– ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಪುಸ್ತಕ ಹಬ್ಬದ ವೇದಿಕೆಯಲ್ಲಿ ಪ್ರೊ. ಎಲ್ ವಿ ಶಾಂತಕುಮಾರಿ ಹಾಗೂ ಶತಾವಧಾನಿ ಡಾ. ಆರ್ ಗಣೇಶ್‍ಅವರಿಗೆ ಕಾದಂಬರಿ ಸಾರ್ವಭೌಮ ಅನಕೃ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಅಶೋಕ ಹಾರನಹಳ್ಳಿಯವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ನಾಡೋಜ ಡಾ. ಎಸ್ ಆರ್ ರಾಮಸ್ವಾಮಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಪ್ರೊ. ಎಲ್ ವಿ ಶಾಂತಕುಮಾರಿಯವರ ಎ ಲಿಟರರಿ ಲುಮಿನರಿ: ಕ್ರಿಟಿಕಲ್ ಅಪ್ರಿಸಿಯೇಷನ್ಸ್ ಆಫ್ ಎಸ್ ಎಲ್ ಭೈರಪ್ಪಾಸ್ ನಾವೆಲ್ಸ್ ಕೃತಿಯನ್ನೂ ಬಿಡುಗಡೆ ಮಾಡಲಾಯಿತು. ಹಾಗೂ ಶ್ರೀ ಶಶಿಕಿರಣ ಬಿ ಎನ್ ಅವರು ಅಭಿನಂದನಾ ಭಾಷಣ ಮಾಡಿದರು.

ಅನಕೃ ಪ್ರತಿಷ್ಠಾನದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಕೃ ವಿಶ್ವಸ್ಥರಲ್ಲಿ ಒಬ್ಬರಾದ ಶ್ರೀ ಬಿ ವಿ ರಾಜಾರಾಂ, ಅನಕೃ ಅವರ ಮಗ ಶ್ರೀ ಗೌತಮ್‌ ಹಾಗೂ ಅನಕೃ ಕುಟುಂಬದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೇದಿಕೆಯನ್ನು ಅಲಂಕರಿಸಿದ್ದ ಎಲ್ಲರನ್ನೂ ಪರಿಚಯಿಸಿ ಸ್ವಾಗತಿಸಿ ಮಾತನಾಡಿದ ಶ್ರೀ ಬಿ ವಿ ರಾಜಾರಾಂ ಅವರು ನವೆಂಬರ್‌ ತಿಂಗಳ ಪುಸ್ತಕ ಜಾತ್ರೆಯಲ್ಲಿ ಅನಕೃ ಅವರನ್ನು ನೆನಪಿಸುತ್ತಿರುವುದು ಸಂತೋಷ ತಂದಿದೆ.  ನಮ್ಮ ಪೀಳಿಗೆಯವರಿಗೆ ಅನಕೃ ಪರಿಚಯವಿದ್ದರೂ, ಇಂದಿನ ಯುವ ಪೀಳಿಗೆಗೆ ಅವರನ್ನು ಪರಿಚಯಿಸುವ ಅಗತ್ಯವಿದೆ. ಪ್ರೊ. ಎಲ್ ವಿ ಶಾಂತಕುಮಾರಿಯವರು ಕನ್ನಡವನ್ನು ಇಂಗ್ಲಿಷ್‌ ಮೂಲಕ ಎಲ್ಲರಿಗೂ ತಲಪಿಸಿದವರು, ಕನ್ನಡದ ಚಿಂತನೆಯನ್ನು ಇಂಗ್ಲಿಷಿಗೆ ಅನುವಾದಿಸಿದವರು ಎಂದು ಹೇಳಿದರು. ಡಾ. ಆರ್ ಗಣೇಶ್‌ ಅವರನ್ನು ಪುರುಷ ಸರಸ್ವತಿ ಎನ್ನುವ ಅಭಿದಾನದಿಂದ ಕರೆಯಬಹುದು ಎಂದೂ ಬಣ್ಣಿಸಿದರು.

ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದ ಶ್ರೀ ಬಿ ಎನ್ ‌ಶಶಿಕಿರಣ್‌ ಅವರು ಅಭಿನಂದನಾ ಮಾತುಗಳನ್ನಾಡುತ್ತ, ಪ್ರೊ. ಶಾಂತಕುಮಾರಿಯವರು ಸಹಜ ಮಾತೃವಾತ್ಸಲ್ಯದವರಾಗಿದ್ದು, ಆರ್ ಗಣೇಶ್‌ ಅವರಿಗೆ ತಾಯಿ ಸ್ಥಾನದಲ್ಲಿರುವವರು. ಇಂದು ತಾಯಿ, ಮಗನಿಗೆ ಒಂದೇ ಪ್ರಶಸ್ತಿ ದೊರಕಿದಂತಿದೆ. ಡಾ. ಆರ್‌ ಗಣೇಶ್‌ ಹಾಗೂ ಎಲ್ ವಿ ಶಾಂತಕುಮಾರಿ ಇವರಿಬ್ಬರೂ ತಾವು ಸಂತೋಷಪಟ್ಟು ಇತರರಿಗೂ ಸಂತೋಷವನ್ನು ಹಂಚುವುದರಲ್ಲಿ ಸಂತೋಷ ಕಾಣುವವರು. ಹಾಗೂ ಸರಳ ಜೀವನದ ಎಲ್ಲರಿಗೂ ಸುಲಭರು. ಶಾಂತಕುಮಾರಿ ಅವರು ಹೆಚ್ಚು ಪ್ರವಾಸ ಮಾಡದಿದ್ದರೂ ಮನೆಯ ಮುಂದಿನ ಹೊಂಗೆಯ ಮರ ಚಿಗುರುವುದನ್ನೇ ನೋಡಿ ಸಂತಸಪಡುತ್ತಾರೆ. ಆರ್‌ ಗಣೇಶ್‌ ಅವರು ಮರಗಿಡದ ವೈವಿಧ್ಯವನ್ನು ಗುರುತಿಸಿ, ಬೇರೆಯವರಿಗೆ ಹೇಳಿ ಸಂತೋಷಪಡುತ್ತಾರೆ. ತಮ್ಮ ಮಾತು, ಕೃತಿ ಎರಡರ ನಡುವೆ ಬಿರುಕಿಲ್ಲದೇ ಕೃತಿಯಂತೆ, ಮಾತಿನಂತೆ ಬದುಕುವ, ಮನೆಗೆ ಬಂದವರಿಗೆ ಅಡುಗೆ ಮಾಡಿಬಡಿಸಿ ಸಂತೋಷಪಡುವ ಸರಳ ಸಜ್ಜನರು. ಇವರ ಜೀವನ ಪ್ರೀತಿ, ಜೀವನೋತ್ಸಾಹ ಅನುಕರಣೀಯ.

ನೋಡಿದರೂ ಮನಸ್ಸು ಮುದಗೊಳ್ಳುವಂತಿರುವ 40ಕ್ಕೂ ಹೆಚ್ಚು ಕೃತಿ ಬರೆದ ಶಾಂತಕುಮಾರಿ ಅವರ ಸತ್ವ ಸೌಮ್ಯವಾದದ್ದು, ಪರಿಣಾಮಕಾರಿಯಾದದ್ದು. ತಂದೆ ಪುಸ್ತಕದ ಹುಚ್ಚನ್ನು ಹಚ್ಚಿಸಿದ್ದು, ಜೀವನದ ಸಂಧ್ಯೆಯಲ್ಲೂ ಅದು ಅವರ ಕೈ ಹಿಡಿದಿದೆ. ಮೊದಲು ಫಾರ್ಮಲ್‌ ಶಿಕ್ಷಣ ಹೆಚ್ಚಿರದಿದ್ದರೂ ಮಕ್ಕಳು ದೊಡ್ಡವರಾದ ಬಳಿಕ ಕುಟುಂಬದ ಹೊಣೆ ಹೊತ್ತುಕೊಂಡೇ ಇಂಗ್ಲಿಷ್‌ ಸಾಹಿತ್ಯದಲ್ಲಿ ಪದವಿ ಪಡೆದು ಪ್ರೊಫೆಸರ್‌ ಆದ ಅವರು ವ್ಯಾಪ್ತಿಯುಳ್ಳ ಅನುವಾದಕರು. ಎಲ್ಲರಿಗೂ ಅರ್ಥವಾಗುವಂತೆ ಬರೆಯುವ ಇವರ ಯಾವ ಕೆಲಸಕ್ಕೂ ಯಾರ ಪ್ರೇರಣೆಯನ್ನೂ ಬಯಸದೇ ಸ್ವ-ಪ್ರೇರಣೆಯಿಂದ ಬರೆದರು. ವಿಮರ್ಶೆಯಲ್ಲಿ ಔದಾರ್ಯವನ್ನು ಕಾಪಿಟ್ಟುಕೊಂಡ ಇವರು ಮಾಸ್ತಿಯವರನ್ನು ಹೋಲುತ್ತಾರೆ. ಎಲ್ಲೂ ಜಡ್ಜಮೆಂಟಲ್‌ ಆಗಿ ಕಾಣುವುದಿಲ್ಲ. ಮನೆಕೆಲಸದ ನಡುವೆಯೂ ಯಾವುದೇ ಕೆಲಸವನ್ನು ಅರ್ಧಮಾಡದೇ ಪೂರ್ಣಗೊಳಿಸುವ ಇವರು ಬರೆಯುವ ವಿಮರ್ಶೆಯಲ್ಲಿ ಅಬ್ಬರ ಅತಿ ಕಾಣುವುದಿಲ್ಲ. ಮೂಲಕೃತಿಯ ಆಶಯವನ್ನೇ ಬರೆಯುತ್ತಾರೆ. ಭೈರಪ್ಪನವರ ಕೃತಿಯ ವಿಮರ್ಶೆಯಲ್ಲೂ ಜೈ ಜೈ ಎನ್ನದೇ ಮೂಲ ಆಶಯವನ್ನಷ್ಟೇ ಬರೆದವರು ಶಾಂತಕುಮಾರಿಯವರು. ಒಂದೇ ಮಾತಿನಲ್ಲಿ ಹೇಳುವುದಾದರೆ ಶಾಂತಕುಮಾರಿಯವರದ್ದು ಎಲ್ಲ ವಿಷಯದಲ್ಲೂ ಅಂಗೀಕಾರ ಎಂದರು.

ಅವಧಾನ ಕಲೆಯನ್ನು ಆರ್‌ ಗಣೇಶ್‌ ಅವರು ಪುನರುಜ್ಜೀವನಗೊಳಿಸಿದ್ದು, ಡಿವಿಜಿ, ಭೈರಪ್ಪನವರ ಸಾಹಿತ್ಯದ ಮೇಲೆ ಅವಧಾನ ನಡೆಸಿ ಅದನ್ನು ತಮ್ಮೊಳಗೆ ಆವಾಹಿಸಿಕೊಂಡ ಬಹಶ್ರುತ ವಿದ್ವಾಂಸರು, ಏಕವ್ಯಕ್ತಿ ವಿಶ್ವವಿದ್ಯಾಲಯ ಆರ್‌ ಗಣೇಶ್‌ ಅವರು. 15,000ಕ್ಕೂ ಹೆಚ್ಚು ಗಂಟೆಗಳ ರೆಕಾರ್ಡೆಡ್‌ ಭಾಷಣಗಳು ಇದ್ದು, ಆಪ್ತ ಅಧ್ಯಯನ ಗೋಷ್ಠಿಗಳನ್ನು ನಡೆಸುತ್ತಾರೆ. 1500ಕ್ಕೂ ಹೆಚ್ಚು ಅವಧಾನ, ಸಾವಿರಕ್ಕೂ ಹೆಚ್ಚು ಏಕವ್ಯಕ್ತಿ ಯಕ್ಷಗಾನ, ಸಾವಿರಕ್ಕೂ ಹೆಚ್ಚು ಕಾವ್ಯಚಿತ್ರಗಳನ್ನು ನಡೆಸಿಕೊಟ್ಟಿದ್ದಾರೆ. ಎಸ್ ಆರ್ ‌ರಾಮಸ್ವಾಮಿಯವರು ನೀಡಿದ ಅಭಿದಾನ ಸಂಸ್ಕೃತಿಯ ಪ್ರಹರಿ ನಿಜಕ್ಕೂ ಅವರಿಗೆ ಹೊಂದುತ್ತದೆ. ಆನಂದ ರುಣ ಎನ್ನುವ ಅವರು ಎಲ್ಲರಿಗೂ ಸುಲಭರು, ಸರಳರು ಎಂದು ಅವರಿಬ್ಬರಿಗೂ ಅಭಿವಂದನೆ ಸಲ್ಲಿಸಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಾಡೋಜ ಡಾ. ಎಸ್ ಆರ್ ‌ರಾಮಸ್ವಾಮಿಯವರು, ಅನಕೃ ತಾವು ಗಳಿಸಿದ ಪಾಂಡಿತ್ಯವನ್ನು ಸಮಾಜಕ್ಕೆ ಹಂಚಲು ಪ್ರಯತ್ನಪಟ್ಟರು. ಆರ್ ‌ಗಣೇಶ್‌ ಹಾಗೂ ಶಾಂತಕುಮಾರಿಯವರೂ ಆ ವಾರಸಿಕೆಯನ್ನು ಮುಂದುವರಿಸಿದ್ದಾರೆ. ಅನಕೃ ಕಾದಂಬರಿಕಾರ ಎನ್ನುವುದು ಲೇಬಲ್‌ ಆಗಿದೆಯಾದರೂ ಅವರದು ವರ್ಸಟೈಲ್‌ ಪರ್ಸನಾಲಿಟಿಯಾಗಿದ್ದು, ಸಾಮಾಜಿಕ ಕಾದಂಬರಿ ಬರೆದು ಜನರಲ್ಲಿ ವಾಸನಾಭಿರುಚಿಯನ್ನು ಬೆಳೆಸಿದರು. ಅವರು 16-17 ಐತಿಹಾಸಿಕ ಕಾದಂಬರಿ, 20ಕ್ಕೂ ಹೆಚ್ಚು ನಾಟಕ, ಜೀವನ ಚರಿತ್ರೆ, ವ್ಯಕ್ತಿಚಿತ್ರಣ ಬರೆದಿದ್ದು, ಕಲೆ ಕಲಾವಿದರ ಬಗ್ಗೆ ಕನ್ನಡದಲ್ಲಿ ಬರೆದ ಮೊದಲಿಗರಾಗಿದ್ದು, ಸ್ವ-ಪರಿಶ್ರಮದಿಂದ ಬರೆದರು. ಅನಕೃ ಅವರ ಇತರ ಕೃತಿಗಳ ಅಧ್ಯಯನವೂ ಆಗಬೇಕಿದೆ ಎಂದರು.

ಪ್ರಶಸ್ತಿ ಪುರಸ್ಕೃತೆ ಪ್ರೊ. ಎಲ್ ವಿ ಶಾಂತಕುಮಾರಿ ಅವರು ಮಾತನಾಡುತ್ತ, ತನಗೆ ತುಮಕೂರಿನಲ್ಲಿ ಒಂದು ಅಂಗಡಿಯಿಂದ ಅನಕೃ ಕೃತಿಯನ್ನು ತಮ್ಮ ಪತಿ ತಂದುಕೊಡುತ್ತಿದ್ದು, ಅಂಗಡಿಯವನು ಹೇಳಿದಂತೆ ತಾವು ಒಂದೇ ರಾತ್ರಿಯಲ್ಲಿ ಅದನ್ನು ಸ್ವಲ್ಪವೂ ಅಂದಗೆಡಿಸದೇ ಓದಿ ಹಿಂತಿರುಗಿಸುತ್ತಿದ್ದೆ. ಇಂಗ್ಲಿಷ್‌ ಸಾಹಿತ್ಯದಲ್ಲಿ ಪ್ರೀತಿ ಹುಟ್ಟಿದ್ದೇ ಅನಕೃ ಕೃತಿ ಓದಿ. ಅವರ ಭಾಷಣಕ್ಕೆ ತಪ್ಪದೇ ಹಾಜರಾಗುತ್ತಿದ್ದು, ಜಾನಪದ ಗೀತೆ, ಇಂಗ್ಲಿಷ್‌ ಕ್ವಟೇಶನ್‌, ವಚನ ಇವೆಲ್ಲವೂ ಪರಿಚಯವಾದದ್ದೇ ಅಲ್ಲಿ. ಅನಕೃ ಪುಸ್ತಕದಿಂದ ನಾಡುನುಡಿಗೆ ಪ್ರಚಾರ ಮಾಡಿದರೆ ಭಾಷಣ ಮಾಡಿ ಜಾಗೃತಿ ಮೂಡಿಸಿದರು. ಅವರು ತಮ್ಮ ಸಮಯಕ್ಕಿಂತ ತುಂಬ ಮುಂದಿದ್ದವರು. ಅವರು ಮಾಡಿದ್ದಕ್ಕೆ ನಮಗಿಂದು ಕನ್ನಡದ ಬಗ್ಗೆ ಇಷ್ಟು ಅಭಿಮಾನ. ಆ ಅಭಿಮಾನವನ್ನು ಇಂದಿನ ಪೀಳಿಗೆಯಲ್ಲೂ ಬೆಳೆಸಬೇಕಿದೆ ಎಂದರು.

ಪ್ರಶಸ್ತಿ ಪುರಸ್ಕೃತ ಡಾ. ಆರ್ ಗಣೇಶ್‌ ಮಾತನಾಡಿ, ಅನಕೃ ತಮ್ಮ ಸರ್ವಾತ್ಮವನ್ನು ಕನ್ನಡಕ್ಕಾಗಿ ತೆತ್ತುಕೊಂಡರು. ಇಡೀ ನಾಡಿನಲ್ಲಿ ಚಳವಳಿಕಾರರಂತೆ ಓಡಾಡಿದವರು. ಶ್ರೀಕಂಠಶಾಸ್ತ್ರಿಯವರಂತಹ ವ್ಯಕ್ತಿತ್ವವನ್ನು ಕಾದಂಬರಿಗೆ ತಂದರು. ಆ ಕಾಲದ ಒಬ್ಬ ಕ್ರಾಂತಿಕಾರಿ. ಮನ್ಸೂರರ ಬಾಯಲ್ಲಿ ವಚನ ಸಾಹಿತ್ಯ ಹಾಡಿಸಿದ ಕಲಾಪ್ರೀತಿ ಉಳ್ಳವರು. ಭೌತಿಕ ಸೇತುವಿಗಿಂತ ಹೆಚ್ಚಾಗಿ ಭಾವನಾತ್ಮಕ ಸೇತುವನ್ನು ಕಟ್ಟಿ ಸಂಗೀತ ನಾಟಕದ ಬಗ್ಗೆಯೂ ಬರೆದರು. ಅವರು ಕಥನಾತ್ಮಕವಲ್ಲದೇ ಸಾಹಿತ್ಯವನ್ನೂ ಬರೆದರು. ಅವರು ಮಾಡಿದ ತರ್ಕವನ್ನು ಯಾರೂ ಎದುರಿಸಲಾಗದ್ದು. ಬರವಣಿಗೆಯಿಂದಲೇ ಬದುಕಬೇಕಾದ ಅವರು ವಟವೃಕ್ಷದಂತೆ ತಾವೊಬ್ಬರೇ ಬೆಳೆಯದೇ ಇನ್ನೊಬ್ಬರನ್ನೂ ಬೆಳೆಸಿದರು. ತಪ್ಪಿಲ್ಲದ ಸೊಗಸಾದ ಕನ್ನಡ  ಬರೆಯುವ ಅವರು ಎಲ್ಲರಿಗೂ ತಮ್ಮನ್ನು ತೆರೆದುಕೊಂಡರು. ಅವರ ಮನೆ ಅನ್ನಪೂರ್ಣ ಎಲ್ಲರಿಗೂ ತೆರೆದುಕೊಂಡಿತ್ತು. ಪ್ರೀತಿ ವಾತ್ಸಲ್ಯದಿಂದ ಎಲ್ಲರನ್ನೂ ಉತ್ತೇಜಿಸಿದರು. ಪುಸ್ತಕದ ಅಂಗಡಿಗೆ ಹೋಗಿ ಪುಸ್ತಕ ಖರೀದಿಸಿ ಎಲ್ಲರಿಗೂ ಹಂಚಿದರು. ಅವರ ಸಮಗ್ರ ಸಾಹಿತ್ಯ ಪ್ರಸಾರವನ್ನು 2008ರಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯು ಆರಂಭಿಸಿದ್ದು, ಅದೀಗ ಅರ್ಧದಲ್ಲಿಯೇ ನಿಂತಿದೆ. ಅದು ಪೂರ್ಣವಾಗುವಂತೆ ಸರ್ಕಾರವನ್ನು ಒತ್ತಾಯಿಸಬೇಕಿದೆ  ಎಂದು ಮನವಿ ಮಾಡಿದರು.

ಅನಕೃ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿಯವರು ಅನಕೃ ಸ್ಮಾರಕ ಭವನವನ್ನು ಸರ್ಕಾರ ಭೂಮಿ ನೀಡಿದ ಕೂಡಲೇ ನಿರ್ಮಿಸಬೇಕಾಗಿದೆ. ಅನಕೃ ಸಮಗ್ರ ಸಾಹಿತ್ಯವೂ ಪೂರ್ಣಗೊಳ್ಳಬೇಕಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದರು.

ನವೆಂಬರ್‌1ರಿಂದ ಡಿಸೆಂಬರ್‌7 ರವರೆಗೆ 37 ದಿನಗಳ ಕಾಲ ನಡೆಯುವ ಕನ್ನಡ ಪುಸ್ತಕ ಹಬ್ಬದಲ್ಲಿ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9ರ ವರೆಗೆ ʼಕೇಶವ ಶಿಲ್ಪʼ ಸಭಾಂಗಣದಲ್ಲಿ ಪುಸ್ತಕ ಪ್ರದರ್ಶನ ಮಾರಾಟ ನಡೆಯಲಿದ್ದು, ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟಣೆಗಳ ಜೊತೆಗೆ ಕರ್ನಾಟಕದ ಹಲವಾರು ಪ್ರಕಾಶಕರ ಪ್ರಕಟಣೆಯ ಪುಸ್ತಕಗಳು ವಿಶೇಷ ರಿಯಾಯತಿ ದರದಲ್ಲಿ ದೊರಕುತ್ತದೆ.  ಜೊತೆಗೆ ಸಂಸ್ಕಾರ ಭಾರತಿ ಸಹಯೋಗದೊಂದಿಗೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅದರಲ್ಲಿ ತಾಳವಾದ್ಯಗೋಷ್ಠಿ, ಭರತನಾಟ್ಯ, ತಾಳಮದ್ದಲೆ ಯಕ್ಷಗಾನ, ವಿವಿಧ ಪ್ರಕಾರದ ಸಂಗೀತಕಾರ್ಯಕ್ರಮಗಳು, ಹರಿಕಥೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ