ಮಹಾನ್ ಸ್ಟಾರ್ ಪ್ರಿಯಾಂಕಾ ಚೋಪ್ರಾಳ ತಂಗಿ ಆದ ಮಾತ್ರಕ್ಕೆ ನನಗೇನೂ ಲಾಭ ಆಗಲಿಲ್ಲ ಎನ್ನುವ ಮೀರಾಳ ಮನದಾಳದ ಮಾತುಗಳನ್ನು ವಿವರವಾಗಿ ಅರಿಯೋಣವೇ……?
ಬಾಲಿವುಡ್ ನ ಪ್ರಬುದ್ಧ ನಟಿ ಮೀರಾ ಚೋಪ್ರಾ ಪ್ರಿಯಾಂಕಾ, ಪರಿಣೀತಿ, ಮನಾರಾ ಚೋಪ್ರಾರ ಕಸಿನ್. ಕಳೆದ 8 ವರ್ಷಗಳಿಂದ ಈಕೆ ಬಾಲಿವುಡ್ ನಲ್ಲಿ ಸಕ್ರಿಯಳಾಗಿದ್ದಾಳೆ. ಇತ್ತೀಚೆಗೆ 5 ಚಾನೆಲ್ ತಯಾರಿಸಿ, ಸಂದೀಪ್ ಸಿಂಗ್ ನಿರ್ದೇಶಿಸಿದ ಈಕೆಯ `ಸಫೇದ್’ ಚಿತ್ರ, ಸದಾ ಬಿಳಿ ಸೀರೆಯಲ್ಲಿರಬೇಕಾದ ವಿಧವೆಯ ಕರುಣಾಜನಕ ಕಥೆ ಸಾರುವ ಚಿತ್ರವಾಗಿ ಉತ್ತಮ ಪ್ರದರ್ಶನ ಕಂಡಿತು. ಈ ಚಿತ್ರದಲ್ಲಿ ಈಕೆ ಒಬ್ಬ ಖೋಜಾನನ್ನು ಪ್ರೇಮಿಸುವ ಕಥಾ ಹಂದರವಿದೆ. 80ರ ದಶಕದ ಈ ಕಥೆ, ಅಂದಿನ ಕಾಲದಲ್ಲಿ ವಿಧವೆ, ಖೋಜಾಗಳ ಸ್ಥಿತಿಗತಿಗಳನ್ನು ಎತ್ತಿ ತೋರಿಸಿದೆ.
ಇದಕ್ಕೆ ಮೊದಲು ಈಕೆ `ಸೆಕ್ಷನ್ 365′ ಚಿತ್ರದಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಪಾತ್ರ ನಿರ್ವಹಿಸಿದ್ದಳು. ತನ್ನ 8 ವರ್ಷದ ಕೆರಿಯರ್ ನಲ್ಲಿ ಮೀರಾ ಸಾಕಷ್ಟು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾಳೆ. ಗ್ಲಾಮರಸ್ ಪಾತ್ರಗಳನ್ನು ಯಾರಾದರೂ ಮಾಡಬಲ್ಲರು, ಇಂಥ ಕ್ಲಿಷ್ಟಕರ ಪಾತ್ರ ನಿರ್ವಹಿಸುವುದರಲ್ಲೇ ನಿಜಾದ ಸವಾಲು ಅಡಗಿದೆ ಎನ್ನುತ್ತಾಳೆ ಮೀರಾ.
40 ವರ್ಷದ ಮೀರಾ ತನ್ನನ್ನು ತಾನು ಎಲ್ಲರಿಗಿಂತ ವಿಭಿನ್ನ ಎಂದೇ ಭಾವಿಸುತ್ತಾಳೆ. ಆಕೆ ಆರಿಸಿಕೊಳ್ಳುವ ಪ್ರತಿ ಚಿತ್ರದ ಕಥೆಯೂ ವಿಭಿನ್ನ, ವಿಶಿಷ್ಟ ಆಗಿರುತ್ತದೆ.
ಈಕೆ ತನ್ನ ವೃತ್ತಿ ಜೀವನದ ಏರಿಳಿತ, ಲವ್ ಲೈಫ್ ಕುರಿತು ಏನು ಹೇಳಿದ್ದಾಳೆ ಎಂದು ನೋಡೋಣವೇ?

`ಸಫೇದ್’ ಚಿತ್ರದಲ್ಲಿ ಒಬ್ಬ ವಿಧವೆಯ ಪಾತ್ರ ನಿರ್ವಹಿಸಿದ್ದು ನಿನಗೆಷ್ಟು ಚಾಲೆಂಜಿಂಗ್ ಎನಿಸಿತು?
ಇದು ನನಗೆ ಕೇವಲ ಚಾಲೆಂಜಿಂಗ್ ಮಾತ್ರವಲ್ಲದೆ, ಬಹಳ ಆಸಕ್ತಿಪೂರ್ಣ ಪಾತ್ರ ಆಗಿತ್ತು! ಒಬ್ಬ ನಟಿಯಾಗಿ ನನಗೆ ಈ ಪಾತ್ರದಿಂದ ಹೆಚ್ಚಿನ ತೃಪ್ತಿ ದೊರಕಿದೆ. ಒಬ್ಬ ಮಧ್ಯಮ ವರ್ಗದ ವಿಧವೆಯ ಜೀವನ ಎಷ್ಟು ಯಾತನಾಮಯ ಎಂಬುದೂ ಇದರಿಂದ ಗೊತ್ತಾಯಿತು. ಇದರಲ್ಲಿ ಅವಳದು ಏನೂ ತಪ್ಪಿಲ್ಲದಿದ್ದರೂ ಸಮಾಜ ಅವಳನ್ನು ಎಷ್ಟು ಧಿಕ್ಕರಿಸುತ್ತದೆ ಎಂಬುದು 80ರ ದಶಕದ ಈ ಕಥೆಯಲ್ಲಿ ಸ್ಪಷ್ಟವಾಗಿದೆ.
ಅದೇ ತರಹ ಖೋಜಾ ಜೀವನ ಸಹ ಅಷ್ಟೇ ಯಾತನಾಮಯ ಆಗಿರುವುದು ತಿಳಿಯುತ್ತದೆ. ಅವರನ್ನು ಅತಿ ಕೀಳಾಗಿ ನಡೆಸಿಕೊಳ್ಳುತ್ತಾ, ನೀನು ಹುಟ್ಟಿದ್ದೇ ಖೋಜಾ ಆಗಲು ಎಂಬಂತೆ ಹೆಜ್ಜೆ ಹೆಜ್ಜೆಗೂ ದಂಡಿಸುತ್ತಾರೆ. ಇಂದಿಗೂ ನೀವು ಸಣ್ಣ ಹೋಬಳಿ, ಗ್ರಾಮಗಳಿಗೆ ಹೋಗಿ ನೋಡಿದಾಗ, ಅಲ್ಲಿನ ವಿಧವೆಯರ ಸ್ಥಿತಿ ಕಂಬನಿ ತರಿಸುತ್ತದೆ. ವಿಧವೆಯಾಗಿ ಇಂಥ ಅನೇಕ ಕಷ್ಟ ಕಾರ್ಪಣ್ಯಗಳಿಗೆ ಗುರಿಯಾಗಿರುವವರನ್ನು ಕಣ್ಣಾರೆ ನೋಡಿದ್ದೇನೆ. ಇಂದಿಗೂ ಅವರು ಕೇಶ ಮುಂಡನದ ಶಿಕ್ಷೆ ಅನುಭವಿಸುತ್ತಾರೆ. `ಫಣಿಯಮ್ಮ’ನ ಈ ರೂಪ ನಗರ ಪ್ರದೇಶಗಳಲ್ಲಿ ಕಂಡುಬರುವುದಿಲ್ಲ, ಆದರೆ ಗ್ರಾಮೀಣ ಪರಿಸ್ಥಿತಿ ಬಹಳ ಸುಧಾರಿಸಬೇಕಿದೆ.
ಈ ಚಿತ್ರದಲ್ಲಿ ನಿನ್ನ ಪಾತ್ರ ಖೋಜಾನನ್ನು ಪ್ರೇಮಿಸುತ್ತದೆ. ಅಂದ್ರೆ ಖೋಜಾಗಳ ದುಃಖದ ಬಗ್ಗೆಯೂ ಗೊತ್ತಾಯಿತೇ? ಅವರ ಬಗ್ಗೆ ಏನು ಹೇಳ್ತೀಯಾ?
ಈ ಚಿತ್ರದ ನಂತರ ನನಗೆ ಅಂಥವರನ್ನು ಕಂಡರೆ ಗೌರವದ ಭಾವನೆ ಹೆಚ್ಚುತ್ತಿದೆ. ಈಗ ರಸ್ತೆಯಲ್ಲಿ ಸಿಗ್ನಲ್ ಬಳಿ ಖೋಜಾ ಬಂದು ಹಣ ಬೇಡಿದಾಗ, ನಾನು ಅಂಥವರನ್ನು ಅಟ್ಟುವುದಿಲ್ಲ, ಬದಲಿಗೆ ಅವರಿಗೆ ಬೇಕಾದ ಸಹಾಯ ಮಾಡುವೆ. `ಸಫೇದ್’ ಚಿತ್ರದ ನಂತರವೇ ನನಗೆ ಇಂಥವರ ಹೃದಯದ ಮಾನವೀಯತೆಯ ಬಗ್ಗೆ ಅರಿವಾಯಿತು. ನಮ್ಮಿಂದ ಅವರು ಗೌರವ ಬಯಸುತ್ತಾರೆ, ಶಾಂತಿಯಿಂದ ನೆಮ್ಮದಿಯಾಗಿ ಬಾಳಲು ಬಯಸುತ್ತಾರೆ. ಇದಕ್ಕಿಂತ ಹೆಚ್ಚಾಗಿ ಅವರು ನಮ್ಮಿಂದ ಏನೂ ಅಪೇಕ್ಷಿಸುವುದಿಲ್ಲ. ಖೋಜಾ ಆಗಿರುವುದು ಅವರ ತಪ್ಪಲ್ಲ, ಆ ಕಾರಣಕ್ಕೆ ಅವರನ್ನು ಏಕೆ ಕೀಳಾಗಿ ಕಾಣಬೇಕು? ಇದಕ್ಕೆ ಮೊದಲು `ಸೆಕ್ಷನ್ 365′ ಚಿತ್ರದಲ್ಲಿ ಅತ್ಯಾಚಾರಕ್ಕೆ ತುತ್ತಾದ ಸಂತ್ರಸ್ತೆಯ ಪಾತ್ರ ನಿರ್ವಹಿಸಿದ್ದೆ.
ನಿನ್ನ ಎಲ್ಲಾ ಪಾತ್ರಗಳೂ ತೀರಾ ವಿಭಿನ್ನವಾಗಿರುತ್ತವೆ. ಇದನ್ನು ನೀನೇ ಆರಿಸಿಕೊಳ್ತೀಯಾ ಅಥವಾ ನಿನಗಾಗಿ ಅಂತಲೇ ಈ ಪಾತ್ರಗಳು ಬರುತ್ತಿವೆಯೇ?
ನಿಜ ಹೇಳಬೇಕು ಅಂದ್ರೆ ಇಂಥ ಪಾತ್ರಗಳನ್ನು ನಿಭಾಯಿಸಲು `ದಮ್’ ಇರಬೇಕು. ಗ್ಲಾಮರಸ್ ಪಾತ್ರಗಳನ್ನು ಯಾವ ಬಿಚ್ಚಮ್ಮಳಾದರೂ ಮಾಡಬಹುದು, ಆದರೆ ಗಟ್ಟಿ ಪಾತ್ರಗಳನ್ನಲ್ಲ! ಇಂಥ ಪಾತ್ರ ನಿಜಕ್ಕೂ ನಟನೆಗೆ ಸವಾಲು ಒಡ್ಡುತ್ತವೆ. ಈ ಕಾರಣಕ್ಕಾಗಿಯೇ ಸಿನಿಮಾಗಳ ವಿಚಾರದಲ್ಲಿ ನಾನು ಬಲು ಚೂಝಿ! ಏನೇ ಆಗಲಿ, ವಿಭಿನ್ನ ಪಾತ್ರ ನಿಭಾಯಿಸಿ, ಜನರ ಮನದಲ್ಲಿ ಬೇರೂರಬೇಕೆಂದು ಯತ್ನಿಸುವೆ. ಈ ಕಾರಣದಿಂದಲೇ ನಾನು ಬಾಲಿವುಡ್ ಗೆ ಬಂದು 8 ವರ್ಷ ಕಳೆದರೂ, ನನ್ನ ಚಿತ್ರಗಳು ಮಾತ್ರ 80ರ ಬಳಿ ಇಲ್ಲ! ಆದರೆ ನಾನು ಮಾಡಿರುವ ಚಿತ್ರಗಳು ಅರ್ಥಪೂರ್ಣ ಎಂಬ ಸಮಾಧಾನ ನನಗಿದೆ.
ನೀನು ಪ್ರಿಯಾಂಕಾಳ ಕಸಿನ್ ಸಿಸ್ಟರ್. ಇತರ ಕಸಿನ್ಸ್ ಆದ ಪರಿಣೀತಿ, ಮನಾರಾ ಸಹ ಬಾಲಿವುಡ್ ನಲ್ಲಿ ಸಕ್ರಿಯರಾಗಿದ್ದಾರೆ. ಹೀಗಿರುವಾಗ ಪ್ರಿಯಾಂಕಾಳ ತಂಗಿಯಾಗಿ ನಿನಗೆ ಏನಾದರೂ ಹೆಚ್ಚಿನ ಲಾಭವಾಗಿದೆಯೇ?
ಇದರಿಂದ ನನಗೆ ಲಾಭ ಇಲ್ಲ, ಹಾನಿಯೂ ಇಲ್ಲ! ಚೋಪ್ರಾ ಸಿಸ್ಟರ್ಸ್ ಆಗಿ ನಾವು ಬಾಲಿವುಡ್ ನಲ್ಲಿ ಬಲು ಸಕ್ರಿಯವಾಗಿದ್ದೇವೆ. ಇದೆಲ್ಲ ನಮ್ಮ ನಮ್ಮ ಐಡೆಂಟಿಟಿಯಿಂದ ಮಾತ್ರ ಸಾಧ್ಯವಾಗಿದೆ, ಯಾರಿಗೂ ಗಾಡ್ ಫಾದರ್ ಇಲ್ಲ. ಪ್ರಿಯಾಂಕಾ ಸಹ ಎಂದೂ ಯಾರಿಂದಲೂ ಸಹಾಯ ಕೇಳಿದವಳಲ್ಲ, ಹಾಗೆಯೇ ನಾನೂ ಅವಳನ್ನು ಸಹಾಯ ಕೋರಿ ಹೋಗಲೇ ಇಲ್ಲ. ಆಕೆ ಸಹ ಯಾರಿಗೂ ಸಹಾಯ ಮಾಡಲು ಮುಂದೆ ಬಂದವಳಲ್ಲ. ಪ್ರಿಯಾಂಕಾ ನನಗೆ ಗಾಡ್ ಮದರ್ ಆಗಿ ಬಂದಿದ್ದರೆ… ನನ್ನ ಕೆರಿಯರ್ ಬೇರೆಯೇ ರೀತಿ ಇರುತ್ತಿತ್ತು. ಹೀಗಾಗಿ ಇದರಲ್ಲಿ ಲಾಭ ಹಾನಿಯ ಪ್ರಶ್ನೆಯೇ ಇಲ್ಲ. ಇವತ್ತು ನಾನೇನಾಗಿದ್ದೇನೋ ಅದು ಕೇವಲ ನನ್ನೊಬ್ಬಳ ಶ್ರಮದಿಂದ!
ನಿನ್ನ ಮತ್ತೊಬ್ಬ ಕಸಿನ್ ಮನಾರಾ ಚೋಪ್ರಾ `ಬಿಗ್ ಬಾಸ್’ನಲ್ಲಿ ಧೂಳೆಬ್ಬಿಸಿದ್ದಾಳೆ. ಅವಕಾಶ ಸಿಕ್ಕರೆ ನೀನೂ ಅಲ್ಲಿಗೆ ಹೋಗ ಬಯಸುವೆಯಾ?
ಇಲ್ಲ… ಖಂಡಿತಾ ಇಲ್ಲ! ನನಗೆ ಬಿಗ್ ಬಾಸ್ ಶೋಗೆ ಹೋಗಲು ನಯಾ ಪೈಸೆ ಆಸಕ್ತಿಯೂ ಇಲ್ಲ.
`ಸಫೇದ್’ ಚಿತ್ರದಲ್ಲಿ ಡೈರೆಕ್ಟರ್ ಸಂದೀಪ್ಸಿಂಗ್, ನಟ ಅಭಯ್ ವರ್ಮ ಜೊತೆ ಕೆಲಸ ಮಾಡಿದ್ದು ಹೇಗನ್ನಿಸಿತು?
ಸಂದೀಪ್ ರಿಗೂ ಸಹ ಡೈರೆಕ್ಟರ್ ಆಗಿ ಇದೇ ಮೊದಲ ಚಿತ್ರ. ಆದರೆ ಆತ ಬಲು ಪಳಗಿದ ನಿರ್ದೇಶಕರಿಗಿಂತ ನಮ್ಮೆಲ್ಲರಿಂದ ಸೂಕ್ತವಾಗಿ ಕೆಲಸ ತೆಗೆದಿದ್ದಾರೆ. ಒಬ್ಬ ನಟಿಯಾಗಿ ಅವರ ಈ ಚಿತ್ರದಲ್ಲಿ ಕೆಲಸ ಮಾಡಲು ನನಗೆ ಬಹಳ ಇಷ್ಟವಾಯಿತು. ಇಲ್ಲಿ ನಾನು ಬಹಳಷ್ಟು ವಿಷಯಗಳನ್ನು ಕಲಿತಿರುವೆ.
ಅದೇ ತರಹ ಅಭಯ್ ಒಬ್ಬ ಉತ್ತಮ ನಟ. ತನ್ನ ಖೋಜಾ ಪಾತ್ರವನ್ನು ಆತ ಬಲು ಅಚ್ಚುಕಟ್ಟಾಗಿ ನಿಭಾಯಿಸಿದ್ದಾನೆ. ಅಸಲಿ ಜೀವನದಲ್ಲಿ ಆತನದು ಬಲು ಶಾಂತ, ಸರಳ ವ್ಯಕ್ತಿತ್ವ.
`ಸಫೇದ್’ ಚಿತ್ರದ ನಂತರ ನಿನ್ನ ಮುಂದಿನ ಯೋಜನೆಗಳೇನು?
ಈ ಚಿತ್ರದ ತರಹವೇ ನನಗೆ ಮುಂದೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುವಾಸೆ. ಸಮಾಜದ ಲೋಪ ದೋಷಗಳನ್ನು ತಿದ್ದಿ, ಜನರಲ್ಲಿ ಜಾಗೃತಿ ಮೂಡಿಸುವ ಪಾತ್ರಗಳನ್ನೇ ಮಾಡಬಯಸುತ್ತೇನೆ. ಸಿನಿಮಾ ಒಂದು ಪರಿಣಾಮಕಾರಿ ಮಾಧ್ಯಮ, ಇದರಿಂದ ಖಂಡಿತಾ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು. ಮೂಢನಂಬಿಕೆಗೆ ಸಿಲುಕಿ, ಅವಿದ್ಯಾವಂತರಾಗಿಯೇ ಉಳಿದುಬಿಡುವ ಲಕ್ಷಾಂತರ ಗ್ರಾಮೀಣ ಹೆಣ್ಣುಮಕ್ಕಳ ಬದುಕಲ್ಲಿ ಪ್ರಗತಿಪರ ಬದಲಾವಣೆ ಆಗಲೇಬೇಕಿದೆ!
ಕೇವಲ ಅರ್ಥಪೂರ್ಣ ಚಿತ್ರ, ಸಂದೇಶಗಳಿರುವಂಥ ಪಾತ್ರಗಳಲ್ಲಷ್ಟೇ ನಟಿಸುತ್ತಿರುವೆ. ಇದರ ಲಾಭ ಹಾನಿಗಳೇನು?
ಲಾಭ ಅಂದ್ರೆ…. ಒಬ್ಬ ನಟಿಯಾಗಿ ನಾನೀಗ ನಟನೆಯಲ್ಲಿ ಸಾಕಷ್ಟು ಪ್ರಬುದ್ಧತೆ ಗಳಿಸಿದ್ದೇನೆ. ನನ್ನ ಪಾತ್ರ ಗಮನಿಸಿ ಎಷ್ಟೋ ಸೀನಿಯರ್ ತಾರೆಯರು ಪ್ರಶಂಸಿಸಿದ್ದಾರೆ. ನಷ್ಟ ಅಂದ್ರೆ…. ನಾನು ನನ್ನ ಕಾಲ ಮೇಲೇ ನಿಂತು, ಎಸ್ಟಾಬ್ಲಿಷ್ ಆಗಲು ಇನ್ನೂ ಸಂಘರ್ಷ ನಡೆಸುತ್ತಲೇ ಇದ್ದೇನೆ!
ಬಹಳ ದಿನಗಳಿಂದ ನೀನು ಸಿಂಗಲ್ ಆಗಿ ಉಳಿದು ಬಿಟ್ಟಿರುವೆ. ಮುಂದೆ ಮದುವೆ ಯೋಜನೆಗಳೇನು?
ಬಹಳ ವರ್ಷ ಸಿಂಗಲ್ ಆಗಿದ್ದು ಸಾಕಾಗಿದೆ. ಮುಂದೆ ಮದುವೆ ಆಗಲೇಬೇಕು ಎಂದು ನಿರ್ಧರಿಸಿರುವೆ. ಮೊದಲು ಅಮೆರಿಕಾದಲ್ಲಿ ಕಲಿಕೆ, ನಂತರ ದ. ಭಾರತದಲ್ಲಿ ಕೆರಿಯರ್ ಕಟ್ಟಿಕೊಳ್ಳಲು ಯತ್ನಿಸಿದೆ. ಕಳೆದ 15 ವರ್ಷಗಳಿಂದ ಮುಂಬೈನಲ್ಲಿ ಒಂಟಿಯಾಗಿದ್ದೇನೆ. ಹೀಗಾಗಿ ಈ ವರ್ಷದ ದೀಪಾವಳಿ ಹೊತ್ತಿಗೆ ಮದುವೆ ಆಗಲೇಬೇಕು ಅಂತ ನಿರ್ಧರಿಸಿರುವೆ. ಮದುವೆ ಯಾರೊಂದಿಗೆ ಯಾವಾಗ ಎಂಬುದನ್ನು ಪ್ರೆಸ್ ಮೀಟ್ ನಲ್ಲಿ ಖಂಡಿತಾ ತಿಳಿಸುವೆ.
ನಟನೆ ಬಿಟ್ಟು ಫೋಟೋಗ್ರಫಿ ಅಥವಾ ನಿರ್ದೇಶನದತ್ತ ನಿನ್ನ ಗಮನ ಹರಿದಿದೆಯೇ?
ಹೌದು, ನನ್ನದೇ ಆದ ಪ್ರೊಡಕ್ಷನ್ ಹೌಸ್ ಶುರು ಮಾಡಬೇಕು ಅಂತಿದ್ದೇನೆ. ಆಗ ಅತ್ಯುತ್ತಮ ಕಥೆಗಳನ್ನು ಆರಿಸಿ, ಚಿತ್ರ ಆರಂಭಿಸಲು ನಿರ್ಮಾಪಕಿಯಾಗಿ ನನಗೆ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ.
– ಪ್ರತಿನಿಧಿ





