ಶರತ್ ಚಂದ್ರ
ಕಾಂತಾರ ಚಾಪ್ಟರ್ ಒನ್ ಬಿಡುಗಡೆಯಾದ ದಿನದಿಂದ ಗಲ್ಲ ಪೆಟ್ಟಿಗೆಯಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಗಳಿಕೆ ಮಾಡುತ್ತಿರುವುದು ನಿಮಗೆಲ್ಲ ಗೊತ್ತಿದೆ. ಬಹುಶಃ ಯಾವುದೇ ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇಷ್ಟೊಂದು ವಿಮರ್ಶೆ,ಅನಿಸಿಕೆಗಳನ್ನು ಹಾಕಿದ್ದು ಈ ಹಿಂದೆ ನಾವು ನೋಡಿಲ್ಲ.
ಚಿತ್ರಗಳನ್ನು ನೋಡಿದ ಎಲ್ಲಾ ಭಾಷೆಯ ಹೆಚ್ಚಿನ ಪ್ರೇಕ್ಷಕರು ನಮ್ಮ ದೇಶದಲ್ಲಿ ಈ ರೀತಿಯ ಚಿತ್ರ ಈ ಹಿಂದೆ ಬಂದಿಲ್ಲ, ಅದರಲ್ಲೂ ರಿಷಬ್ ಶೆಟ್ಟಿ ಅಭಿನಯ, ನಿರ್ದೇಶನದ ಕುರಿತು ಜನ ಬಹುಪರಾಕ್ ಎನ್ನುತ್ತಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಕೂಡ ಈ ಚಿತ್ರದ ವಿಶೇಷ ಪ್ರದರ್ಶನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೋಸ್ಕರ ಏರ್ಪಡಿಸಿದ್ದು ಚಿತ್ರತಂಡ ವಿಶೇಷ ಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ಕನ್ನಡ ಚಿತ್ರಕ್ಕೆ ಈ ಮನ್ನಣೆ ಸಿಕ್ಕಿದ್ದು ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವಂತ ವಿಷಯ.
ತುಳುನಾಡಿನ ಸಂಸ್ಕೃತಿಯ ಬಗ್ಗೆ ಭಕ್ತಿ ಪೂರ್ವಕವಾಗಿ ಮಾಡಿರುವಂತಹ ಕಾಂತಾರ ಚಾಪ್ಟರ್ 1 ಚಿತ್ರದ ಬಗ್ಗೆ ಇಡೀ ದೇಶವೇ ಗೌರವ ಮತ್ತು ಆದರಣೆ ನೀಡಿರುವ ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಥಿಯೇಟರ್ ಒಳಗೆ ಮತ್ತು ಹೊರಗೆ ಅನುಚಿತವಾಗಿ ವರ್ತಿಸುವುದರ ಮೂಲಕ ದೈವಾರಾಧನೆ ಮತ್ತು ತುಳುನಾಡಿನ ಸಂಸ್ಕೃತಿ ಬಗ್ಗೆ ಅಪಾರ ಗೌರವ ಹೊಂದಿರುವ ಜನರ ಮನಸ್ಸಿಗೆ ನೋವಾಗುವಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ.
ಥಿಯೇಟರ್ ಒಳಗಡೆ ದೈವ ಅವಾಹನೆಯದಂತೆ ನಟಿಸುವುದು, ಪಂಜುರ್ಲಿ, ಗುಳಿಗ ರೀತಿಯಲ್ಲಿ ವೇಶ ಹಾಕಿಕೊಂಡು ಅನುಚಿತವಾಗಿ ವರ್ತಿಸುವ ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಇದನ್ನು ವಿರೋಧಿಸಿ ಈಗಾಗಲೇ ಒಂದಷ್ಟು ಜನ ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಕಾಂತಾರ
ಸಿನಿಮಾ ಬಿಡುಗಡೆಯಾದಾಗ ಕೂಡ ಒಂದಷ್ಟು ಜನ ಜನರ ಭಾವನೆ ಗೆ ದಕ್ಕೆ ಬರುವಂತೆ ನಡೆದುಕೊಂಡಿದ್ದರು. ಈ ರೀತಿ ಮಾಡಬೇಡಿ ರಿಷಬ್ ಶೆಟ್ಟಿ ಆದಿಯಾಗಿ ತುಂಬಾ ಜನ ಮನವಿ ಮಾಡಿದ್ದರು.
ಈ ಬಾರಿ ಕೂಡ ಹೊಂಬಾಳೆ ಸಂಸ್ಥೆ ಮತ್ತು ರಿಷಬ್ ಶೆಟ್ಟಿ ಸಿನಿ ಪ್ರೇಕ್ಷಕರಿಗೆ ಮನವಿ ಮಾಡಿ ಇಂತಹ ಹುಚ್ಚಾಟವನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ
ಇದು ನಮ್ಮ ನಂಬಿಕೆಗೆ ಮಾಡುವ ಅಪಚಾರವೂ ಹೌದು . ಅಕ್ಷಮ್ಯ ಅಪರಾಧವೂ ಹೌದು.
ಇಂಥ ವರ್ತನೆಗಳನ್ನು ನಾವು ಖಂಡಿತ ಸಹಿಸುವುದಿಲ್ಲ. ಆದುದರಿಂದ ಚಿತ್ರಮಂದಿರ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸಮಾರಂಭಗಳಲ್ಲಿ ಯಾರಾದರೂ ದೈವಗಳನ್ನು ಅನುಕರಣೆ ಮಾಡಿದರೆ ಅವರ ಮೇಲೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.