ಇದು ನಿಜಕ್ಕೂ ಅಮೃತ ಘಳಿಗೆ.. ಇದು ನಿಜಕ್ಕೂ ಅವಿಸ್ಮರಣೀಯ. ದೇಶದ 130 ಕೋಟಿ ಜನರಿಗೆ ಖುಷಿ ಕೊಟ್ಟ ದಿನ. ಹೆಣ್ಮಕ್ಳಾ ಅಂತಾ ರಾಗ ತೆಗೆಯೋ ಅದೆಷ್ಟೋ ಜನರಿಗೆ ಮುಖಕ್ಕೆ ಹೊಡೆದಂತಹ ದಿನ. ಹೆಣ್ಮಕ್ಕಳನ್ನ ಹೀಗಳೆಯೋ ಅದೆಷ್ಟೋ ಮಂದಿಗೆ ಉತ್ತರ ಕೊಟ್ಟ ದಿನ. ಹೌದು.. ಇದು ನಿಜವಾಗಿಯೂ ಮಹಿಳೆಯರ ಐತಿಹಾಸಿಕ ಸಾಧನೆ. ಯಾಕಂದ್ರೆ, 47 ವರ್ಷಗಳಲ್ಲಿ ಸಾಧಿಸಲಾಗದ ಸಾಧನೆಯನ್ನು ಇಂದು ಮಾಡಿದ್ದಾರೆ ಅಂದ್ರೆ ನಿಜಕ್ಕೂ ಹೆಮ್ಮೆಯ ಸಂಗತಿ.. ಗರ್ವದ ಕ್ಷಣ.ಪುರುಷರ ಏಕದಿನ ಕ್ರಿಕೆಟ್​ ಶುರುವಾಗಿದ್ದ 1975ರಲ್ಲಿ. ಆದ್ರೆ, ಅದಕ್ಕೂ ಮೂರು ವರ್ಷಗಳ ಮುಂಚೆಯೇ 1973ರಲ್ಲೇ ಮಹಿಳಾ ವಿಶ್ವಕಪ್ ಆರಂಭವಾಗಿತ್ತು. ಮೊದಲ ಆವೃತ್ತಿಯಲ್ಲಿ ಭಾರತ ಆಟವಾಡಿರಲಿಲ್ಲ. ಬಳಿಕ 1978ರಿಂದ ಭಾರತ ಮಹಿಳಾ ತಂಡ ಆಡುತ್ತಿದೆ. ಅಂದಿನಿಂದ ಇಂದಿನವರೆಗೂ ಅರ್ಥಾತ್ 47 ವರ್ಷಗಳಿಂದ ವಿಶ್ವಕಪ್ ಗೆಲ್ಲುವ ಕನವರಿಕೆ ಹಾಗೆಯೇ ಇತ್ತು. ಇಡೀ ಭಾರತದ ನಾರಿ ಕೂಟದ ಕನಸು ನನಸಾಗದೇ ಹಾಗೇ ಉಳಿದಿತ್ತು. ಆ 47 ವರ್ಷಗಳ ಕಾಯುವಿಕೆ ಇದೀಗ ಕೊನೆಗೂ ಅಂತ್ಯವಾಗಿದೆ. ಇನ್ನು 2005, 2017ರಲ್ಲಿ ಭಾರತ ಮಹಿಳಾ ತಂಡ ಫೈನಲ್​ಗೇರಿದ್ದರೂ ಕೂಡ ಟ್ರೋಫಿ ಗೆಲ್ಲೋ ಅವಕಾಶ ಒಲಿದಿರಲಿಲ್ಲ. ಇದರ ಜೊತೆಗೆ 2009ರಿಂದ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್​ನಲ್ಲೂ ಭಾರತ ಚಾಂಪಿಯನ್ ಆಗಿಲ್ಲ. 2020ರಲ್ಲಿ ರನ್ನರ್ ಅಪ್ ಆಗಿದ್ದೇ ಭಾರತ ಮಹಿಳಾ ಕ್ರಿಕೆಟ್ ತಂಡದ ಸಾಧನೆಯಾಗಿದೆ. ಇದೀಗ ಅದೆಲ್ಲ ಕಹಿಯನ್ನೂ ಮರೆಸುವಂತೆ ಭಾರತ ವಿಶ್ವ ಚಾಂಪಿಯನ್ ಆಗಿದೆ. ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿ ವಿಶ್ವಕಪ್​ ಗೆ ಮುತ್ತಿಟ್ಟಿದೆ.

ವಿಶ್ವಕಪ್ ಗೆದ್ದ 4ನೇ ತಂಡ : ಮತ್ತೊಂದು ವಿಶೇಷವೇನೆಂದರೆ ಐಸಿಸಿ ಮಹಿಳಾ ವಿಶ್ವಕಪ್ ಗೆದ್ದ 4ನೇ ತಂಡ ಭಾರತ ಆಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ 7, ಇಂಗ್ಲೆಂಡ್ 4 ಹಾಗೂ ನ್ಯೂಜಿಲೆಂಡ್ 1 ಬಾರಿ ಚಾಂಪಿಯನ್ ಆಗಿವೆ. ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ (6 ಬಾರಿ), ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್​ ತಲಾ 1 ಬಾರಿ ಕಪ್ ಗೆದ್ದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ