮಾನದಿಂದಲೇ ಒಳಬಂದಳು. ಆಗ ಟೈಮ್ ಎಂಟು ಮೂಕ್ಕಾಲಾಗಿತ್ತು. ಇನ್ನೂ ನಿಂಗಿ ಬರುವುದು ಹನ್ನೊಂದು ಗಂಟೆಗೆ. ಹಿಂದಿನ ರಾತ್ರಿ ಸರಿಯಾಗಿ ನಿದ್ರೆ ಬರದೇ ಸರಿತಾಳ ಕಣ್ಣುಗಳು ಭಾರವಾಗಿ ಎಳೆಯತೊಡಗಿದವು. ನಿದ್ರೆ ಕವುಚಿಕೊಂಡು ಬಂದಿತು. ಇಂದು ಹಾಸಿಗೆಯಿಂದ ಎದ್ದಾಗಿನಿಂದಲೇ ಅವಳಿಗೆ ಮೈಯಲ್ಲಿ ಏನೋ ಒಂಥರಾ ಸುಸ್ತು, ಎಂಥದೋ ಬೇಸರ, ಮೈ ಮನವನ್ನು ಆವರಿಸಿಕೊಂಡು ಮನಸ್ಸು ತೀರಾ ಅಸ್ವಸ್ಥವಾಗಿತ್ತು. ಹೇಗೂ ನಿಂಗಿ ಬರುವುದಕ್ಕೆ ಸಾಕಷ್ಟು ಟೈಮಿದಿ, ಒಂದಷ್ಟು ಹೊತ್ತು ಹಾಗೇ ಮುಸುಕೆಳೆದು ಮಲಗಿಬಿಡಲೇ ಎನಿಸಿತು. ಹಾಗೆ ಮಲಗಿಬಿಡಲು ಸಾಧ್ಯವೇ....? ಅಸ್ತವ್ಯಸ್ತವಾಗಿರುವ ಅಡುಗೆಮನೆ ಕಡೆಗೊಮ್ಮೆ ಅವಳ ದೃಷ್ಟಿ ಹರಿಯಿತು. ಅದು ಮೊದಲು ನನ್ನ ಸ್ವಸ್ಥಗೊಳಿಸು ಬಾ.... ಎಂದು ಕರೆದಂತೆ ಭಾಸವಾಯಿತು. ರಾತ್ರಿ ತಿಂದುಂಡ ಪಾತ್ರೆಗಳು ಸಿಂಕ್ ನಲ್ಲಿ ಬಾಯಿ ಒಣಗಿಸಿಕೊಂಡು ಹಾಗೆ ಬಿದ್ದಿದ್ದವು. ಬೆಳಗ್ಗೆ ಮಾಡಿದ ಅಡುಗೆ ತಿಂಡಿಯ ಪಾತ್ರೆಗಳು, ಕ್ಲೀನ್ ಮಾಡದ ಗ್ಯಾಸ್ ಕಟ್ಟೆ ಎಲ್ಲವೂ ಹಾಗಾಗೇ ಇರುವುದನ್ನು ನೋಡಿ ಅವಳ ಮನಸ್ಸು ಮತ್ತಷ್ಟು ಅಸ್ವಸ್ಥಗೊಂಡಿತು.
ಇದೆಲ್ಲವನ್ನೂ ಸ್ವಚ್ಛವಾಗಿಸಿದ ಮೇಲೆಯೇ ನನ್ನ ಮನಸ್ಸಿಗೆ ನೆಮ್ಮದಿ. ಕೆಲಸದವಳು ಬರುವುದಕ್ಕೂ ಮೊದಲೇ ಮುಸುರೆ ಪಾತ್ರೆಗಳನ್ನೆಲ್ಲಾ ಹಿತ್ತಲಲ್ಲಿ ಇಡಬೇಕು. ಬಚ್ಚಲಲ್ಲಿ ಬಕೆಟ್ ನಲ್ಲಿ ಇರುವ ಕೊಳೆ ಬಟ್ಟೆಗಳನ್ನೆಲ್ಲಾ ಒಗೆಯಲು ವಾಷಿಂಗ್ ಮೆಷಿನ್ ಗೆ ಹಾಕಬೇಕಿತ್ತು. ಹಾಗಾಗಿ ಮನಸ್ಸಿಲ್ಲದಿದ್ದರೂ ಅನಿವಾರ್ಯವಾಗಿ ಅಡುಗೆಮನೆ ಹೊಕ್ಕಳು.





