ಅಲಿಜೇಹ್ಅಗ್ನಿಹೋತ್ರಿ

ಬಾಲಿವುಡ್‌ ನ ಬ್ಯಾಡ್‌ ಬಾಯ್‌ ಸಲ್ಮಾನ್‌ ಖಾನ್‌ ನ ಹತ್ತಿರದ ನೆಂಟಳಾದ, ನಟ ಅತುಲ್ ‌ಅಗ್ನಿಹೋತ್ರಿ  ಅಲ್ವೀರಾರ ಮಗಳಾದ ಅಲಿಜೇಹ್‌ ಅಗ್ನಿಹೋತ್ರಿ, ನಿರ್ದೇಶಕ ಸೋಮೇಂದ್ರ ಪಾಧಿಯವರ `ಫರ್ರೇ’ ಚಿತ್ರದ ಮೂಲಕ ಬಾಲಿವುಡ್‌ ಗೆ ಎಂಟ್ರಿ ಪಡೆದಿದ್ದಾಳೆ. ಸಲ್ಮಾನ್‌ ನದೇ ಪ್ರೊಡಕ್ಷನ್‌ ಆದ ಈ ಚಿತ್ರದಲ್ಲಿ, ಕಾಲೇಜು ಕಲಿಯುತ್ತಿರುವ 4 ಫ್ರೆಂಡ್ಸ್ ಕುರಿತ ಕಥೆ ಇದೆ. ಮುಂಬೈನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಈಕೆ, ನಂತರ ಲಂಡನ್‌ ನಲ್ಲಿ ಡಿಗ್ರಿ ಪಡೆದಳಂತೆ.

ಈಕೆ ನಟನೆಗೆ ಬರುವ ಮುನ್ನ ಕೆರಿಯರ್‌ ಬಗ್ಗೆ ಬೇರೆ ಯೋಚನೆ ಮಾಡಿದ್ದಳೇ? ಮೊದಲಿನಿಂದಲೂ ನಟನೆ ಕಡೆಗೇ ಮನಸ್ಸಿತ್ತೇ…? `ಫರ್ರೇ’ ಚಿತ್ರಕ್ಕಾಗಿ ಏನೆಲ್ಲ ತಯಾರಿ ನಡೆಸಿದ್ದಳು? ಇವನ್ನು ಅವಳಿಂದಲೇ ಕೇಳಿ ತಿಳಿಯೋಣವೇ….? :

ಇತ್ತೀಚೆಗೆ ಬಿಡುಗಡೆಯಾದ ನಿನ್ನ `ಫರ್ರೇಚಿತ್ರದಲ್ಲಿ ದೊಡ್ಡ ಬೆಳ್ಳಿ ತೆರೆ ಮೇಲೆ ನಿನ್ನನ್ನು ಕಂಡು ನಿನಗೆ ಹೇಗನ್ನಿಸಿತು?

ಬಹಳ ಥ್ರಿಲ್ಲಿಂಗ್‌ ಆಗಿತ್ತು! ಒಂದು ಕಡೆ ಅತಿಯಾದ ಖುಷಿ, ಮತ್ತೊಂದು ಕಡೆ ಪುಕಪುಕ ಎಂಬ ಭಯ. ಈ ಚಿತ್ರ ಖಂಡಿತಾ ಸಕ್ಸೆಸ್ ಆಗುತ್ತೆ ತಾನೇ ಎಂಬ ಟೆನ್ಶನ್‌ ಪ್ರತಿ ತಾರೆಗೂ ಇದ್ದೇ ಇರುತ್ತದೆ. ನಾವೆಲ್ಲ ಈ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದೇವೆ. ಶೂಟಿಂಗ್‌ ನಲ್ಲಿ ಅಷ್ಟೊಂದು ಗಾಬರಿ ಆಗಿರಲಿಲ್ಲ, ಆದರೆ ರಿಲೀಸ್‌ ದಿನ ಎಲ್ಲಿಲ್ಲದ ಟೆನ್ಶನ್‌! ಇದಕ್ಕಾಗಿ ಮಾಡಲಾದ ಪ್ರಮೋಶನ್ಸ್ ಗಮನಿಸಿ ಎಷ್ಟೋ ಸಮಾಧಾನವಾಯಿತು. ಚಿತ್ರ ಹೇಗಿತ್ತು ಅಂತ ನಿಮ್ಮಂಥವರು ಹೇಳಬೇಕಷ್ಟೆ.

AlizehXFarrey_Cast_02-11-230239

ಸಲ್ಮಾನ್ ಕ್ಲೋಸ್ನೆಂಟಳಾದ್ದರಿಂದ ನಿನಗಾದ ಲಾಭ ನಷ್ಟಗಳೇನು?

ಅಂಥ ದೊಡ್ಡ ಸ್ಟಾರ್‌ ನ ನೆಂಟಳೆಂದು, ಮೊದಲ ಚಿತ್ರವಾದ್ದರಿಂದ ನನ್ನ ತಪ್ಪುಗಳನ್ನು ಬೇಗ ಕ್ಷಮಿಸುತ್ತಾರೆಂಬುದು ಗೊತ್ತಿತ್ತು. ಜೊತೆಗೆ ಬಾಲಿವುಡ್‌ ನಲ್ಲಿ ಒಳ್ಳೆಯ ವೆಲ್ ‌ಕಂ ಸಿಕ್ಕಿತು. ಸಹಜವಾಗಿಯೇ ಜನ ನನ್ನಿಂದ ಬಹುವಾಗಿ ನಿರೀಕ್ಷಿಸುತ್ತಾರೆ, ನೋಡೋಣ…. ಅದೆಷ್ಟು ನಿಜ ಆಗಿದೆ ಅಂತ!

ನಿನ್ನ ತಂದೆ ಅತುಲ್ ಅಗ್ನಿಹೋತ್ರಿ ಉತ್ತಮ ನಟರೆಂದು ಹೆಸರು ಗಳಿಸಿದ್ದರು. ಆದರೆ ಅವರು ಬಹುಕಾಲ ಬಾಲಿವುಡ್ನಲ್ಲಿ ಇರಲಿಲ್ಲ, ಆದರೂ ಬಲು ಜನಪ್ರಿಯತೆ ಗಳಿಸಿದ್ದರು. ಹೀಗಿರುವಾಗ ಅವರು ನಿನಗೇನು ಸಲಹೆ ನೀಡಿದರು?

ನನ್ನ ಡ್ಯಾಡಿ ಬಗ್ಗೆ ನೆನಪಿಸಿಕೊಂಡು ಕೇಳಿದ್ದಕ್ಕೆ ನನಗೆ ಬಹಳ ಹೆಮ್ಮೆ ಆಗುತ್ತಿದೆ, ಥ್ಯಾಂಕ್ಸ್! ಅವರು ತಮ್ಮ ಕೆರಿಯರ್‌ ಶುರು ಮಾಡಿದಾಗ, ಹಣಕ್ಕಾಗಿಯೇ ಅದನ್ನು ಮಾಡಿದ್ದಂತೆ. ಹೀಗಾಗಿ ಆರಂಭದ ಚಿತ್ರಗಳಲ್ಲಿ ಅವರು ತಮ್ಮ 100% ಕೊಡಲು ಆಗಿರಲಿಲ್ಲವಂತೆ. ಆದರೆ ಇಂದಿನ ದಿನಗಳಲ್ಲಿ ಪರಿಸ್ಥಿತಿ ಎಷ್ಟೋ ಸುಧಾರಿಸಿದೆ, ಹೀಗಾಗಿ ನಾನು ನನ್ನ ಪೂರ್ತಿ ಗಮನವನ್ನು ಅತ್ಯುತ್ತಮ ನಟನೆಗಾಗಿಯೇ ಸಮರ್ಪಿತ ಗೊಳಿಸಿದ್ದೇನೆ. ನಾನು ಉತ್ತಮ ನಟಿ ಎಂದು ಗುರುತಿಸಲ್ಪಟ್ಟರೆ, ನನ್ನನ್ನು ತಿದ್ದಿ ತೀಡಿದ ಶ್ರೇಯಸ್ಸು ನನ್ನ ತಂದೆಗೇ ಸಲ್ಲಬೇಕು!…..

ಹಾಗೇ ಸಲ್ಮಾನ್ಖಾನ್ಏನೆಂದು ಸಲಹೆ ನೀಡಿದರು?

ಸಲ್ಲು ಮಾಮಾ ಹೇಳಿದ್ದೇನೆಂದರೆ…. ನಮ್ಮ ಜೀವನದಲ್ಲಿ ಖುಷಿ ದುಃಖ ಏನೇ ಇರಲಿ, ಅದು ನಮ್ಮ ಪ್ರೊಫೆಶನಲ್ ಮೇಲೆ ಪ್ರಭಾವ ಬೀರಬಾರದು. ನಮ್ಮ ಕೈ ಮೀರಿ ನಟನೆಯಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ಕೆರಿಯರ್‌ ಗ್ರಾಫ್‌ ಮೇಲೇರಲು ಸಾಧ್ಯ. ವೀಕ್ಷಕರಿಗೆ ನಟನಟಿಯರ ಪರ್ಸನಲ್ ಲೈಫ್‌ ಕಟ್ಟಿಕೊಂಡು ಏನೂ ಆಗಬೇಕಿಲ್ಲ. ಇವರ ಆ್ಯಕ್ಟಿಂಗ್‌ ಹೇಗಿದೆ ಎಂದಷ್ಟೇ ಗಮನಿಸುತ್ತಾರೆ. ನಿನ್ನಲ್ಲಿ ನಿಜವಾಗಿ ಪ್ರತಿಭೆ ಇದ್ದು, ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ, ವಿಶ್ವದ ಯಾವ ಶಕ್ತಿಯೂ ನಿನ್ನ ಪ್ರಗತಿ ತಡೆಯಲು ಸಾಧ್ಯವಿಲ್ಲ, ಯಶಸ್ಸಿಗೆ ಇದೊಂದೇ ಸೂತ್ರ, ಎಂದರು.

ಚಿತ್ರದಲ್ಲಿ ಇಂದಿನ ಆಧುನಿಕ ಯುವಜನತೆ ಪರೀಕ್ಷೆಯಲ್ಲಿ ಕಾಪಿ ಮಾಡಲು ಬಗೆಬಗೆಯ ವಿಧಾನ ಅನುಸರಿಸಬೇಕು ಅಂತಿದೆ. ಇದು ಎಷ್ಟರ ಮಟ್ಟಿಗೆ ಸರಿ?

ಅಷ್ಟೆಲ್ಲ ವಿಮರ್ಶೆ ಮಾಡುವಷ್ಟು ನಾನಿನ್ನೂ ಬೆಳೆದಿಲ್ಲ, ಇದು ನಿರ್ದೇಶಕರ ಅಭಿಪ್ರಾಯ, ಅವರ ಮಾತಿನಂತೆ ನಟಿಸಿದ್ದೇನೆ ಅಷ್ಟೆ. ಇದಕ್ಕೆ ಅವರೇ ಸ್ಪಷ್ಟೀಕರಣ ನೀಡಬೇಕಷ್ಟೆ. ಆದರೆ ವಿದ್ಯಾರ್ಥಿ ಜೀವನದಲ್ಲಿ ಭಯದ ಕಾರಣ ನಾನೆಂದೂ ಕಾಪಿ ಮಾಡಲು ಹೋಗಲೇ ಇಲ್ಲ ಎಂದು ಹೇಳಬಲ್ಲೆ.

ಮೊದಲಿನಿಂದಲೂ ಚಿತ್ರ ನಟನೆಯೇ ನಿನ್ನ ಕೆರಿಯರ್ಆಗಲಿ ಎಂದು ಬಯಸಿದ್ದೆಯಾ?

ಇಲ್ಲ…. ಇಲ್ಲ! ನಾನು ಮೊದಲಿನಿಂದಲೇ ಡೈರೆಕ್ಟರ್‌ ಅಥವಾ ಎಡಿಟಿಂಗ್‌ ಲೈನ್‌ ನಲ್ಲಿ ಕ್ಯಾಮೆರಾ ಹಿಂದೆ ಟೆಕ್ನಿಕ್‌ ಕೆಲಸ ಮಾಡಬಯಸಿದ್ದೆ. ಫೋಟೋಗ್ರಫಿಯ ಹವ್ಯಾಸ ಬಹಳ ಇದೆ. ಆದರೆ ನಂತರ ಮಾಮನ ಸಲಹೆಯಂತೆ ನಾನು ನಟನೆ ಕಡೆ ವಾಲತೊಡಗಿದೆ. ಇದಕ್ಕಾಗಿ ನಾನು ಹಲವಾರು ವರ್ಕ್‌ ಶಾಪ್‌ ಅಟೆಂಡ್‌ ಮಾಡಿದ್ದೇನೆ. ಅನೇಕ ತರಹದ ರೀಲ್ಸ್ ಮಾಡಿದೆ, ಈ `ಫರ್ರೇ’ ಚಿತ್ರಕ್ಕಾಗಿ ಆಡಿಶನಲ್ ಸಹ ಪಾಸ್‌ ಆದೆ. ನಂತರವೇ ಅವಕಾಶ ಸಿಕ್ಕಿದ್ದು. ಮೊದಲು ಇದು OTT ಚಿತ್ರ ಅಂತ ಆಗಿತ್ತು. ನಂತರ ಮಾಮಾ ಬೇಡ ಅಂತ ಥಿಯೇಟರ್‌ ನಲ್ಲಿ ರಿಲೀಸ್‌ ಮಾಡಿಸಿದರು.

ಯಾವ ತಾರೆಯರೇ ಇರಲಿ, ಅವರ ಮಕ್ಕಳು, ನೆಂಟರು ಹೊಸದಾಗಿ ಸಿನಿಮಾಗೆ ಬಂದರೆ ಅದನ್ನು ನ್ಯಾಪೋಟಿಸಂ, ಸ್ಟಾರ್ಕಿಡ್ಸ್ ಅಂತ ಟ್ಯಾಗ್ಮಾಡಿಬಿಡುತ್ತಾರೆ. ನೀನು ಇದಕ್ಕಾಗಿ ತಯಾರಾಗಿದ್ದೆಯಾ?

ಹೊಡೆಯುವವರ ಕೈ ತಡೆಯಬಹುದಂತೆ, ಆಡಿಕೊಳ್ಳುವವರ ಬಾಯಿ ಮುಚ್ಚಲಾದೀತೇ? ನನ್ನ ಗುರಿ ಏನಿದ್ದರೂ ಉತ್ತಮ ನಟಿ ಅನಿಸಿಕೊಳ್ಳುವುದರತ್ತ ಮಾತ್ರ ಇತ್ತು. ನನ್ನಲ್ಲೂ ಪ್ರತಿಭೆ ಇದೆ ಎಂದು ಪ್ರೂವ್ ಮಾಡಬೇಕಿತ್ತು. ಈ ರೀತಿ ಮಾಮಾ, ಅಪ್ಪನ ಹೆಸರು ಉಳಿಸಬೇಕಿತ್ತು. ನನ್ನ ಬಗ್ಗೆ ಇದುವರೆಗೂ ಯಾರೂ ಹೀಗೆ ವ್ಯಂಗ್ಯ ಆಡಿದ್ದಿಲ್ಲ, ಆ ಸಂದರ್ಭ ಬಂದಾಗ ಅವರಿಗೆ ಹೇಗೆ ಉತ್ತರ ಕೊಡಬೇಕು ಅಂತ ನನಗೆ ಚೆನ್ನಾಗಿ ಗೊತ್ತಿದೆ.

`ಫರ್ರೇಚಿತ್ರ ಒಪ್ಪಿಕೊಳ್ಳಲು ವಿಶೇಷ ಕಾರಣ…?

ಈ ಚಿತ್ರದ ಕಂಟೆಂಟ್‌ ಬಲು ಇಂಟರೆಸ್ಟಿಂಗ್‌. ಇದು ಹೈಸ್ಕೂಲ್ ‌ಜೀವನದಿಂದ ಆರಂಭಿಸಿ ಕಾಲೇಜಿನ ಹಂತದ ವಿದ್ಯಾರ್ಥಿ ಜೀವನದತ್ತ ಕೇಂದ್ರೀಕೃತವಾಗಿದೆ. ಇದರಲ್ಲಿ ನಟಿಸಲೇಬೇಕು ಅನ್ನೋದು ನನ್ನ ವೈಯಕ್ತಿಕ ಮೆಚ್ಚುಗೆ. ಜೊತೆಗೆ ಉತ್ತಮ ಡೈರೆಕ್ಟರ್, ಸಹನಟರು ಇದ್ದರು. ಇಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಇದು ಕಮರ್ಷಿಯಲ್ ಚಿತ್ರವೇ ಆದರೂ, ನನ್ನ ಪಾತ್ರವನ್ನು ಪರ್ಫೆಕ್ಟ್ ಆಗಿ ನಿಭಾಯಿಸಿದ್ದೇನೆ.

ಚಿತ್ರದ ನಾಯಕಿ ನಿಯತಿ. ಅವಳಿಗೂ ನಿನಗೂ ವ್ಯತ್ಯಾಸ ಇದೆ ಅಂತೀಯಾ?

ನಾನು ನಿಯತಿಯನ್ನು ಬಹುತೇಕ ಹೋಲುತ್ತೇನೆ. ನನ್ನ ಹತ್ತಿರದ ಫ್ರೆಂಡ್‌ ಸಹ ಇಂಥ ತರಲೆ ಪಾತ್ರದಂತೆಯೇ ಇದ್ದಾಳೆ. ಅವಳಿಗೂ ಸಹ ಗಂಡು ಹುಡುಗರ ಜೊತೆ ಹುಚ್ಚುಚ್ಚಾಗಿ ಹುಡುಗಾಟ ಅಂದ್ರೆ ಇಷ್ಟ. ನಾನೂ ಹಾಗೆಯೇ ಅಂತಿಟ್ಟುಕೊಳ್ಳಿ ಆ ಪಾತ್ರದ ಪ್ರಕಾರ, ದುಡ್ಡೇ ದೊಡ್ಡಪ್ಪ! ಇದನ್ನು ನಾನು ಒಪ್ಪುತ್ತೇನೆ, ಏಕೆಂದರೆ ಎಲ್ಲ ಕಾಲಕ್ಕೂ ಇದು ಸಲ್ಲುತ್ತದೆ. ನನ್ನ ನಟನೆ ನನ್ನ ತಂದೆಗೆ ಇಷ್ಟಾದರೆ ನಾನು ಪಾಸ್‌ ಆದಂತೆಯೇ!

ಪ್ರತಿನಿಧಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ