ಕೋವಿಡ್ ಹಾವಳಿ ನಂತರ ಹೊಸ ವರ್ಷದ ಸಂಭ್ರಮಾಚರಣೆಗೆ ಹೊಸ ವ್ಯಾಖ್ಯಾನ ಬಂದಿದೆ ಎಂದೇ ಹೇಳಬಹುದು. ಈಗೆಲ್ಲಾ 10 ವರ್ಷಕ್ಕೆ ಮೀರಿದ ಯಾವುದೇ ಬಗೆಯ ಪ್ಲಾನಿಂಗ್ ಗೂ ಯಾರೂ ಮುಂದಾಗುವುದಿಲ್ಲ. ಏಕೆಂದರೆ ಜೀವನ ಮುಂದೆ ಹೇಗೋ ಏನೋ ಎಂಬಂತಾಗಿಬಿಟ್ಟಿದೆ. ಹಣ, ಶಕ್ತಿ ಇದ್ದರೂ ಜನ ತಮ್ಮ ಪ್ರಿಯ ಬಾಂಧವರನ್ನು ಬೇಕಾದಷ್ಟು ಕಳೆದುಕೊಂಡಿದ್ದಾರೆ. ಹೀಗಾಗಿ ಕೊರೋನಾ ಎಲ್ಲರಿಗೂ ನಿಜ ಅರ್ಥದಲ್ಲಿ `ಆರೋಗ್ಯವೇ ಭಾಗ್ಯ’ ಎಂಬುದನ್ನು ಕಲಿಸಿದೆ! ಹೊಸ ವರ್ಷದ ಈ ಸಂದರ್ಭದಲ್ಲಿ ಜನ ಈ ಕೆಳಗಿನ ಸಲಹೆ ಅಗತ್ಯ ಪಾಲಿಸಬೇಕೆಂದು ತಜ್ಞರು ಸೂಚಿಸುತ್ತಾರೆ :
ನಿಮ್ಮ ದೇಹ ತೂಕ ಸದಾ ನಿಯಂತ್ರಣದಲ್ಲಿರಲಿ. ಅದು ಖಂಡಿತಾ ಹೆಚ್ಚದಂತೆ ನೋಡಿಕೊಳ್ಳಿ. ಇದಕ್ಕಾಗಿ ನೀವು ಹೆಚ್ಚುವರಿ ಕ್ಯಾಲೋರಿಗಳಿಂದ ದೂರ ಇರಿ. ನಿಯಮಿತ ರೂಪದಲ್ಲಿ ವ್ಯಾಯಾಮ ಮಾಡಿ. ಲಿಫ್ಟ್ ಬದಲು ಮೆಟ್ಟಿಲು ಏರಿ ಇಳಿಯಿರಿ. ಪ್ಯಾಸಿವ್ ಸ್ಮೋಕಿಂಗ್ ಎಷ್ಟು ಹಾನಿಕಾರಕವೇ, ಸದಾ ಕುಳಿತು ಕೆಲಸ ಮಾಡುವುದೂ ಅಷ್ಟೇ ಹಾನಿಕರ. ಇದು ಹೃದ್ರೋಗಕ್ಕೆ ದಾರಿ ಮಾಡುತ್ತದೆ. ಹೊಗೆ ಮಧ್ಯೆ ಸಿಕ್ಕಿಕೊಂಡಂತೆಯೇ, ಸದಾ ಕುಳಿತು, ಸೋಮಾರಿತನದಿಂದ ಮಲಗಿರುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಹೀಗಾಗಿ ಕೈಲಾದ ವಾಕಿಂಗ್, ಜಾಗಿಂಗ್, ಯೋಗ ಮಾಡುತ್ತಿರಿ.
ಆದಷ್ಟೂ ಪ್ಯಾಕ್ಡ್ ಫುಡ್ ಸೇವನೆ ನಿಲ್ಲಿಸಿ ಬಿಡಿ. ಸದಾ ಪೌಷ್ಟಿಕ ಆಹಾರ ಸೇವಿಸಿ. ನಿಮ್ಮ ದೈನಂದಿನ ಆಹಾರದಲ್ಲಿ ಧಾರಾಳ ಹಸಿ ತರಕಾರಿ, ಸೊಪ್ಪು, ಮೊಳಕೆಕಾಳು ಇರಲಿ. ಉಪ್ಪು, ಸಕ್ಕರೆ ಕಡಿಮೆ ಇರಲಿ.
ಆಹಾರದ ಮೇಲೆ ನಿಯಂತ್ರಣ ಹೊಂದಿರುವಂತೆಯೇ ವ್ಯಾಯಾಮದ ಕಡೆಗೂ ನಿಗಾ ಇರಲಿ. ಅತಿಯಾದರೆ ಯಾವುದೂ ಒಳ್ಳೆಯದಲ್ಲ, ಜಿಮ್ ಗೂ ಈ ಮಾತು ಅನ್ವಯಿಸುತ್ತದೆ. ಕನ್ನಡದ ಯುವ ನಟರು ಪ್ರಾಣ ಹಾನಿ ತಂದುಕೊಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಿ. ಯುವಜನತೆ ಸದಾ ತಮ್ಮ ಸ್ಟ್ರಾಂಗ್ ಬಾಡಿ, 6 ಪ್ಯಾಕ್ಸ್ ಮೇಂಟೇನ್ ಮಾಡಲು ಸ್ಟೆರಾಯ್ಡ್ಸ್ ಗೆ ಮೊರೆಹೋಗುವುದುಂಟು. ಇಂಥದ್ದರಿಂದ ದೂರ ಇರಿ.
ಮಕ್ಕಳನ್ನು ಆದಷ್ಟೂ ಡಿಜಿಟಲ್ ಲೋಕದಿಂದ ದೂರವಿಡಿ. ಅವರು ಹೆಚ್ಚಿನ ಆಟೋಟ, ವ್ಯಾಯಾಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ. ಮುಖ್ಯವಾಗಿ ಹೊರಾಂಗಣ ಕ್ರೀಡೆಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಲಿ. ಇದರಿಂದ ಸದೃಢ ದೇಹದೊಂದಿಗೆ, ಸಹನಶೀಲತೆ, ಒಗ್ಗಟ್ಟು, ಕಷ್ಟಸಹಿಷ್ಣತೆ ಇತ್ಯಾದಿ ಗುಣಗಳು ಮೈಗೂಡುತ್ತವೆ.
ನಿಮ್ಮ ಜೀವನಶೈಲಿಯಲ್ಲಿ ಈ ಬದಲಾವಣೆ ತಂದುಕೊಳ್ಳುವುದರೊಂದಿಗೆ ಉತ್ತಮ ನಿದ್ದೆಗೂ ಪ್ರಾಶಸ್ತ್ಯ ಕೊಡಿ. ದೀರ್ಘಕಾಲದ ನಿದ್ದೆಗಿಂತ ಆಳವಾದ ನಿದ್ದೆ ಮುಖ್ಯ. ಮಲಗುವ ಮುನ್ನ ಟಿವಿ, ಮೊಬೈಲ್ ಗಳಿಂದ ದೂರವಿರಿ. ಇದು ನಿಮ್ಮ ಜೈವಿಕ ಸರ್ಕ್ಯಾಡಿಯನ್ ರಿದಮ್ ನ್ನು ಏರುಪೇರು ಮಾಡುತ್ತದೆ. ಸದೃಢ ಆರೋಗ್ಯ ಹೊಂದಲು ನಿದ್ದೆ ಬಲು ಪೂರಕ. ಮಧ್ಯಾಹ್ನದ ಅರ್ಧ ಗಂಟೆ ಕಿರು ನಿದ್ದೆ ಓಕೆ, ಆದರೆ ಇದು 2-3 ಗಂಟೆಗಳ ನಿದ್ದೆ ಆಗಬಾರದು. ಅದು ಹೃದಯಕ್ಕೆ ಮತ್ತೊಂದು ಹಾನಿ ಮಾಡೀತು.
ನಿಮ್ಮ ವಯಸ್ಸಿಗೆ ತಕ್ಕಂತೆ ಅದಕ್ಕೆ ಪೂರಕ ವ್ಯಾಯಾಮ ಮಾಡಬೇಕು. ಬೇರೆ ಬೇರೆ ವಯಸ್ಸಿನವರಿಗೆ ಇದು ಭಿನ್ನವಾಗಿರುತ್ತದೆ. ಮಂಡಿ ನೋವು ಇರುವವರು ಜಾಗಿಂಗ್, ಟ್ರೆಡ್ ಮಿಲ್ ಮುಂತಾದ್ದು ಮಾಡಬಾರದು. ಈಜು, ಸೈಕಲ್ ಇವರಿಗೆ ಬೆಟರ್.
ನೀವು ಸದಾ ಹೈ ಸ್ಪೀಡ್ ವ್ಯಾಯಾಮಗಳನ್ನಷ್ಟೇ ಮಾಡಬೇಕು ಅಂತೇನಿಲ್ಲ. ಮಧ್ಯಮ ವೇಗದ ವ್ಯಾಯಾಮ ಮಾಡುತ್ತಾ, ನಿಮ್ಮ ಟೆನ್ಶನ್ ದೂರಗೊಳಿಸಿ.
ವಿಟಮಿನ್ ಬಿ, ಸಿ, ಮುಂತಾದವುಗಳ ಕೊರತೆ ಕಾಡುತ್ತಿಲ್ಲ ತಾನೇ ಎಂದು ನಿಮ್ಮ ಬ್ಲಡ್ ಟೆಸ್ಟ್ ನಿಂದ ತಿಳಿಯಿರಿ. ಕಬ್ಬಿಣಾಂಶದ ಕೊರತೆ ಕಾಡದಂತೆ ಎಚ್ಚರವಹಿಸಿ. ಯುವತಿಯರಂತೆಯೇ ಪ್ರೌಢ ಮಹಿಳೆಯರಿಗೂ ಸಹ ವಿಟಮಿನ್, ಐರನ್ ಕೊರತೆ ಮಾಮೂಲಿ. ಸಂಪೂರ್ಣ ಆರೋಗ್ಯ ಬಲು ಮುಖ್ಯ, ಅದರಲ್ಲೂ ಹೃದ್ರೋಗ ಕಾಡದಂತಿರಲು ಬೇಕಾದ ಎಲ್ಲಾ ಎಚ್ಚರಿಕೆಯ ಕ್ರಮಗಳನ್ನೂ ಅನುಸರಿಸಿ.
ಬಿಪಿ, ಶುಗರ್, ಕೊಲೆಸ್ಟ್ರಾಲ್ ಗಳ ಕಾಟ ಇಲ್ಲದಿದ್ದರೂ ದೇಹ ತೂಕ ಹೆಚ್ಚುವುದರಿಂದ ಹೃದ್ರೋಗದ ಅಪಾಯ 25%ರವರೆಗೂ ಹೆಚ್ಚುತ್ತದೆ. ಸ್ಥೂಲತೆಯ ಜೊತೆ ಈ ರೋಗಗಳು ಬೆರೆತರೆ ಹೃದಯಾಘಾತ, ಸ್ಟ್ರೋಕ್ ಕಟ್ಟಿಟ್ಟ ಬುತ್ತಿ. ಇನ್ ಸುಲಿನ್ ಹಂತದ ನಂತರ ಹೈ ಶುಗರ್ ಲೆವೆಲ್ ತಗ್ಗದಿದ್ದರೆ ಕಿಡ್ನಿ, ಕಣ್ಣು ಅಥವಾ ಹೃದಯ ಏಕ್ ದಂ ನಿಂತೇ ಹೋಗುತ್ತದೆ.
ಹಾರ್ಟ್ ಅಟ್ಯಾಕಿಗೆ ಮುಖ್ಯ ಕಾರಣ ಧೂಮಪಾನ, ಮದ್ಯಪಾನಗಳು. ಸಿಗರೇಟ್ ನಲ್ಲಿನ ಕೆಮಿಕಲ್ಸ್ ಶ್ವಾಸಕೋಶ ನಾಶಪಡಿಸಿದರೆ, ಕುಡಿತದ ಚಟ ಕರುಳನ್ನು ಸುಟ್ಟು, ವ್ಯಕ್ತಿಯ ನರಗಳ ಸಂಪೂರ್ಣ ಹಾನಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಗರ್ಭವತಿಯರು ಇದರ ಕಡೆ ಸುಳಿಯಲೇಬಾರದು!
ಪ್ರೊಸೆಸ್ಡ್ ಫುಡ್, ಜಂಕ್‌ಫುಡ್, ಫಾಸ್ಟ್ ಫುಡ್, ಲೈಟ್ ಶುಗರ್ ಸಾಲ್ಟ್……. ಇವನ್ನು ದೂರವಿಟ್ಟಷ್ಟೂ ನಿಮ್ಮ ಆರೋಗ್ಯ ನಳನಳಿಸುತ್ತದೆ. ಪ್ರೌಢ ವಯಸ್ಸು ಸಮೀಪಿಸಿದಂತೆ, ಕಾರ್ಡಿಯೋ ವ್ಯಾಸ್ಕ್ಯುಲರ್ ರಿಸ್ಕ್ ತಗ್ಗಿಸಲು, ಬಾಲ್ಯದಿಂದಲೇ ಶಿಸ್ತಾಗಿ ಕೆಲವು ಕ್ರಮ ಅಳವಡಿಸಿಕೊಂಡು ಮುಂದುವರಿಸಬೇಕು. ಜಿಹ್ವಾ ಚಾಪಲ್ಯ ತಗ್ಗಿಸಿ, 15 ದಿನಗಳಿಗೊಮ್ಮೆ ಕೇವಲ ದ್ರವಾಹಾರ ಸೇವಿಸಿ ದೇಹದಂಡನೆಗೆ ಸಿದ್ಧವಿರಬೇಕು. ಹೊಸ ವರ್ಷದ ಈ ಸಂದರ್ಭದಲ್ಲಿ ಕೇವಲ ನಾಲಿಗೆಯ ರುಚಿಗಷ್ಟೇ ಮಹತ್ವ ಕೊಡುತ್ತೀರೋ ಅಥವಾ ಇಡೀ ದೇಹದ ಆರೋಗ್ಯ ಮುಖ್ಯವೋ ಎಂದು ನೀವೆ ನಿರ್ಧರಿಸಿ!
– ಜಿ. ಸುಮಾ