– ರಾಘವೇಂದ್ರ ಅಡಿಗ ಎಚ್ಚೆನ್.
ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಇದೀಗ ಬ್ರೇಕ್ ಬಿದ್ದಿದೆ. 89 ವರ್ಷದ ಹಿರಿಯ ನಟ ಧರ್ಮೇಂದ್ರರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಬುಧವಾರ ಬೆಳಗ್ಗೆ ಡಿಸ್ಚಾರ್ಜ್ ಮಾಡಲಾಗಿದೆ ಎಂದು ವೈದ್ಯರು ಅಧಿಕೃತವಾಗಿ ದೃಢಪಡಿಸಿದ್ದಾರೆ. ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಸೇರಿದಂತೆ ಅವರ ಕುಟುಂಬದ ಸದಸ್ಯರು ಧರ್ಮೇಂದ್ರರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಮಾಹಿತಿಯ ಪ್ರಕಾರ, ಬೆಳಗ್ಗೆ 7.30ರ ವೇಳೆಗೆ ಧರ್ಮೇಂದ್ರರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. “ಧರ್ಮೇಂದ್ರ ಅವರು ಇದೀಗ ಸ್ಥಿರವಾಗಿದ್ದಾರೆ. ನಾವು ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿಸಲು ಸಲಹೆ ನೀಡಿದ್ದೇವೆ” ಎಂದು ವೈದ್ಯರು ತಿಳಿಸಿದ್ದಾರೆ. ‘ಧರ್ಮೇಂದ್ರ ಅವರು ಚೇತರಿಕೆ ಕಾಣಲಿ ಹಾಗೂ ಆರೋಗ್ಯ ವೃದ್ಧಿಸಲಿ ಎಂದು ಪ್ರಾರ್ಥಿಸಿದ ಎಲ್ಲರಿಗೂ ನಾವು ಕೃತಜ್ಞರಾಗಿರುತ್ತೇವೆ. ಕುಟುಂಬದ ಖಾಸಗಿತನವನ್ನು ಗೌರವಿಸಿ’ ಎಂದು ವೈದ್ಯರು ಕೋರಿದ್ದಾರೆ.
ಧರ್ಮೇಂದ್ರ ಸಾವಿನ ಬಗ್ಗೆ ವದಂತಿ ಹಬ್ಬಿತ್ತು. ಅನೇಕ ರಾಜಕಾರಣಿಗಳು ಈ ಬಗ್ಗೆ ಪೋಸ್ಟ್ ಕೂಡ ಮಾಡಿದ್ದರು. ಆ ಬಳಿಕ ಹೇಮಾ ಮಾಲಿನಿ ಈ ಬಗ್ಗೆ ಸ್ಪಷ್ಟನೆ ನೀಡಿದರು. ಪತಿ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದಿದ್ದರು.





