ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಣ್ಣುಮಕ್ಕಳು ಚದುರಂಗ ಆಟದಲ್ಲಿ ಉನ್ನತ ಸಾಧನೆ ಸಾಧಿಸುವುದು ಸಣ್ಣ ವಿಷಯವಲ್ಲ. ಅದರಲ್ಲಿ ನಮ್ಮ ಭಾರತದ ಹೆಮ್ಮೆಯ ಪುತ್ರಿ ಕೊನೆರು ಹಂಪಿ, ಎರಡನೇ ಬಾರಿಗೆ ವರ್ಲ್ಡ್ ರಾಪಿಡ್ ಚೆಸ್ ಚಾಂಪಿಯನ್ ಆಗಿರುವುದರ ಹಿನ್ನೆಲೆಯ ಬಗ್ಗೆ ವಿವರವಾಗಿ ತಿಳಿಯೋಣವೇ.......?
ವಿಶ್ವವನ್ನೇ ಗೆದ್ದ ಆಕೆಯ ಕಣ್ಣಿನಲ್ಲಿ ಸಾರ್ಥಕತೆ ಇತ್ತು. ಇಡೀ ಜಗತ್ತೇ ತನ್ನತ್ತ ತಿರುಗಿ ನೋಡಿ ಭೇಷ್ ಎಂದು ಬಹುಪರಾಕ್ ಹಾಕುತ್ತಿದ್ದಾಗ ಆಕೆಯ ಮನಸ್ಸಿನಲ್ಲಿ ಧನ್ಯತಾ ಮನೋಭಾವ ಮೂಡಿತ್ತು. ಬಾಲ್ಯದಿಂದಲೂ ಬೆಟ್ಟದಷ್ಟು ಕನಸು ಹೊತ್ತು ಸಾಧನೆಯ ಶಿಖರಕ್ಕೆ ತಂದು ನಿಲ್ಲಿಸಿದ ತನ್ನ ಹೆತ್ತವರಿಗೆ ಅಂತರಾಳದಲ್ಲೇ ಕೃತಜ್ಞತೆ ಸಲ್ಲಿಸುತ್ತಿದ್ದಳು.
ಚದುರಂಗದಾಟದಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಆಕೆ ಆ ಗೆಲುವನ್ನು ತನ್ನ ಕುಟುಂಬಕ್ಕೆ ಅರ್ಪಿಸುವಾಗ ಅಲ್ಲೇ ನೆರೆದಿದ್ದ ಅದೆಷ್ಟೋ ಮಂದಿಗೆ, ಟಿವಿ ಪರದೆ ಮೇಲೆ ನೋಡುತ್ತಿದ್ದ ಲಕ್ಷಾಂತರ ಜನರ ಮನ ಮಿಡಿದಿತ್ತು. ಅಂತಹ ಒಂದು ಅಮೃತಘಳಿಗೆಗೆ ಸಾಕ್ಷಿಯಾಗಿದ್ದು ಬೇರೆ ಯಾರೂ ಅಲ್ಲ, ನಮ್ಮ ಭಾರತದ ಹೆಮ್ಮೆಯ ಪುತ್ರಿ ಕೊನೆರು ಹಂಪಿ!
ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವ ರಾಪಿಡ್ ಚೆಸ್ ಚಾಂಪಿಯನ್ ಶಿಪ್ ನ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ತನ್ನ ಗೆಲುವನ್ನು ತನ್ನ ಕುಟುಂಬಕ್ಕೆ ಅರ್ಪಿಸುತ್ತಿದ್ದೇನೆ ಎಂದಾಗ ಆಕೆಗೆ ಕುಟುಂಬದ ಮೇಲೆ ಅದೆಷ್ಟು ಹೆಮ್ಮೆ ಇರಬೇಕು. ವಿಶ್ವ ಚಾಂಪಿಯನ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಕೊನೆರು ಹಂಪಿ, ``ಕುಟುಂಬದ ಬೆಂಬಲದಿಂದಾಗಿ ಇದು ಸಾಧ್ಯವಾಯಿತು ಎಂದು ಭಾವಿಸುತ್ತೇನೆ. ನನ್ನ ಪತಿ ಮತ್ತು ನನ್ನ ಪೋಷಕರು ನನಗೆ ಬಹಳ ಬೆಂಬಲ ನೀಡಿದ್ದಾರೆ. ನಾನು ಪ್ರಯಾಣಿಸುವಾಗ ನನ್ನ ಹೆತ್ತವರು ನನ್ನ ಮಗಳನ್ನು ನೋಡಿಕೊಳ್ಳುತ್ತಿದ್ದರು,'' ಎಂದು ಹೇಳಿದ ಆ ಮಾತಿನಲ್ಲಿ 37 ವರ್ಷದ ಆಕೆಯ ಸಾಧನೆಯ ಹಿಂದಿನ ಶಕ್ತಿ ಎಂಥದ್ದು ಎಂಬುದನ್ನು ಸಾರಿ ಸಾರಿ ಹೇಳಿದಂತಿತ್ತು.

ತಂದೆಗೇ ಚೆಕ್ ಮೇಟ್ ಇಟ್ಟಿದ್ದ ಹಂಪಿ
ಆಂಧ್ರ ಪ್ರದೇಶದ ವಿಜಯವಾಡ ಮೂಲದ ಕೊನೆರು ಹಂಪಿ ದಿಢೀರ್ ಎಂದು ಚಾಂಪಿಯನ್ ಆಗಿದ್ದಲ್ಲ. ಅದಕ್ಕೆ ನೋಡಿ ದೊಡ್ಡವರು ಹೇಳುವಂತೆ `ಕೈ ಕೆಸರಾದರೆ ಬಾಯಿ ಮೊಸರು.' ಅಂದರೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ. ಇಲ್ಲಿ ಕೊನೆರು ಹಂಪಿಯ ಸಾಧನೆಯ ಹಿರಿಮೆ, ಗರಿಮೆ ಎಲ್ಲ ತಂದೆ ಅಶೋಕ್ ಕೊನೆರು ಅವರಿಗೇ ಸಲ್ಲಿಸಲೇಬೇಕು. ಮಗಳಿಗಾಗಿ ಇದ್ದ ಕೆಲಸವನ್ನೂ ಬಿಟ್ಟು ತನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟ ತ್ಯಾಗಮಯಿಗೆ ಸೆಲ್ಯೂಟ್ ಹೊಡೆಯಲೇಬೇಕು.
ತಂದೆ ಕೊನೆರು ಅಶೋಕ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಬಿಡುವಿದ್ದಾಗ ಮನೆಯಲ್ಲಿ ಚೆಸ್ ಆಡುತ್ತಿದ್ದರು. ಸ್ಥಳೀಯ ಮಟ್ಟದಲ್ಲೇ ಹಲವು ಟೂರ್ನಮೆಂಟ್ ಗಳನ್ನು ಗೆದ್ದು ಚೆಸ್ ಪಂಟರ್ ಎನಿಸಿಕೊಂಡಿದ್ದರು. ಮನೆಯಲ್ಲೇ ಸ್ನೇಹಿತರ ಜೊತೆ ತಂದೆ ಚದುರಂಗದಾಟ ಆಡುತ್ತಿದ್ದಾಗ ತೊಡೆ ಮೇಲೆ ಕುಳಿತುಕೊಳ್ಳುತ್ತಿದ್ದ 34 ವರ್ಷದ ಮಗಳು ಕೊನೆರು ಹಂಪಿ, ಪಾನ್ ಗಳ ಮೂವ್ ಮೆಂಟ್ ನೋಡಿಕೊಳ್ಳುತ್ತಿದ್ದಳು. ಆ ವೇಳೆ ತನ್ನ ಮಗಳು ಕುತೂಹಲದಿಂದ ಕೇಳುತ್ತಿದ್ದ ಅದೆಷ್ಟೋ ಪ್ರಶ್ನೆಗಳಿಗೆ ಕೊನೆರು ಅಶೋಕ್ ಶಾಂತಚಿತ್ತದಿಂದಲೇ ಉತ್ತರ ಕೊಡುತ್ತಿದ್ದರು.





