ಒಂದು ಆಟದಲ್ಲಿ ವಿಶ್ವ ಚಾಂಪಿಯನ್ ಆಗೋದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಇಡೀ ತಂಡವನ್ನ ನಿಭಾಯಿಸುವಂತಹ ನಾಯಕನಾಗಿ ಇಡೀ ತಂಡವನ್ನು ಫೈನಲ್ ಗೆ ತಂದು ಕಪ್ ಹಿಡಿಯೋದು ಕಷ್ಟದ ಮಾತೇ.. ಸವಾಲೇ ಸರಿ. ಅಂತಹ ಸವಾಲನ್ನು ಮೆಟ್ಟಿ ನಿಂತು ಇಡೀ ವಿಶ್ವವನ್ನ ಗೆದ್ದಿರೋದು ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್.
ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಭಾರತಕ್ಕೆ ವಿಶ್ವಚಾಂಪಿಯನ್ ತಂದುಕೊಟ್ಟ 3ನೇ ಕ್ಯಾಪ್ಟನ್. ಹೌದು. ಐಸಿಸಿ ಏಕದಿನ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆದ್ದ ಭಾರತದ 3ನೇ ಕ್ಯಾಪ್ಟನ್ ಇವರು. 1983ರಲ್ಲಿ ಕಪಿಲ್ ದೇವ್, 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಪುರುಷರ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿತ್ತು. ಇದೀಗ 2025ರಲ್ಲಿ ಹರ್ಮನ್ ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತದ ಮಹಿಳಾ ತಂಡ ಚೊಚ್ಚಲ ಮಹಿಳಾ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಧೋನಿ ರೀತಿ ಕೌರ್ ಫಿನಿಶರ್ : 2011ರಲ್ಲಿ ಭಾರತ ಪುರುಷರ ತಂಡ ಮುಂಬೈನಲ್ಲಿ ವಿಶ್ವಕಪ್ ಗೆದ್ದಾಗ ಪಂದ್ಯಕ್ಕೆ ಫಿನಿಶಿಂಗ್ ಕೊಟ್ಟಿದ್ದು ಮಹೇಂದ್ರ ಸಿಂಗ್ ಧೋನಿ. ಶ್ರೀಲಂಕಾದ ಕುಲಶೇಖರ ಎಸೆದ ಎಸೆತವನ್ನು ಸಿಕ್ಸರ್ ಬಾರಿಸಿದ ಧೋನಿ ಮ್ಯಾಚ್ ಫಿನಿಶಿಂಗ್ ಮಾಡಿದ್ದರು. ಅದೇ ರೀತಿ ಇಲ್ಲಿ ನಾಯಕಿ ಹರ್ಮನ್ ಪ್ರೀತ್ 2025ರ ವಿಶ್ವಕಪ್ನ ಫೈನಲ್ನಲ್ಲಿ ಎದುರಾಳಿ ದಕ್ಷಿಣ ಆಫ್ರಿಕಾದ ಡಿ ಕ್ಲೆರ್ಕ್ ಬಾರಿಸಿದ ಚೆಂಡನ್ನು ಕ್ಯಾಚ್ ಹಿಡಿಯೋ ಮೂಲಕ ಚಾಂಪಿಯನ್ ಫಿನಿಶಿಂಗ್ ಕೊಟ್ಟರು.
ಗುರುವಿಗೆ ನಮಿಸಿದ ಶಿಷ್ಯೆ : ಗುರು ಇದ್ದರೆ ಗುರಿ ಮುಟ್ಟಬಹುದು. ಗುರಿ ಇದ್ದರೂ ಗುರು ಇಲ್ಲದಿದ್ದಲ್ಲಲಿ ಗುರಿ ಮುಟ್ಟಲು ಅಸಾಧ್ಯ ಅನ್ನೋ ಮಾತಿದೆ. ಅದೇ ರೀತಿ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಸಾಧನೆಯ ಹಿಂದೆ ಗುರುವಿನ ಪಾತ್ರ ಬಹುದೊಡ್ಡದು. ಅದಕ್ಕಾಗಿಯೇ ವಿಶ್ವಚಾಂಪಿಯನ್ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಮ್ಯಾಚ್ ಮುಗಿದಾಕ್ಷಣ ಕೌರ್ ತನ್ನ ಗುರುವಿಗೆ ನಮಿಸಿದರು. ಮೈದಾನದಲ್ಲೇ ಕೋಚ್ ಅಮೋಲ್ ಮಜುಂದಾರ್ ಅವರ ಕಾಲಿಗೆ ಬಿದ್ದು ಭಾವುಕರಾದರು. ಶಿಷ್ಯೆಯ ಈ ಸಾಧನೆಗೆ ಭಾವುಕರಾಗಿದ್ದ ಕೋಚ್ ಅಮೋಲ್ ಮಜುಂದಾರ್, ಕೌರ್ ಬೆನ್ನುತಟ್ಟಿ ಶುಭಾಶಯ ತಿಳಿಸಿದರು. ಈ ಫೋಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಗುರು, ಶಿಷ್ಯೆ ಅಂದ್ರೆ ಹೀಗಿರಬೇಕು ಅನ್ನೋ ಪಾಸಿಟಿವ್ ಕಮೆಂಟ್ ಬರುತ್ತಿವೆ.





