ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ದೇಶದ ಮೊದಲ ಮಾನಸಿಕ ಆರೋಗ್ಯದ ರಾಯಭಾರಿಯನ್ನಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಿಸಿದೆ.

ಲೀವ್, ಲವ್ ಮತ್ತು ಲಾಫ್ ಫೌಂಡೇಷನ್ ನ ಸ್ಥಾಪಕಿಯೂ ಆಗಿರುವ​ ದೀಪಿಕಾ ಪಡುಕೋಣೆ, ದೆಹಲಿಯಲ್ಲಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ದೀಪಿಕಾ ಪಡುಕೋಣೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಗೆ ಭೇಟಿ ನೀಡಿ ಜನರೊಂದಿಗೆ ಮಾನಸಿಕ ಆರೋಗ್ಯದ ಬಗ್ಗೆ ಮಾತುಕತೆ ನಡೆಸಿದ್ದರು. ಇದಾದ ಬಳಿಕ ವಿಶ್ವ ಮಾನಸಿಕ ಆರೋಗ್ಯ ದಿನದಂದು ನಟಿ ದೀಪಿಕಾ ಪಡುಕೋಣೆ ಅವರನ್ನು ದೇಶದ ಮಾನಸಿಕ ಆರೋಗ್ಯದ ಅಂಬಾಸಿಡರ್ ಆಗಿ ಕೇಂದ್ರ ಸರ್ಕಾರ ನೇಮಿಸಿದೆ.ದೇಶದಲ್ಲಿ ಮಾನಸಿಕ ಆರೋಗ್ಯವನ್ನು ಬೆಂಬಲಿಸಲು ಇದು ಪ್ರಮುಖ ಹೆಜ್ಜೆ. ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆ ಇರುವ ನಕಾರಾತ್ಮಕತೆಯನ್ನು ತೊಡೆದು ಹಾಕಲು ಕೂಡ ಸಹಾಯ ಮಾಡುತ್ತದೆ.

ಈ ಸಂದರ್ಭ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ನಟಿ ದೀಪಿಕಾ ಪಡುಕೋಣೆ ಜೊತೆಗಿನ ಪಾಲುದಾರಿಕೆಯು  ಭಾರತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯದ ಬಗೆಗಿನ ಚರ್ಚೆಯಿಂದ ನೋವನ್ನು ಕಡಿಮೆ ಮಾಡಬಹುದು, ಜೊತೆಗೆ ಮಾನಸಿಕ ಆರೋಗ್ಯವನ್ನು ಸಾರ್ವಜನಿಕ ಆರೋಗ್ಯದ ಅವಿಭಾಜ್ಯ ಅಂಗ ಎಂದು ಪರಿಗಣಿಸಬಹುದು ಎಂದು ಜೆ.ಪಿ.ನಡ್ಡಾ ಹೇಳಿದ್ದಾರೆ.

ದೀಪಿಕಾ ಪಡುಕೋಣೆ  ಅವರು ಸ್ಥಾಪಿಸಿರುವ ಲೀವ್, ಲವ್ ಮತ್ತು ಲಾಫ್ ಫೌಂಡೇಷನ್ ಕಳೆದ 10 ವರ್ಷಗಳಿಂದ ದೇಶದಲ್ಲಿ ಜನರ ಮಾನಸಿಕ ಆರೋಗ್ಯ ವೃದ್ದಿಯ ಕುರಿತು ಕೆಲಸ ಮಾಡುತ್ತಿದೆ.

“ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ಸೇವೆ ಸಲ್ಲಿಸಲು ನನಗೆ ಸಂತಸವಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ಮಾನಸಿಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ನಮ್ಮ ರಾಷ್ಟ್ರದ ಮಾನಸಿಕ ಆರೋಗ್ಯ ಚೌಕಟ್ಟನ್ನು ಮತ್ತಷ್ಟು ಬಲಪಡಿಸಲು ಸಚಿವಾಲಯದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ