ತರನ್ ಪ್ರೀತ್ ಕೌರ್ ಮೆಹೆಂದಿ ಭಾರತದ ಪ್ರಪ್ರಥಮ ಆರ್ಟಿಸ್ಟ್ ಮ್ಯಾನೇಜ್ ಮೆಂಟ್ ಕಂಪನಿ `ಡೀ ರೆಕಾರ್ಡ್ಸ್'ನ ಇದರ ಜೊತೆಗೆ ಈಕೆ ಒಬ್ಬ ನುರಿತ ಆರ್ಕಿಟೆಕ್ಟ್, ಲೇಖಕಿ, ಗಾಯಕಿ, ಸಂಗೀತ ನಿರ್ದೇಶಕಿ, ಡ್ರೆಸ್ ಡಿಸೈನರ್ ಸಹ ಹೌದು. ವಿಖ್ಯಾತ ಪಾಪ್ ಸಿಂಗರ್ ದೀರ್ ಮೆಹೆಂದಿಯ ಪತ್ನಿಯಾದ ಈಕೆ ಒಂದು ಮಗುವಿನ ತಾಯಿಯಾಗಿ ಯಶಸ್ವಿ ಮನೆವಾರ್ತೆ ನಡೆಸುತ್ತಾ, ಇಷ್ಟೆಲ್ಲಾ ಕಾರುಬಾರು ಸಂಭಾಳಿಸುತ್ತಿದ್ದಾರೆ.
ಡೀರೆಕಾರ್ಡ್ಸ್ ಕಂಪನಿ ಒಂದು ಹೆಸರಾಂತ ರೆಕಾರ್ಡ್ ಸೆಲೇಬ್ ಆಗಿದ್ದು, ಇದನ್ನು ಈ ಮಟ್ಟದ ಎತ್ತರಕ್ಕೆ ಬೆಳೆಸುವಲ್ಲಿ ಈಕೆಯ ಪರಿಶ್ರಮ ಅನನ್ಯವಾದುದು. ದೆಹಲಿಯ ಈ ಕಂಪನಿ ಮೂಲಕ ಈಕೆ ಹಲವು ಸಾವಿರ ಆಲ್ಬಂ ಹೊರತಂದಿದ್ದಾರೆ! ಜೊತೆಗೆ ಈಕೆ ಇಮ್ತಿಯಾಜ್ ಅಲಿ ರಿಯಾಜ್ ಅಲಿ, ಉಸ್ತಾದ್ ಹುಸೇನ್ ಗುಲ್ಲುರಂಥ ಪ್ರತಿಷ್ಠಿತ ಕಲಾವಿದರೊಂದಿಗೆ ದುಡಿದಿದ್ದಾರೆ.
ಈಕೆ ಈ ಮಟ್ಟಕ್ಕೆ ಬೆಳೆಯಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಈ ಪುರುಷ ಪ್ರಧಾನ ಸಮಾಜದಲ್ಲಿ ಅಡಿಗಡಿಗೂ ಲಿಂಗಭೇದ ಅಸಮಾನತೆ ಎದುರಿಸುತ್ತಾ, ಗಂಡಸರಿಗೆ ಸರಿಸಮನಾಗಿ ಹೋರಾಡುತ್ತಾ ತನ್ನ ಐಡೆಂಟಿಟಿ ಗಿಟ್ಟಿಸಿರುವುದು ಸಾಮಾನ್ಯ ಸಂಗತಿಯಲ್ಲ. ಪ್ರಸಿದ್ಧ ಗಾಯಕಿ ಶುಭಾ ಮುದ್ಗಲ್ ರ ನಂತರ ತರನ್ ಪ್ರೀತ್ ರ ಹೆಸರು ಮಾತ್ರವೇ 90ರ ದಶಕದ ಖ್ಯಾತ ಮ್ಯೂಸಿಕ್ ಸೆಲೇಬ್ ಆಗಿರದೆ, ಅದರ ಸಂಪೂರ್ಣ ಸಂಚಾಲನೆಯ ಹೊಣೆಯೂ ಇವರದೇ ಆಗಿತ್ತು. ಅವಿರತ ಪರಿಶ್ರಮದ ಸಾಕಾರಮೂರ್ತಿಯಾದ ಈಕೆ ಕಷ್ಟಪಟ್ಟು ಮುಂದೆ ಬರುವ ತರುಣಿಯರಿಗೆ ಪ್ರೇರಣಾ ಭಂಡಾರವೇ ಹೌದು. ಈಕೆಗೆ ಸಂದಾಯವಾದ ಪ್ರಶಸ್ತಿಗಳು ಅನೇಕ. `ಎವರಿಥಿಂಗ್ ಈಸ್ ಪಾಸಿಬಲ್!' ಎಂಬ ಈಕೆಯ ದೃಷ್ಟಿಕೋನವೇ `ಔಟ್ ಆಫ್ ದಿ ಬಾಕ್ಸ್' ಎಂದು ಚಿಂತಿಸುವ ಈಕೆಯ ವಿಶಿಷ್ಟ ದೃಷ್ಟಿಕೋನದ ಹೆಗ್ಗರುತು.
ಈಕೆ ದೆಹಲಿಯ ಚಂದ್ರಾ ನಾರಂಗ್ ಇನ್ ಸ್ಟಿಟ್ಯೂಟ್ ಆಫ್ ಫಿಲಮ್ಸ್ ನಿಂದ ಡಿಪ್ಲೊಮಾ ಪಡೆದು, ವಾಲ್ಟ್ ಡಿಸ್ನಿ ಕಾರ್ಟೂನ್ ನ ಮಿಕಿ ಮೌಸ್, ಡೊನಾಲ್ಡ್ ಡಕ್ ಪಾತ್ರಗಳ ಹಿಂದಿ ಅವತರಣಿಕೆಗಳಿಗೆ ಕಂಠದಾನ ನೀಡಿ, ಪ್ರೊಡಕ್ಷನ್ ಮ್ಯಾನೇಜರ್‌ಸ್ಕ್ರಿಪ್ಟ್ ರೈಟರ್‌ಆಗಿಯೂ ದುಡಿದಿದ್ದಾರೆ. `ಗುಡಿಯಾ ರಾಣಿ' ಮುಂತಾದ ಅನೇಕ ವಿಡಿಯೋ ರೂಪಿಸಿದ್ದಾರೆ. ಸಂಗೀತದ ಕುರಿತಾದ ಈಕೆಯ ಅನನ್ಯ ಸಾಧನೆ ಗುರುತಿಸಿ, ಘಟಾನುಘಟಿಗಳಾದ ಗುಲಾಂ ಅಲಿ ಖಾನ್ ರಿಂದ, ಜಗ್ ಜೀತ್ ಸಿಂಗ್ ರವರೆಗೂ ಮನದುಂಬಿ ಆಶೀರ್ವದಿಸಿದ್ದಾರೆ. ಪ್ರಸ್ತುತ ಈಕೆ ಹೈಯರ್ ಕಾನ್ಶಿಯಸ್ ನೆಸ್ ಕುರಿತಾಗಿ ದೊಡ್ಡ ಪುಸ್ತಕ ಬರೆಯುತ್ತಿದ್ದಾರೆ.
ತಮ್ಮ ಈ ಪರಿಶ್ರಮದ ಕುರಿತು ಈಕೆ, ``ನಾನು ಚಿಕ್ಕ ವಯಸ್ಸಿನಿಂದಲೇ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ವಿಶಾರದಾ ಡಿಗ್ರಿ ಪಡೆದಿದ್ದೆ. ನನಗೆ ಖ್ಯಾತ ಸ್ಪಿಕ್ ಮ್ಯಾಕ್ ಸಂಸ್ಥೆಯಿಂದ ಸ್ಕಾಲರ್ ಶಿಪ್ ಸಹ ದೊರಕಿದೆ. ಶಾಲಾ ದಿನಗಳಿಂದಲೇ ನನಗೆ ಗುರುಬಾಣಿ ಹಾಡುವುದೆಂದರೆ ಬಲು ಇಷ್ಟ. ಪ್ರೊಫೆಶನಲಿ ನಾನೊಬ್ಬ ಆರ್ಕಿಟೆಕ್ಟ್. ನಾನುಖ್ಡಯ ಆರ್ಕಿಟೆಕ್ಚರ್ ಡಿಗ್ರಿ ಪಡೆದೆ. ಇದಕ್ಕಿಂತಲೂ ಸಂಗೀತವೇ ನನ್ನ ಉಸಿರಾಗಿ ಅದನ್ನೇ ಪ್ರವೃತ್ತಿಯಾಗಿಸಿಕೊಂಡೆ. ಅದನ್ನು ಕಲಿಯುವಾಗಲೇ ನಾನು ಹಲವಾರು ಸಂಗೀತ ಕಚೇರಿಗಳನ್ನು ನಡೆಸುತ್ತಿದ್ದೆ. ನನ್ನ ಈ ಕೆರಿಯರ್ ಶುರುವಾಗಿದ್ದೇ ಜಗಜೀತ್ ಸಿಂಗ್ ರ ಜೊತೆ. 1994ರಲ್ಲಿ ದೆಹಲಿಯ ಅಂಬೇಡ್ಕರ್ ಸ್ಟೇಡಿಯಂನಲ್ಲಿ ನನ್ನ ಮೊದಲ ಕಚೇರಿ ನಡೆಯಿತು. ಅಲ್ಲಿ ಅವರು ಲುಂಗಿ ಲಾಚಾ ಧರಿಸಿ ಪ್ರದರ್ಶನ ನೀಡಿದ್ದು ಗಮನಾರ್ಹ! ಅಲ್ಲಿಗೆ ಪ್ರತಿಭಾನ್ವಿತ ಪಂಜಾಬಿ ಗಾಯಕರು ಬಂದಿದ್ದರು, ಅದರಲ್ಲಿ ದೀರ್ ಮೆಹೆಂದಿ ಸಹ ಹಾಡುತ್ತಿದ್ದರು. ಅವರಿಗೂ ಅದೇ ಮೊದಲ ಸ್ಟೇಡಿಯಂ ಕಚೇರಿ. 10 ಸಾವಿರ ಶ್ರೋತೃಗಳ ಎದುರು ಕಚೇರಿ ನಡೆಸಿದ್ದು ನನ್ನ ಜೀವನದ ದೊಡ್ಡ ಮೈಲಿಗಲ್ಲು!





