ಪ್ರಖ್ಯಾತ ಗಾಯಕ ಹಾಗೂ ನಟ ರಿಷಭ್ ಟಂಡನ್ ದೆಹಲಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಫಕೀರ್ ಎಂದೇ ಖ್ಯಾತರಾಗಿದ್ದ ಅವರು, ತಮ್ಮ ಸಂಗೀತ ಮತ್ತು ನಟನೆಯಿಂದ ಅಭಿಮಾನಿಗಳ ಮನ ಗೆದ್ದಿದ್ದರು. ಅವರ ಕೊನೆಯ ಹಾಡು 'ಇಷ್ಕ್ ಫಕೀರಾನ' ಜನಪ್ರಿಯವಾಗಿತ್ತು. ರಿಷಭ್ ಅವರ ಅಗಲಿಕೆಯ ಸುದ್ದಿ ಅವರ ಕುಟುಂಬ, ಆಪ್ತ ಸ್ನೇಹಿತರು ಹಾಗೂ ಸಹ ಕಲಾವಿದರಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ. ರಿಷಭ್ ತಮ್ಮ ಪತ್ನಿಯೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದರು. ಆದರೆ ಅವರು ದೀಪಾವಳಿಯ ಸಂದರ್ಭದಲ್ಲಿ ತಮ್ಮ ಕುಟುಂಬವನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದರು.
ಮುಂಬೈನ ಸ್ವತಂತ್ರ ಸಂಗೀತ ಕ್ಷೇತ್ರದಲ್ಲಿ ಪ್ರಮುಖರಾಗಿದ್ದ ಟಂಡನ್, ತಮ್ಮ ಧ್ವನಿ, ಅರ್ಥಪೂರ್ಣ ಸಾಹಿತ್ಯ ಮತ್ತು ಕೇಳುಗರೊಂದಿಗೆ ವೈಯಕ್ತಿಕ ಮಟ್ಟದಲ್ಲಿ ಬೆರೆಯುವ ಸಾಮರ್ಥ್ಯಕ್ಕಾಗಿ ಪ್ರೀತಿಸಲ್ಪಟ್ಟಿದ್ದರು. ರಿಷಭ್ ತಮ್ಮ ಶಾಂತ ಸ್ವಭಾವ ಮತ್ತು ಸಂಗೀತದ ಮೇಲಿನ ಪ್ರೀತಿಗೆ ಹೆಸರುವಾಸಿಯಾದವರು.
2008 ರಲ್ಲಿ ಟಿ-ಸೀರೀಸ್‌ನ ಸಂಗೀತ ಆಲ್ಬಂ 'ಫಿರ್ ಸೆ ವಹಿ' ಯೊಂದಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ನಂತರ, 'ಫಕೀರ್ - ಲಿವಿಂಗ್ ಲಿಮಿಟ್‌ಲೆಸ್' ಮತ್ತು 'ರಶ್ನಾ - ದಿ ರೇ ಆಫ್ ಲೈಟ್' ನಂತಹ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದರು. ಅವರ 'ಆಶಿಕಿ', 'ಚಂದ್ ಡು', 'ಧು ಧು ಕರ್ ಕೆ', 'ಫಕೀರ್ ಕಿ ಜುಬಾನಿ' ಹಾಡುಗಳು ಜನಪ್ರಿಯವಾಗಿವೆ.
ಅವರ ಪ್ರಮುಖ ಕೃತಿಗಳಲ್ಲಿ 'ರಶ್ನಾ: ದಿ ರೇ ಆಫ್ ಲೈಟ್', 'ಫಕೀರ್ – ಲಿವಿಂಗ್ ಲಿಮಿಟ್ ಲೆಸ್', ಮತ್ತು 'ಇಷ್ಕ್ ಫಕೀರಾನ' ಸೇರಿವೆ. ಈ ವರ್ಷದ ವ್ಯಾಲೆಂಟೈನ್ಸ್ ಡೇಯಂದು ಬಿಡುಗಡೆಯಾದ ಅವರ ಕೊನೆಯ ಹಾಡು. 'ಇಷ್ಕ್ ಫಕೀರಾನ – ಮೇರಿ ಇಷ್ಕ್ ಕಿ ಕಹಾನಿ', ಹೃದಯಸ್ಪರ್ಶಿ ಭಾವನೆ ಮತ್ತು ಪ್ರಾಮಾಣಿಕತೆಗಾಗಿ ಅಭಿಮಾನಿಗಳ ಮನ ಗೆದ್ದಿತ್ತು.
ತಮ್ಮ ಕೆಲಸದ ಹೊರತಾಗಿ, ಟಂಡನ್ ತಮ್ಮ ವಿನಮ್ರತೆ ಮತ್ತು ಆತ್ಮೀಯತೆಗಾಗಿ ಗುರುತಿಸಲ್ಪಟ್ಟಿದ್ದರು. ತಮ್ಮ ಪತ್ನಿ ಒಲೆಸ್ಯಾ ಟಂಡನ್ ಒಬ್ಬ ನಿರ್ಮಾಪಕಿ ಮತ್ತು ಇನ್ ಫ್ಲುಯೆನ್ಸರ್ ಆಗಿದ್ದು, ಅವರು ಆಗಾಗ ರಿಷಭ್ ಅವರ ಪೋಸ್ಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರ ಇನ್ ಸ್ಟಾಗ್ರಾಂ ಪುಟಗಳು ಅವರ ಗಾಢ ಬಾಂಧವ್ಯ ತೋರಿಸುತ್ತಿದ್ದವು.
ರಿಷಭ್ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಅವರು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಬೆಕ್ಕುಗಳು, ನಾಯಿಗಳು ಮತ್ತು ಪಕ್ಷಿಗಳನ್ನು ಸಾಕಿದ್ದರು. ರಿಷಭ್ ಅವರ ಕೆಲವು ಹಾಡುಗಳು ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಬೇಕಿವೆ.