ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಸಂಭವಿಸಿರುವ ಬಾಣಂತಿಯರು , ಶಿಶುಗಳ ಸಾವು ವಿಚಾರದ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್‌. ಪಾಟೀಲ್ ತಿಳಿಸಿದ್ದಾರೆ.

ವಿಧಾನಪರಿಷತ್‌ನ ಕಲಾಪದಲ್ಲಿ ಸದಸ್ಯ ಎನ್‌.ನಾಗರಾಜ್‌ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಬೆಳಗಾವಿ ಪ್ರಕರಣದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಸಮಗ್ರ ವರದಿ ಸಲ್ಲಿಸಲು ತಿಳಿಸಿದ್ದೇನೆ ಎಂದರು.

ನಮ್ಮ ರಾಜ್ಯದಲ್ಲಿ ಬಾಣಂತಿಯರು/ಶಿಶುಗಳ ಮರಣ ಪ್ರಮಾಣ 7.97 ಆವರೇಜ್ ಇದೆ. ಬೆಳಗಾವಿಯಲ್ಲಿ 7.72 ರಷ್ಟಿದೆ. ಈ ಕುರಿತು ಮಾಹಿತಿ ನೀಡುತ್ತೇನೆ ಎಂದರು.

ವಿವಿಧ ಕಾರಣಗಳ ಬಗ್ಗೆ ತನಿಖೆ: ಬೆಳಗಾವಿ ಬಿಮ್ಸ್ ಗೆ ದೂರದ ಊರು, ಗ್ರಾಮಗಳಿಂದ ಜನರು ಬರುತ್ತಾರೆ. ಹೈ ರಿಸ್ಕ್ ಪ್ರೆಗ್ನೆನ್ಸಿಸ್ ಕೂಡ ಇರುತ್ತವೆ. ಈ ಮರಣಗಳಿಗೆ ಸಾಕಷ್ಟು ಕಾರಣಗಳಿವೆ.  ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಕೂಡ ಎಲ್ಲಾ ಆಸ್ಪತ್ರೆಗಳ ಬಗ್ಗೆ ಪರಿಶೀಲಿಸುತ್ತಿದೆ. ಈ ಆಸ್ಪತ್ರೆಗೆ ಪ್ಲಾಟಿನಮ್ ಅವಾರ್ಡ್ ಕೂಡ ಬಂದಿದೆ. ಇಲ್ಲಿ ಸಿಬ್ಬಂದಿ ಕೊರತೆ ಅಥವಾ ವೈದ್ಯರ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಈ ಹಿಂದಿನ ಅವಧಿಯಲ್ಲಿ ನಾನು ಸಚಿವನಾಗಿದ್ದದಾಗ ಈ ಕಟ್ಟಡ ಪೂರ್ಣವಾಗಿರಲಿಲ್ಲ. ಈಗ ನಾನು ಮತ್ತೆ ಇದೇ ಖಾತೆ ವಹಿಸಿಕೊಂಡ ನಂತರ ಆ ಕಟ್ಟಡ ಪೂರ್ಣಗೊಳಿಸಿ ಅಗತ್ಯವಾದ  ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಿದ್ದೇನೆ ಎಂದು ತಿಳಿಸಿದರು.

ಕಾರ್ಯ ಪ್ರಗತಿಯಲ್ಲಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆ ಆರಂಭವಾಗಿದೆ. ಎಲ್ಲರಿಗೂ ಸೂಕ್ತ ಆರೋಗ್ಯ ಸೇವೆ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಎಂಟು ಜನ ಸೂಪರ್ ಸ್ಪೆಷಾಲಿಸ್ಟ್‌ಗಳು ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಟ್ಟಡ ಸೋರುತ್ತಿರುವ ಬಗ್ಗೆ ಖುದ್ದಾಗಿ ಪರಿಶೀಲಿಸುತ್ತೇನೆ  ಎಂದರು.

ದಿನಾಂಕ ಮುಗಿದ ಔಷಧ ಬಳಸುತ್ತಿಲ್ಲ: ದಿನಾಂಕ ಮುಗಿದ ಔಷಧ ವಿತರಿಸುತ್ತಿರುವ ಬಗ್ಗೆ ಲೋಕಾಯುಕ್ತದಿಂದ ಯಾವುದೇ ವರದಿ ಬಂದಿಲ್ಲ. ಹಾಗೇನಾದರೂ ಇದ್ದರೆ ಅದನ್ನ ಬಳಕೆ ಮಾಡುತ್ತಿಲ್ಲ. ಈ ಕುರಿತು ಲೋಕಾಯುಕ್ತಕ್ಕೂ ಮಾಹಿತಿ ಕೊಟ್ಟಿದ್ದೇವೆ ಎಂದು ಸಚಿವ  ವಿವರಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ