ಸುಮಿತ್ರಾ ENT ಸ್ಪೆಷಲಿಸ್ಟ್ ಬಳಿ ಹೋದವಳೇ ಗಂಡನ ಬಗ್ಗೆ ವಿವರ ತಿಳಿಸಿದಳು.
ಸುಮಿತ್ರಾ : ಡಾಕ್ಟರ್, ನಮ್ಮ ಯಜಮಾನರು ತುಸು ಕಿವುಡಾಗಿದ್ದಾರೆ ಅನ್ಸುತ್ತೆ! ನಾನು ಅಡುಗೆಮನೆಯಿಂದ ಎಷ್ಟು ಕೂಗಿ ಹೇಳಿದರೂ ಹಾಲ್ ನಲ್ಲಿರುವ ಅವರಿಗೆ ಏನೂ ಕೇಳಿಸೋದಿಲ್ಲ. ಇನ್ನು ರೂಮಿಗೆ ಹೋಗಿಬಿಟ್ಟರಂತೂ ದೇವರೇ ಗತಿ.
ಡಾಕ್ಟರ್ : ನೀವು ಅವರನ್ನು ಇಲ್ಲಿಗೇ ಕರೆತನ್ನಿ.
ಸುಮಿತ್ರಾ : ಬೇಡಿ ಡಾಕ್ಟರ್…. ನಾನು ಅವರನ್ನು ಬಹಳ ಪ್ರೇಮಿಸುತ್ತೇನೆ. ಅವರಿಗೆ ಒಂದು ನ್ಯೂನತೆ ಇರುವುದು ನನಗೆ ಗೊತ್ತಿದೆ ಎಂದು ಅವರೆದುರು ತೋರಿಸಿಕೊಳ್ಳಲು ನನಗೆ ಇಷ್ಟವಿಲ್ಲ. ನೀವು ಯಾವುದಾದರೂ ಔಷಧಿ, ಮಾತ್ರೆ ಕೊಡಿ. ಅವರಿಗೆ ತಿಳಿಯದಂತೆ ಆಹಾರದಲ್ಲಿ ಬೆರೆಸಿ ಕೊಡುತ್ತೇನೆ. ಸಹಜವಾಗಿ ಅವರಿಗೆ ಕಿವುಡುತನ ತಂತಾನೇ ಗುಣವಾಗಲಿ!
ಡಾಕ್ಟರ್ : ಸರಿ, ನೀವು ಅವರಿಗೊಂದು ಪರೀಕ್ಷೆ ಕೊಡಿ. ಮೊದಲು 40 ಅಡಿ ದೂರದಿಂದ, `ಹೌ ಆರ್ ಯೂ?’ ಅಂತ ಕೇಳಿ. ಉತ್ತರ ಬರದಿದ್ದರೆ 30 ಅಡಿ ದೂರದಿಂದ ಇದೇ ಪ್ರಶ್ನೆ ಕೇಳಿ. ಆಗಲೂ ಉತ್ತರ ಬರದಿದ್ದರೆ 20 ಅಡಿ, ನಂತರ 10 ಅಡಿ, 5 ಅಡಿ… ಹೀಗೆ ಪ್ರಯತ್ನಿಸಿ. ಆಮೇಲೆ ಅವರು ಎಷ್ಟು ಅಡಿಗಳಿಗೆ ಉತ್ತರ ಕೊಟ್ಟರೆಂದು ನನ್ನ ಬಳಿ ಬಂದು ಹೇಳಿ. ಅದಕ್ಕೆ ತಕ್ಕಂತೆ ಔಷಧಿ ಡೋಸೇಜ್ ಬದಲಿಸಿ ಕೊಡುತ್ತೇನೆ.
ಸುಮಿತ್ರಾ ಹಾಗೆಯೇ ಆಗಲೆಂದು ಮನೆಗೆ ಬಂದವಳೇ ಹಾಲ್ ನಲ್ಲಿ ಪೇಪರ್ ಓದುತ್ತಿದ್ದ ಪತಿಗೆ 40 ಅಡಿ ದೂರದಿಂದ, `ರಾತ್ರಿಗೆ ಏನು ಅಡುಗೆ ಮಾಡಲಿ?’ ಎಂದು ಕೇಳಿದಳು. ಉತ್ತರ ಬರದಿದ್ದಾಗ 30, 20 ನಂತರ 10 ಅಡಿಗೆ ಬಂದು ಅದೇ ಪ್ರಶ್ನೆ ಕೇಳಿದಳು. ಆಗಲೂ ಮೌನವೇ ಉತ್ತರ! ನಂತರ ಅವರ ಕಿವಿ ಹತ್ತಿರ ಬಂದು, “ರಾತ್ರಿ ಏನಡಿಗೆ ಮಾಡಲಿ?” ಎಂದು ಜೋರಾಗಿ ಕಿರುಚಿದರು.
“ನಿನ್ನ ಕಿವುಡುತನಕ್ಕೆ ಬಡ್ಕೊಂಡ್ರು! ಆಗ್ಲಿಂದ ಇದೇ ಪ್ರಶ್ನೆಗೆ ಬರೀ ಚಿತ್ರಾನ್ನ ಮಾಡು ಸಾಕು ಅಂತ 5 ಸಲ ಹೇಳಿದ್ದೇನೆ!” ಎಂದಾಗ, ಸುಮಿತ್ರಾ ತಾನೇ ಚಿಕಿತ್ಸೆ ಪಡೆಯಬೇಕೇ ಎಂದು ತಲೆ ಚಚ್ಚಿಕೊಂಡಳು.
ಸತೀಶ್ : ಎಲ್ಲರೂ ವಿಶಾಲ ಹೃದಯಿಗಳಾಗಿ ಇರಬೇಕು ಅಂತ ಆಗಾಗ ಭಾಷಣ ಕೊಚ್ಚುತ್ತಾರಲ್ಲ…. ಏನು ಹಾಗಂದ್ರೆ? ಏನು ಮಾಡಬೇಕಂತೆ?
ಮಹೇಶ : ಎಲ್ಲರೂ ಹೀಗೆ ಭಾಷಣ ಕೊಚ್ಚುತ್ತಿದ್ದರೆ ಹೃದಯವಂತರೆಲ್ಲ ಹೃದಯ ಹೀನರಾಗಬೇಕು ಅಷ್ಟೆ. ಹೃದಯವೇ ಇಲ್ಲದಿದ್ದ ಮೇಲೆ ವಿಶಾಲ ಹೃದಯಿಗಳಾಗಲು ಹೇಗೆ ಸಾಧ್ಯವಂತೆ….?
ರವಿ : ಹೆಂಡತಿ ಬಳಿ ವಾದ ಮಾಡುವುದು ಅಥವಾ ಸಾಫ್ಟ್ ವೇರ್ ಲೈಸೆನ್ಸ್ ಅಗ್ರಿಮೆಂಟ್ ಓದುವುದು ಎರಡೂ ಒಂದೇ ಅಂತೀನಿ!
ಶಶಿ : ಅದು ಹೇಗೆ ಸಾಧ್ಯ?
ರವಿ : ಎಲ್ಲವನ್ನೂ ಇಗ್ನೋರ್ ಮಾಡಿ ಕೊನೆಯಲ್ಲಿ `ಐ ಅಗ್ರಿ’ ಅಂತ ಕ್ಲಿಕ್ ಮಾಡಲೇ ಬೇಕಾಗುತ್ತೆ!
ಒಮ್ಮೆ ಮೋಹನ್ ತನ್ನ ಪ್ರಾಣ ಸ್ನೇಹಿತ ಕಿಶೋರ್ ನನ್ನು ಸಂಜೆ 8 ಗಂಟೆ ಹೊತ್ತಿಗೆ ಹೆಂಡತಿಗೆ ಹೇಳದೆ ಕೇಳದೆ ಊಟಕ್ಕೆಂದು ಆಫೀಸಿನಿಂದ ನೇರವಾಗಿ ಮನೆಗೆ ಕರೆತಂದಿದ್ದ.
ಮನೆಯಲ್ಲಿ ಮಕ್ಕಳು ಎಲ್ಲಾ ಕಡೆ ಬುಕ್ಸ್, ಬಟ್ಟೆ, ಆಟಿಕೆ ಹರಡಿದ್ದರು. ಒಟ್ಟಾರೆ ಮನೆ ದೊಡ್ಡಿಯಂತಿತ್ತು. ಮೋಹನ್ ಹೆಂಡತಿ ರಾಧಾ ತಲೆ ಕೆದರಿಕೊಂಡು ಹಳೆಯ ಹರಿದ ನೈಟಿಯಲ್ಲಿ ಅಡುಗೆಮನೆಯಲ್ಲಿ ಏನೋ ಅರೆಬರೆ ಬೇಯಿಸುತ್ತಿದ್ದಳು. ಆ ಘಳಿಗೆಯಲ್ಲಿ ಅತಿಥಿಯನ್ನು ಮನೆಗೆ ಕರೆತಂದ ಗಂಡನನ್ನು ಕಂಡು ಉಗ್ರ ಕಾಳಿಯಾದಳು.
ರಾಧಾ : ಏನ್ರಿ ನೀವು…. ಮದುವೆಯಾಗಿ 2 ಮಕ್ಕಳಾದರೂ ಯಾವಾಗ ಏನು ಕೆಲಸ ಮಾಡಬೇಕು ಅಂತ ಗೊತ್ತಾಗೋದಿಲ್ಲ. ನಮ್ಮ ಮನೆ ನೋಡಿ…. ತಿಪ್ಪೆಗುಂಡಿಯಂತಿದೆ. ನಾನು ಎಂಥ ಗೆಟಪ್ ನಲ್ಲಿದ್ದೀನಿ…. ತಲೆ ಬಾಚಿಲ್ಲ, ಮೇಕಪ್ ಮಾಡಿಕೊಂಡಿಲ್ಲ, ಅದೆಲ್ಲ ಹಾಳಾಗಿ ಹೋಗಲಿ, ಮೊನ್ನೆ ಸಾಂಬಾರ್, ನಿನ್ನೆಯ ಪಲ್ಯ ಇಟ್ಟುಕೊಂಡು ಈ ಒಂದು ಹೊತ್ತು ಕಳೆದುಹೋಗಲಿ ಅಂತ ಕಷ್ಟಪಡ್ತಿದ್ರೆ…. ಈಗ ಯಾವ ಹೊಸ ಅಡುಗೆ ಮಾಡಿ ಸಾಯಲಿ…?
ಮೋಹನ್ : ನೀನೇನೂ ಚಿಂತಿಸಬೇಡ ಮಾರಾಯ್ತಿ! ಇರೋದನ್ನೇ ಹಾಕಿ ಕಳಿಸೋಣ… ಪೆದ್ದು ಮುಂಡೇದು, ಇದು ಮದುವೆ ಆಗಬೇಕು ಅಂತ ಹೊರಟಿದೆ! ಪ್ರಾಕ್ಟಿಕಲ್ ಶಾಕ್ ಟ್ರೀಟ್ ಮೆಂಟ್ ಕೊಡೋಣ ಅಂತ್ಲೇ ಹೀಗೆ ದಿಢೀರ್ ಅಂತ ಕರೆತಂದೆ!
ಗಂಗಾಧರ್ : ಬೇಗ ಬಡಿಸು, ಹೊಟ್ಟೆ ತಾಳ ಹಾಕ್ತಿದೆ!
ಯಮುನಾ : ಇದೋ ಬಂದೆ…. ತಗೊಳ್ಳಿ ತಿನ್ನಿ….!
ಗಂಗಾಧರ್ : ಅದು ಸರಿ, ಇದೇನು ಮಾಡಿದ್ದಿ?
ಯಮುನಾ : ಏನೋ ಒಂದು… ವಿವರ ಬೇಕೇ?
ಗಂಗಾಧರ್ : ಅಟ್ ಲೀಸ್ಟ್… ಈ ಹೊಸ ರುಚಿಯ ಹೆಸರು ಗೊತ್ತಾದ್ರೆ…. ನಾಳೆ ಎಡವಟ್ಟಾಗಿ ಡಾಕ್ಟರ್ ಬಳಿ ಹೋದಾಗ, `ಏನು ತಿಂದಿದ್ರಿ?’ ಅಂದ್ರೆ ಹೇಳೋಕೆ ಅದರ ಹೆಸರು ಗೊತ್ತಾಗಬೇಕು ತಾನೇ…?
ಗಿರೀಶ್ : ಯಾವ ವಿಷಯವನ್ನು ಹೆಂಡತಿ ಎಂದೂ ನನ್ನದು ಎಂದು ಒಪ್ಪಿಕೊಳ್ಳುವುದಿಲ್ಲ?
ಸತೀಶ್ : ತಪ್ಪು ನಡೆದದ್ದನ್ನು!
ಗುಂಡ : ಎಲ್ಲಿ ಹಾಳಾಗಿ ಹೋಗಿದ್ದೆ ಇಷ್ಟು ಹೊತ್ತು?
ಗುಂಡಿ : ಏ… ಶಾಪಿಂಗ್ ಹೋಗಿದ್ದೆ ಕಣ್ರೀ… ಏನೋ, 4-5 ಗಂಟೆ ತಡ ಆಯ್ತಪ್ಪ, ಅದಕ್ಕೆ ಹೀಗೆ ಆಡ್ತೀರಾ?
ಗುಂಡ : ಹಾಳಾಗಿ ಹೋಗಲಿ, ಏನೇನು ತಗೊಂಡೆ?
ಗುಂಡಿ : 2 ಸೆಟ್ ಹೇರ್ ಪಿನ್ಸ್, ಅರ್ಧ ಡಝನ್ ಬಟ್ಟೆ ಕ್ಲಿಪ್…. ಆಮೇಲೆ 10-20 ಸೆಲ್ಛೀ…..!
ಡಾಕ್ಟರ್ : ಐ ಆ್ಯಮ್ ವೆರಿ ಸಾರಿ ಮಹೇಶ್…. ಹೆಚ್ಚೆಂದರೆ ನಿಮ್ಮ ಹೆಂಡತಿ ಇನ್ನೊಂದು ವಾರ ಉಳಿಯಬಹುದು ಅಷ್ಟೇ…..
ಮಹೇಶ್ : ಇದರಲ್ಲಿ ಸಾರಿ ಹೇಳುವುದಕ್ಕೇನಿದೆ ಡಾಕ್ಟರ್? 28 ವರ್ಷಗಳ ವೈವಾಹಿಕ ಜೀವನದ ದೀರ್ಘಾವಧಿ ಶಿಕ್ಷೆ ಅನುಭವಿಸಿದ್ದೇನೆ…… ಇನ್ನೊಂದು ವಾರ ತಾನೇ…? ಮುಂದೆಲ್ಲ `ಅಚ್ಛೆ ದಿನ’ ಅಂತ ಸಹಜವಾಗಿ ತೆಗೆದುಕೊಳ್ತೀನಿ!
ಚಿತ್ರಗುಪ್ತ : ಸ್ವಾಮಿ ಪಾಪ ಪುಣ್ಯದ ಲೆಕ್ಕ ಬರೆಯುವುದರಲ್ಲಿ ಒಂದು ಗೊಂದಲ ಎದುರಾಗಿದೆ.
ಯಮ ಧರ್ಮರಾಜ : ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಏಕಾಯಿತು? ಏನು ಸಮಸ್ಯೆ ಹೇಳು?
ಚಿತ್ರಗುಪ್ತ : ಅದು ಕರ್ನಾಟಕವೆಂಬ ರಾಜ್ಯದಲ್ಲಿ ಬಸ್ ಪ್ರಯಾಣ ಉಚಿತವೆಂದು ಮಹಿಳೆಯರೆಲ್ಲ ಎದ್ದುಬಿದ್ದು ಪುಣ್ಯಕ್ಷೇತ್ರಗಳ ದರ್ಶನ ಮಾಡ್ತಾ ಇದ್ದಾರೆ. ಅದಲ್ಲ ಸಮಸ್ಯೆ, ಪುಣ್ಯ ಕ್ಷೇತ್ರ ದರ್ಶಿಸಿದ ಪುಣ್ಯ ಉಂಟಲ್ಲ, ಅದನ್ನು ಆ ಮಹಿಳೆಯರಿಗೆ ನೀಡಬೇಕೋ ಅಥವಾ ಉಚಿತ ಪ್ರಯಾಣಕ್ಕೆ ಬೇಕಾದ ಹಣಕಾಸು ವ್ಯವಸ್ಥೆ ಒದಗಿಸುವ ತೆರಿಗೆದಾರರಿಗೆ ಕೊಡಬೇಕೋ ಗೊತ್ತಾಗ್ತಾ ಇಲ್ಲ….. ಇದಕ್ಕೆ ಪರಿಹಾರ ಹೇಳಿ…..
ಯಮ ಧರ್ಮರಾಜ : ನನಗೂ ಒಂದು ವಾರ ಸಮಯ ಕೊಡು. ದೇವಸಭೆಯಲ್ಲಿ ಚರ್ಚಿಸಿ ಹೇಳುತ್ತೇನೆ. ಅದಕ್ಕೂ ಮೊದಲು ಯಾರಾದರೂ ಮರಣಿಸಿದರೆ ಅವರನ್ನು ತ್ರಿಶಂಕು ಸ್ಥಿತಿಯಲ್ಲಿ ಇರಿಸು.
ಚಿತ್ರಗುಪ್ತ : ದೊಡ್ಡ ನಮಸ್ಕಾರ ಸ್ವಾಮಿ…!
ರಾಮಣ್ಣ ಟ್ರಂಕಿನಿಂದ ಹಳೆಯ ಕಾಗದ ಪತ್ರಗಳನ್ನೆಲ್ಲ ಹುಡುಕಿ ತೆಗೆದು ಎಲ್ಲಾ ಹರಡಿಕೊಂಡು ಪರಿಶೀಲಿಸುತ್ತಿದ್ದರು. ಏನೇನೋ ಪತ್ರಗಳ ಮಧ್ಯೆ ಹೆಂಡತಿಯ ಹಳೆಯ ಝಮಾನಾದ 10ನೇ ತರಗತಿಯ ಕ್ಯಾರೆಕ್ಟರ್ ಸರ್ಟಿಫಿಕೇಟ್ ಸಿಕ್ಕಿತು. ಅದರಲ್ಲಿ ಕೆಳಗೆ ನಮೂದಿಸಲಾಗಿದ್ದನ್ನು ಓದಿ ಜ್ಞಾನ ತಪ್ಪಿದರು ಇದುವರೆಗೂ ಎದ್ದಿಲ್ಲವಂತೆ! ಅಂಥಾದ್ದು ಅದರಲ್ಲಿ ಏನಿತ್ತಂತೆ?
`ಈಕೆ ಮೃದು ಭಾಷಿಣಿ, ಶಾಂತ ಸ್ವಭಾವದವಳು, ಹೊಂದಿಕೊಳ್ಳುವ ಗುಣ ಹೆಚ್ಚು!’
ಅಳಿಯ : ಏನು ಹೇಳಲಿ….. ಮದುವೆ ಆಗಿ ಒಂದು ವರ್ಷದಲ್ಲಿ ನಿಮ್ಮ ಮಗಳು ನನ್ನ ಜೀವನವನ್ನು ನಿತ್ಯ ನರಕವಾಗಿಸಿದ್ದಾಳೆ…. ಸಾಕಪ್ಪ ಈ ಜೀವನ, ಬೇಗ ಕಣ್ಣು ಮುಚ್ಚಿದರೆ ಸಾಕು ಅಂತಾಗಿದೆ… ನೀವಾದರೂ ಅವಳಿಗೆ ಬುದ್ಧಿ ಹೇಳಿ, ನಾನು ನೆಮ್ಮದಿಯಾಗಿರಲು ಉಪಾಯ ಹುಡುಕಬಾರದೇ…?
ಮಾವ : ಸಮಾಧಾನ ಮಾಡಿಕೊಳ್ಳಪ್ಪ, ಒಬ್ಬ ಗಂಡನ ಸಂಕಟ ಇನ್ನೊಬ್ಬ ಗಂಡನಿಗೆ ಮಾತ್ರ ಗೊತ್ತಾಗುತ್ತೆ! ಏನು ಹೇಳಲಿ…. ನಿನ್ನ ಬಳಿ ಇರುವುದು ಬಟ್ಟೆಯ ಪೀಸ್ ಮಾತ್ರ…. ಅದರ ಒರಿಜಿನ್ ಥಾನ್ ನನ್ನ ಬಳಿ ಇದೆ….. ನನ್ನ ಪಾಡು ನೆನೆಸಿ ನೋಡು…..!
ಮಕ್ಕಳು ಅಪರೂಪಕ್ಕೆ ಅಮ್ಮನನ್ನು ಟೊಮೇಟೊ ಭಾತ್ ಮಾಡಿಕೊಡಮ್ಮ ಎಂದು ಪೀಡಿಸಿದರಂತೆ. ಅದಕ್ಕೆ ಮಧ್ಯಮ ವರ್ಗದ ಆ ತಾಯಿ ನಾಗರಹಾವು ಚಿತ್ರದ ಜಯಂತಿಯಂತೆ ಕೈಯಲ್ಲಿ ಒನಕೆ ಹಿಡಿದು ಕಣ್ಣನ್ನು ಕೆಂಪಾಗಿಸಿಕೊಳ್ಳುವುದೇ…..?