ಬಾಲಿವುಡ್ ಖ್ಯಾತ ಹಾಸ್ಯನಟ ಗೋವರ್ಧನ್ ಅಸ್ರಾನಿ (84) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಐದು ದಿನಗಳಿಂದ ಅವರನ್ನು ಮುಂಬೈನ ಜುಹುವಿನ ಆರೋಗ್ಯ ನಿಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
1941 ಜನವರಿ 1ರಂದು ಜೈಪುರದಲ್ಲಿ ಜನಿಸಿದ ಗೋವರ್ಧನ್ ಅಸ್ರಾನಿ ಕಳೆದ ಆರು ದಶಕಗಳಿಂದ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿದವರು. 1960ರ ದಶಕದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಅಸ್ರಾನಿ, 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಅವರ ಹಾಸ್ಯ ಪ್ರಜ್ಞೆ ಮತ್ತು ಸ್ಮರಣೀಯ ಅಭಿನಯಗಳು ಪ್ರೇಕ್ಷಕರ ಮೇಲೆ ಅಳಿಸಲಾಗದ ಹೆಗ್ಗುರುತು ಮೂಡಿಸಿದೆ. ಅವರ ಅತ್ಯಂತ ಪ್ರಸಿದ್ಧ ಪಾತ್ರವಾದ ‘ಶೋಲೆ’ (1975) ಚಿತ್ರದ ಜೈಲರ್ ಪಾತ್ರವು ಇನ್ನೂ ಜನರನ್ನು ನಗಿಸುತ್ತದೆ. “ಖಟ್ಟಾ ಮೀಠಾ,” “ಚುಪ್ಕೆ ಚುಪ್ಕೆ,” “ಚೋಟಿ ಸಿ ಬಾತ್,” “ಕೋಶಿಶ್,” ಮತ್ತು “ಬಾವರ್ಚಿ” ನಂತಹ ಚಲನಚಿತ್ರಗಳಲ್ಲಿ ಅಸ್ರಾನಿ ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುವ ಪಾತ್ರಗಳನ್ನು ನಿರ್ವಹಿಸಿದ್ದಾರೆ.ಅಸ್ರಾನಿ ಅವರ ಅವರ ಪತ್ನಿ ಮಂಜು ಬನ್ಸಾಲ್ ಇರಾನಿ ಕೂಡ ನಟಿಯಾಗಿದ್ದರು. ಅವರು ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅಸ್ರಾನಿ 2004ರಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು ಮತ್ತು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.
ಗೋವರ್ಧನ್ ಅಸ್ರಾನಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೆಂದ್ರ ಗೃಹ ಸಚಿವ ಅಮಿತ್ ಶಾ, ಸಂಸದೀಯ ಸಚಿವ ಕಿರಣ್ ರಿಜಿಜು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ಣವಿಸ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಗೋವರ್ಧನ್ ಅಸ್ರಾನಿ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಪ್ರತಿಭಾನ್ವಿತ ನಟ ಹಾಗೂ ಬಹುಮುಖ ಕಲಾವಿದರಾಗಿದ್ದ ಅವರು ತಲೆಮಾರುಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಸ್ರಾನಿ ಅವರು ತಮ್ಮ ಮರೆಯಲಾಗದ ಅಭಿನಯದ ಮೂಲಕ ಅಸಂಖ್ಯಾತ ಜನರಿಗೆ ಸಂತೋಷ ಹಾಗೂ ನಗುವನ್ನು ತರಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿರುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಪ್ರಧಾನಿ ಮೋದಿ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.