ರೇಡಿಯೋ ಜಾಕಿ ಆಗಿದ್ದ ಆಶಾ ವಿಶ್ವನಾಥ್‌, ಮುಂದೆ ಹಲವು ವಿಭಿನ್ನ ವಿಭಾಗಗಳಲ್ಲಿ ತಮ್ಮ ಬಹುಮುಖ ಪ್ರತಿಭೆ ಮೆರೆದು ಅಪಾರ ಯಶಸ್ಸು ಗಳಿಸಿದ್ದಾರೆ. ಇವರ ಸಂಪೂರ್ಣ ಪರಿಚಯ ಪಡೆಯೋಣವೆ…….?

ಬೆರಗುಗಣ್ಣಿನ ನಗುಮೊಗದ ಚೆಲುವೆ. ಮಾತಿನಲ್ಲಿಯೇ ಮೋಡಿ ಮಾಡುವ ವಾಗ್ಮಿ, ಪರಿಚಯವಾದ ಕ್ಷಣದಲ್ಲಿಯೇ ಬಹಳ ಆತ್ಮೀಯರು ಎನಿಸಿಬಿಡುವ ಆಶಾ ಎಲ್ಲಾ ಕೆಲಸಗಳಿಗೂ ಮಿಂಚಿನಂತೆ ಸದಾ ಸಿದ್ಧರು.

ಆಶಾ ಹುಟ್ಟಿ ಬೆಳೆದದ್ದು ನಮ್ಮ ಐತಿಹಾಸಿಕ ನಗರವಾದ ಮೈಸೂರಿನಲ್ಲಿ. ತಂದೆ ರಾಮಣ್ಣ ಚಿಕ್ಕ ವಯಸ್ಸಿನಿಂದಲೇ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ತಾಯಿ ರಾ. ಸುಮಿತ್ರಾ ಸಂಗೀತಾಗಾರ್ತಿ. ಇವರ ಮಗಳಾದ ಆಶಾ ಈಗಲೂ ವಯಸ್ಸು ಎಂದರೆ ಒಂದು ಸಂಖ್ಯೆಯಷ್ಟೇ ಎನ್ನುವ ಚಟಪಟ ಮಾತನಾಡುವ ಮಾತುಗಾರ್ತಿ ಹಾಗೂ ಉತ್ಸಾಹದ ಚಿಲುಮೆ. ಮಾತಿನಿಂದಲೇ ಎಲ್ಲರನ್ನೂ ತಮ್ಮತ್ತ ಸೆಳೆದುಕೊಳ್ಳುವ ಮೋಹಕ ನಗು ತುಂಬಿದ ರೇಡಿಯೋ ಜಾಕಿ ಆಶಾರ ಮಾತುಗಳು ಕೇಳುಗರಿಗೆ ಮನೋಲ್ಲಾಸವನ್ನು ಉಂಟು ಮಾಡುತ್ತವೆ. ವಿಶ್ವನಾಥ್‌ ಅವರನ್ನು ಮದುವೆಯಾಗಿ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನೆಲೆಸಿದ್ದಾರೆ. ಆಶಾ ಬಗ್ಗೆ ಪುಟಗಟ್ಟಲೆ ಬರೆಯಬಹುದಾದರೂ ಅವರ ಬಹುಮುಖ ಪ್ರತಿಭೆಯ ಬಗ್ಗೆ ತಿಳಿಸುವಾಗ ಖುಷಿಯಾಗುತ್ತದೆ.

ಪ್ರತಿಯೊಂದು ವಿಷಯದಲ್ಲಿಯೂ ಅವರಿಗೆ ಬಹಳ ಆಸಕ್ತಿ. ಅದರಲ್ಲಿಯೂ ಅವರದ್ದೇ ಆದ ವಿಶೇಷತೆಗಳಿವೆ. ಪ್ರವೃತ್ತಿಯಿಂದ ನಾನು ಮಾಡು ಎಲ್ಲಾ ಕೆಲಸಗಳೂ ನನಗೆ ವೃತ್ತಿಯೇ ಎನ್ನುವ ಇವರು, ಆದರ್ಶ ಗೃಹಿಣಿಯೂ ಹೌದು. ಯಶಸ್ವೀ ರೇಡಿಯೋ ಜಾಕಿ ಹತ್ತು ವರ್ಷಗಳ ಕಾಲ ಎಫ್‌.ಎಂ. ರೈನ್‌ ಬೋ 101.3 ಜೊತೆಗೆ ರೇಡಿಯೋ ಜಾಕಿಯಾಗಿದ್ದು ಅನೇಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಕೇಳುಗರಿಂದ `ಟ್ಯೂಸ್ಡೆ ಟರ್ನರ್‌’ ಬಿರುದಾಂಕಿತೆ. ಇವರು ಧ್ವನಿ ತರಬೇತುದಾರರು ಮತ್ತು ಮಾಡ್ಯುಲೇಟರ್‌ ಕೂಡ ಹೌದು. ನ್ಯಾಷನಲ್ ಜಿಯಾಗ್ರಫಿ ಮತ್ತು ಚಾನಲ್ ಗಳ ಹಲವಾರು ಸಾಕ್ಷ್ಯಚಿತ್ರಗಳಿಗೆ ಧ್ವನಿಯಾಗಿದ್ದಾರೆ. ಹಲವಾರು  ಜಾಹೀರಾತುಗಳು, ಕಾರ್ಪೊರೇಟ್‌ ಪ್ರಚಾರಗಳನ್ನು ಮಾಡಿದ್ದಾರೆ. ರೇಡಿಯೋ ಚಾನೆಲ್ ‌ಒಂದನ್ನು ಟೆಲಿಗ್ರಾಮ್ ಅಪ್ಲಿಕೇಶನ್‌ ನಲ್ಲಿ ನಡೆಸುತ್ತಿರುವ ಇರು, ನಮ್ಮ ಕರ್ನಾಟಕ ವೈಭವ ಮತ್ತು ಸಂಸ್ಕೃತಿಯನ್ನು ಹೊರ ಜಗತ್ತಿಗೆ ಅನಾವರಣಗೊಳಿಸುವಂತಹ ವೈವಿಧ್ಯ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಸಾರ ಮಾಡುತ್ತಿರುವುದು ಹೆಮ್ಮೆಯ ವಿಷಯವೇ ಸರಿ!

ಪ್ರತಿಭಾನ್ವಿತ ವಾಣಿಜ್ಯೋದ್ಯಮಿ

ಇಷ್ಟೇ ಅಲ್ಲದೆ, ಒಬ್ಬ ವಾಣಿಜ್ಯೋದ್ಯಮಿಯಾಗಿ ಕನ್ನಡದ ಪ್ರಪ್ರಥಮ ಆನ್‌ ಲೈನ್‌ ಅಪ್ಲಿಕೇಶನ್‌ ಆಧಾರಿತ ಅಂತಾರಾಷ್ಟ್ರೀಯ ಕನ್ನಡ ರೇಡಿಯೋವನ್ನು ಜಗತ್ತಿಗೆ ಪರಿಚಯಿಸಿದ ಶ್ರೇಯಸ್ಸು ಆಶಾರಿಗೆ ಸಲ್ಲುತ್ತದೆ.

ಜೊತೆಗೆ ಸಂಗೀತಗಾರ್ತಿಯೂ ಆಗಿರುವ ಇವರು, ಅವರದ್ದೇ ಸ್ವಂತ ಶಾಲೆಯಾದ `ಆಶಾಲಯ ಸಂಗೀತ ಶಾಲೆ’ಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಸುತ್ತಾರೆ. ಅಲ್ಲದೆ ಸ್ವತಂತ್ರ ಪತ್ರಕರ್ತೆಯಾಗಿ ನಾಡಿನ ಎಲ್ಲಾ ಪ್ರಮುಖ ವಾರಪತ್ರಿಕೆ, ದಿನಪತ್ರಿಕೆಗಳಲ್ಲಿ ಹಲವಾರು ವೈವಿಧ್ಯಮಯ ಲೇಖನಗಳನ್ನು ಬರೆದಿದ್ದಾರೆ. ಬೆಂಗಳೂರು ಬೀಟ್ಸ್ ಎಂಬ ಕ್ರೈಮ್ ರಿಪೋರ್ಟಿಂಗ್ ಪತ್ರಿಕೆಯ ಮುಖ್ಯಸ್ಥರು ಹಾಗೂ ಸಹ ಸಂಪಾದಕರಾಗಿದ್ದಾರೆ.

ಬಿಡುವಿಲ್ಲದ ಕಾರ್ಯವ್ಯಾಪ್ತಿ ಅಷ್ಟೇ ಅಲ್ಲದೆ, ಇವರು ಮನಶ್ಶಾಸ್ತ್ರದಲ್ಲಿ ತರಬೇತಿ ಪಡೆದ ಮಾನಸಿಕ ಆಪ್ತ ಸಲಹೆಗಾರರಾಗಿಯೂ, ಕುಟುಂಬ ಸಂಬಂಧಿತ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಪ್ರತಿಕ್ಷಣ ಬಿಡುವಿಲ್ಲದೆ ಕಾರ್ಯ ಪ್ರವೃತ್ಥರಾಗಿರುವುದು ಆಶಾ ಅವರ ಜೀವನದ ಧ್ಯೇಯವೇ ಆಗಿದೆ ಎನ್ನಬಹುದು.

ಈ ಎಲ್ಲದರ ಜೊತೆಗೆ ತಮ್ಮ ಬಿಡುವಿಲ್ಲದ ಕಾರ್ಯವ್ಯಾಪ್ತಿಯ ಜೊತೆ ಜೊತೆಗೆ ಸಮಾಜ ಸೇವಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಆಶಾ ಮಾನವ ಹಕ್ಕುಗಳು, ಪ್ರಾಣಿ ಹಕ್ಕುಗಳು, ಶಿಕ್ಷಣ, ಆರೋಗ್ಯ ಮುಂತಾದ ವಿವಿಧ ಕ್ಷೇತ್ರಗಳಲ್ಲಿಯೂ ಕೂಡ ಸ್ವಯಂ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಬಹುಮುಖ ಪ್ರತಿಭೆಯಾದ ಆಶಾ ವಿಶ್ವನಾಥ್‌ ಮತ್ತಷ್ಟು ಉತ್ಸಾಹಿತರಾಗಿ ತಮ್ಮ ಕಾರ್ಯಗಳಲ್ಲಿ ನಿರಂತರ ಯಶಸ್ಸು ಪಡೆಯಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.

ಸುಜಲಾ ಘೋರ್ಪಡೆ

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ