ತರನ್‌ ಪ್ರೀತ್‌ ಕೌರ್‌ ಮೆಹೆಂದಿ ಭಾರತದ ಪ್ರಪ್ರಥಮ ಆರ್ಟಿಸ್ಟ್ ಮ್ಯಾನೇಜ್‌ ಮೆಂಟ್‌ ಕಂಪನಿ `ಡೀ ರೆಕಾರ್ಡ್ಸ್’ನ ಇದರ ಜೊತೆಗೆ ಈಕೆ ಒಬ್ಬ ನುರಿತ ಆರ್ಕಿಟೆಕ್ಟ್, ಲೇಖಕಿ, ಗಾಯಕಿ, ಸಂಗೀತ ನಿರ್ದೇಶಕಿ, ಡ್ರೆಸ್‌ ಡಿಸೈನರ್‌ ಸಹ ಹೌದು. ವಿಖ್ಯಾತ ಪಾಪ್‌ ಸಿಂಗರ್‌ ದೀರ್‌ ಮೆಹೆಂದಿಯ ಪತ್ನಿಯಾದ ಈಕೆ ಒಂದು ಮಗುವಿನ ತಾಯಿಯಾಗಿ ಯಶಸ್ವಿ ಮನೆವಾರ್ತೆ ನಡೆಸುತ್ತಾ, ಇಷ್ಟೆಲ್ಲಾ ಕಾರುಬಾರು ಸಂಭಾಳಿಸುತ್ತಿದ್ದಾರೆ.

ಡೀರೆಕಾರ್ಡ್ಸ್ ಕಂಪನಿ ಒಂದು ಹೆಸರಾಂತ ರೆಕಾರ್ಡ್‌ ಸೆಲೇಬ್‌ ಆಗಿದ್ದು, ಇದನ್ನು ಈ ಮಟ್ಟದ ಎತ್ತರಕ್ಕೆ ಬೆಳೆಸುವಲ್ಲಿ ಈಕೆಯ  ಪರಿಶ್ರಮ ಅನನ್ಯವಾದುದು. ದೆಹಲಿಯ ಈ ಕಂಪನಿ ಮೂಲಕ ಈಕೆ ಹಲವು ಸಾವಿರ ಆಲ್ಬಂ ಹೊರತಂದಿದ್ದಾರೆ! ಜೊತೆಗೆ ಈಕೆ ಇಮ್ತಿಯಾಜ್‌ ಅಲಿ ರಿಯಾಜ್‌ ಅಲಿ, ಉಸ್ತಾದ್‌ ಹುಸೇನ್‌ ಗುಲ್ಲುರಂಥ ಪ್ರತಿಷ್ಠಿತ ಕಲಾವಿದರೊಂದಿಗೆ ದುಡಿದಿದ್ದಾರೆ.

ಈಕೆ ಈ ಮಟ್ಟಕ್ಕೆ ಬೆಳೆಯಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಈ ಪುರುಷ ಪ್ರಧಾನ ಸಮಾಜದಲ್ಲಿ ಅಡಿಗಡಿಗೂ ಲಿಂಗಭೇದ ಅಸಮಾನತೆ ಎದುರಿಸುತ್ತಾ, ಗಂಡಸರಿಗೆ ಸರಿಸಮನಾಗಿ ಹೋರಾಡುತ್ತಾ ತನ್ನ ಐಡೆಂಟಿಟಿ ಗಿಟ್ಟಿಸಿರುವುದು ಸಾಮಾನ್ಯ ಸಂಗತಿಯಲ್ಲ. ಪ್ರಸಿದ್ಧ ಗಾಯಕಿ ಶುಭಾ ಮುದ್ಗಲ್ ರ ನಂತರ ತರನ್‌ ಪ್ರೀತ್‌ ರ ಹೆಸರು ಮಾತ್ರವೇ 90ರ ದಶಕದ ಖ್ಯಾತ ಮ್ಯೂಸಿಕ್‌ ಸೆಲೇಬ್‌ ಆಗಿರದೆ, ಅದರ ಸಂಪೂರ್ಣ ಸಂಚಾಲನೆಯ ಹೊಣೆಯೂ ಇವರದೇ ಆಗಿತ್ತು. ಅವಿರತ ಪರಿಶ್ರಮದ ಸಾಕಾರಮೂರ್ತಿಯಾದ ಈಕೆ ಕಷ್ಟಪಟ್ಟು ಮುಂದೆ ಬರುವ ತರುಣಿಯರಿಗೆ ಪ್ರೇರಣಾ ಭಂಡಾರವೇ ಹೌದು. ಈಕೆಗೆ ಸಂದಾಯವಾದ ಪ್ರಶಸ್ತಿಗಳು ಅನೇಕ. `ಎವರಿಥಿಂಗ್‌ ಈಸ್‌ ಪಾಸಿಬಲ್!’ ಎಂಬ ಈಕೆಯ ದೃಷ್ಟಿಕೋನವೇ `ಔಟ್‌ ಆಫ್‌ ದಿ ಬಾಕ್ಸ್’ ಎಂದು ಚಿಂತಿಸುವ ಈಕೆಯ ವಿಶಿಷ್ಟ ದೃಷ್ಟಿಕೋನದ ಹೆಗ್ಗರುತು.

ಈಕೆ ದೆಹಲಿಯ ಚಂದ್ರಾ ನಾರಂಗ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಫಿಲಮ್ಸ್ ನಿಂದ ಡಿಪ್ಲೊಮಾ ಪಡೆದು, ವಾಲ್ಟ್ ಡಿಸ್ನಿ ಕಾರ್ಟೂನ್‌ ನ ಮಿಕಿ ಮೌಸ್‌, ಡೊನಾಲ್ಡ್ ಡಕ್‌ ಪಾತ್ರಗಳ ಹಿಂದಿ ಅವತರಣಿಕೆಗಳಿಗೆ ಕಂಠದಾನ ನೀಡಿ, ಪ್ರೊಡಕ್ಷನ್‌ ಮ್ಯಾನೇಜರ್‌ಸ್ಕ್ರಿಪ್ಟ್ ರೈಟರ್‌ಆಗಿಯೂ ದುಡಿದಿದ್ದಾರೆ. `ಗುಡಿಯಾ ರಾಣಿ’ ಮುಂತಾದ ಅನೇಕ ವಿಡಿಯೋ ರೂಪಿಸಿದ್ದಾರೆ. ಸಂಗೀತದ ಕುರಿತಾದ ಈಕೆಯ ಅನನ್ಯ ಸಾಧನೆ ಗುರುತಿಸಿ, ಘಟಾನುಘಟಿಗಳಾದ ಗುಲಾಂ ಅಲಿ ಖಾನ್‌ ರಿಂದ, ಜಗ್‌ ಜೀತ್‌ ಸಿಂಗ್‌ ರವರೆಗೂ ಮನದುಂಬಿ ಆಶೀರ್ವದಿಸಿದ್ದಾರೆ. ಪ್ರಸ್ತುತ ಈಕೆ ಹೈಯರ್‌ ಕಾನ್ಶಿಯಸ್‌ ನೆಸ್‌ ಕುರಿತಾಗಿ ದೊಡ್ಡ ಪುಸ್ತಕ ಬರೆಯುತ್ತಿದ್ದಾರೆ.

ತಮ್ಮ ಈ ಪರಿಶ್ರಮದ ಕುರಿತು ಈಕೆ, “ನಾನು ಚಿಕ್ಕ ವಯಸ್ಸಿನಿಂದಲೇ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ವಿಶಾರದಾ ಡಿಗ್ರಿ ಪಡೆದಿದ್ದೆ. ನನಗೆ ಖ್ಯಾತ ಸ್ಪಿಕ್‌ ಮ್ಯಾಕ್‌ ಸಂಸ್ಥೆಯಿಂದ ಸ್ಕಾಲರ್‌ ಶಿಪ್‌ ಸಹ ದೊರಕಿದೆ. ಶಾಲಾ ದಿನಗಳಿಂದಲೇ ನನಗೆ ಗುರುಬಾಣಿ ಹಾಡುವುದೆಂದರೆ ಬಲು ಇಷ್ಟ. ಪ್ರೊಫೆಶನಲಿ ನಾನೊಬ್ಬ ಆರ್ಕಿಟೆಕ್ಟ್. ನಾನುಖ್ಡಯ ಆರ್ಕಿಟೆಕ್ಚರ್‌ ಡಿಗ್ರಿ ಪಡೆದೆ. ಇದಕ್ಕಿಂತಲೂ ಸಂಗೀತವೇ ನನ್ನ ಉಸಿರಾಗಿ ಅದನ್ನೇ ಪ್ರವೃತ್ತಿಯಾಗಿಸಿಕೊಂಡೆ. ಅದನ್ನು ಕಲಿಯುವಾಗಲೇ ನಾನು ಹಲವಾರು ಸಂಗೀತ ಕಚೇರಿಗಳನ್ನು ನಡೆಸುತ್ತಿದ್ದೆ. ನನ್ನ ಈ ಕೆರಿಯರ್‌ ಶುರುವಾಗಿದ್ದೇ ಜಗಜೀತ್‌ ಸಿಂಗ್‌ ರ ಜೊತೆ. 1994ರಲ್ಲಿ ದೆಹಲಿಯ ಅಂಬೇಡ್ಕರ್‌ ಸ್ಟೇಡಿಯಂನಲ್ಲಿ ನನ್ನ ಮೊದಲ ಕಚೇರಿ ನಡೆಯಿತು. ಅಲ್ಲಿ ಅವರು ಲುಂಗಿ ಲಾಚಾ ಧರಿಸಿ ಪ್ರದರ್ಶನ ನೀಡಿದ್ದು ಗಮನಾರ್ಹ! ಅಲ್ಲಿಗೆ ಪ್ರತಿಭಾನ್ವಿತ ಪಂಜಾಬಿ ಗಾಯಕರು ಬಂದಿದ್ದರು, ಅದರಲ್ಲಿ ದೀರ್‌ ಮೆಹೆಂದಿ ಸಹ ಹಾಡುತ್ತಿದ್ದರು. ಅವರಿಗೂ ಅದೇ ಮೊದಲ ಸ್ಟೇಡಿಯಂ ಕಚೇರಿ. 10 ಸಾವಿರ ಶ್ರೋತೃಗಳ ಎದುರು ಕಚೇರಿ ನಡೆಸಿದ್ದು ನನ್ನ ಜೀವನದ ದೊಡ್ಡ ಮೈಲಿಗಲ್ಲು!

“1994ರಲ್ಲಿ ನಾನು ನನ್ನ ಕಂಪನಿ ಆರಂಭಿಸಿದೆ, ಅನೇಕ ಶೋ, ಪ್ರಾಜೆಕ್ಟ್ಸ್ ನಡೆಸಿದೆ. ಅದೇ ಸಮಯದಲ್ಲಿ ದೀರ್‌ ಮೆಹಂದಿ ಒಂದು ಕಂಪನಿ ಆರಂಭಿಸುವುದರಲ್ಲಿದ್ದರು. 1996ರ ಹೊತ್ತಿಗೆ ಅವರ ಎಂಟರ್‌ ಟೇನ್ಮೆಂಟ್‌ ಆರ್ಟಿಸ್ಟ್ ಕಂಪನಿ ರೆಡಿ ಆಯ್ತು, ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿತು. ಇದು ವಿದೇಶಗಳಲ್ಲೂ ಪ್ರದರ್ಶನ ನೀಡುವಂತಾಯ್ತು. ಆಗ 2000ದಲ್ಲಿ ನಾನು `ಡೀ ರೆಕಾರ್ಡ್ಸ್’ ಆರಂಭಿಸಿದೆ. ಆಗ ಮೀಕಾಜಿಯವರ ಆಲ್ಬಂ ಸಹ ರಿಲೀಸ್‌ ಆಯ್ತು. ದೀರ್‌ ಆಗಿನಿಂದ ಇದರ ಬ್ರಾಂಡ್‌ ಅಂಬಾಸಿಡರ್‌.

“ಇದೀಗ FB ‌ಕಾಲ. ಆ ಮೂಲಕ ನನಗೆ ಸುಗುಣಾ ದೇವಿ ಗಂಧರ್ವ ಹಾಡು ಕೇಳುವ ಅವಕಾಶ ಸಿಕ್ಕಿತು. ಮ.ಪ್ರದೇಶ ಮೂಲದ ಈಕೆ ಬಹು ಪ್ರಸಿದ್ಧರು. ಅವರ `ದಮಾದಂ ಮಸ್ತ್ ಕಲಂದರ್‌’ ಆಲ್ಬಂ ರಿಲೀಸ್‌ ಮಾಡಿದೆ. ಈ ರೀತಿ ಹಿರಿ, ಕಿರಿಯ ಕಲಾವಿದರೆಲ್ಲರೂ ಈ ಮೂಲಕ ಬೆಳಕು ಕಂಡರು. 19ರ  ಹರೆಯದ ಉದಿತ್‌ ಶಾಂಡಿಲಯಾಳ ಕನಸನ್ನು  `ಗುಡಿಯಾ ರಾಣಿ’ ವಿಡಿಯೋ ಮೂಲಕ ನನಸಾಗಿಸಿದೆ.

`ಕೋವಿಡ್‌ ಕಾಲದಲ್ಲಿ ಮೆಂಟಲ್ ಹೆಲ್ತ್ ಗಾಗಿ ನಾನು ಬಹಳಷ್ಟು ಕೆಲಸ ಮಾಡಿದೆ. ವಿಮನ್‌ ಪವರ್‌ ಗಾಗಿ `ಲೋಕಾ ಸಮಸ್ತಾ ಸುಖೀನೋ ಭವಂತು’ ವಿಡಿಯೋ ಮಾಡಿದೆ. ನಾನೇ ಇದರ ರಚನೆ ಮಾಡಿ, ಡೈರೆಕ್ಟ್ ಮಾಡಿ, ಹಾಡಿದೆ ಕೂಡ. ಈ ವಿಡಿಯೋದಲ್ಲಿ 13 ಪಾತ್ರಗಳಿವೆ. ಮಕ್ಕಳು, ವೃದ್ಧರು, ಹೆಂಗಸರು ಎಲ್ಲರೂ ಇದ್ದರು. ನಾವು ಆಂತರಿಕ ಭಯ ಬಿಟ್ಟು ವಾಸ್ತವಿಕತೆ ಎದುರಿಸುತ್ತಾ ಬದುಕಬೇಕೆಂಬುದೇ ಇದರ ಸಾರ. ಇದು ಬಹಳ ಯಶಸ್ವೀ ಎನಿಸಿತು!

ಯಾವ ಘಟನೆ ನಿಮ್ಮ ಯೋಜನೆಯನ್ನೇ ಬದಲಿಸಿತು?

2001ರ ಹೊತ್ತಿಗೆ ನಮ್ಮ ಕಂಪನಿ ಅಂತಾರಾಷ್ಟ್ರೀಯ ಮಟ್ಟದ ಒಂದು ಮ್ಯೂಸಿಕ್‌ ಕಂಪನಿ ಜೊತೆ ಹೊಡೆದಾಟದ ಮಟ್ಟಕ್ಕೆ ಜಗಳವಾಗಿ ಹೋಯ್ತು. ಪರಸ್ಪರ ಕ್ಷಮೆ ಕೋರಿ ವೈಷಮ್ಯ ಮರೆಯೋಣ ಎಂದು ತಿಳಿಸಿದೆ. ಐ ಆಮ್ ಸಾರಿ, ನನ್ನ ಉದ್ದೇಶ ಅದಾಗಿರಲಿಲ್ಲ, ನೀವು ಸಹ ಸಾರಿ ಹೇಳಿ ಎಂದೆ. ಆತ ದುರಂಹಂಕಾರದಿಂದ, ತಪ್ಪು ಮಾಡಿದ್ದರಿಂದ ನೀವು ಕ್ಷಮೆ ಕೇಳಿದ್ರಿ. ನಾನೇಕೆ ಕೇಳಲಿ? ಎಂದು ದಬಾಯಿಸಿದ. ಈ ಸಾರಿ, ಥ್ಯಾಂಕ್ಸ್ ನ್ನು ಬಹಳ ನಾಜೂಕಾಗಿ ಯೋಚಿಸಿ ಬಳಸಬೇಕೆಂದು ಅಂದಿನಿಂದ ನಿರ್ಧರಿಸಿದೆ. ವ್ಯಕ್ತಿ, ಸಂದರ್ಭ ನೋಡಿ ಆಡಬೇಕು. ಇಂಥ ದುರಂಹಂಕಾರಿಗಳಿಗೆ ನಾವು ತಲೆ ಬಾಗಲೇಬಾರದು ಎಂದು ಗುರುತಿಸಿದೆ. ಅದರಿಂದಾಗಿ ನಾನು ನನ್ನ ಯೋಚನಾಸರಣಿಯನ್ನೇ ಬದಲಿಸಿಕೊಳ್ಳುವಂತೆ ಆಯಿತು.

ದೀರ್ಮೆಹೆಂದಿ ನಿಮಗೆಷ್ಟು ಪ್ರೇರಣೆ ನೀಡುತ್ತಾರೆ?

ಅವರಂತೂ ಅಪಾರ ಶಕ್ತಿಯ ಭಂಡಾರ! ಅವರೊಂದಿಗಿನ ನನ್ನ ದುಡಿತ, ಸ್ನೇಹ, ಪ್ರೇಮಕ್ಕೆ ತಿರುಗಿ ಮದುವೆ ಆದೆ. ಆತ ನನ್ನ ಫ್ರೆಂಡ್‌, ಫಿಲಾಸಫರ್‌, ಗೈಡ್‌ ಮಾತ್ರವಲ್ಲದೆ ಈಗ ಪ್ರಾಣಸಖ ಕೂಡ! ಅವರ ಮಾತು ಬಲು ಸರಳ, ಮಧುರ. ಏನೇ ಕಷ್ಟ ಬಂದರೂ ನಸುನಗುತ್ತಾ ಅದನ್ನು ಎದುರಿಸುತ್ತಾರೆ. ಎಲ್ಲವನ್ನೂ ಎಂಜಾಯ್‌ ಮಾಡುತ್ತಾ, ಸಣ್ಣಪುಟ್ಟದ್ದಕ್ಕೂ ಸಂಭ್ರಮಿಸುತ್ತಾರೆ!

ನೀವು ಇಷ್ಟೆಲ್ಲ ಕೆಲಸ ಮಾಡಿದ್ದೀರಿ. ಇದರಲ್ಲಿ ನಿಮ್ಮ ಅಚ್ಚುಮೆಚ್ಚಿನದ್ದು ಯಾದು?

ಎಲ್ಲಕ್ಕಿಂತ ಹೆಚ್ಚಾಗಿ ಬರವಣಿಗೆ ನನಗೆ ಬಲು ಇಷ್ಟ! ಬರೆಯುವಾಗ ನನ್ನನ್ನೇ ನಾನು ಮರೆಯುತ್ತೇನೆ. ನಸುನಗುತ್ತಾ ಬರೆಯುವಾಗ ಯಾವ ಕಷ್ಟ ನೆನಪಾಗೋಲ್ಲ. ಮುಂದೆ ಒಂದು ದೊಡ್ಡ ಪುಸ್ತಕ ರಚಿಸಲು ಘನ ತಯಾರಿ ನಡೆಸಿದ್ದೇನೆ.

ಇಂದಿನ ತರುಣಿಯರಿಗೆ ನಿಮ್ಮ ಸಂದೇಶವೇನು?

ಯಾವುದನ್ನೂ ನೀವು ಸಣ್ಣ ಗುರಿ ಎಂದು ಭಾವಿಸಲೇಬೇಡಿ, ಯಾವ ಸಂಬಂಧದಲ್ಲೂ ಹಣಕಾಸಿನ ಲೆಕ್ಕಾಚಾರ ಅತಿ ಮುಖ್ಯ ಆಗಲ್ಲ. ನಿಮ್ಮ ಫೋಕಸ್‌ ಮೇಲೆ ಮಾತ್ರ ನಿಮ್ಮ ಗಮನವಿರಲಿ. ಜೀವನದ ಪ್ರತಿ ಘಟ್ಟವನ್ನೂ ಎಂಜಾಯ್‌ ಮಾಡಿ, ಸದಾ ನಾಳಿನ ಚಿಂತೆ ಬಿಟ್ಟು ಇವತ್ತು ನೆಮ್ಮದಿಯಾಗಿ ಬದುಕಿರಿ. ಲಾಂಗ್‌ ಟರ್ಮ್ ಗೋಲ್ ‌ಅತಿ ಮಹತ್ವಪೂರ್ಣವಾದುದು, ಅದನ್ನು ಸಾಧಿಸಲು ಯತ್ನಿಸಿ. ಸಣ್ಣ ಪುಟ್ಟದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ನಾವು ಯಾವುದೇ ಕೆಲಸವನ್ನು ಅತಿ ಶ್ರದ್ಧೆಯಿಂದ ಮಾಡದೇ ಹೋದರೆ, ಅದರಲ್ಲಿ ನಾವು ಉದ್ಧಾರ ಆಗುವುದೇ ಇಲ್ಲ. ಹೀಗಾಗಿ ಮಾಡುವ ಪ್ರತಿ ಕೆಲಸದಲ್ಲೂ 100% ಇನ್ ವಾಲ್ವ್ ‌ಮೆಂಟ್‌ ಇರಲಿ. ಅಪಾರ ಶಕ್ತಿಯ ಮೂಲವಾದ ಹೆಣ್ಣು ಈ ಭೂಮಿಗೆ ಬಂದಿರುವುದೇ ಒಂದು ಮ್ಯಾಜಿಕ್‌ ಮಾಡಲೆಂದು!

ಪ್ರತಿನಿಧಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ