ಶರತ್ ಚಂದ್ರ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಮಿಸಿ ಅವರ ತಮ್ಮ ದಿನಕರ್ ತೂಗುದೀಪ ನಿರ್ದೇಶಿಸಿದ ‘ಜೊತೆ ಜೊತೆಯಲಿ ‘ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ತಮ್ಮ ಸಿನಿ ಪಯಣ ಆರಂಭಿಸಿದ ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ, ಆ ಚಿತ್ರದ ನಂತರ ಕನ್ನಡದ ಅತೀ ಬೇಡಿಕೆಯ ಸಂಗೀತ ನಿರ್ದೇಶಕರಾಗಿ ಬಿಡುವಿಲ್ಲದ ಕಂಪೋಸರ್ ಆಗಿ ಸುಮಾರು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿದ್ದರು.

1000754991

ಈ ಮಧ್ಯೆ ದರ್ಶನ್ ಅಭಿನಯದ ‘ಯಜಮಾನ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ಮೇಲೆ ಸಂಗೀತ ನಿರ್ದೇಶನ ಕಡಿಮೆ ಮಾಡಿದ್ದರು. ಯಜಮಾನ ಸಿನಿಮಾ ಸೂಪರ್ ಹಿಟ್ ಆದ ಮೇಲೆ ದರ್ಶನ್ ಅಭಿನಯದ ‘ಕ್ರಾಂತಿ ‘ ಚಿತ್ರ ಕೈಗೆತ್ತಿಕೊಂಡಿದ್ದರು. ಆದರೆ ಕ್ರಾಂತಿ ಸಿನಿಮಾ ಮಕಾಡೆ ಮಲಗಿದ ಮೇಲೆ ಯೋಗರಾಜ್ ಭಟ್ ಅವರ ಕರಟಕ ದಮನಕ, ಮನದ ಕಡಲು ಚಿತ್ರಗಳನ್ನು ಬಿಟ್ಟರೆ ಬೇರೆ ಚಿತ್ರಗಳಿಗೆ ಸಂಗೀತ ನೀಡಿರಲಿಲ್ಲ. ಹರಿಕೃಷ್ಣ ಈಗ ಮತ್ತೆ ಸಂಗೀತ ನಿರ್ದೇಶನದ ಕಡೆ ಮುಖ ಮಾಡಿದ್ದಾರೆ.

1000754995

ಕನ್ನಡದ ಸ್ಟಾರ್ ನಟರುಗಳಿಗೆ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದ ಹರಿಕೃಷ್ಣ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ ಕಾಂಬಿನೇಶನ್ ‘ಕೂಡ ಕ್ಲಿಕ್ ಆಗಿತ್ತು. ಈಗ ಮತ್ತೆ ಗಣೇಶ್ ನಟಿಸಲಿರುವ ‘ಬಹದ್ದೂರ್’ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದ ಇನ್ನೂ ಹೆಸರಿಡದ ಹೊಸ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

1000754993

ಈಗಾಗಲೇ ಗಣೇಶ್ ಅಭಿನಯದ ಗಾಳಿಪಟ, ಕೃಷ್ಣ, ಮುಗುಳು ನಗೆ ಮುಂತಾದ ಚಿತ್ರಗಳಿಗೆ ಸುಮಧುರ, ಸೂಪರ್ ಹಿಟ್ ಹಾಡುಗಳನ್ನು ಹರಿಕೃಷ್ಣ ನೀಡಿದ್ದಾರೆ.

ಇತ್ತೀಚೆಗೆ ಮುಹೂರ್ತ ಕಂಡ ‘ಹಲ್ಕಾ ಡಾನ್ ‘ ಸೇರಿದಂತೆ ಇನ್ನೊಂದಷ್ಟು ಚಿತ್ರಗಳಿಗೆ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಸಂಗೀತ ನಿರ್ದೇಶಕರೊಬ್ಬರು ಗಾಯಕನಾಗಿ ಅತೀ ಹೆಚ್ಚು ಹಿಟ್ ಹಾಡುಗಳನ್ನು ನೀಡಿರುವುದು  ಹರಿಕೃಷ್ಣ ಮಾತ್ರ ಎನ್ನಬಹುದು.

ಡಿ ಬೀಟ್ಸ್ ಎನ್ನುವ ತಮ್ಮದೇ ಆಡಿಯೋ ಕಂಪನಿ ಯಲ್ಲಿ ಹಲವಾರು ಸಿನಿಮಾಗಳ ಆಡಿಯೋ ರಿಲೀಸ್ ಮಾಡಿರುವ ಹರಿಕೃಷ್ಣ ಇತ್ತೀಚೆಗೆ ತಮ್ಮ 25 ನೇ ಚಿತ್ರ ‘ಯಜಮಾನ’ ಚಿತ್ರಕ್ಕೆ ಈ ಹಿಂದೆ ಘೋಷಿಸಿದ ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದು ಇದು ಅವರ ಮೂರನೇ ರಾಜ್ಯ ಪ್ರಶಸ್ತಿಯಾಗಿತ್ತು.

ದರ್ಶನ್,ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜೈಲಿಗೆ ಹೋಗದೇ ಇದ್ದರೆ, ಕ್ರಾಂತಿ ಸಿನಿಮಾ ಸೋಲದೇ ಇದ್ದಿದ್ದರೆ ಬಹುಷಃ ಹರಿಕೃಷ್ಣ ನಿರ್ದೇಶಕರಾಗಿ ಮುಂದುವರಿಯುತ್ತಿದ್ದರೇನೋ.

ಒಟ್ಟಿನಲ್ಲಿ ಅರ್ಜುನ್ ಜನ್ಯ ಮತ್ತು ಅಜನೀಶ್ ಲೋಕನಾಥ್ ರಂತಹ ಸಂಗೀತ ನಿರ್ದೇಶಕರ ಜೊತೆಗಿನ ಸ್ಪರ್ಧೆಗಳ ನಡುವೆ ಮತ್ತೆ ಮಿಂಚಲು ವಿ. ಹರಿಕೃಷ್ಣ ಬರುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ