– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಪವಿತ್ರಾ ಗೌಡ ಅವರು ಸುಪ್ರೀಂ ಕೋರ್ಟ್ ನೀಡಿದ್ದ ಜಾಮೀನು ರದ್ದುಪಡಿಸಿದ ಆದೇಶದ ಪುನರ್ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ, ಹೈಕೋರ್ಟ್ ನೀಡಿದ್ದ ಪವಿತ್ರಾ ಗೌಡ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ ತೀರ್ಪು ನೀಡಿತ್ತು. ಅದೇ ತೀರ್ಪನ್ನು ಮರುಪರಿಶೀಲಿಸಲು ಪವಿತ್ರಾ ಗೌಡ ಅವರು ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ.
ಈ ಅರ್ಜಿಯ ವಿಚಾರಣೆ ಗುರುವಾರ ನಡೆಯಲಿದ್ದು, ನ್ಯಾಯಮೂರ್ತಿ ಪರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಲಿದೆ.
ರಾಜ್ಯ ಸರ್ಕಾರದ ಪರವಾಗಿ ವಕೀಲ ಅನಿಲ್ ನಿಶಾನಿ ಪ್ರತಿಕ್ರಿಯೆ ನೀಡಿದ್ದು, “ಪವಿತ್ರಾ ಗೌಡ ಪುನರ್‌ಪರಿಶೀಲನೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಆ ಅರ್ಜಿಯ ಪ್ರತಿಯನ್ನು ರಾಜ್ಯ ಸರ್ಕಾರದ ವಕೀಲರಿಗೆ ಇನ್ನೂ ನೀಡಿಲ್ಲ. ಅರ್ಜಿ ಪ್ರತಿ ಸಿಕ್ಕ ಬಳಿಕ, ಯಾವ ಆಧಾರದ ಮೇಲೆ ಅರ್ಜಿ ಸಲ್ಲಿಸಲಾಗಿದೆ ಎಂಬುದು ಸ್ಪಷ್ಟವಾಗಲಿದೆ. ಗುರುವಾರದಂದು ಚೇಂಬರ್‌ನಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ,” ಎಂದು ತಿಳಿಸಿದ್ದಾರೆ.





