ಸುಮಿತ್ರಾ ENT ಸ್ಪೆಷಲಿಸ್ಟ್ ಬಳಿ ಹೋದವಳೇ ಗಂಡನ ಬಗ್ಗೆ ವಿವರ ತಿಳಿಸಿದಳು.
ಸುಮಿತ್ರಾ : ಡಾಕ್ಟರ್, ನಮ್ಮ ಯಜಮಾನರು ತುಸು ಕಿವುಡಾಗಿದ್ದಾರೆ ಅನ್ಸುತ್ತೆ! ನಾನು ಅಡುಗೆಮನೆಯಿಂದ ಎಷ್ಟು ಕೂಗಿ ಹೇಳಿದರೂ ಹಾಲ್ ನಲ್ಲಿರುವ ಅವರಿಗೆ ಏನೂ ಕೇಳಿಸೋದಿಲ್ಲ. ಇನ್ನು ರೂಮಿಗೆ ಹೋಗಿಬಿಟ್ಟರಂತೂ ದೇವರೇ ಗತಿ.
ಡಾಕ್ಟರ್ : ನೀವು ಅವರನ್ನು ಇಲ್ಲಿಗೇ ಕರೆತನ್ನಿ.
ಸುಮಿತ್ರಾ : ಬೇಡಿ ಡಾಕ್ಟರ್.... ನಾನು ಅವರನ್ನು ಬಹಳ ಪ್ರೇಮಿಸುತ್ತೇನೆ. ಅವರಿಗೆ ಒಂದು ನ್ಯೂನತೆ ಇರುವುದು ನನಗೆ ಗೊತ್ತಿದೆ ಎಂದು ಅವರೆದುರು ತೋರಿಸಿಕೊಳ್ಳಲು ನನಗೆ ಇಷ್ಟವಿಲ್ಲ. ನೀವು ಯಾವುದಾದರೂ ಔಷಧಿ, ಮಾತ್ರೆ ಕೊಡಿ. ಅವರಿಗೆ ತಿಳಿಯದಂತೆ ಆಹಾರದಲ್ಲಿ ಬೆರೆಸಿ ಕೊಡುತ್ತೇನೆ. ಸಹಜವಾಗಿ ಅವರಿಗೆ ಕಿವುಡುತನ ತಂತಾನೇ ಗುಣವಾಗಲಿ!
ಡಾಕ್ಟರ್ : ಸರಿ, ನೀವು ಅವರಿಗೊಂದು ಪರೀಕ್ಷೆ ಕೊಡಿ. ಮೊದಲು 40 ಅಡಿ ದೂರದಿಂದ, `ಹೌ ಆರ್ ಯೂ?' ಅಂತ ಕೇಳಿ. ಉತ್ತರ ಬರದಿದ್ದರೆ 30 ಅಡಿ ದೂರದಿಂದ ಇದೇ ಪ್ರಶ್ನೆ ಕೇಳಿ. ಆಗಲೂ ಉತ್ತರ ಬರದಿದ್ದರೆ 20 ಅಡಿ, ನಂತರ 10 ಅಡಿ, 5 ಅಡಿ... ಹೀಗೆ ಪ್ರಯತ್ನಿಸಿ. ಆಮೇಲೆ ಅವರು ಎಷ್ಟು ಅಡಿಗಳಿಗೆ ಉತ್ತರ ಕೊಟ್ಟರೆಂದು ನನ್ನ ಬಳಿ ಬಂದು ಹೇಳಿ. ಅದಕ್ಕೆ ತಕ್ಕಂತೆ ಔಷಧಿ ಡೋಸೇಜ್ ಬದಲಿಸಿ ಕೊಡುತ್ತೇನೆ.
ಸುಮಿತ್ರಾ ಹಾಗೆಯೇ ಆಗಲೆಂದು ಮನೆಗೆ ಬಂದವಳೇ ಹಾಲ್ ನಲ್ಲಿ ಪೇಪರ್ ಓದುತ್ತಿದ್ದ ಪತಿಗೆ 40 ಅಡಿ ದೂರದಿಂದ, `ರಾತ್ರಿಗೆ ಏನು ಅಡುಗೆ ಮಾಡಲಿ?' ಎಂದು ಕೇಳಿದಳು. ಉತ್ತರ ಬರದಿದ್ದಾಗ 30, 20 ನಂತರ 10 ಅಡಿಗೆ ಬಂದು ಅದೇ ಪ್ರಶ್ನೆ ಕೇಳಿದಳು. ಆಗಲೂ ಮೌನವೇ ಉತ್ತರ! ನಂತರ ಅವರ ಕಿವಿ ಹತ್ತಿರ ಬಂದು, ``ರಾತ್ರಿ ಏನಡಿಗೆ ಮಾಡಲಿ?'' ಎಂದು ಜೋರಾಗಿ ಕಿರುಚಿದರು.
``ನಿನ್ನ ಕಿವುಡುತನಕ್ಕೆ ಬಡ್ಕೊಂಡ್ರು! ಆಗ್ಲಿಂದ ಇದೇ ಪ್ರಶ್ನೆಗೆ ಬರೀ ಚಿತ್ರಾನ್ನ ಮಾಡು ಸಾಕು ಅಂತ 5 ಸಲ ಹೇಳಿದ್ದೇನೆ!'' ಎಂದಾಗ, ಸುಮಿತ್ರಾ ತಾನೇ ಚಿಕಿತ್ಸೆ ಪಡೆಯಬೇಕೇ ಎಂದು ತಲೆ ಚಚ್ಚಿಕೊಂಡಳು.
ಸತೀಶ್ : ಎಲ್ಲರೂ ವಿಶಾಲ ಹೃದಯಿಗಳಾಗಿ ಇರಬೇಕು ಅಂತ ಆಗಾಗ ಭಾಷಣ ಕೊಚ್ಚುತ್ತಾರಲ್ಲ.... ಏನು ಹಾಗಂದ್ರೆ? ಏನು ಮಾಡಬೇಕಂತೆ?
ಮಹೇಶ : ಎಲ್ಲರೂ ಹೀಗೆ ಭಾಷಣ ಕೊಚ್ಚುತ್ತಿದ್ದರೆ ಹೃದಯವಂತರೆಲ್ಲ ಹೃದಯ ಹೀನರಾಗಬೇಕು ಅಷ್ಟೆ. ಹೃದಯವೇ ಇಲ್ಲದಿದ್ದ ಮೇಲೆ ವಿಶಾಲ ಹೃದಯಿಗಳಾಗಲು ಹೇಗೆ ಸಾಧ್ಯವಂತೆ....?
ರವಿ : ಹೆಂಡತಿ ಬಳಿ ವಾದ ಮಾಡುವುದು ಅಥವಾ ಸಾಫ್ಟ್ ವೇರ್ ಲೈಸೆನ್ಸ್ ಅಗ್ರಿಮೆಂಟ್ ಓದುವುದು ಎರಡೂ ಒಂದೇ ಅಂತೀನಿ!
ಶಶಿ : ಅದು ಹೇಗೆ ಸಾಧ್ಯ?
ರವಿ : ಎಲ್ಲವನ್ನೂ ಇಗ್ನೋರ್ ಮಾಡಿ ಕೊನೆಯಲ್ಲಿ `ಐ ಅಗ್ರಿ' ಅಂತ ಕ್ಲಿಕ್ ಮಾಡಲೇ ಬೇಕಾಗುತ್ತೆ!
ಒಮ್ಮೆ ಮೋಹನ್ ತನ್ನ ಪ್ರಾಣ ಸ್ನೇಹಿತ ಕಿಶೋರ್ ನನ್ನು ಸಂಜೆ 8 ಗಂಟೆ ಹೊತ್ತಿಗೆ ಹೆಂಡತಿಗೆ ಹೇಳದೆ ಕೇಳದೆ ಊಟಕ್ಕೆಂದು ಆಫೀಸಿನಿಂದ ನೇರವಾಗಿ ಮನೆಗೆ ಕರೆತಂದಿದ್ದ.