ಸಾವು ಎಂದೊಡನೆ ಮನುಷ್ಯನಿಗೆ ಮೂಲತಃ ಕಾಡುವುದು ಭಯ ಮಾತ್ರ. ಸಾವನ್ನು ಗೆದ್ದವರು ಯಾರೂ ಇಲ್ಲ. ಸಾವು ಅನಿವಾರ್ಯ, ಅದನ್ನು ತಪ್ಪಿಸಲಾಗದು. ಸಾವಿನ ಬಗ್ಗೆ ಎಷ್ಟೆಲ್ಲಾ ವ್ಯಾಖ್ಯಾನಗಳಿದ್ದರೂ ಸಾವಿಗೆ ನಾವಿನ್ನೂ ಅಂಜುವುದೇಕೆ……?

ದೇವಲೋಕದ ಸುಂದರ ಲೋಕೇಶನ್‌. ಎಲ್ಲೆಲ್ಲೂ ಸುಂದರ ಜೋಡಿಗಳು, ಆದರೆ ನೀವು ಇಲ್ಲಿ ಇಲ್ಲ. ನಾನು ಎಲ್ಲ ಕಡೆ ತಡಕಾಡಿದೆ, ಹುಡುಕಾಡಿದೆ. ಎಲ್ಲೂ ಕಾಣಲೇ ಇಲ್ಲ. ಎಲ್ಲಿ ಹೋದಿರಿ ನೀವು? ಹಾಗೆ ಹೋಗಿಬಿಟ್ಟರೆ ನನಗೆಷ್ಟು ಗಾಬರಿಯಾಗಬೇಡ. ಅಯ್ಯೋ ಏನಿದು? ಇದ್ದಕ್ಕಿದ್ದಂತೆ ಕಾಲಿಗೆ ಏನೋ ತೊಡರಿದಂತಾಗ್ತಿದೆ. ರಾತ್ರಿ ಕಾಲು ನೋವಂತಾ ಇಟ್ಟುಕೊಂಡ ಹಾಟ್‌ ವಾಟರ್‌ ಬ್ಯಾಗು, ಪಕ್ಕದಲ್ಲಿ ಕೈ ಚಾಚಿದರೆ ನೀವಿಲ್ಲ. ಹೌದಲ್ಲಾ, ನೀವು ನನ್ನನ್ನು ಬಿಟ್ಟು ಹೊರಟು ಹೋಗಿದ್ದಿರಿ, ಶಾಶ್ವತವಾಗಿ, ಆದರೂ ನೀವಿಲ್ಲವೆನ್ನುವ ಸತ್ಯವನ್ನು ನನಗೆ ಒಪ್ಪಿಕೊಳ್ಳಲು ಆಗುತ್ತಲೇ ಇಲ್ಲ. ಇಷ್ಟು ದಿನ ನನ್ನ ಜೊತೆಯಲ್ಲೇ ಇದ್ದವರು ಈಗ ಇಲ್ಲ ಎಂದರೆ ಏನರ್ಥ? ನಾನು ನಿಮ್ಮನ್ನು ಮತ್ತೆ ಮುಟ್ಟಲಾಗುವುದಿಲ್ಲವೇ? ನನ್ನ ಕೈಗೆ ನೀವು ಸಿಕ್ಕುವುದಿಲ್ಲವೇ? ಮತ್ತೆ ನಾನು ನಿಮ್ಮೊಡನೆ ವಾಕ್‌ ಹೋಗಲಾಗುದಿಲ್ಲವೇ? ರಸ್ತೆ ದಾಟುವಾಗ ನಿಮ್ಮ ಕೈಹಿಡಿದು ದಾಟಲಾರೆನೆ? ಗಸಗಸೆ ಹಣ್ಣುಗಳನ್ನು ನಾವಿಬ್ಬರು ಕೊಂಬೆ ಬಗ್ಗಿಸಿ ಕೊಯ್ಯಲು ಆಗುವುದಿಲ್ಲವೇ….? `ಹನ್ನೆರಡು ಗಂಟೆಯಾಯಿತು  ಹಣ್ಣು ಹೆಚ್ಚಿ ಕೊಡೆಂದು,’ ಕೇಳುವುದಿಲ್ಲವೇ?  `ಎರಡೂವರೆಯಾದರೂ ಊಟ ಮಾಡುವುದಿಲ್ಲ. ಸಮಯಕ್ಕೆ ಸರಿಯಾಗಿ ಊಟ ಮಾಡೆಂದು,’ ಹೇಳಲು ನೀವೆಲ್ಲಿದ್ದೀರಾ? `ಊಟದ ನಂತರ ಸ್ವಲ್ಪ ಹೊತ್ತು ಮಲಗು, ನಂತರ ಎಲ್ಲಾ ಮಾಡಿಕೊಳ್ಳುವೆಯಂತೆ. ಆಮೇಲೆ ಫೋನಿನಲ್ಲಿ ಮಾತನಾಡಬಹುದಲ್ಲವೇ….’ ಎನ್ನುವವರು ಯಾರು? ಪಾರ್ಕಿಗೆ ಎಲ್ಲ ಹೆಂಗಸರು ಮತ್ತು ಗಂಡಸರು ಬೇರೆಯಾಗಿಯೇ ಬರುತ್ತಿದ್ದರಲ್ಲವೇ? ನಾವು ಮಾತ್ರ ಒಟ್ಟಿಗೆ ಹೋಗುತ್ತಿದ್ದುದು, ನೀವಿಲ್ಲದೆ ನಾನೊಬ್ಬಳೆ ಪಾರ್ಕಿಗೆ ಹೇಗೆ ಹೋಗಲಿ? ಅವರಿಗೆ ಹೇಗೆ ಮುಖ ತೋರಿಸಲಿ? ನಮ್ಮದು ಸುಂದರ ಜೋಡಿ, ಆದರ್ಶ ದಂಪತಿಗಳು, ಜೋಡಿ ಹಕ್ಕಿಗಳು ಎನ್ನುತ್ತಿದ್ದರು. ನನ್ನನ್ನು ಬಿಟ್ಟು ಹೋಗಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಇಲ್ಲ, ನಿಮಗೆ ಇನ್ನೂ ಬದುಕುವ ಆಸೆ ಇತ್ತು, ನಿಮ್ಮ ಕಣ್ಣುಗಳಲ್ಲಿ ವಿದಾಯ ಹೇಳುವ ಭಾವ ಇರಲಿಲ್ಲ. ನಿಮ್ಮನ್ನು ಈ ಭೂಮಿಯಿಂದ ಕರೆದುಕೊಂಡು ಹೋಗಲು ಆ ದೇವರಿಗೆ ಮನಸ್ಸಾದರೂ ಹೇಗೆ ಬಂತು? ನನ್ನ ಬಗ್ಗೆ ಅವನು ಹೇಗೆ ಅಷ್ಟು ನಿಷ್ಕರುಣಿಯಾದ….? ಹೋಗಲಿ ಈಗ ಹೇಗಿದ್ದೀರಾ? ಎಲ್ಲಿದ್ದೀರಾ? ನಿಮ್ಮ ಒಳ್ಳೆಯತನಕ್ಕೆ ನಿಮಗೆ ಸ್ವರ್ಗವೇ ಸಿಗಬೇಕು ಅಥವಾ  ಮತ್ತೊಂದು ಜನ್ಮವನ್ನೆತ್ತಿ ನನಗಾಗಿ ಬರ್ತೀರಾ? ನಂತರ ಏನಾಗುತ್ತದೆ….? ಅದು ಯಾರಿಗೂ ಗೊತ್ತಿಲ್ಲ ಅಲ್ಲವೇ? ಸಾವೆನ್ನುವುದು ಎಷ್ಟು ಕ್ರೂರ ಅಲ್ಲವೇ? ಬೇರೆಯವರಿಗಾದಾಗ ಅದರ ನೋವಿನ ತೀವ್ರತೆಯೇ ಬೇರೆ, ಆದರೆ ನಮಗೇ ಆದಾಗ ಸಹಿಸಲಸಾಧ್ಯ, ಈ ನೋವನ್ನು ನಾವು ಹೇಗೆ ಭರಿಸಲಿ ದೇವಾ?

tera-jana-story1

ಸಂಗಾತಿಯನ್ನು ಕಳೆದುಕೊಂಡಾಗ…..

ಇದು ಬಾಳ ಸಂಗಾತಿಯನ್ನು ಕಳೆದುಕೊಂಡವಳ ಅಳಲು. ಸಾವು ಯಾರನ್ನೂ ಬಿಟ್ಟಿದ್ದಿಲ್ಲ. ಸಾವಿಲ್ಲದ ಮನೆಯಲ್ಲಿ ಸಾಸಿವೆಯನ್ನು ತೆಗೆದುಕೊಂಡು ಬಾ ಎಂದ ಬುದ್ಧ. ಸಾವನ್ನು ಗೆದ್ದವರು ಯಾರಿದ್ದಾರೆ? ಪುರಾಣದ ಸಾವಿತ್ರಿ ತನ್ನ ಗಂಡ ಸತ್ಯವಾನನನ್ನು ಯಮನ ಪಾಶದಿಂದ ಬಿಡಿಸಿಕೊಂಡಳಂತೆ. ಆದರೂ ಅವಳನ್ನು ನಾವಂತೂ ನೋಡಿದ್ದಿಲ್ಲ. ಕೇಳಿದ್ದಷ್ಟೇ. ಬಿಟ್ಟರೆ ಭಕ್ತ ಮಾರ್ಕಂಡೇಯನ ಕಥೆ, ಶಿವಭಕ್ತನಾದ ಅವನು ಸಾವನ್ನು ಗೆದ್ದು ಬಂದದ್ದು, ಯಮನನ್ನೇ ಮತ್ತೆ ಹಿಂದಿರುಗಿ ಕಳುಹಿಸಿದ್ದು. ಬಾಲಕ ನಚಿಕೇತ ಯಮನನ್ನೇ ಸಾವಿನ ರಹಸ್ಯದ ಬಗ್ಗೆ ಕೇಳಿದನಂತೆ. ಇದೆಲ್ಲಾ ನಾವು ಚಿಕ್ಕಂದಿನ ನಮ್ಮ ಶಾಲೆಯ ಪಾಠದಲ್ಲಿ ಕೇಳಿದ್ದಷ್ಟೇ.

kya-hai-digital-rap

ಸಾವು ಹತ್ತಿರ ಬಂದಾಗ…..

ಸಾವಿನ ಅವತಾರ ಅಪಾರ. ಹೇಳಬೇಕೆಂದರೆ ಬಹಳ ವಯಸ್ಸಾದರು ಸಾವನ್ನು ಬಯಸಿದಷ್ಟು ಬೇರೆ ಯಾರೂ ಬಯಸಲಾರರು. ಒಂದು ವಯಸ್ಸಾದ ನಂತರ ಎಲ್ಲಕ್ಕೂ ಮತ್ತೊಬ್ಬರನ್ನು ಅವಲಂಬಿಸಬೇಕು, ಸೇವೆ ಮಾಡುವವರಿಗೂ ಕಷ್ಟ, ಮಾಡಿಸಿಕೊಳ್ಳುವವರಿಗೆ ಮತ್ತೂ ಕಷ್ಟ. ಸಾವು ಹತ್ತಿರ ಬಂದಿದೆ ಅಥವಾ ಮನೆಯಲ್ಲಿ ಅವರನ್ನು ಸಂಭಾಳಿಸಲು ಆಗುವುದಿಲ್ಲ ಎನ್ನುವವರನ್ನು, ಅವರು ಕ್ಯಾನ್ಸರ್‌ ರೋಗಿಗಳಾದರೆ ಕರುಣಾಶ್ರಮಕ್ಕೆ ಕಳುಹಿಸಿ ಬಿಡುತ್ತಾರೆ. ಹಣವಿದ್ದವರು ಅಂತಹ ವೃದ್ಧ ರೋಗಿಗಳನ್ನೇ ನೋಡಿಕೊಳ್ಳುವ ಕೆಲವು ಸಂಸ್ಥೆಗಳಿಗೆ ಕಳುಹಿಸಿ ಬಿಡುತ್ತಾರೆ. ವಯಸ್ಸಾದ ಯಾರನ್ನಾದರೂ ಮಾತನಾಡಿಸಿದಾಗ ಎಲ್ಲರ ಅಭಿಪ್ರಾಯ ಒಂದೇ, ಅವರಿಗೆ ಆಸ್ಪತ್ರೆಗೆ ಹೋಗಿ ಸೇರಲು ಬೇಸರ. ಮನೆಯಲ್ಲಿದ್ದಾಗಲೇ ದೇವರು ನನ್ನನ್ನು ಕರೆದುಕೊಂಡು ಬಿಡಲಿ ಎನ್ನುವ ಬಯಕೆ. ನಮ್ಮ ಮನೆಯ ಹತ್ತಿರ 92 ವರ್ಷದ ಅಜ್ಜವೊಬ್ಬರಿದ್ದರು. ಅವರು ಯಾವಾಗಲೂ ಹೇಳುತ್ತಿದ್ದ ಮಾತು, ಆ ದೇವರು ನನ್ನ ಅರ್ಜಿಯನ್ನು ತಳಕ್ಕೆ ಹಾಕಿಬಿಟ್ಟಿದ್ದಾನೆ ಎಂದು. ಯಾರು ಏನೆಂದರೂ, ಏನು ಬಯಸಿದರೂ ಅದು ಬರುವಾಗ ಯಾರ ಅಪ್ಪಣೆಯನ್ನೂ ಕೇಳುವುದಿಲ್ಲ. ಸಾವು ಬೇಡವೆಂದರೆ ಅದು ಬರದೆ ಬಿಡುವುದಿಲ್ಲ.

aji-kahe-ka-komal-man-story

ರಿಟರ್ನ್ಟಿಕೆಟ್

ಸಾವಿಗೆ ಯಾವುದೇ ಭೇದಭಾವವಿಲ್ಲ. ಚಿಕ್ಕ ಮಗುವಿನಿಂದ ಹಿಡಿದು ಮುದುಕರವರೆಗೆ ಯಾರನ್ನೂ ಬಿಟ್ಟಿದ್ದಿಲ್ಲ. ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದಳು. ದೇವರು ನಮಗೆ ರಿಟರ್ನ್‌ ಟಿಕೆಟ್‌ ಕೊಟ್ಟು ಬಿಟ್ಟಿರ್ತಾನೆ. ನಾವು ಅದನ್ನು ಎಲ್ಲೋ ಇಟ್ಟು ಮರೆತು ಬಿಟ್ಟಿರ್ತೀವಿ ಅಂತ. ಸಾವು ಎಲ್ಲರಿಗೂ ಅನಿವಾರ್ಯ ಅಂತ ಗೊತ್ತಿದ್ದರೂ, ನಮಗೆ ಅಥವಾ ನಮ್ಮ ಹತ್ತಿರದವರಿಗೆ ಅದು ಬಂದಾಗ ನಮಗೆ ದಿಗ್ಭ್ರಮೆಯಾಗಿ ಬಿಡುವುದುಂಟು. ನಂತರದ ನೋವು ಸಹಿಸಲಸಾಧ್ಯ, ಅಲ್ಲವೇ?

ಸಾವು ಅಂದರೆ…..

ಹೋಗಲಿ ಸಾವು ಅಂದರೇನು? ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅದನ್ನು ಅರ್ಥೈಸುತ್ತಾರೆ. ಒಂದೊಂದು ಧರ್ಮ ಒಂದೊಂದು ರೀತಿ ಹೇಳುತ್ತದೆ. ಆದರೆ ಹುಟ್ಟಿದ ಎಲ್ಲರಿಗೂ ಸಾವು ಬಂದೇ ಬರುತ್ತದೆ. ಈವತ್ತಲ್ಲದಿದ್ದರೆ ನಾಳೆ, ಆದರೂ ಸಾವು ಬಾಗಿಲ ಹತ್ತಿರ ಬರುವ ತನಕ ನಮಗೆ ಅದರ ಅರಿವಾಗುವುದೇ ಇಲ್ಲ ಅಥವಾ ನಾವು ಅದರ ಬಗ್ಗೆ ಯೋಚಿಸಲು ಭಯಪಟ್ಟು ಮನಸ್ಸಿನಿಂದ ತಳ್ಳಿ ಬಿಡುತ್ತೇವೇನೋ? ಸಾವೇ ಇಲ್ಲದಿದ್ದರೆ ಏನಾಗುತ್ತಿತ್ತು?

ನಮ್ಮ ಪಕ್ಕದ ಮನೆಯ ಅಜ್ಜಿ ಹೇಳುತ್ತಿದ್ದುದು ನೆನಪಿಗೆ ಬರುತ್ತದೆ. ನಾವೆಲ್ಲಾ ಇಲ್ಲಿಯೇ ಉಳಿದುಕೊಂಡು ಬಿಟ್ಟರೆ ಮುಂದಿನ ಜನಾಂಗಕ್ಕೆ, ಮುಂದೆ ಹುಟ್ಟುವ ಮಕ್ಕಳಿಗೆ ಸ್ಥಳ ಬೇಡವೇ? ಎಂದು. ಹೌದು ಹುಟ್ಟು, ಸಾವು ಜೀವನದ ಎರಡು ಅವಿಭಾಜ್ಯ ಅಂಗಗಳು. ಅದನ್ನು ನಾವು ಧಿಕ್ಕರಿಸಲಾಗದು. ಮಗು ಹುಟ್ಟಿದಾಗ ಸಂಭ್ರಮ ಪಡುವ ಮನುಜ, ಸತ್ತಾಗ ಅಳುವುದೇಕೆ? ಇಷ್ಟು ದಿನ ಚೆನ್ನಾಗಿ ಬಾಳಿ ಬದುಕಿದವರು ಹೋದಾಗ ಏಕೆ ಅಷ್ಟೊಂದು ದುಃಖ? ಅಗಲಿಕೆ ಸುಲಭವಲ್ಲ…. ಅದಕ್ಕೇ ಇರಬಹುದು ಅಲ್ಲವೇ?

ಆದರೆ ಇತಿಹಾಸವನ್ನು ತಿರುವಿ ಹಾಕಿದಾಗ ಮತ್ತೊಬ್ಬರ ಸಾವಿಗಾಗಿ ಕಾಯುತ್ತಿದ್ದವರೂ ಸಾಕಷ್ಟಿದ್ದಾರೆ. ರಾಜ ಮಹಾರಾಜರುಗಳು ದೀರ್ಘಾಯುಷ್ಯರಾದಾಗ, ಗದ್ದುಗೆಗಾಗಿ ಅವರನ್ನು ಸಾಯಿಸಿದ ಪ್ರಸಂಗಗಳು, ಆಸ್ತಿಗಾಗಿ ತಮ್ಮವರನ್ನೇ ಸಾಯಿಸಿದ ಪ್ರಕರಣಗಳೂ ಸಾಕಷ್ಟಿವೆ.

ವಿಜ್ಞಾನ ಹೇಳುವುದೇನು….?

ಒಂದು ಜೀವಿಯ ಅಸ್ತಿತ್ವಕ್ಕೆ ಕಾರಣವಾದ ಜೈವಿಕ ಕ್ರಿಯೆಗಳು, ಬದಲಾಯಿಸಲಾಗದ ನಿಲುಗಡೆಯನ್ನು ಹೊಂದಿದಾಗ ಸಾವು ಸಂಭವಿಸುತ್ತದೆ. ಮೆದುಳಿನ ಕ್ರಿಯೆ ನಿಂತು ಬಿಟ್ಟಾಗ ಕಾನೂನು ಬದ್ಧವಾಗಿಯೂ ಅದನ್ನು ಸಾವೆಂದೇ (ಬ್ರೇನ್‌ ಡೆಡ್‌) ಪರಿಗಣಿಸಲಾಗುತ್ತದೆ.

ತತ್ವಶಾಸ್ತ್ರದ ಪ್ರಕಾರ

ಸಾವನ್ನು ದೊಡ್ಡ ದುಷ್ಟನೆಂದು ಭಾವಿಸಲಾಗುತ್ತದೆ. ಆದರೆ ಹೆಸರಾಂತ ಗ್ರೀಕ್‌ ತತ್ವ ಶಾಸ್ತ್ರಜ್ಞ ಎಪಿಕ್ಯುರಸ್‌ “ಸತ್ತವರು ತಮ್ಮ ಅಸ್ತಿತ್ವದಿಂದ ಮರೆಯಾಗುವುದರಿಂದ ಸಾವು ಅವರಿಗೇನೋ ತೊಂದರೆ ಮಾಡಲಾಗುವುದಿಲ್ಲ,” ಎನ್ನುತ್ತಾನೆ.

ಆಧುನಿಕ ಪಾಶ್ಚಾತ್ಯ ಸಮಾಜದ ಪ್ರಕಾರ

ಸಾವು ಜೀವನದ ಒಂದು ಭಾಗ. ಆದರೆ ಜೀವನ ಶೈಲಿಯಲ್ಲಿನ ಬದಲಾವಣೆಯ ಪರಿಣಾಮ, ಸಾವನ್ನು ಅತಿಕ್ರಮಣವೆಂದು ಭಾವಿಸಲಾಗಿದೆ. ಆದ್ದರಿಂದ ಬಹಳಷ್ಟು ಜನರು ಸಾವು ಹತ್ತಿರ ಬಂದಾಗ ಸುಸಜ್ಜಿತರಾಗಿರಲಾರರು.

ಸಿಗ್ಮಂಡ್ಫ್ರಾಯ್ಡ್ ಏನಂತಾರೆ?

ಪ್ರಖ್ಯಾತ ಮನಶ್ಶಾಸ್ತ್ರಜ್ಞ ಸಿಗ್ಮಂಡ್‌ ಫ್ರಾಯ್ಡ್ ಪ್ರಕಾರ, ಮನುಷ್ಯ ಎಲ್ಲಕ್ಕಿಂತಾ ಭಯಪಡುವುದು ಮೃತ್ಯುವಿಗೆ. ಮಾನವ ಕುಲದ ಅತ್ಯಂತ ದೊಡ್ಡ ಭಯವದು. ಜೀವನವಿಲ್ಲದಿದ್ದರೆ ಏನೂ ಇಲ್ಲ, ಎನ್ನುವ ಮೂಲ ಭಯ.

ಡಿ.ವಿ.ಜಿ.ಯವರ ಸಾವಿನ ವ್ಯಾಖ್ಯಾನ

ಮೃತ್ಯುವಿಂ ಭಯವೇಕೆ, ದೇಶಾಂತರಗೊಯ್ವ ಮಿತ್ರನಾತಂ ಚಿತ್ರ ಹೊಸದಿರ್ಪುದಲ್ಲಿ,

ಸಾತ್ವಿಕದಿ ಬಾಳ್ವಂಗೆತ್ತೀಂ ಭಯವಿಹುದು ಸತ್ರ ಹೊಸದಿಹುದು, ನಡೆ ಮಂಕುತಿಮ್ಮ.

ಮೃತ್ಯುವೆಂದರೆ ಭಯವೇತಕೆ, ಅದು ನಿನ್ನನ್ನು ಬೇರೆ ದೇಶಕ್ಕೆ ಕೊಂಡೊಯ್ಯುವ ಮಿತ್ರ, ಅಲ್ಲೊಂದು ಹೊಸ ಲೋಕವಿದೆ. ಸಾತ್ವಿಕ ಜೀವನ ನಡೆಸಿದ ನಿನಗೆ ಮೃತ್ಯುವಿನ ಬಗ್ಗೆ ಭಯವೇಕೆ? ಸಾವು ಒಂದು ಅದ್ಭುತವಾದ ಬದಲಾವಣೆ ಇರಬಹುದು. ಆದ್ದರಿಂದ ಭಯಪಡುವ ಅಗತ್ಯವಿಲ್ಲ ಎನ್ನುತ್ತಾರೆ.

ಬಂದದ್ದು ಹೋಗಲೇಬೇಕು….

ರಮಣ ಮಹರ್ಷಿಗಳು ಹೇಳಿದ್ದು, “ಯಾವುದು ಇತ್ತೋ ಅದು ಮಾತ್ರ ಇರುತ್ತದೆ. ದೇಹವೆಂಬುದು ಬಂದದ್ದು, ಅದು ಹೋಗಲೇಬೇಕು. ಯಾವುದನ್ನು ನಾವು ಪಡೆದುಕೊಂಡಿದ್ದೇವೋ ಅದನ್ನು ಬಿಡಲು ಕಲಿಯಬೇಕು ಇಲ್ಲವಾದಲ್ಲಿ ಕಷ್ಟವಾಗಬಹುದು.”

ತತ್ವಜ್ಞಾನಿ ಹರ್ನ್ಸ್ ಬೇಕರ್

ನಾವು ಸಾವನ್ನು ದೂರ ತಳ್ಳುತ್ತೇವೆ. ತಳ್ಳುತ್ತಾ ತಳ್ಳುತ್ತಾ ಅದನ್ನು ಹತ್ತಿರ ತಂದುಕೊಳ್ಳುತ್ತೇವೆ. ಜೀವನದ ಅತ್ಯಂತ ಖಚಿತವಾದ ಸತ್ಯ ಸಾವು, ಸಾವಿನ ಭಯ ಮನುಷ್ಯನ ವಿಕಾಸದ ಮೂಲ ತತ್ವ ಎನ್ನುತ್ತಾರೆ.

ಮುತ್ತೈದೆ ಸಾವು

ಹುಟ್ಟನ್ನು ಸಂಭ್ರಮಿಸುವ ನಾವು ಸಾವು ಸಂಭವಿಸಿದಾಗ ಏಕೆ ಅಷ್ಟೊಂದು ನಿರ್ಬಂಧಗಳು? ಇನ್ನು ಹೆಣ್ಣುಮಕ್ಕಳಿಗೆ ತಾವು ಮುತ್ತೈದೆ ಸಾವನ್ನು ಪಡೆಯಬೇಕು ಎನ್ನುವ ಆಸೆ, ಗಂಡನಿಲ್ಲದೆ ಹೆಣ್ಣು ಜೀವಿಸಬಲ್ಲಳು. ಆದರೆ ಹೆಂಡತಿ ಇಲ್ಲದ ಜೀವನ ಗಂಡಿಗೆ ಬಲು ಕಷ್ಟ. ಹೆಂಡತಿಯನ್ನು ಕಳೆದುಕೊಂಡ ಗಂಡನಿಗೆ ಸಮಾಜ ಯಾವುದೇ ವ್ಯತ್ಯಾಸ ತೋರುವುದಿಲ್ಲ. ಆದರೆ ಈಗ ಸಮಾಜ ಎಷ್ಟೇ ಮುಂದುವರಿದಿದ್ದರೂ ಸೂಕ್ಷ್ಮ ಮನಸ್ಸಿನ ಹೆಣ್ಣಿಗೆ ಒಂದಷ್ಟು ನಿರ್ಬಂಧಗಳನ್ನು ಹೇರುತ್ತಾರೆ. ವರ್ಷದ ತನಕ ಎಲ್ಲಿಗೂ ಹೋಗಬಾರದು. ಅದೂ ಮಂಗಳಕಾರ್ಯಗಳಗೆ ಬೇಡಾ. ಅಲ್ಲಿಗೆ ಹೋದರೂ, ಅವಳಿಗೆ ಅಲ್ಲಿ ಪ್ರಾಧಾನ್ಯತೆ ಇಲ್ಲ. ಏಕೆಂದರೆ ಅವಳು ಮುತ್ತೈದೆ ಅಲ್ಲವಲ್ಲ. ಮದುವೆಯಲ್ಲಿ ವಧುವಿಗೆ ಮಾಂಗಲ್ಯ ಕಟ್ಟುವಾಗ ಅವಳು ದೂರ ಉಳಿಯುತ್ತಾಳೆ ಅಥವಾ ಉಳಿಯುವಂತಹ ಸನ್ನಿವೇಶ ಇರುತ್ತದೆ. ಅವಳಿಗೆ ಮಡಿಲಕ್ಕಿ ಕಟ್ಟುವುದಿಲ್ಲ. ಹೀಗೆ ಹತ್ತಾರು ಅರ್ಥವಿಲ್ಲದ ಸಂಪ್ರದಾಯಗಳು. ಬಹಳಷ್ಟು ಸಾರಿ ಗಂಡನನ್ನು ಕಳೆದುಕೊಂಡಿರುವುದೇ ಅಲ್ಲದೆ ಇಂತಹ ಚಿಕ್ಕ ಚಿಕ್ಕ ವಿಷಯಗಳು ಖಂಡಿತ ಅವಳ ಮನಸ್ಸಿಗೆ ನೋವನ್ನುಂಟು ಮಾಡುತ್ತವೆ. ಈ ಭೇದ ಭಾವ ಮಾಡುವವರೂ ಹೆಂಗಸರೇ.

ಮುಗ್ಧ ಮುದುಕಿಯ ಮಾತಿನ ಸರಳತನ

ಪ್ರೊಫೆಸರ್‌ ಕೃಷ್ಣೇಗೌಡರು ಅನೇಕ ಬಾರಿ ಈ ಪ್ರಸಂಗವನ್ನು ತಮ್ಮ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಅವರು ಹಳ್ಳಿಯ ಒಬ್ಬ ಮುದುಕಿಯನ್ನು ಮಾತನಾಡಿಸಿದರಂತೆ. ಅವಳು ಗಂಡನನ್ನು ಕಳೆದುಕೊಂಡು ಬಹಳ ವರ್ಷಗಳೇ ಆಗಿತ್ತಂತೆ. ಇವರು ಅವಳನ್ನು, “ಅಜ್ಜಿ, ಅಜ್ಜಾ ಹೋಗಿ ಎಷ್ಟು ವರ್ಷಾಯ್ತು,” ಅಂತ ಕೇಳಿದ್ದಕ್ಕೆ, “ಹತ್ತು ವರ್ಷಗಳಾಯ್ತು,” ಅಂದಳಂತೆ.

“ನಿಂಗೆ ಬೇಜಾರಾಗಲ್ವಾ ಅಜ್ಜ ಇಲ್ದೇ ಇರೋದು,” ಅಂದರೆ ಅದಕ್ಕೆ ಅವಳು, “ಅವನ ಭೂಮಿ ಋಣ ತೀರ್ತು, ಅವ ಹೋದ. ನಂದಿನ್ನೂ ಇದೆ, ಇದ್ದೀನಿ. ಬೇಜಾರು ಯಾಕೆ? ನಾನೂ ಒಂದಿನ ಹೋಗೋದೇ?” ಅಂದಳಂತೆ. ನಿಜಕ್ಕೂ ಅವಳ ಮಾತಿನಲ್ಲಿ ಎಂತಹ ಸತ್ಯ ಅಡಗಿದೆ ಅಲ್ಲವೇ, ಅವರವರ ಸರತಿ ಬಂದಾಗ ಅವರು ಹೋಗಲೇಬೇಕಲ್ಲವೇ? ಅದನ್ನು ಆ ಮುಗ್ಧ ಮುದುಕಿ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ಯಾವ ಪ್ರಯೋಜನವಿಲ್ಲದಿದ್ದರೂ, ಏನನ್ನು ಬದಲಾಯಿಸಲಾಗದಿದ್ದರೂ ವಿದ್ಯಾವಂತರು, ಬುದ್ಧಿವಂತರು ಎನಿಸಿಕೊಂಡ ನಾವು  ಕೊರಗುತ್ತೇವೆ. ಆದರೆ ಆ ಮುಗ್ಧ ಮುದುಕಿ ಜೀವನವನ್ನು ಅರ್ಥ ಮಾಡಿಕೊಂಡಿರುವುದನ್ನು ಕಂಡಾಗ ನಿಜಕ್ಕೂ ಜೀವನದ ಸತ್ಯಗಳನ್ನು ಅರಗಿಸಿ ಕೊಳ್ಳಲು ಸತ್ವ ಬೇಕು ಎನ್ನಿಸುವುದುಂಟು.

ಮೃತ್ಯು ಸಮೀಪಿಸಿದಾಗ……

ಉತ್ತರ ಭಾರತದಲ್ಲಿ ಸಾವು ಹತ್ತಿರ ಬಂದಾಗ ಅವರನ್ನು ಕಾಶಿಯ ಮುಕ್ತಿ ಧಾಮ ಎನ್ನುವ ಕಡೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಾರಂತೆ. ಕಾಶಿಯಲ್ಲಿ ಸತ್ತರೆ ಸ್ವರ್ಗ ಎನ್ನುವುದು ಅವರ ನಂಬಿಕೆ. ಇತ್ತೀಚೆಗೆ ಕಾಶಿಯಲ್ಲಿ ಇಪ್ಪತ್ತು ದಿನ ಇದ್ದು ಬಂದರೆ ಅವರಿಗೆ ಸ್ವರ್ಗ ಗ್ಯಾರಂಟಿ ಎನ್ನುವ ಮಾತು (ಪುಕಾರು) ಕೇಳಿ ಬರುತ್ತಿದೆ, ಹೀಗಾಗಿ ಕಾಶಿಗೆ ಹೋಗುವವರ ದೌಡು ಮತ್ತೂ ಹೆಚ್ಚಾಗಿದೆ. ಸಾವನ್ನು ಗೆದ್ದವರು ಯಾರೂ ಇಲ್ಲ. ಹುಟ್ಟಿದವರು ಒಂದು ದಿನ ಸಾಯಲೇಬೇಕು, ಅದು ಮೊದಲೇ ನಿರ್ಧಾರವಾಗಿರುತ್ತದೆ. ನಾವು ಅದನ್ನು ಮರೆತು ಬಿಡುತ್ತೇವೆ. ಆದರೆ  ಅದು ನಮ್ಮನ್ನು ಮರೆಯಲು ಬಿಡುವುದಿಲ್ಲ. ಭಯೋತ್ಪಾದನಾ ನಿರ್ವಹಣಾ ಸಿದ್ಧಾಂತದ ಪ್ರಕಾರ, ಹೆಚ್ಚಿನ ಸಂಖ್ಯೆಯ ಮನುಷ್ಯರಿಗೆ ಸಾವಿನ ಬಗ್ಗೆ ಅರಿವಿಲ್ಲದ ಭಯವಿರುತ್ತದೆ. ಆ ಭಯದಿಂದ ಮೂಲಭೂತ ಆತಂಕ ಮತ್ತು ಅಶಾಂತಿ ಉಂಟಾಗುತ್ತದೆ. ಅದನ್ನು ಅವು ಸಾಂಸ್ಕೃತಿಕ ಮೌಲ್ಯದಿಂದ ಹತ್ತಿಕ್ಕಲು ಪ್ರಯತ್ನಿಸುತ್ತಾನೆ. ಆದ್ದರಿಂದ ಸಾವು ಹತ್ತಿರ ಬರುತ್ತಿದ್ದಂತೆ ಮನುಷ್ಯ ದೇವರ ಮೊರೆ ಹೋಗುತ್ತಾನೆ. ಅಂತೂ ಎಲ್ಲವನ್ನೂ ಮರೆತು ಆ ದೇವರ ಮೇಲೆ ಭಾರ ಹಾಕಿಬಿಡುವುದು ನಿಜಕ್ಕೂ ಸುಲಭದ ಕೆಲಸವೇ. ಆದರೆ ಏನು ಮಾಡಿದರೂ ಯಾವ ವರ ಪಡೆದುಕೊಂಡರೂ ಹಿರಣ್ಯಕಶ್ಯಪುವಿನ ಸಾವಿನಂತೆ, ಅದನ್ನು ಮೀರಿದವರಂತೂ ಯಾರೂ ಇಲ್ಲ.

ಕ್ಷಣವೆಂದರೆ ಪೂರ್ತಿ ಕೊಲ್ಲುವುದು ಯಮ ಶೂಲ

ಕ್ಷಣನುಕ್ಷಣ ಕೊಲ್ಲುವುದು ಮೋಹ ಮಮತೆ

ಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲಣುಣುವೆ ಬಿಗಿದೋ ಮಂಕುತಿಮ್ಮ.

ಯಮನ ಶೂಲ ನಿನ್ನನು ಬಿಗಿಯಲು ಒಂದು ಕ್ಷಣ ಸಾಕು. ಆದರೆ ಮೋಹ ಮಮತೆಯೆಂಬ ಹಗ್ಗದ ಕುಣಿಕೆಯನ್ನು ಕತ್ತಿಗೆ ಹೂಡಿ ಚಿರಕಾಲ ನಿನ್ನನ್ನು ಸ್ವಲ್ಪ ಸ್ವಲ್ಪವಾಗಿ ಬಿಗಿಯುತ್ತಾ ಹೋಗುತ್ತದೆ. ಅಂದರೆ ಸಾವು ಒಂದು ಕ್ಷಣವಷ್ಟೇ, ಆದರೆ ಜೀವಿಸುವಾಗ ಸ್ವಲ್ಪ ಸ್ವಲ್ಪ ನೀನು ಸಾಯುತ್ತಲೇ ಇರುತ್ತೀಯಾ, ಎನ್ನುತ್ತಾರೆ ಡಿ.ವಿ.ಜಿ. ಆದರೂ ಸಾವೆನ್ನುವುದನ್ನು ಯಾರೂ ತಡೆಯಲಾಗದಿದ್ದರೂ ಮನುಷ್ಯ ಒದ್ದಾಡಿಕೊಂಡು, ಕಷ್ಟಪಟ್ಟುಕೊಂಡು ಬದುಕುತ್ತಾನೆಯೇ ಹೊರತು ಸಾಯಲು ಭಯಪಡುತ್ತಾನೆ. ಏಕೆಂದರೆ ಅಲ್ಲಿರುವ ಲೋಕದ ಅರಿವು ನಮಗಿಲ್ಲ, ಅಲ್ಲವೇ?

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ