ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಹಾಗೂ ಮತ್ತೊಬ್ಬರ ವಿರುದ್ಧ ಹಣ ವಂಚನೆ ಆರೋಪ ಕೇಳಿ ಬಂದಿದ್ದು, ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಹಾಗೂ ಇನ್ನೊಬ್ಬರ ವಿರುದ್ಧ 60.4 ಕೋಟಿ ರೂಪಾಯಿಗಳ ವಂಚನೆ ಆರೋಪ ಕೇಳಿ ಬಂದಿದೆ. ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಉದ್ಯಮಿಯೊಬ್ಬರು ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಕೋಟಿಗಟ್ಟಲೆ ಹಣ ವಂಚಿಸಿದ್ದಾರೆ ಎಂದು ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲು) ದಲ್ಲಿ ಪ್ರಕರಣ ದಾಖಲಾಗಿದೆ. ಜುಹು ನಗರದ ನಿವಾಸಿ ಹಾಗೂ ಲೋಟಸ್ ಕ್ಯಾಪಿಟಲ್ ಫೈನಾನ್ಸ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕ ದೀಪಕ್ ಕೊಠಾರಿ (60) ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ದೀಪಕ್ ಕೊಠಾರಿ ನೀಡಿದ ದೂರನ್ನು ಪೊಲೀಸರು ಮೊದಲು ತೆಗೆದುಕೊಂಡಿರಲಿಲ್ಲ. ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಕೆಲವು ಅಂಶಗಳು ಕಂಡು ಬಂದಿದ್ದರಿಂದ ಪ್ರಕರಣ ದಾಖಲಿಸಿ, ಇಒಡಬ್ಲುಗೆ ಒಪ್ಪಿಸಲಾಗಿದೆ. ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ಗೆ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ ಹಾಗೂ ಇನ್ನೊಬ್ಬ ವ್ಯಕ್ತಿ ಸೇರಿ 60.4 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಹೇಳಲಾಗಿದೆ.
ಕಂಪನಿಯಿಂದ ಮೊದಲು ಶೇ.12 ರಷ್ಟು ಬಡ್ಡಿಯಂತೆ 75 ಕೋಟಿ ರೂ. ಪಡೆದುಕೊಂಡಿದ್ದರು. ಬಳಿಕ ಅಸಲು ಮತ್ತು ಬಡ್ಡಿ ಪಾವತಿ ಮಾಡವ ಭರವಸೆ ನೀಡಿ, ಕಂಪನಿಯಲ್ಲಿ ಅದೇ ಹಣವನ್ನು ಹೂಡಿಕೆ ಎಂದು ನಮ್ಮನ್ನು ಮನವೊಲಿಸಿದರು. ಸರ್ಕಾರಕ್ಕೆ ತೆರಿಗೆ ತಪ್ಪಿಸುವುದಕ್ಕಾಗಿ ಸಾಲವನ್ನು ಹೂಡಿಕೆ ಎಂದು ರೂಟ್ ಬದಲಾಯಿಸಿದ್ದರು. ಹೀಗಾಗಿ ಕೊಠಾರಿ ಅವರು 2015ರ ಏಪ್ರಿಲ್ನಲ್ಲಿ 31.9 ಕೋಟಿ ರೂಪಾಯಿ ವರ್ಗಾಯಿಸಿದ್ದರು. ಇದಾದ ನಂತರ 2015ರ ಸೆಪ್ಟೆಂಬರ್ನಲ್ಲಿ 28.53 ಕೋಟಿ ರೂಪಾಯಿ ವರ್ಗಾಯಿಸಿರುವುದಾಗಿ ಹೇಳಿಕೊಂಡಿದ್ದಾರೆ.