ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಹಾಗೂ ಗಾಯಕಿ, ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ ಇದೇ ಅಕ್ಟೋಬರ್ 26ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ರಘು ದೀಕ್ಷಿತ್ 2005ರಲ್ಲಿ ಶಾಸ್ತ್ರೀಯ ನೃತ್ಯಗಾರ್ತಿ ಮಯೂರಿ ಉಪಾಧ್ಯಾ ಜೊತೆ ವಿವಾಹವಾಗಿದ್ದರು. 2019ರಲ್ಲಿ ಅವರಿಬ್ಬರು ವಿಚ್ಛೇನದ ಪಡೆದಿದ್ದರು.ಇದೀಗ ರಘು ದೀಕ್ಷಿತ್ ಅವರು ಗ್ರ್ಯಾಮಿ -ನಾಮನಿರ್ದೇಶಿತ ಖ್ಯಾತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.
ರಘು ದೀಕ್ಷಿತ್ ಹಾಗೂ ವಾರಿಜಶ್ರೀ ಹಲವು ಆಲ್ಬಂಗಳಲ್ಲಿ ಜೊತೆಯಾಗಿ ಹಾಡಿದ್ದು, ಒಬ್ಬರಿಗೊಬ್ಬರು ಪರಿಚಿತರು. ಇದೀಗ ಒಟ್ಟಿಗೆ ಬಾಳಲು ನಿರ್ಧರಿಸಿದ್ದಾರೆ. `ಸಾಕು ಇನ್ನು ಸಾಕು’ ಆಲ್ಬಂ ಸಂಗೀತ ಸಹಯೋಗವೇ ಇವರ ಪ್ರೀತಿಗೆ ಸೇತುವೆಯಾಗಿದೆಯಂತೆ. ಇದೇ ತಿಂಗಳು 26ರಂದು ಜಯನಗರದ ಸಾಯಿ ಕನ್ವೆನ್ಷನ್ ಹಾಲ್ನಲ್ಲಿ ಅವರಿಬ್ಬರ ಮದುವೆ ನಿಶ್ಚಯವಾಗಿದೆ.ಈ ಹಿಂದೆ ಕೋವಿಡ್ ವೇಳೆ ರಘು ದೀಕ್ಷಿತ್ ಹಾಗೂ ವಾರಿಜಶ್ರೀ ಹಾಡಿದ ಹಾಡು ಜನಪ್ರಿಯವಾಗಿತ್ತು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಘು ದೀಕ್ಷಿತ್, ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇದೆಲ್ಲಾ ಆಕಸ್ಮಿಕವಾಗಿ ಹುಟ್ಟಿಕೊಂಡಿತು. ವಾರಿಜಾಶ್ರೀ ಅವರ ಪೋಷಕರ ಆಶೀರ್ವಾದದೊಂದಿಗೆ, ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.