ಬೆಳೆಯುತ್ತಿರುವ ಮಕ್ಕಳ ಆಹಾರದಲ್ಲಿ ಯಾವ ಉತ್ತಮ ಪೌಷ್ಟಿಕಾಂಶಗಳು ತುಂಬಿದ್ದರೆ, ಮಕ್ಕಳ ದೈಹಿಕ, ಮಾನಸಿಕ ವಿಕಾಸ ಪರಿಪೂರ್ಣ ಆಗಲು ಸಾಧ್ಯ…….?
ಆಶಾ ಮತ್ತು ಉಷಾ ಇಬ್ಬರೂ ತಮ್ಮ ಮಕ್ಕಳನ್ನು ಕರೆದುಕೊಂಡು ಪ್ರತಿದಿನ ಸಂಜೆ ಪಾರ್ಕಿಗೆ ಬರುತ್ತಾರೆ. ಆಶಾಳ ಮಗ ಮಯಾಂಕ್ ಎಲ್ಲಾ ಆರೋಗ್ಯಕರ ಮಕ್ಕಳ ಹಾಗೆ, ಪ್ರತಿಯೊಂದು ಆಟೋಟದಲ್ಲೂ ಉತ್ಸಾಹದಿಂದ ಭಾಗವಹಿಸುತ್ತಿದ್ದ. ಅದೇ ಉಷಾಳ ಮಗಳು ಪ್ರೀತಿ, ಸ್ವಲ್ಪ ಹೊತ್ತು ಆಡುವಷ್ಟರಲ್ಲಿ ಸುಸ್ತಾಗಿ ಬಿಡುತ್ತಿದ್ದಳು. ಅಲ್ಲಿದ್ದ ಪಾರ್ಕ್ ಬೆಂಚ್ ಮೇಲೆ ಕುಳಿತು ಮಕ್ಕಳ ಆಟ ಗಮನಿಸುವಳು.
ಈ ಕುರಿತಾಗಿ ಉಷಾ, ಆಶಾಳಿಗೆ ತನ್ನ ದುಃಖ ಹಂಚಿಕೊಂಡಳು. “ಆಶಾ, ನಿನ್ನ ಮಗ ಅಂತೂ ಬಲು ಸ್ಟ್ರಾಂಗ್! ಅವನು ಸದಾ ಆ್ಯಕ್ಟಿವ್ ಆಗಿ ಎಲ್ಲಾ ಆಟಗಳಲ್ಲೂ ಭಾಗವಹಿಸಿ ಫಸ್ಟ್ ಬರುತ್ತಾನೆ. ಆದರೆ ನನ್ನ ಮಗಳು ಪ್ರೀತಿಗೆ ಯಾವುದರಲ್ಲೂ ಆಸಕ್ತಿ ಇಲ್ಲ. ಸ್ವಲ್ಪ ಹೊತ್ತು ಆಡುವಷ್ಟರಲ್ಲಿ ಸಾಕಾಗಿ ಬಂದು ಕುಳಿತುಬಿಡುತ್ತಾಳೆ. ಅವಳ ಬೆಳವಣಿಗೆ ಸಹ ಸರಿ ಇಲ್ಲ, ಕಡ್ಡಿ ಪೈಲ್ವಾನ್ ಆಗಿದ್ದಾಳೆ. ನಿನ್ನ ಮಗನಿಗಿಂತ 1 ವರ್ಷ ದೊಡ್ಡವಳಾದರೂ ಇದೇಕೆ ಹೀಗಾಗಿದ್ದಾಳೆ?”
“ಅದೇನೋ ನಿಜ…. ನನ್ನ ಮಗ ಮೊದಲಿನಿಂದಲೂ ತುಸು ಎಕ್ಸ್ ಟ್ರಾ ಆ್ಯಕ್ಟಿವ್ ಅನ್ನಬಹುದು. ಇದಕ್ಕೆ ಕಾರಣ ಅವನ ಇಮ್ಯುನಿಟಿ ಕೆಡದಂತೆ ಮೊದಲಿನಿಂದಲೂ ನಾನು ಅವನ ಊಟ ತಿಂಡಿ ಕಡೆ ಗಮನ ಕೊಡುತ್ತಿದ್ದೆ. ಅವನಿಗೆ ಉತ್ತಮ ಪೌಷ್ಟಿಕಾಂಶದ ಆಹಾರ ಕೊಡುತ್ತೇನೆ!” ಎಂದಳು ಆಶಾ.
“ಆದರೆ ನನ್ನ ಮಗಳು ಊಟ ತಿಂಡಿ ವಿಷಯದಲ್ಲಿ ಬಹಳ ತಗಾದೆ ಮಾಡ್ತಾಳೆ, ಏನು ಮಾಡಿಕೊಟ್ಟರೂ ಇಷ್ಟಪಟ್ಟು ತಿನ್ನುವುದಿಲ್ಲ. ಇದು ಬೇಡ…. ಅದು ಬೇಡ…. ಅಂತ ಗಲಾಟೆ ಮಾಡ್ತಾಳೆ. ಏನೋ 1-2 ಐಟಂ ತಿಂತಾಳಷ್ಟೆ…. ಜಂಕ್ ಫುಡ್ಸ್, ಫಾಸ್ಟ್ ಫುಡ್ಸ್ ಅಂದ್ರೆ ಅವಳಿಗೆ ಬಲು ಇಷ್ಟ. ಹೀಗಾಗಿಯೇ ನಾನು ಅವಳಿಗೆ ಇಷ್ಟ ಅಂತ ಆಗಾಗ ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈ ಅಂತ ಕೊಟ್ಟುಬಿಡ್ತೀನಿ. ಏನೋ ಒಂದು, ಅವಳ ಹೊಟ್ಟೆ ತುಂಬಿದರೆ ಸಾಕು ಅಂದುಕೊಳ್ತೀನಿ. ನನಗಂತೂ ಸಾಕಾಗಿ ಹೋಗಿದೆ…..” ಎಂದಳು ಉಷಾ.
“ಆದರೆ… ಖಂಡಿತಾ ಹಾಗೆ ಮಾಡಬೇಡ ಉಷಾ! ಈ ರೀತಿ ಆದರೆ ಅವಳಿಗೆ ಪೌಷ್ಟಿಕ ಆಹಾರ ಸಿಗುವುದಾದರೂ ಹೇಗೆ? ಸರಿಯಾದ ಪೋಷಕಾಂಶ ದೊರಕದಿದ್ದರೆ ಮುಂದೆ ಅವಳ ದೈಹಿಕ, ಮಾನಸಿಕ ಬೆಳವಣಿಗೆ ಹೇಗೆ ಸರಿಹೋದೀತು? ಚಿಕ್ಕ ವಯಸ್ಸಿನಲ್ಲೇ ರೋಗಗಳು ಶುರುವಾಗುತ್ತವೆ. ಮಕ್ಕಳು ಕೇಳಿದರು ಅಂತ ಜಂಕ್ ಫುಡ್ ಕೊಡಬಾರದು. ಅವರ ಬೆಳವಣಿಗೆಗೆ ಪೂರಕವಾದ ಆಹಾರವನ್ನೇ ಕೊಡಬೇಕು.”
“ಮತ್ತೆ….. ಅವರು ಅದನ್ನು ತಿನ್ನದಿದ್ದರೆ?”
“ಆಗ ನೀನು ಆಹಾರ ಕೊಡುವ ವಿಧಾನ ಬದಲಿಸು. ಚಪಾತಿ ಜೊತೆ ದಾಲ್ ಕೊಟ್ಟರೆ ಬೇಡ ಅಂತಾಳಾ? ಆದರೆ ಹಾಗಂತ ಅದನ್ನು ಕೊಡದೇ ಇರಬಾರದು. ದಾಲ್ ನಲ್ಲಿ ಬೇಳೆ ಕಾಳುಗಳ ಹೇರಳ ಪ್ರೋಟೀನ್ ಅಂಶ ಇದೆ. ಆಗ ಒಂದು ಕೆಲಸ ಮಾಡು, ದೋಸೆಹಿಟ್ಟಿಗೆ ಈ ದಾಲ್ ಸೇರಿಸಿ, ಅದರಿಂದ ಗರಿಗರಿ ದೋಸೆ ಕೊಡು. ಒಮ್ಮೆ ಕಡಲೆಬೇಳೆಯ ದಾಲ್, ಮತ್ತೊಮ್ಮೆ ಹೆಸರುಬೇಳೆ ದಾಲ್, ತೊಗರಿಬೇಳೆಯದ್ದು…. ಹೀಗೆ ಬದಲಾಯಿಸುತ್ತಾ ದೋಸೆ ಮಾಡಿಕೊಡು. ಆಗ ಮಕ್ಕಳು ಬೇಡ ಅನ್ನೋದಿಲ್ಲ.
“ಅದೇ ತರಹ ಹಾಲು ಬೇಡ ಅಂದ್ರೆ ಹೆಚ್ಚಿನ ಪನೀರ್ ಐಟಂ ಮಾಡಿಕೊಡು ಅಥವಾ ಮ್ಯಾಂಗೋ ಮಿಲ್ಕ್ ಶೇಕ್, ಚಾಕಲೇಟ್ ಫ್ಲೇವರ್ ನ ಬೋರ್ನ್ ವೀಟಾ ಯಾ ಹಾರ್ಲಿಕ್ಸ್ ಬೆರೆಸಿ ಕೊಡು. ತರಕಾರಿ ತಿನ್ನುವುದಿಲ್ಲ ಅಂತಾದರೆ ಪಲ್ಯದ ಸ್ಟೈಲ್ ಬದಲಾಯಿಸಿ, ಮ್ಯಾಗಿ ಮಸಾಲ ಬೆರೆಸಿ ಕೊಡು. ಮೊಸರನ್ನ ಬೇಡ ಅಂದ್ರೆ ರಾಯ್ತಾ ಮಾಡಿಕೊಡು. ಸಾಂಬಾರ್ ನಲ್ಲಿ ತರಕಾರಿ ಹೋಳು ಬೇಡ ಅಂದ್ರೆ, ಬಗೆಬಗೆಯ ವೆಜ್ ಪರೋಟ ಮಾಡು…. ಒಟ್ಟಾರೆ ಹಳೆ ಶೈಲಿ ಬಿಟ್ಟು ಯಾವುದೋ ರೂಪದಲ್ಲಿ ಅವರು ಆರೋಗ್ಯಕರ ಹಣ್ಣು, ತರಕಾರಿ, ಪ್ರೋಟೀನ್ ಸೇವಿಸುವಂತೆ ಮಾಡಬೇಕು.”
“ಹೌದು ಆಶಾ, ನೀನು ಹೇಳಿದ್ದು ಸರಿ. ಹೊಸ ರುಚಿ ಮಾಡಿದ ಹಾಗೂ ಆಯ್ತು, ನನ್ನ ಮಗಳು ಪೌಷ್ಟಿಕ ಆಹಾರ ತಿಂದ ಹಾಗೂ ಆಯ್ತು! ನಾನು ಇವತ್ತು ರಾತ್ರಿ ಡಿನ್ನರ್ ನಿಂದಲೇ ಈ ಹೊಸ ಪ್ರಯೋಗ ಮಾಡ್ತೀನಿ,” ಎಂದು ಉಷಾ ಖುಷಿಯಾಗಿ ಹೇಳಿದಳು.
ಮಕ್ಕಳು ಊಟತಿಂಡಿ ಸೇವಿಸಲು ಮಾಡುವಷ್ಟು ತಕರಾರು ಬೇರಾವುದಕ್ಕೂ ಮಾಡುವುದಿಲ್ಲ ಎಂದೇ ಹೇಳಬೇಕು. ಏನಾದರೂ ಆಗಲಿ, ಅವರು ಹೆಲ್ದಿ ಫುಡ್ ಸೇವಿಸುವಂತೆ ಮಾಡಬೇಕಾದುದು ತಾಯಿಯಾದ ನಿಮ್ಮ ಕರ್ತವ್ಯ. ಬೆಳೆಯುವ ಮಕ್ಕಳ ಆಹಾರ ಸೇವನೆ ಬಗ್ಗೆ ಬಾಲ್ಯದಿಂದಲೇ ನಾವು ಅತಿ ಎಚ್ಚರಿಕೆ ವಹಿಸಬೇಕು. ಹಾಗೆ ಮಾಡುವುದರಿಂದ ಮಾತ್ರ, ಅವರು ವಯಸ್ಸಿಗೆ ತಕ್ಕಂತೆ ಆರೋಗ್ಯ ಗಳಿಸಿ, ಲವಲವಿಕೆಯಿಂದ ಎಲ್ಲಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಲು ಸಾಧ್ಯ.
“ಈ ರೀತಿ ಸಹಜವಾಗಿಯೇ ಅವರ ದೈಹಿಕ ಇಮ್ಯುನಿಟಿ ಎಷ್ಟೋ ಸುಧಾರಿಸುತ್ತದೆ. ದೇಹಕ್ಕೆ ಬೇಕಾದ ಶಕ್ತಿ ಒಗ್ಗೂಡಿ, ಸೋಂಕು ರೋಗಗಳ ವಿರುದ್ಧ ಹೋರಾಡಲು ಸಾಮರ್ಥ್ಯ ಹೆಚ್ಚುತ್ತದೆ. ಬೆಳೆಯುತ್ತಿರುವ ಮಕ್ಕಳಿಗೆ ಈ ರೀತಿ ಸೂಕ್ತ ಪೋಷಣೆ ದೊರೆತಾಗ ಮಾತ್ರ ಪ್ರೋಟೀನ್, ವಿಟಮಿನ್, ಮಿನರಲ್ಸ್ ಅವರ ಮೈಗೂಡಲು ಸಾಧ್ಯ.
ಮಕ್ಕಳ ಡಯೆಟ್ ನಲ್ಲಿ ಇವೆಲ್ಲದರ ಅಭಾವವಿದ್ದರೆ, ಅವರು ಹಲವಾರು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಹೀಗಾಗಿ ನಿಮ್ಮ ಮಗುವಿಗೆ ಎಂಥ ಡಯೆಟ್ ಫಾಲೋ ಮಾಡಬೇಕು, ಅದರಲ್ಲಿ ಯಾವ ಯಾವ ಪೋಷಕಾಂಶಗಳಿರಬೇಕು, ಇದಕ್ಕಾಗಿ ಎಂಥ ಆಹಾರ ಒದಗಿಸಬೇಕು ಎಂಬುದನ್ನು ವಿವರವಾಗಿ ಗಮನಿಸೋಣ.
ಬೆಳೆಯುವ ಮಕ್ಕಳಿಗಾಗಿ ಪೋಷಕಾಂಶಗಳು
ಪ್ರೋಟೀನ್ : ಉತ್ತಮ ಬೆಳವಣಿಗೆ ಹಾಗೂ ಸದೃಢ ಶಕ್ತಿಗಾಗಿ, ಮಕ್ಕಳ ಡಯೆಟ್ ನಲ್ಲಿ ಅಗತ್ಯವಾಗಿ ಪ್ರೋಟೀನ್ ಇರಲೇಬೇಕು. ಹಿರಿಯರಿಗಿಂತ ಹೆಚ್ಚಾಗಿ ಬೆಳೆಯುವ ಮಕ್ಕಳಿಗೆ ಇದು ಅತ್ಯಗತ್ಯ ಬೇಕೇಬೇಕು. ಇದು ಮಕ್ಕಳ ಅಂಗಾಂಗಳ ನಿರ್ಮಾಣ, ಬೆಳವಣಿಗೆಗೆ ಪೂರಕ. ಆಹಾರವನ್ನು ಎನರ್ಜಿ ಆಗಿ ಬದಲಾಯಿಸಲು, ಇನ್ ಫೆಕ್ಷನ್ ವಿರುದ್ಧ ಹೋರಾಡಲು, ದೇಹದಲ್ಲಿ ಆಕ್ಸಿಜನ್ ಲೆವೆಲ್ ಮೇಂಟೇನ್ ಮಾಡಲು ಸಹಾಯಕ. ಈ ತರಹ ಹೆಚ್ಚಿನ ಪ್ರೋಟೀನ್ ಅಂಶ ಗಳಿಸಲು ಬೇಳೆ, ಕಾಳು, ಮೊಳಕೆ ಕಟ್ಟಿದ ಕಾಳು, ಸೋಯಾ, ಮೊಟ್ಟೆ, ಚಿಕನ್, ಹಾಲಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.
ಕ್ಯಾಲ್ಶಿಯಂ : ಮಕ್ಕಳ ದೈಹಿಕ ಬೆಳವಣಿಗೆಗೆ ಕ್ಯಾಲ್ಶಿಯಂ ಅತ್ಯಗತ್ಯ. ಏಕೆಂದರೆ ಅವರ ಮೂಳೆ, ಹಲ್ಲು, ಕೀಲುಗಳು ಈ ಕ್ಯಾಲ್ಶಿಯಂನಿಂದಲೇ ಸದೃಢಗೊಳ್ಳಬೇಕು. 35 ವರ್ಷಗಳ ವಯಸ್ಸಿನವರೆಗೂ ಪೀಕ್ ಬೋನ್ ಮಾಸ್ ರೂಪುಗೊಳ್ಳುತ್ತದೆ. ಹೀಗಾಗಿ ಮಜಬೂತಾದ ಮೂಳೆಗಾಗಿ ಸೂಕ್ತ ಪ್ರಮಾಣದ ಕ್ಯಾಲ್ಶಿಯಂ ಸೇವನೆ ಅತ್ಯಗತ್ಯ. ಆದ್ದರಿಂದ ನೀವು ಯಾವುದೇ ರೂಪದಲ್ಲಿ ಮಕ್ಕಳಿಗೆ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಪನೀರ್ ಹಾಗೂ ಹಾಲಿನ ಇನ್ನಿತರ ಉತ್ಪನ್ನಗಳನ್ನು ಸೇವಿಸುವಂತೆ ಮಾಡಿ. ಇದರಲ್ಲಿ ಕ್ಯಾಲ್ಶಿಯಂ ಹೇರಳವಾಗಿರುತ್ತದೆ. ಮಕ್ಕಳು ಬೆಳಗಿನ ಹೊತ್ತು ಮೊದಲ ಆಹಾರವಾಗಿ ಹಾಲು ಸೇವಿಸುವುದನ್ನು ಚಿಕ್ಕಂದಿನಿಂದಲೇ ರೂಢಿಸಬೇಕು. ಬೆಳಗಿನ ಹೊತ್ತು ಅವರು ತುಸು ವಾಕಿಂಗ್, ಜಾಗಿಂಗ್ ಮಾಡುವುದರಿಂದ ವಿಟಮಿನ್ಸ್ ಸಹಜವಾಗಿ ಮೈಗೂಡಿಕೊಳ್ಳುತ್ತದೆ.
ಫೈಬರ್ : ಆಹಾರದಲ್ಲಿನ ನಾರಿನಂಶವೇ ಈ ಫೈಬರ್. ಇದರ ಸೇವನೆಯಿಂದ ನಮ್ಮ ಪಚನಶಕ್ತಿ ಸುಧಾರಿಸುತ್ತದೆ. ಇತರ ಆಹಾರಾಂಶಗಳನ್ನು ದೇಹ ಗ್ರಹಿಸಿಕೊಳ್ಳಲು ಈ ಫೈಬರ್ ಬೇಕೇಬೇಕು. ಪ್ರತಿ ಮಗುವಿನ ಆಹಾರದಲ್ಲಿ ಅಗತ್ಯ ಫೈಬರ್ ಬೆರೆತಿರಲಿ. ಇದಕ್ಕಾಗಿ ನೀವು ಬ್ರೋಕ್ಲಿ, ಸೇಬು, ಶುಂಠಿ, ಡ್ರೈಫ್ರೂಟ್ಸ್, ಅವಕಾಡೋ, ಮರಬೇಸು (ಪೇರ್ ಹಣ್ಣು)…. ಇತ್ಯಾದಿಗಳನ್ನು ಅನುದಿನ ಕೊಡಿ.
ಕಬ್ಬಿಣಾಂಶ : ಇದರ ಸೇವನೆಯಿಂದ ಮಕ್ಕಳ ಬೆಳವಣಿಗೆ ತೀವ್ರ ಚುರುಕಾಗುತ್ತದೆ. ಏಕೆಂದರೆ ಐರನ್ ನಿಂದ ಮಾತ್ರ ರೆಡ್ ಬ್ಲಡ್ ಸೆಲ್ಸ್ ಹೆಚ್ಚಾಗಲು ಸಾಧ್ಯ. ಇದು ದೇಹದ ಪ್ರತಿಯೊಂದು ಕಣಕಣಕ್ಕೂ ಆಕ್ಸಿಜನ್ ತಲುಪಿಸಿ ಅವರು ಚುರುಕಾಗಿರುವಂತೆ ಮಾಡುತ್ತದೆ. ರಕ್ತಹೀನತೆಯಿಂದಾಗಿ ಹಲವಾರು ರೋಗಗಳು ಕಾಡುತ್ತವೆ. ನಿಶ್ಶಕ್ತಿ, ಸುಸ್ತು, ಸಂಕಟ ತಾನಾಗಿ ಹೆಚ್ಚುತ್ತದೆ. ಹೀಗಾಗಿ ರಕ್ತದಲ್ಲಿ ಧಾರಾಳ ಐರನ್ ಅಂಶ ಇದ್ದಾಗ, ರಕ್ತ ಸಂಚಲನೆ ಸರಾಗವಾಗಿ, ಸಮೃದ್ಧವಾಗಿ ರಕ್ತ ಮೈಗೂಡುತ್ತದೆ. ಇದರಿಂದ ಮಕ್ಕಳ ಕಲಿಯುವಿಕೆಗೆ ಏಕಾಗ್ರತೆ ಚುರುಕಾಗುತ್ತದೆ.
ಈ ಕಾರಣದಿಂದ ಬೆಳೆಯುವ ಮಕ್ಕಳಿಗೆ ಐರನ್ ಬಲು ಅಗತ್ಯ. ಇದಕ್ಕಾಗಿ ಮಕ್ಕಳು ಗರಿಷ್ಠ ಪ್ರಮಾಣದಲ್ಲಿ ದಿನ ಹಸಿ ತರಕಾರಿ, ಸೊಪ್ಪು, ಬೀಟ್ ರೂಟ್, ಟೊಮೇಟೊ ಇಡಿಯಾದ ಧಾನ್ಯ (ಅಕ್ಕಿ, ಗೋಧಿ, ರಾಗಿ, ಜೋಳ), ಬಗೆಬಗೆಯ ಬೀನ್ಸ್, ಡ್ರೈಫ್ರೂಟ್ಸ್, ಮೊಟ್ಟೆ, ಮೀನು ಇತ್ಯಾದಿ ಸೇವಿಸಬೇಕು.
ವಿಟಮಿನ್ ಸಿ : ಇದು ಮಕ್ಕಳ ಇಮ್ಯುನಿಟಿ ಹೆಚ್ಚಿಸಿ ಸದಾ ಕಾಡುವ ಶೀತ, ನೆಗಡಿ, ಜ್ವರದಿಂದ ದೂರವಿಡುತ್ತದೆ. ಜೊತೆಗೆ ಇನ್ನಿತರ ಆರೋಗ್ಯಕರ ಲಾಭ ತರುತ್ತದೆ. ಇದು ರಕ್ತನಾಳಗಳ ಗೋಡೆಯನ್ನು ಸಶಕ್ತಗೊಳಿಸಿ, ಗಾಯ ಆದಾಗ ತಕ್ಷಣ ರಿಪೇರಿ ಮಾಡಿ, ಹಲ್ಲುಮೂಳೆಗಳಿಗೂ ಹೆಚ್ಚಿನ ದೃಢತೆ ಒದಗಿಸುತ್ತದೆ. ಹೈಸ್ಕೂಲ್ ಮಕ್ಕಳಿಗಂತೂ ದಿನದಿನ ಇದರ ಹೆಚ್ಚಿನ ಅಂಶದ ಅಗತ್ಯವಿದೆ. ಇದರ ಪೂರೈಕೆಗಾಗಿ ಮಕ್ಕಳಿಗೆ ಧಾರಾಳ ಹುಳಿ ಅಂಶದ ಹಣ್ಣುಗಳು (ಕಿತ್ತಳೆ, ಮೂಸಂಬಿ, ನೆಲ್ಲಿ, ನಿಂಬೆ), ಮಾವು, ಟೊಮೇಟೊ, ಸ್ಟ್ರಾಬೆರಿ, ಮರಸೇಬು, ಬ್ರೋಕ್ಲಿ, ಪಾಲಕ್ ಸೊಪ್ಪು, ನುಗ್ಗೆಸೊಪ್ಪು ಇತ್ಯಾದಿ ಕೊಡಬೇಕು.
ಫಾಲೆಟ್ : ಬಹುತೇಕ ಮಂದಿಗೆ ಈ ಬಗ್ಗೆ ಗೊತ್ತಿಲ್ಲ. ಆದರೆ ಬೆಳೆಯುವ ಮಕ್ಕಳಿಗೆ ಫಾಲೆಟ್ ಅಂಶ ಅತಿ ಅಗತ್ಯ. ಇದು ಮಕ್ಕಳ ದೇಹದ ಅಂಗಾಂಶಗಳನ್ನು ಸದೃಢಗೊಳಿಸಿ, ಆರೋಗ್ಯ ಕಾಪಾಡುತ್ತದೆ. ಈ ವಿಟಮಿನ್ ಕೊರತೆಯಿಂದಾಗಿ ಮಕ್ಕಳಿಗೆ ಅನೀಮಿಯ ಆಗಬಹುದು. ಮಕ್ಕಳ ದೇಹದಲ್ಲಿ ಫಾಎಲಟ್ ಅಂಶ ಹೆಚ್ಚಿಸಲು ಎಲ್ಲಾ ಬಗೆಯ ಧಾನ್ಯ, ಬ್ರೋಕನ್ ವೀಟ್, ಸೊಪ್ಪುಗಳು, ಬೇಳೆಕಾಳು, ಮೊಳಕೆ ಕಟ್ಟಿದ ಕಾಳು ಇತ್ಯಾದಿ ಕೊಡಿ.
ಕಾರ್ಬೊಹೈಡ್ರೇಟ್ : ಮಕ್ಕಳ ಬೆಳವಣಿಗೆಗೆ ಇದೂ ಸಹ ಒಂದು ಮುಖ್ಯ ಅಂಶ. ಇದು ಮಕ್ಕಳ ಅಂಗಾಂಗ ಸದೃಢಗೊಳ್ಳಲು, ಮುರಿದ ಅಂಶ ಕೂಡಿಕೊಳ್ಳಲು ಪೂರಕ. ಇದು ಬೇರೆ ಬೇರೆ ರೂಪಗಳಲ್ಲಿ ಅಂದ್ರೆ ಸಕ್ಕರೆ, ಪಿಷ್ಟ, ಫೈಬರ್ ಆಗಿ ಲಭ್ಯ. ಆದರೆ ಮಕ್ಕಳಿಗೆ ಪಿಷ್ಟ, ಫೈಬರ್ ಜಾಸ್ತಿ, ಸಿಹಿ ಅಂಶ ಕಡಿಮೆ ಕೊಡಬೇಕು. ಬ್ರೆಡ್, ಆಲೂ, ಪಾಸ್ತಾ, ಅಕ್ಕಿ, ಗೋಧಿ, ರಾಗಿ, ಜೋಳ ಇತ್ಯಾದಿಗಳಲ್ಲಿ ಇದು ಸಮೃದ್ಧ.
ಈ ಕೆಳಗಿನ ಪೌಷ್ಟಿಕಾಂಶಗಳನ್ನೂ ಮಕ್ಕಳ ಆಹಾರದಲ್ಲಿ ಅಗತ್ಯ ಬೆರೆಸಿಕೊಳ್ಳಿ.
ಹಾಲು : ಇದಂತೂ ಮಕ್ಕಳಿಗೆ ಅಮೃತ ಸಮಾನ. ಇದರಲ್ಲಿ ಧಾರಾಳ ಕ್ಯಾಲ್ಶಿಯಂ ಅಂಶವಿದ್ದು ಹಲ್ಲು, ಮೂಳೆಗಳು ಸದೃಢಗೊಳ್ಳುತ್ತವೆ. ಜೊತೆಗೆ ವಿಟಮಿನ್ಸ್ ಸಹ ಅಡಗಿದ್ದು ದೈಹಿಕ ವಿಕಾಸಕ್ಕೆ ಇದು ಬೇಕೇ ಬೇಕು.
ಬ್ರೋಕ್ಲಿ : ಇದರಲ್ಲಿ ಧಾರಾಳ ಕ್ಯಾಲ್ಶಿಯಂ ಅಂಶವಿದೆ. ಮಕ್ಕಳ ಮೂಳೆ ಬೆಳವಣಿಗೆಗೆ ಇದು ಬೇಕೇ ಬೇಕು. ಮಕ್ಕಳಿಗೆ ಆಗಾಗ ಇದರ ಸೂಪ್ ಮಾಡಿಕೊಡಿ. ಇದನ್ನು ಇತರ ತರಕಾರಿ ಜೊತೆ ಪಲ್ಯ ಮಾಡಿ ಕೊಡಿ.
ಬಾದಾಮಿ : ಹಿಂದಿನ ರಾತ್ರಿ ಒಂದು ಹಿಡಿ ಬಾದಾಮಿ ನೆನೆಹಾಕಿ, ಮಾರನೇ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಲು ಮಕ್ಕಳಿಗೆ ದಿನ ನೀಡಿ. ಇದರಲ್ಲಿ ಅನೇಕ ಬಗೆಯ ಖನಿಜ, ವಿಟಮಿನ್, ಮಿನರಲ್ಸ್ ಅಡಗಿದ್ದು ಗುಡ್ ಫ್ಯಾಟ್ ಸಿಗಲು ಮೂಲವಾಗಿದೆ. ಇದರಿಂದ ಮಕ್ಕಳ ಆರೋಗ್ಯ ಸುಧಾರಿಸುತ್ತದೆ.
ಸಂಶೋಧನೆಗಳ ಪ್ರಕಾರ, ಬಾದಾಮಿಯಿಂದ ಮೂಳೆ ಸದೃಢಗೊಳ್ಳುತ್ತದೆ. ಇದರಲ್ಲಿನ ವಿಟಮಿನ್ಸ್ ಮಕ್ಕಳ ಹೈಟ್ ಗ್ರೋಥ್ ಗೆ ಪೂರಕ.
ಹಾಲಿನ ಪ್ರಾಡಕ್ಟ್ಸ್ : ಪ್ರೋಟೀನ್ ಮಾತ್ರವಲ್ಲದೆ, ಮಕ್ಕಳ ಮೂಳೆ ಸಂರಚನೆ, ಬೆಳವಣಿಗೆಗೆ ಕ್ಯಾಲ್ಶಿಯಂ ಅತಿ ಮೂಲಭೂತ ವಸ್ತು. ಡೇರಿ ಪ್ರಾಡಕ್ಟ್ಸ್ ಅಂದ್ರೆ ಹಾಲು, ಪನೀರ್, ಮೊಸರು, ಬೆಣ್ಣೆ, ತುಪ್ಪ, ಮಜ್ಜಿಗೆ ಇತ್ಯಾದಿಗಳಲ್ಲಿ ಧಾರಾಳ ಕ್ಯಾಲ್ಶಿಯಂ ಇದೆ. ಹಾಲಿನಿಂದ ಗುಡ್ ಫ್ಯಾಟ್, ಫಾಸ್ಛರಸ್, ಮೆಗ್ನೀಷಿಯಂ ಲಭಿಸುತ್ತದೆ. ಮಕ್ಕಳ ಹೈಟ್ ಗ್ರೋಥ್ ಗೆ ಇದು ಬೇಕೇ ಬೇಕು. ಮಕ್ಕಳ ಮಾಂಸಖಂಡಗಳು ಸದೃಢವಾಗಲು ಇವೆಲ್ಲ ಅಗತ್ಯ ಬೇಕು.
ಮೊಟ್ಟೆ : ಪ್ರೋಟೀನ್‌ಗುಡ್ ಫ್ಯಾಟ್ ನಮಗೆ ಮೊಟ್ಟೆಯಿಂದ ಸಿಗುತ್ತದೆ. ಪ್ರತಿ ಮೊಟ್ಟೆಯಲ್ಲೂ 6 ಗ್ರಾಂ ಪ್ರೋಟೀನ್ ಇದ್ದು, ಇತರ ಉತ್ತಮ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿನ ಅಮೀನೋ ಆಮ್ಲ ಮೂಳೆಗಳ ತಯಾರಿಕೆಗೆ ಪೂರಕ. ಇದರಿಂದ ವಿಟಿಮಿನ್ ಡಿ ಸಹ ಲಭ್ಯ. ಕ್ಯಾಲ್ಶಿಯಂ ರಕ್ತದಲ್ಲಿ ವಿಲೀನಗೊಳ್ಳಲು ಇದು ಪೂರಕ. ಇದರಲ್ಲಿನ ಕೊಲೀನ್ ಎಂಬ ಪೋಷಕಾಂಶ, ಮೆದುಳಿನ ಬೆಳವಣಿಗೆಗೆ ಪೂರಕ. ಮೊಟ್ಟೆಯನ್ನು ಆದಷ್ಟೂ ಫ್ರೈ ಮಾಡದೆ (ಪೋಷಕಾಂಶ ನಷ್ಟವಾಗುತ್ತದೆ), ಬೇಯಿಸಿ, ಬೇಕ್ ಮಾಡಿ, ಕೊಡಿ.
ಬೆರೀಸ್ : ಸ್ಟ್ರಾಬೆರಿ, ಬ್ಲೂಬೆರಿ, ಮಲ್ಬರಿ, ಗೂಸ್ ಬೆರಿ, ರಾಸ್ಪ್ ಬೆರಿ….. ಮುಂತಾದ ಎಲ್ಲದರಲ್ಲೂ ಪೊಟಾಶಿಯಂ, ವಿಟಮಿನ್ ಸಿ, ಫೈಬರ್, ಕಾರ್ಬೊಹೈಡ್ರೇಟ್, ಆ್ಯಂಟಿ ಆಕ್ಸಿಡೆಂಟ್ಸ್ ಧಾರಾಳ ಇರುತ್ತವೆ. ಇದರಲ್ಲಿ ಫ್ಯಾಟ್, ಕೊಲೆಸ್ಟ್ರಾಲ್ ಇರುವುದಿಲ್ಲ. ಇದರ ರುಚಿಯೂ ಮಕ್ಕಳಿಗೆ ಬಲು ಪ್ರಿಯ! ಇನ್ನು ಮಕ್ಕಳಿಗೆ ಓಟ್ ಮೀಲ್, ಮೊಸರು, ಬ್ರೋಕನ್ ವೀಟ್ ಇತ್ಯಾದಿಗಳಲ್ಲಿ ಬೆರೆಸಿಕೊಡಿ.
ಸಿಹಿಗೆಣಸು : ಇದು ಕಣ್ಣುಗಳಿಗೆ ಬಲು ಉತ್ತಮ. ಇದರಲ್ಲಿ ವಿಟಮಿನ್, ಕ್ಯಾಲ್ಶಿಯಂ, ಪೊಟಾಶಿಯಂ, ಐರನ್ ಆಡಗಿದೆ. ಕ್ಯಾರೆಟ್‌ಸಹ ಇಂಥದೇ ಉತ್ತಮ ತರಕಾರಿ ಆಗಿದ್ದು, ಇವೆರಡನ್ನೂ ಬೆರೆಸಿ ಪಲ್ಯ, ಇಡ್ಲಿಗಳ ರೂಪದಲ್ಲಿ ಮಕ್ಕಳಿಗೆ ಕೊಡುತ್ತಿರಿ.
– ಗಿರಿಜಾ ಶಂಕರ್