ಗಂಡ, ಹೆಂಡತಿ ಮತ್ತು ಮುದ್ದಾದ ಮಗಳು ಇದ್ದ ಅದೊಂದು ಸುಂದರವಾದ ಕುಟುಂಬ. ಒಬ್ಬಳೇ ಮಗಳಾಗಿದ್ದರಿಂದ ಬಹಳ ಮುದ್ದಿನಿಂದಲೇ ಗಿಣಿ ಸಾಕುವಂತೆ ಸಾಕಿ ಸಲಹಿದ್ದರು. ನೋಡ ನೋಡುತ್ತಿದ್ದಂತೆಯೇ ಮಗಳು ಬೆಳೆದು ದೊಡ್ಡವಳಾಗುತ್ತಿದ್ದಂತೆಯೇ ಅವಳಿಗೊಂದು ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕೆಂದು ನಿರ್ಧರಿಸಿ ತಮ್ಮ ಬಂಧು ಮಿತ್ರರೊಂದಿಗೆ ತಮ್ಮ ಮಗಳಿಗೆ ಅನುರೂಪವಾದಂತಹ ಸಂಬಂಧವಿದ್ದರೆ ತಿಳಿಸಿ ಎಂದೂ ಸೂಚಿಸಿದ್ದರು.
ಅಲ್ಲಿ ಮತ್ತೊಂದು ಸುಂದರ ಸುಸಂಸ್ಕೃತ ಸುಖೀ ಕುಟುಂಬದವರೊಬ್ಬರೂ ಸಹಾ ಅವರ ವಿದ್ಯಾವಂತ, ವಿವೇಕವಂತ ಮಗನಿಗೂ ಸಂಬಂಧವನ್ನು ಹುಡುಕುತ್ತಿದ್ದರು. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ಎರಡೂ ಕುಟಂಬಕ್ಕೂ ಪರಿಚಯವಿದ್ದವರೊಬ್ಬರು ಆ ಎರಡೂ ಕುಟುಂಬವನ್ನು ಪರಿಚಯಿಸಿ ಒಗ್ಗೂಡಿಸಿದ ಪರಿಣಾಮ ಆ ಮನೆಯ ಮಧುಮಗಳು ಈ ಮನೆಯ ಮಧುಮಗನೊಂದಿಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹವಾಗಿ ಎರಡೂ ಕುಟುಂಬಗಳು ಒಂದಾದವು.

ಆರಂಭದ ಮೂರ್ನಾಲ್ಕು ತಿಂಗಳುಗಳ ಕಾಲ ನಿಜವಾಗಿಯೂ ಮಧುಚಂದ್ರದಂತೆಯೇ ಇದ್ದು, ನವದಂಪತಿಗಳು ಬಹಳ ಅನ್ಯೋನ್ಯವಾಗಿದ್ದರು. ಅತ್ತೆ ಮತ್ತು ಮಾವ ಸಹಾ ಮಕ್ಕಳು ಈಗ ತಾನೇ ಮದುವೆಯಾಗಿದ್ದಾರೆ ಅವರಿಗಿಷ್ಟ ಬಂದಂತೆ ಇರಲಿ ಎಂದು ಯಾವುದೇ ರೀತಿಯ ತೊಂದರೆ ಕೊಡುತ್ತಿರಲಿಲ್ಲ. ಇಡೀ ವಾರ ತನ್ನ ಗಂಡನ ಮನೆಯಲ್ಲಿ ಇರುವಾಗ ಸಂತೋಷದಿಂದ ಇರುತ್ತಿದ್ದ ಹೆಂಡತಿ ವಾರಾಂತ್ಯದಲ್ಲಿ ಅಮ್ಮನ ಮನೆಗೆ ಹೋಗಿ ಬಂದ ನಂತರ ಅದೇಕೋ ಏನೋ ಗೊಂದಲಕ್ಕೆ ಬಿದ್ದವಳಂತೆ ಅನ್ಯಮನಸ್ಕಳಾಗಿರುತ್ತಿದ್ದದ್ದನ್ನು ಗಮನಿಸಿದ ತಾಯಿ ಮತ್ತು ಮಗ ಹೊಸದಾಗಿ ಮದುವೆಯಾಗಿ ತವರು ಮನೆ ಬಿಟ್ಟು ಬಂದಿರುವ ಕಾರಣ ಹೀಗಾಗುತ್ತಿರಬಹುದು. ನಂತರದ ದಿನಗಳಲ್ಲಿ ಇವೆಲ್ಲವೂ ಸರಿ ಹೋಗಬಹುದು ಎಂದೇ ಭಾವಿಸಿದ್ದರು.
ಅದೊಂದು ದಿನ ತಾಯಿ ಹೊಸದಾಗಿ ಮದುವೆಯಾಗಿದ್ದ ಮಗಳನ್ನು ತಮ್ಮ ಪರಿಚಯವಿದ್ದ ವಕೀಲರ ಬಳಿ ಕರೆದುಕೊಂಡು ಹೋಗಿ, ವಕೀಲರೇ ನಮ್ಮ ಮಗಳಿಗೆ ವಿಚ್ಚೇದನ ಕೊಡಿಸಿ ಎಂದು ಕೇಳಿಕೊಳ್ಳುತ್ತಾಳೆ. ವಕೀಲರೂ ಸಹಾ ಅ ಮದುವೆಗೆ ಹೋಗಿ ನವದಂಪತಿಗಳಿಗೆ ಆಶೀರ್ವದಿಸಿದ್ದ ಕಾರಣ ಅವರಿಗೆ ಬಹಳ ಅಚ್ಚರಿಯಾಗಿ,
ಏನಮ್ಮಾ ನಿನ್ನ ಗಂಡ ನಿನಗೆ ಹೊಡೆಯುತ್ತಾನಾ ?
ನಿನ್ನ ಗಂಡನಿಗೆ ನಿನ್ನ ಮೇಲೇ ಪ್ರೀತಿ ಇಲ್ಲವೇ? ಬೇರೆ ಯಾವುದಾದರು ಅನೈತಿಕ ಸಂಬಂಧವಿದೆಯೇ?
ನಿಮ್ಮ ಅತ್ತೆ ಮಾವ ಏನಾದರೂ ಹಿಂಸಿಸುತ್ತಿದ್ದಾರಾ?
ಅವರು ನಿಮ್ಮ ತವರಿನಿಂದ ವರದಕ್ಷಿಣೆ ಏನಾದರೂ ತರಲು ಒತ್ತಾಯ ಮಾಡುತ್ತಿದ್ದಾರಾ?
ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳುತ್ತಲೇ ಹೋದಾಗ
ಎಲ್ಲದ್ದಕ್ಕೂ ಇಲ್ಲ, ಇಲ್ಲ, ಇಲ್ಲಾ.. ಎಂದೇ ಹೇಳುತ್ತಿದ್ದರೆ
ಇದರ ಮಧ್ಯೆ ಬಾಯಿ ಹಾಕಿದ ತಾಯಿ, ನನ್ನ ಮಗಳು ಅವರ ಗಂಡನ ಮನೆಯಲ್ಲಿ ತುಂಬಾ ಕಷ್ಟ ಪಡುತ್ತಿದ್ದಾಳೆ. ಅವರೆಲ್ಲರೂ ಅವಳಿಗೆ ತುಂಬಾನೇ ಹಿಂಸಿಸುತ್ತಿದ್ದಾರೆ ಎಂದು ಸ್ವಲ್ಪ ಜೋರಾಗಿ ಹೇಳಿದ್ದನ್ನು ಗಮನಿಸಿದ ವಕೀಲರು ಬಿಡೀ ಅಮ್ಮಾ.. ನಿಮ್ಮ ಮಗಳ ಸಮಸ್ಯೆ ಅರ್ಥವಾಯಿತು. ಅಮ್ಮಾ!! ನಿಮ್ಮ ಮಗಳ ಸಮಸ್ಯೆಯನ್ನು ಬಗೆ ಹರಿಸುವ ಮುನ್ನಾ, ನನ್ನ ಕೆಲವೊಂದು ಸಂದೇಹಗಳನ್ನು ಒಬ್ಬ ತಾಯಿಯಾಗಿ ನೀವಿ ದಯವಿಟ್ಟು ಪರಿಹರಿಸಿದಲ್ಲಿ, ನಿಮ್ಮ ಮಗಳ ಸಮಸ್ಯೆ ಸುಲಭವಾಗಿ ಪರಿಹರಿಸಲು ಸಹಕಾರಿಯಾಗಿಗುತ್ತದೆ ಎನ್ನುತ್ತಾ,
ನಿಮ್ಮ ಮನೆಯಲ್ಲಿ ನೀವೇ ಆಡುಗೆ ಮಾಡ್ತೀರಲ್ವಾ? ಹಾಗೆ ಅಡುಗೆ ಮಾಡುವಾಗ ನೀವು ಎಷ್ಟು ಸಲಾ ಕೈ ಆಡಿಸುತ್ತೀರೀ? ಎಂದು ಕೇಳಿದರು.





