ಪ್ರೀತಿ ಪ್ರೇಮದಲ್ಲಿ ಮುಳುಗಿದವರಿಗೆ ಕಣ್ಣು ಕಾಣೋಲ್ಲ ಎಂಬುದು ಸಹಜ, ಹಾಗೆಂದು ಈ ಆನ್ ಲೈನ್ ನಲ್ಲಿ ಲವ್ ಆದಾಗ ಮುಂದೆ ಮೋಸವಾಗದಂತೆ ಎಚ್ಚರಿಕೆ ಇರಲಿ....!
ಇಂದಿನ ಆಧುನಿಕ ಪ್ರಪಂಚ ನೋಡುತ್ತಿದ್ದರೆ ಎಲ್ಲೆಲ್ಲೂ ಪ್ರೀತಿ, ಪ್ರೇಮ, ಪ್ರಣಯಗಳು ತುಂಬಿ ಚೆಲ್ಲಾಡುತ್ತಿವೆ! ಅಂದಿನ ಕಾಲದ ರಾಧಾಕೃಷ್ಣರ ಪ್ರೇಮ, ರೋಮಿಯೊ ಜೂಲಿಯೆಟ್ ಲವ್, ಲೈಲಾ ಮಜ್ನುರ ಒಲವು.... ಇಂದಿಗೂ ಹಚ್ಚಹಸಿರು. ಈ ಘಟಾನುಘಟಿಗಳು ತಮ್ಮ ಪವಿತ್ರ ಪ್ರೇಮದಿಂದ ಆ ಕಾಲದಿಂದ ಈ ಕಾಲಕ್ಕೂ ಆದರ್ಶ ಪ್ರೇಮಿಗಳಾಗಿ ಉಳಿದಿದ್ದಾರೆ. ಪ್ರೀತಿ ಪ್ರೇಮದ ಶಬ್ದ ಕೇಳುತ್ತಲೇ ನಮ್ಮ ಮನಸ್ಸು ಗರಿಗೆದರಿ ಆಕಾಶದಲ್ಲಿ ಹಾರಾಡುತ್ತಾ, `ಹಾರಲೇ ನಾ... ಹಾಡಲೇ....' ಎಂದು ಸಪ್ತ ಸಾಗರಗಳಾಚೆ ತೇಲಿ ಹೋಗುತ್ತದೆ. ಆದರೆ ಇಂದಿನ ಲೇಟೆಸ್ಟ್ ಆನ್ ಲವ್ ಇದೆಯಲ್ಲ.... ವ್ಯಕ್ತಿಯ ಮುಖಾಮುಖಿ ಪರಿಚಯ ಆಗದೆ, ಮಿಂಚಂಚೆ ಮೂಲಕ ಒಂದಿಷ್ಟು ಫೋಟೋ ದರ್ಶನಗಳು, ವಿಡಿಯೋ ಚಾಟ್ ಗಳ ಮೂಲಕ ಇಡೀ ಭೂಮಂಡಲದಲ್ಲಿ ಯಾರು ಯಾರನ್ನು ಬೇಕಾದರೂ ಅಂತರ್ಜಾಲ ಎಂಬ ಮಾಯಾ ಕನ್ನಡಿ ಮೂಲಕ ಸಂಪರ್ಕಿಸಿ, ಪ್ರೇಮಲೋಕದಲ್ಲಿ ಮಿಂದೇಳುತ್ತಾರೆ.
ದುರಂತವೆಂದರೆ ಈ ಮಾದರಿಯ ಆನ್ ಲೈನ್ ಲವ್ ಕೇವಲ ಮೋಸ, ವಂಚನೆ, ದ್ರೋಹ, ದ್ವೇಷ, ಬ್ಲ್ಯಾಕ್ ಮೇಲ್ ವರೆಗೂ ಹೋಗಿ ಎಷ್ಟೋ ಸಲ ಆತ್ಮಹತ್ಯೆಯಂಥ ದುರಂತಕ್ಕೆ ದಾರಿ ಆಗುತ್ತಿದೆ. ಇಷ್ಟೆಲ್ಲ ಆಗಿರುವುದು ಗೊತ್ತಿದ್ದರೂ ಇಂದಿನ ಯುವಜನತೆ ಈ ಆನ್ ಲೈನ್ ಲವ್ ಗೆ ಹಿಮಗಿರಿಯಷ್ಟು ಉನ್ನತ ಪ್ರಾಶಸ್ತ್ಯ ನೀಡುತ್ತಾರೆ. ಇಂದು ಈ ವರ್ಚಯೆಲ್ ಪ್ರೇಮ ಎಲ್ಲಾ ಗಡಿಗಳನ್ನೂ ದಾಟಿ ಹುಡುಗ ಹುಡುಗಿಯರನ್ನು ಎಲ್ಲಿಗೋ ಕೊಂಡೊಯ್ಯುತ್ತಿದೆ.
ಇಂದಿನ ಯುವಜನತೆ ಅಂತೂ ಸೋಶಿಯಲ್ ಪ್ಲಾಟ್ ಫಾರ್ಮ್ ನಿಂದ ದೂರ ಉಳಿದಿರುಲು ಸಾಧ್ಯವೇ ಇಲ್ಲ. ಇಂಥ ವೇದಿಕೆಯಿಂದಲೇ ಇಂದಿನ ಬಹುತೇಕ ಯುವಜನತೆ ಈ ಹುಚ್ಚುಖೋಡಿ ಆನ್ ಲೈನ್ ಲವ್ ಗೆ ಸಿಲುಕುತ್ತಿದ್ದಾರೆ.
`ಪ್ರೇಮಕ್ಕೆ ಕಣ್ಣಿಲ್ಲ' ಎಂಬುದು ದುಶ್ಯಂತ ಶಕುಂತಲೆಯ ಕಾಲದಿಂದಲೂ ಕೇಳಿ ಬರುತ್ತಿರುವ ಮಾತು. ಅದು ನಿತ್ಯನೂತನವಾಗಿ ಇಂದಿನ ಇಂಟರ್ ನೆಟ್ ವರೆಗೂ ಹರಿದು ಬಂದಿದೆ. ಇಂದಿನ ಆಧುನಿಕ ಕಲಿಗಾಲಕ್ಕೆ ತಕ್ಕಂತೆ ಇದನ್ನು ಹೀಗೆ ಬದಲಿಸಬಹುದೇ? `ಪ್ರೇಮಕ್ಕೆ ಕಣ್ಣಿಲ್ಲ.... ವಿವೇಕಕ್ಕೆ ವಾಸ್ತವತೆಯ ಅರಿವಿರಲಿ!'
ಪ್ರೇಮಿಸುವುದು ತಪ್ಪಲ್ಲ, ಮಾನವರಾಗಿ ಹುಟ್ಟಿದ ಮೇಲೆ ಪ್ರೇಮಿಸುವುದು, ಪ್ರೇಮಿಸಲ್ಪಡುವುದು ಎಲ್ಲಾ ಮಾಮೂಲೇ. ಪ್ರತಿ ವ್ಯಕ್ತಿಯ ಜೀವನದಲ್ಲೂ ಒಂದಲ್ಲ ಒಂದು ಸಲ ಯಾರೇ ಆಗಲಿ, ಈ ಪ್ರೇಮದ ಸುಳಿಗೆ ಸಿಲಕದೇ ಹೋಗಲಾರರು, ಅದು ಎಷ್ಟೋ ಸಲ ಮೂಕಪ್ರೇಮ ಆಗಿರಬಹುದು. ಇಂದು ಎಲ್ಲೆಲ್ಲೂ ಡಿಜಿಟಲ್, ಸೋಶಿಯಲ್ ಸೈಟ್ಸ್ ತಾಂಡವವಾಡುತ್ತಿವೆ.
ವರ್ಚಯೆಲ್ ವರ್ಲ್ಡ್ ಅಂದ್ರೆ ಕಣ್ಣಿಗೆ ಕಾಣುತ್ತಾ, ಅನುಭವಕ್ಕೆ ಬರುತ್ತಿದ್ದರೂ ಕೈಗೆಟುಕದಂಥದ್ದು ಎಂದೇ ಆಗುತ್ತದೆ. ಇಂಥ ಪ್ರೀತಿ ಪ್ರೇಮ ಕಣ್ಣಿಗೆ ಕಾಣಿಸುತ್ತಾ, ಕಿವಿಗೆ ಕೇಳಿಸುತ್ತಾ, ಅನುಭವಕ್ಕೆ ವೇದ್ಯ ಎನಿಸಿದರೂ ಕೈಗೆಟುಕುವಂಥದ್ದಲ್ಲ ಎಂಬುದೇ ವಾಸ್ತವತೆ. ಎಂದೋ ಅದು ಕೈಗೆ ಸಿಗಬಹುದು ಎಂಬ ಆಶಾಭಾವನೆಯಲ್ಲೇ ಜನ ಈ ಆನ್ ಲೈನ್ ಲವ್ ಗೆ ಮರುಳಾಗುತ್ತಾರೆ. ಹಾಗಾದರೆ ಇದರಿಂದ ಮೋಸ ಹೋಗದಿರಲು ಏನೇನು ಕ್ರಮ ಕೈಗೊಳ್ಳಬೇಕು? :





