ಕನ್ನಡಿಗರ ಹೊಸ ವರ್ಷದ ಮೊದಲ ಹಬ್ಬವಾದ ಯುಗಾದಿಯ ಸಂಭ್ರಮಾಚರಣೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಈ ಸಾಂಪ್ರದಾಯಿಕ ಹಬ್ಬವನ್ನು ಇಂದಿನ ಆಧುನಿಕ ದಿನಗಳಿಗೆ ತಕ್ಕಂತೆ ಆಚರಿಸುವ ವಿಧಾನ ಅರಿಯೋಣವೇ……?
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಆದರೆ ನಾವು ಕಳೆದ ಸಮಯ ಮಾತ್ರ ಮರಳಿ ಬರುವುದಿಲ್ಲ. ನಮ್ಮ ಹಿಂದೂಗಳಲ್ಲಿ ಹಬ್ಬಗಳ ಆಚರಣೆ ಬಹಳ ಇದೆ. ಅವುಗಳಲ್ಲಿ ಯುಗಾದಿಯು ಬಹಳ ಮುಖ್ಯವಾದ ಹಬ್ಬಾಗಿದೆ.
ಯುಗಾದಿ ಎಂಬ ಪದ ಸಂಸತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ. ಯುಗಾದಿ ಎಂದರೆ ಯುಗದ ಆದಿ, ವರ್ಷದ ಆದಿ, ವರ್ಷದ ಆರಂಭ ಎಂಬುದಾಗಿ ಹೇಳಬಹುದಾಗಿದೆ. ಮಾಹೆಗಳಲ್ಲಿ ಚೈತ್ರ ಇದ್ದಂತೆ, ಋತುಗಳಲ್ಲಿ ವಸಂತ ಋತು ಇದ್ದಂತೆ, ಹಿಂದೂ ಧರ್ಮಕ್ಕನುಸಾರ ಹಬ್ಬಗಳಲ್ಲಿ ಯುಗಾದಿ ಹಬ್ಬ ಪ್ರಪ್ರಥಮ ಹಬ್ಬಾಗಿ ಆಚರಿಸಲ್ಪಡುವುದು.
ಯುಗಾದಿ ಹಬ್ಬದ ದಿನ ತ್ರಿಮೂರ್ತಿಗಳಲ್ಲಿ ಒಬ್ಬನೂ ಸೃಷ್ಟಿಕರ್ತನಾದ ಬ್ರಹ್ಮ ದೇವನು ಜಗತ್ತನ್ನು ಸೃಷ್ಟಿ ಮಾಡಿದ ದಿನ. ಅಂದಿನಿಂದಲೇ ವರ್ಷ, ಋತುಗಳು, ಮಾಸಗಳು, ಗ್ರಹಗಳು, ನಕ್ಷತ್ರಗಳು ಸೃಷ್ಟಿಸಿದನೆಂಬ ನಂಬಿಕೆ ಇದೆ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ ಮತ್ತು ದಕ್ಷಿಣಾಯನನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದಲೇ ವರ್ಷವನ್ನು ಯುಗ ಎಂದೂ, ಅದರ ಮೊದಲ ದಿನವನ್ನು ಯುಗಾದಿ ಎಂದೂ ಕರೆಯಲಾಗಿದೆ.
ಸೂರ್ಯ ಚಂದ್ರರ ಹಿನ್ನಲೆಯಲ್ಲಿ ಯುಗಾದಿ ಎರಡು ಬಾರಿ ಆಚರಣೆಯಲ್ಲಿದೆ. ಸೌರಮಾನ ಮತ್ತು ಚಾಂದ್ರಮಾನದ ಹಬ್ಬಗಳು ಪ್ರದೇಶಾನಸಾರವಾಗಿ ರೂಢಿಯಲ್ಲಿವೆ. ಈ ಚಾಂದ್ರಮಾನ ಯುಗಾದಿಯನ್ನು ಪ್ರಥಮ ತಿಥಿಯಾದ ಪಾಡ್ಯದಲ್ಲಿಯೇ ಸಾಂಪ್ರದಾಯಿಕವಾಗಿ ಆಚರಿಸಬೇಕು. ಸೌರಮಾನದಂದು ಯುಗಾದಿಯನ್ನು ಮೇಷ ಸಂಕ್ರಮಣದಲ್ಲಿ ಆಚರಿಸಬೇಕು. ಈ ಆಚರಣೆಯಲ್ಲೂ ಕೆಲವು ವಿಶೇಷಗಳಿವೆ.

ಐತಿಹಾಸಿಕ ಕಾರಣಗಳು
ಶ್ರೀರಾಮನು ಈ ದಿನವೇ ವಾಲಿಯನ್ನು ವಧಿಸಿದನು. ದುಷ್ಟ ಪ್ರವೃತ್ತಿಯುಳ್ಳ ರಾವಣ ಮತ್ತು ರಾಕ್ಷಸರನ್ನು ವಧಿಸಿ ಅಯೋಧ್ಯೆಗೆ ಹಿಂದಿರುಗಿ ಈ ಯುಗಾದಿ ಶುಭದಿನದಂದು ಶ್ರೀರಾಮಚಂದ್ರ ಪಟ್ಟಾಭಿಷಿಕ್ತನಾಗುತ್ತಾನೆ. ಹಾಗೆಯೇ ಉಜ್ಜಯಿನಿಯ ವಿಕ್ರಮಾದಿತ್ಯನನ್ನು ಶಾಲಿವಾಹನ ಪರಾಭವಗೊಳಿಸಿ ತನ್ನ ವಿಜಯವನ್ನು ಸಂಪಾದಿಸಿದ್ದು ಇದೇ ದಿನ. ಈ ದಿನದಿಂದಲೇ ಶಾಲಿವಾಹನ ಶಕೆ ಪ್ರಾರಂಭವಾಯಿತು.
ಭಗವಂತ ಶ್ರೀಕೃಷ್ಣನು ನೃಪಕೇತುವಿಗೆ ದರ್ಶನ ನೀಡಿದ್ದು ವಿಕ್ರಮನಾಮ ಚೈತ್ರ ಶುದ್ಧ ಪ್ರತಿಪದೆಯಂದು. ಈ ಯುಗಾದಿ ಹಬ್ಬ ಜೈನರಿಗೂ ಪವಿತ್ರವಾದದ್ದು. ಹದಿನಾಲ್ಕನೇ ತೀರ್ಥಂಕರನಾದ ಮಲ್ಲಿನಾಥನು ಜನಿಸಿದ್ದು, ಯುಗಾದಿಯ ದಿನದಂದು ಎಂದು ಜೈನ ಪುರಾಣ ತಿಳಿಸುತ್ತದೆ. ಗಂಗೆ ಶಿವನ ಜಟೆಯಲ್ಲಿ ಬಂಧಿತಳಾದದ್ದು ರುಧಿರೋದ್ಗಾರಿ ಸಂವತ್ಸರದ ಚೈತ್ರಮಾಸದ ಯುಗಾದಿಯಂದು. ಎಲ್ಲ ಚೈತ್ರಶುದ್ಧ ಪ್ರಥಮದಿನ ಇರುವುದರಿಂದ ಈ ದಿನಕ್ಕೆ ಹೆಚ್ಚು ಮಹತ್ವ ಬಂದಿದೆ.

ಆಧ್ಯಾತ್ಮಕ ಕಾರಣಗಳು
ವರ್ಷದಲ್ಲಿನ ಮೂರೂವರೆ ಮುಹೂರ್ತಗಳಲ್ಲಿ ಒಂದು ಯುಗಾದಿ ಪಾಡ್ಯ, ಅಕ್ಷಯ ತದಿಗೆ ಮತ್ತು ದಸರಾ (ವಿಜಯದಶಮಿ). ಇವು ಪ್ರತ್ಯೇಕವಾಗಿ ಒಂದೊಂದು ಮತ್ತು ಕಾರ್ತಿಕ ಶುದ್ಧ ಪ್ರತಿಪದೆಯು ಅರ್ಧ (ದೀಪಾವಳಿ). ಹೀಗೆ ಮೂರೂವರೆ ಮುಹೂರ್ತಗಳಿವೆ. ಈ ದಿನಗಳಂದು ಮುಹೂರ್ತ ನೋಡುವ ಅವಶ್ಯಕತೆ ಇಲ್ಲ. ಈ ದಿನಗಳಲ್ಲಿ ಪ್ರತಿ ಘಳಿಗೆಯೂ ಶುಭ ಮುಹೂರ್ತ ಆಗಿರುತ್ತದೆ.
ಈ ಮುಹೂರ್ತದ ಪೈಕಿ ಯುಗಾದಿ ಹಿಂದೂಗಳಿಗೆ ಹೊಸ ವರ್ಷದ ಆರಂಭದ ದಿನವಾಗಿದೆ. ಈ ಹಬ್ಬ ಹಳೆಯ ಹೊಸತನ್ನು ಸೇರಿಸುವ ಕೊಂಡಿ. ಫಾಲ್ಗುಣ ಬಹುಳ ಅಮಾವಾಸ್ಯೆಯ ದಿನ ಹಳೆಯ ವರ್ಷಕ್ಕೆ ವಿದಾಯ ಹೇಳಿ, ಮಾರನೇ ದಿನ ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು ಯುಗಾದಿ ಎಂದು ಹೊಸ ವರ್ಷವನ್ನು ಆಚರಿಸುತ್ತೇವೆ. ಹಿಂದಿನ ವರ್ಷದ ಕಹಿ ಘಟನೆಗಳನ್ನು ಮರೆತು ಸಿಹಿ ಸಂತಸದ ಕ್ಷಣಗಳನ್ನು ಭವಿಷ್ಯದ ಸುಖಕ್ಕಾಗಿ ಯುಗಾದಿ ಆಚರಿಸುತ್ತೇವೆ.
ದೇವರ ದಿವ್ಯ ಸಂದೇಶ
ಪ್ರತಿಯೊಂದು ಹಬ್ಬ ನಮ್ಮ ಬದುಕಿನ ದಿವ್ಯ ಸಂದೇಶವನ್ನೇ ನೀಡುತ್ತದೆ. ಯುಗಾದಿ ಹಬ್ಬದಂದು ದೇವರಿಗೆ ಅರ್ಪಿಸುವ ಬೇವುಬೆಲ್ಲ, ದೈವೀಗುಣ ಮೈಗೂಡಿಸಿಕೊಳ್ಳುತ್ತ (ಬೆಲ್ಲ), ಪ್ರಕೃತಿಗಾಗಿ ಹಂಬಲಿಸುತ್ತ (ಬೇ) ತಾಳ್ಮೆಗೆಡದೆ ಮುನ್ನಡೆಯವವರಿಗೆ ತನ್ನ ಕೃಪಾ ಪ್ರಸಾದದ ಸವಿ ಕಟ್ಟಿಟ್ಟಿದ್ದು ಎಂಬ ದೇವರ ದಿವ್ಯ ಸಂದೇಶವನ್ನೇ ಬಿಂಬಿಸುತ್ತದೆ.

ನೈಸರ್ಗಿಕ ಕಾರಣಗಳು
ಯುಗಾದಿಯನ್ನು ಸಂತೋಷ ಸಂಭ್ರಮದಿಂದ ಸ್ವಾಗತಿಸಲು ಇಡೀ ಪ್ರಕೃತಿ ಸಜ್ಜಾಗಿರುತ್ತದೆ. ಎಲ್ಲೆಡೆ ಕಂಗೊಳಿಸುತ್ತಿರುವ ಚಿಗುರು ಹೊಸ ಚೈತನ್ಯವನ್ನು ಪ್ರತಿಬಿಂಬಿಸುವ ಹೊತ್ತಿನಲ್ಲಿಯೇ, ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿಕೊಂಡ ಮರಗಿಡಗಳು, ಕಣ್ಣಿಗೆ ಸೊಬಗು ಮನಕ್ಕೆ ಉಲ್ಲಾಸವನ್ನು ನೀಡುತ್ತವೆ. ಮಾವು-ಬೇವು ಚಿಗುರಿ, ಆ ಚಿಗುರಿಗೆ ಮನಸೋತ ಕೋಗಿಲೆ ಹಾಡಲು ವಸಂತ ನಲಿಯಬೇಕು. ಇದು ಪ್ರಕೃತಿಯ ಸಹಜ ಧರ್ಮ.
ಪ್ರಾದೇಶಿಕ ವಿಭಿನ್ನತೆ
ಯುಗಾದಿ ಹಬ್ಬವನ್ನು ಬೇವುಬೆಲ್ಲದ ಹಬ್ಬ ಎಂದು ಕರೆಯುತ್ತಾರೆ. ಹಬ್ಬದ ಮೂಲ ಉದ್ದೇಶ ಒಂದೇ ಆಗಿದ್ದರೂ ಹಬ್ಬಗಳ ಆಚರಣೆಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಕೆಲವು ವ್ಯತ್ಯಾಸಗಳಿವೆ. ಮಹಾರಾಷ್ಟ್ರದಲ್ಲಿ `ಗುಡಿ ಪಾಡ್ವ’ ಎನ್ನುತ್ತಾರೆ. ಪಂಜಾಬಿನಲ್ಲಿ `ಬೈಸಾಕಿ,’ ಅಸ್ಸಾಂನಲ್ಲಿ `ಬಿಹು,’ ಕೇರಳದಲ್ಲಿ `ವಿಶು,’ ಅಸ್ಸಾಂನಲ್ಲಿ `ಗೊರುಬಹು,’ ಕಾಶ್ಮೀರದಲ್ಲಿ `ನೌರೋಝ,’ ರಾಜಸ್ಥಾನ `ತಪನ,’ ಸಿಂಧಿಗಳು `ಚೇತಿಚಾಂದ್,’ ಮಣಿಪುರಿ `ಸಾಜಿಬುನೊಂಗಮಾ, ತಮಿಳುನಾಡು/ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ `ಸೌರಮಾನ ಯುಗದಿ’ (ಪುತ್ತಾಂಡು ವಿಳಾ), ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ `ಯುಗಾದಿ’ ಎಂದು ಆಚರಣೆ ಮಾಡುತ್ತಾರೆ.
ಒಟ್ಟಿನಲ್ಲಿ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಬಯಸುವುದೇ ಹಬ್ಬದ ಉದ್ದೇಶವಾಗಿದೆ. ಈ ಹಬ್ಬ ಭಕ್ತಿ, ಜ್ಞಾನ, ಕರ್ಮಗಳ ತ್ರಿವೇಣಿ ಸಂಗಮ.

ಹಬ್ಬದ ಸಂಪ್ರದಾಯ
ಯುಗಾದಿ ಹಬ್ಬವನ್ನು ಹೊಸ ವರ್ಷದ ಮೊದಲ ಹಬ್ಬವೆಂದು ಸಂಭ್ರಮ ಉಲ್ಲಾಸಗಳಿಂದ ಆಚರಿಸುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮನೆಯನ್ನು ಗೋಮಯದಿಂದ ಸಾರಿಸಿ ರಂಗವಲ್ಲಿ ಬಿಡಿಸುತ್ತಾರೆ. ಮನೆಯನ್ನು ಮಾವು-ಬೇವು ತಳಿರು ತೋರಣಗಳಿಂದ ಸಿಂಗರಿಸಿ, ದ್ವಾರದ ಮೇಲೆ ಕೆಂಪು ಹೂಗಳಿಂದ ಕಟ್ಟಬೇಕು. ಏಕೆಂದರೆ ಕೆಂಪು ಬಣ್ಣದ ಹೂಗಳು ಶುಭದಾಯಕವಾಗಿವೆ.
ಮನೆಯ ಮುಂಭಾಗಕ್ಕೆ ಬಣ್ಣ ಬಣ್ಣಗಳಿಂದ ಅಷ್ಟದಳ, ಪದ್ಮ, ಸ್ವಸ್ತಿಕ, ಕಮಲ, ಕಳಸ ಮುಂತಾಗಿ ರಂಗೋಲಿಯನ್ನು ಬಿಡಿಸುತ್ತಾರೆ. ಗೋಶಾಲೆ, ತುಳಸಿ ಕಟ್ಟೆಯನ್ನು ದೇವರ ಮನೆಗಳಂತೆ ಅಲಂಕರಿಸುತ್ತಾರೆ. ಮನೆಯ ಗೋವು ಮತ್ತು ಕರುಗಳಿಗೆ ಸ್ನಾನ ಮಾಡಿಸಿ ಅವುಗಳಿಗೆ ಬಣ್ಣದ ಅಲಂಕಾರವನ್ನು ಮಾಡಿ ಹೂಗಳಿಂದ ಸಿಂಗರಿಸಿ ಪೂಜಿಸುತ್ತಾರೆ.
ಮನೆಯ ಸದಸ್ಯರೆಲ್ಲರೂ ಬೇವು, ಎಣ್ಣೆ, ಅರಿಶಿನ ಬೆರೆಸಿ ಕಾಯಿಸಿದ ಎಣ್ಣೆಯನ್ನು ಮೈಗೆಲ್ಲಾ ಹಚ್ಚಿಕೊಂಡು ಸ್ನಾನ ಮಾಡುವ ಸಂಪ್ರದಾಯವಿದೆ. ವೈಶಾಖದ ಮುನ್ನ ಬಿಸಿಲಿಗೆ ಧಗೆ ಹೆಚ್ಚಾಗುತ್ತದೆ. ಇದನ್ನು ತಡೆಗಟ್ಟಲು ಮೈಯಲ್ಲಿ ಶಕ್ತಿ ಬೇಕು. ಅದಕ್ಕಾಗಿ ದೇಹದಲ್ಲಿ ಎಣ್ಣೆ ಅಂಶವನ್ನು ಹೆಚ್ಚಿಸಿಕೊಳ್ಳಬೇಕು. ಈ ಕಾರಣದಿಂದಲೇ ಈ ಹಬ್ಬವನ್ನು ಬೇವು ಮಿಶ್ರಿತ ಎಣ್ಣೆ ಹಚ್ಚಿಕೊಂಡು ಬಿಸಿಲಿಗೆ ಮೈಯೊಡ್ಡಿ ನಂತರ ಅಭ್ಯಂಜನ ಸ್ನಾನ ಮಾಡುತ್ತಾರೆ. ಆರೋಗ್ಯದ ದೃಷ್ಟಿಯಿಂದ ಇದು ತುಂಬಾ ಒಳ್ಳೆಯದು.
ನಂತರ ಎಲ್ಲರೂ ಹೊಸ ಬಟ್ಟೆ ಧರಿಸಿ, ದೇವರಿಗೆ ದೀಪ ಬೆಳಗಿಸಿ, ದೇವರ ಹತ್ತಿರ ಹೊಸ ವರ್ಷದ ಪಂಚಾಂಗ, ಬೇವುಬೆಲ್ಲ ಮಿಶ್ರಣ ಮತ್ತು ತಮ್ಮ ಗಳಿಕೆಯ ಸಂಪತ್ತನ್ನು ಇಟ್ಟು ಸಂಕಲ್ಪ ವಿಧಿಯೋದಿಗೆ ದೇವರಿಗೆ ಅಭಿಷೇಕ ಮಾಡಿ, ಧೂಪ, ದೀಪ, ನೈವೇದ್ಯಗಳೊಂದಿಗೆ ಪೂಜಿಸಿ, ತಮ್ಮ ಕೃತಜ್ಞತೆಯನ್ನು ಅರ್ಪಿಸಿ, ಹೊಸ ವರ್ಷದ ಪಂಚಾಂಗವನ್ನು ಓದುತ್ತಾರೆ. ಆನಂತರ ದೇವರನ್ನು ಪ್ರಾರ್ಥಿಸಿ, ಬೇವು ಬೆಲ್ಲವನ್ನು ಸ್ವೀಕರಿಸಿ, ಮನೆಯ ಕಿರಿಯರೆಲ್ಲರೂ ಹಿರಿಯರಿಗೆ, ತಾಯಿ ತಂದೆಯರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ. ಈ ರೀತಿ ಮಾಡುವುದರಿಂದ ಎಲ್ಲಾ ಪಾಪಗಳು ಪರಿಹಾರವಾಗುವುದಲ್ಲದೆ, ಸಂಕಟಗಳು ದೂರವಾಗಿ, ಆಯುಷ್ಯ ವೃದ್ಧಿಯಾಗಿ ಧನ ಧಾನ್ಯಗಳು ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಕೃಷಿಕರಲ್ಲಿ ಯುಗಾದಿ
ಆಡು ಭಾಷೆಯಲ್ಲಿ ಈ ಹಬ್ಬವನ್ನು `ಉಗಾದಿ’ ಎಂದು ಹೇಳುತ್ತಾರೆ. ಹಬ್ಬಕ್ಕೆ ಮುಂಚೆಯೇ ಕೃಷಿಕರು ಮನೆಗೆ ಸುಣ್ಣ, ಬಣ್ಣ ಬಳಿದು ಸಿಂಗರಿಸುತ್ತಾರೆ. ಎತ್ತು ಕರುಗಳನ್ನು ಚೆನ್ನಾಗಿ ತೊಳೆದು ಕೋಡಿಗೆ ಬಣ್ಣ ಬಳಿದು ಕೆಂಪು, ಬಿಳಿ ಹೂಗಳಿಂದ ಸಿಂಗರಿಸುತ್ತಾರೆ. ಕೃಷಿ ಸಾಮಾನುಗಳಾದ ನೇಗಿಲು, ಕುಂಟೆ ಮೊದಲಾದ ಉಪಕರಣಗಳನ್ನು ಶುಚಿ ಮಾಡಿ. ಮಾವಿನ ಸೊಪ್ಪುಗಳನ್ನು ಕಟ್ಟುತ್ತಾರೆ. ಬೇವಿನ ಸೊಪ್ಪನ್ನು ದೇವರ ಮುಂದೆ ಇಡುತ್ತಾರೆ. ಹಬ್ಬದ ಹಿಂದಿನ ಅಮಾವಾಸ್ಯೆ ದಿನ ನವ ಧಾನ್ಯಗಳನ್ನು ನವಗ್ರಹಗಳನ್ನಾಗಿ ಸ್ಥಾಪಿಸಿ, ಶಾಸ್ತ್ರೋಕ್ತವಾಗಿ ಪೂಜೆ ಮಾಡಿ, ಅದಾದನಂತರ ಊರಿನ ಜೋಯಿಸರಿಗೆ ದಾನ ಮಾಡುತ್ತಾರೆ.
ಹಿಂದಿನ ವರ್ಷದ ದೋಷಗಳು ಈ ಮೂಲಕ ನಿವಾರಣೆ ಆಗುತ್ತದೆಂಬ ನಂಬಿಕೆ ಕೃಷಿಕರದು. ನಂತರ ಮನೆಗೆ ಪುಣ್ಯಾಹದ ಪವಿತ್ರ ಜಲ ಚಿಮುಕಿಸಿ, ಹೊನ್ನಾರಿಗೆ ಪೂಜೆ ಮಾಡಿ ಬೇವು ಬೇಲ್ಲ ತಿನ್ನುತ್ತಾರೆ. ಇಂಥ ಸುಂದರ ದಿನ ಸಾಮಾನ್ಯ ವ್ಯಕ್ತಿಯೂ ಕವಿಯಾಗಿ ಬಿಡುತ್ತಾನೆ. ಹಳ್ಳಿಗರ ಚೈತ್ರದ ಸಂಭ್ರಮ ಅವರ ಹಾಡೊಂದರಲ್ಲಿ ಸುಂದರವಾಗಿ ಅಭಿವ್ಯಕ್ತಗೊಂಡಿದೆ.
`ಬನಬನದಾಗೆಲ್ಲಾ ಹೂತೇರು ಹರಿದಾ
ದಿನ ಬಿರಿದಾವೋ ಗೊಂಡೆ ಗೊಂಡೆ
ಟೊಂಗೆಯಾಗೆ ಶಾನೆ ಶಾನೆ ಮಾವಿನ ತೋಪಿನಾಗೆ.’
ನಂತರ ಸಂಜೆಯಲ್ಲಿ ಎತ್ತುಗಳ ಮೆರವಣಿಗೆ, ಸಂಜೆ ಚೆಂಡಾಟವಾಡುತ್ತಾ ಸಡಗರ ಉಲ್ಲಾಸಪಡುತ್ತಾರೆ.
ಈ ಹಬ್ಬಕ್ಕೆ ಹೊಸದಾಗಿ ಮದುವೆಯಾದ ಅಳಿಯನನ್ನು ಕರೆಯುವ ಸಂಪ್ರದಾಯ ಇದೆ. ಸಹೋದರ ಸಹೋದರಿಯರನ್ನು ಮನೆಗೆ ಕರೆದು ಸಿಹಿ ಅಡುಗೆ ಮಾಡಿ, ಬಡಿಸುವ ಪದ್ಧತಿಯೂ ಆಚರಣೆಯಲ್ಲಿದೆ. ಹೆಣ್ಣು ಮಗಳೊಬ್ಬಳು ತನ್ನ ಅಣ್ಣನನ್ನು ಯುಗಾದಿ ಹಬ್ಬಕ್ಕೆ ಊಟಕ್ಕೆ ಕರೆಯುವ ರೀತಿ ಒಂದು ಜನಪದ ಮುಕ್ತದಲ್ಲಿ ಸುಂದರಾಗಿದೆ.
`ಊರಾಗ ಉಗಾದಿ ಉಂಡ್ನೋಗ ಅಣ್ಣಯ್ಯ
ಶಾವೀಗೆ ಆಗಿ ಗುಳಿಗ್ಯಾಗಿ ಮ್ಯಾಲೀನ ಬಾನ ಬಸಿಯೋದು ತಡವಲ್ಲ!’
ಆದರೆ ಇಂದು ಎಲ್ಲ ಹಬ್ಬಗಳಂತೆಯೇ ಯುಗಾದಿ ಆಚರಣೆಯು ಕೇವಲ ಯಾಂತ್ರಿಕವಾಗುತ್ತಿದೆ. ಹಿಂದೆ ಇದ್ದ ಹಬ್ಬಗಳ ಸಾಮೂಹಿಕ ಸಂಭ್ರಮಕ್ಕೆ ಬದಲಾಗಿ ಕೇವಲ ವೈಯಕ್ತಿಕ ಆಚರಣೆಯ ಮಟ್ಟಕ್ಕೆ ಇಳಿಯುತ್ತಿದೆ.
ಆರೋಗ್ಯಕರ ಬೇವು ಬೆಲ್ಲ
ಯುಗಾದಿ ಹಬ್ಬದ ದಿನ ಬೇವು, ಬೆಲ್ಲ, ಹುರಿಗಡಲೆ, ಕೊಬ್ಬರಿ ಸೇರಿಸಿ ದೇವರಿಗೆ ನೈವೇದ್ಯ ಮಾಡಿ ಪ್ರಾರ್ಥನೆ ಮಾಡುತ್ತಾರೆ. ನಂತರ ಬೇವು ಬೆಲ್ಲ ಸೇವನೆ ಮಾಡುತ್ತಾರೆ.
ಕೆಲವು ಕಡೆ ಬೇವು ಬೆಲ್ಲವನ್ನು ದ್ರಾವಕ ರೂಪದಲ್ಲಿ ತಯಾರಿಸುತ್ತಾರೆ. ಬೇವಿನ ಹೂಗಳು, ಗೋಡಂಬಿ, ಹುರಿಗಡಲೆ, ಬೆಲ್ಲ ಮತ್ತು ಹಾಲು ಬೇಕಾಗುತ್ತದೆ. ಹುರಿಗಡಲೆ, ಗೋಡಂಬಿ, ಬೆಲ್ಲಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರೆದು ಹಾಲಿನಲ್ಲಿ ಬೆರೆಸಿ, ಕೊನೆಯಲ್ಲಿ ಬೇವಿನ ಹೂಗಳನ್ನು ಹಾಕಿ ದ್ರಾವಕ ರೂಪದಲ್ಲಿ ತಯಾರಿಸುತ್ತಾರೆ.
ಬೇವು ಬೆಲ್ಲ ಸ್ವೀಕರಿಸುವಾಗ ಈ ಶ್ಲೋಕನ್ನು ಹೇಳುತ್ತಾರೆ. `ಶತಾಯುವರ್ಜದೇಹಾಯ ಸರ್ವಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಮ್’ ಈ ಶ್ಲೋಕದ ಅರ್ಥ, ಬೇವು ಬೆಲ್ಲ ತಿನ್ನುವುದರಿಂದ ಮನುಷ್ಯ ನೂರು ವರ್ಷಗಳ ಆಯುಸ್ಸು, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿ ರೋಗ ನಿವಾರಣೆಗಾಗಿ ಬೇವು ಬೆಲ್ಲ ಸೇವನೆ ಮಾಡುತ್ತಾನೆ ಎಂದು ಅರ್ಥ. ಬೇವು ಬೆಲ್ಲವನ್ನು ಪ್ರಸಾದ ರೂಪದಲ್ಲಿ ಎಲ್ಲರಿಗೂ ಕೊಟ್ಟು ಶುಭಾಶಯ ಕೋರುತ್ತಾರೆ.
ಸುಖದುಃಖ ಸ್ವೀಕರಿಸಿ
ಬೇವು ಬೆಲ್ಲ ನಮ್ಮ ಬದುಕಿನ ಸಿಹಿಕಹಿಗಳ ಪ್ರತೀಕ. ನೋವು ನಲಿವನ್ನು ಸಮಚಿತ್ತದಿಂದ ಸ್ವೀಕರಿಸಬೇಕೆಂಬ ಭಾವ ಇದರಲ್ಲಿದೆ. ಬೇವು ಕಹಿಯ ಸಂಕೇತವಾದರೆ, ಬೆಲ್ಲ ಸಿಹಿಯ ಸಂಕೇತ. ಪ್ರತಿಯೊಬ್ಬರ ಜೀವನದಲ್ಲಿಯೂ ಕೇವಲ ಸಿಹಿಯೊಂದೇ ಅಂದರೆ ಸುಖವೇ ಬರುವುದು ಸಾಧ್ಯವಿಲ್ಲ. ಆಗಾಗ್ಗೆ ಕಹಿ ಅಂದರೆ ಕಷ್ಟಗಳು ಬರುತ್ತಿರುತ್ತವೆ. ಪ್ರತಿಯೊಬ್ಬರ ಜೀವನದಲ್ಲಿಯೂ ಏರುಪೇರುಗಳು, ನೋವುನಲಿವುಗಳು, ಕಷ್ಟಸುಖಗಳು ಇದ್ದೇ ಇರುತ್ತವೆ. ಆದ್ದರಿಂದ ಬೇವುಬೆಲ್ಲವನ್ನು ಸವಿಯುವುದರ ಮೂಲಕ ಕಷ್ಟ ಸುಖವನ್ನು ಸಮನಾಗಿ ಕಾಣಬೇಕೆನ್ನುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು.
ಕಷ್ಟಸುಖ ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ. ಜೀವನ ಬರಿ ಸಿಹಿಯೂ ಅಲ್ಲ ಅಥವಾ ಕಹಿಯೂ ಅಲ್ಲ. ಎರಡರ ಸಮ ಮಿಶ್ರಣ ಬದುಕು. ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಜೀವನದಲ್ಲಿ ಇರಬೇಕು. ಏನೇ ಕಷ್ಟ ಸಮಸ್ಯೆಗಳು ಬಂದರೂ ಧೈರ್ಯ, ತಾಳ್ಮೆ ಕಳೆದುಕೊಳ್ಳಬಾರದು. ಶಾಂತ ಸ್ವಭಾವ ಬೆಳೆಸಿಕೊಳ್ಳಬೇಕು. ಈಸಬೇಕು ಇದ್ದು ಜಯಿಸಬೇಕು ಎಂದು ದಾಸರು ಹೇಳಿಲ್ಲವೇ…..?
ಬೇವು ಬೆಲ್ಲ ರೋಗ ನಿವಾರಕ
ಆಯುರ್ವೇದದ ಪ್ರಕಾರ ಬೇವು ರೋಗ ನಿವಾರಕ, ಕ್ರಿಮಿನಾಶಕ, ಆರೋಗ್ಯದಾಯಕ ಔಷಧೀಯ ಗುಣಗಳಿದ್ದು, ಬೇವು ಅಧರಕ್ಕೆ ಕಹಿಯಾದರೂ, ಉದರಕ್ಕೆ ಸಿಹಿ. ರೋಗನಿವಾರಕ ಗುಣಗಳಿಂದ ಕೂಡಿರುವ ಕಾರಣ ಪೂಜಾರ್ಹ ವೃಕ್ಷವೆಂಬ ಕೀರ್ತಿಗೆ ಪಾತ್ರವಾಗಿದೆ. ಬೇವಿನ ಹೂವು ಎಲೆಗಿಂತ ಶ್ರೇಷ್ಠವಾದದ್ದು. ಬೇವಿನ ಎಲೆಗಳನ್ನು ದಿನ ಸೇವಿಸುವುದರಿಂದ ಸರ್ವ ಅನಿಷ್ಟಗಳು ನಾಶವಾಗುತ್ತವೆ. ಆಯುಸ್ಸು ವೃದ್ಧಿಯಾಗುತ್ತದೆ. ಬೇವಿನ ಎಲೆಗಳನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ, ಬೇವಿನ ರಸ ಕುಡಿಯುವುದರಿಂದ ರಕ್ತ ಶುದ್ಧಿಯಾಗ್ತುತದೆ.
ಅಲ್ಲದೆ ಅಜೀರ್ಣ, ಹೊಟ್ಟೆನೋವು, ಹೊಟ್ಟೆಉರಿ, ಮಲಬದ್ಧತೆ ಇವೆಲ್ಲವನ್ನೂ ಶಮನ ಮಾಡುತ್ತದೆ. ಚರ್ಮದ ಪೋಷಣೆಗೆ ಹಾಗೂ ಕೂದಲಿನ ಸಂರಕ್ಷಣೆಗೆ ಸಿದ್ಧೌಷಧಿಯಲ್ಲದೆ, ಇದು ಸೌಂದರ್ಯ ವರ್ಧಕ ಹೌದು. ಅಂತೂ ಈ ಕಹಿಬೇವನ್ನು ಪ್ರತಿನಿತ್ಯ ಸೇವಿಸುತ್ತಾ ಬಂದರೆ ಶೇ.60ರಷ್ಟು ರೋಗಗಳು ಬರುವುದಿಲ್ಲ. ಬೇವಿನಲ್ಲಿ ಪಿಷ್ಟ ಪದಾರ್ಥಗಳು. ಪ್ರೋಟೀನ್, ಮೇದಸ್ಸು (ಫ್ಯಾಟ್,), ಖನಿಜಾಂಶ (ಮಿನರಲ್ಸ್), ಕ್ಯಾಲ್ಶಿಯಂ, ಐರನ್, ಥೈಮಿನ್, ನಿಯೋಸಿಕ್, ನಿಕೋಟಿಕ್ ಆಮ್ಲ, ಇನ್ ಸಿಟ್, ವಿಟಮಿನ್, ಕೆರಾಟಿನ್, ಪೈರಿಡಾಕ್ಸಿನ್, ಪ್ಯಾಂಟೋಜಿನಿಕ್ ಆಮ್ಲ, ಇಮ್ಯುನೋರೆನ್ಸುಸ್ಶನ್ ಕರಟೋಲೈನಿಸ್ (ದಪ್ಪ ಚರ್ಮವನ್ನು ಮೃದುಗೊಳಿಸುವುದು) ಗುಣ ಇರುವುದು ಸಾಬೀತಾಗಿದೆ.
ಇನ್ನು ಬೆಲ್ಲ ಚೇತೋಹಾರಿ, ಉಷ್ಣಕಾರಕ ಹಾಗೂ ಜೀರ್ಣಕಾರಕ ಮತ್ತು ವಯೋಮಾನವನ್ನು ವೃದ್ಧಿ ಮಾಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಅದಕ್ಕೆ ತನ್ನದೇ ಆದ ರುಚಿ ಇರುವುದಲ್ಲದೆ, ಆರೋಗ್ಯ ದೃಷ್ಟಿಯಿಂದ ನೋಡಿದರೆ ಸಕ್ಕರೆಗಿಂತ ಬೆಲ್ಲ ಒಳ್ಳೆಯದು. ಅಲ್ಲದೆ, ಇದರಲ್ಲಿ ಪೌಷ್ಟಿಕಾಂಶ ಕೂಡ ಜಾಸ್ತಿ ಇರುತ್ತದೆ. ಬೆಲ್ಲದ ಅಂಟುವಾಳ ಪಿಷ್ಟ ಪದಾರ್ಥಗಳು ಕಾರ್ಬೋಹೈಡ್ರೇಟ್ಸ್, ಪ್ರೋಟೀನ್, ಖನಿಜಾಂಶ, ವಿಟಮಿನ್, ಕ್ಯಾಲ್ಶಿಯಂ, ಅಮಿನೋ ಆ್ಯಸಿಡ್, ಕಬ್ಬಿಣ, ಫಾಸ್ಛರಸ್, ಸುಕ್ರೋಸ್‌ಇದೆ. ಇದು ಸಹ ರಕ್ತವರ್ಧಕ, ಬೊಜ್ಜು ನಿವಾರಣೆಗೆ ಅತ್ಯುತ್ತಮವಾದದ್ದು. ಹಾಗಾಗಿ ಬೆಲ್ಲ ಕಣ್ಣಿಗೂ, ದೇಹಕ್ಕೂ ತಂಪು. ಜೊತೆಗೆ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತದೆ. ಹಾಗಾಗಿ ಬೇವುಬೆಲ್ಲ ನಮ್ಮ ಬದುಕಿನ ಸಿಹಿಕಹಿಗಳ ಪ್ರತೀಕ, ದೇಹವನ್ನು ತಂಪಾಗಿಸಲು ಬೇವು ಬೆಲ್ಲ ಸಹಕಾರಿಯಾಗಿದೆ.
ನಮ್ಮ ಹಿರಿಯರು ಬೇವುಬೆಲ್ಲದ ಮಹತ್ವವನ್ನು ಅರಿತಿದ್ದರಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಪ್ರಕೃತಿಯ ವಿದ್ಯಮಾನಕ್ಕೆ ಅನುಗುಣವಾಗಿ ಈ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ.
ಯುಗಾದಿ ಹಬ್ಬದ ಆಚರಣೆಯಿಂದ ಆಗುವ ಮತ್ತೊಂದು ಪ್ರಯೋಜನವೆಂದರೆ ಈ ಸಂದರ್ಭದಲ್ಲಿ ಮಾಡುವ ಅಡುಗೆಗಳಾದ ಕಡಲೆಬೇಳೆ ಅಥವಾ ತೊಗರಿ ಬೇಳೆ ಹೋಳಿಗೆ, ಪಾಯಸ, ಕೋಸಂಬರಿ, ಮಾವಿನಕಾಯಿ ಕಾಲವಾದ್ದರಿಂದ ಮಾವಿನ ಹಣ್ಣಿನ ಸೀಕರಣೆ, ಮಾವಿನಕಾಯಿ ಚಿತ್ರಾನ್ನ, ವಿವಿಧ ಬಗೆಯ ತಿಂಡಿ ತಿನಿಸುಗಳು ಈ ದಿನದ ವಿಶೇಷ. ಇವೆಲ್ಲದರಲ್ಲಿ ದೇಹದ ಬೆಳವಣಿಗೆಗೆ, ಆರೋಗ್ಯ ರಕ್ಷಣೆಗೆ ಬೇಕಾದ ಪೌಷ್ಟಿಕಾಂಶಗಳಿರುತ್ತವೆ.
ಪಂಚಾಂಗ ಶ್ರವಣ ಫಲ
ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿದೆ. ಪಂಚ ಎಂದರೆ ಐದು, ಅಂಗ ಎಂದರೆ ಭಾಗ, ವಾರ, ತಿಥಿ, ಯೋಗ, ನಕ್ಷತ್ರ ಮತ್ತು ಕರಣ ಇವೇ ಆ ಐದು ಅಂಗಗಳು. ಈ ಐದು ಭಾಗಗಳಿಂದ ಕೂಡಿದ ವಿವರವೇ ಪಂಚಾಂಗ. ಪಂಚ + ಅಂಗ =ಪಂಚಾಂಗ. ಇವುಗಳಲ್ಲಿ ಒಂದು ಭಾಗವನ್ನು ಬಿಟ್ಟರೂ ಪಂಚಾಂಗ ಶಾಸ್ತ್ರ ಪೂರ್ಣವಾಗುವುದಿಲ್ಲ. ಇದು ಐದು ಬೆರಳುಗಳ ಪೂರ್ಣಹಸ್ತವಿದ್ದಂತೆ. ಯಾವುದೇ ಶುಭ ಕಾರ್ಯವನ್ನು ನಡೆಸಲು, ಶುಭಕರವಾದ ವಾರ, ತಿಥಿ, ನಕ್ಷತ್ರ, ಸಮಯ ಮುಂತಾದವುಗಳನ್ನು ಪಂಚಾಂಗದ ಮೂಲಕವೇ ತಿಳಿಯಬೇಕಾಗುತ್ತದೆ. ಆದ್ದರಿಂದ ಈ ದಿನ ಪಂಚಾಂಗಕ್ಕೆ ಎಲ್ಲಿಲ್ಲದ ಮಹತ್ವವಿರುತ್ತದೆ.
ಯುಗಾದಿಯಂದು ಹೊಸ ಪಂಚಾಂಗವನ್ನು ತಂದು ದೇವರ ಮುಂದಿಟ್ಟು ಅರಿಶಿನ ಕುಂಕುಮ ಹಚ್ಚಿ ಪೂಜಿಸುತ್ತಾರೆ. ಸಾಯಂಕಾಲ ಗ್ರಾಮಸ್ಥರು ದೇವಸ್ಥಾನದಲ್ಲಿ ಸೇರಿ ಪಂಚಾಂಗ ಶ್ರವಣ ಮಾಡುತ್ತಾರೆ. ಓದು ಬರಹ ಬಲ್ಲ ಮನೆಯ ಹಿರಿಯರು ಅಥವಾ ಪುರೋಹಿತರು ಪಠಿಸಿ ಅದನ್ನು ಹೇಳುತ್ತಾರೆ. ಈ ಪಂಚಾಂಗ ಶ್ರವಣದ ಫಲವನ್ನು ಹೀಗೆ ಹೇಳಲಾಗಿದೆ. ತಿಥಿಯ ಶ್ರವಣದಿಂದ ಲಕ್ಷ್ಮಿಯು ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಸ್ಸು ವೃದ್ಧಿಯಾಗುತ್ತದೆ, ನಕ್ಷತ್ರ ಶ್ರವಣದಿಂದ ಪಾಪ ನಾಶವಾಗುತ್ತದೆ, ಯೋಗ ಶ್ರವಣದಿಂದ ರೋಗ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿಸಿದ ಕಾರ್ಯಸಿದ್ಧಿ ಆಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯ ಶ್ರವಣದಿಂದ ಗಂಗಾ ಸ್ನಾನದ ಫಲ ಲಭಿಸುತ್ತದೆ.
ಚಂದ್ರ ದರ್ಶನದ ಫಲ
ಯುಗಾದಿಯ ದಿನ ಮತ್ತೊಂದು ವಿಶೇಷವೇನೆಂದರೆ ಚಂದ್ರ ದರ್ಶನ ಮಾಡುವುದು. ನವಗ್ರಹಗಳಲ್ಲಿ ಒಂದಾದ ಚಂದ್ರನು ಶುದ್ಧತೆ, ಬುದ್ಧಿವಂತಿಕೆ ಮತ್ತು ನಡವಳಿಕೆಯ ಸಂಕೇತವಾಗಿ ಬಿಂಬಿಸಲಾಗಿದೆ. ಅಂತಹ ಚಂದ್ರನನ್ನು ಹೊಸ ವರ್ಷದ ಯುಗಾದಿಯಂದು ವೀಕ್ಷಿಸಿದರೆ ಇಡೀ ವರ್ಷವೆಲ್ಲಾ ಸುಖ ಸಂತೋಷದಿಂದ ಬಾಳಬಹುದೆಂಬ ನಂಬಿಕೆ ಹಿಂದಿನಿಂದಲೂ ವಾಡಿಕೆಯಾಗಿದೆ. ಇಡೀ ವರ್ಷದಲ್ಲಿ ಯಾವುದೇ ಅಪಾದನೆ, ಅಪಕೀರ್ತಿ, ಕಳಂಕಗಳು ಒದಗುವುದಿಲ್ಲ ಮತ್ತು ಎಲ್ಲಾ ಕಷ್ಟಗಳೂ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.
ಯುಗಾದಿಯ ವ್ಯಾಪಾರ
ಯುಗಾದಿ ಹಬ್ಬದ ದಿನ ಎಲ್ಲಾ ಅಂಗಡಿಗಳಲ್ಲಿ ವ್ಯಾಪಾರ ಜೋರು. ಈ ಹಬ್ಬದ ದಿನ ಹೊಸ ಬಟ್ಟೆ ಧರಿಸುವುದು ಒಳ್ಳೆಯದು ಎಂದು ಎಲ್ಲಾ ಬಟ್ಟೆ ಅಂಗಡಿಗಳಲ್ಲಿ ಜನರ ಗುಂಪು ಇರುತ್ತದೆ. ಇನ್ನು ಈ ದಿನ ಚಿನ್ನವನ್ನು ಕೊಂಡರೆ ಶುಭವೆಂದು ಹಾಗೂ ಹೆಚ್ಚುತ್ತದೆ ಎಂಬುದು ಕೆಲವರ ನಂಬಿಕೆ.
ಕವಿಗಳು ಕಂಡ ಯುಗಾದಿ
ಪ್ರಕೃತಿಯ ಸೊಬಗನ್ನು ವರ್ಣಿಸಲು ಕವಿಗಳಿಗೆ ಎಲ್ಲಿಲ್ಲದ ಹಿಗ್ಗು! ತಮ್ಮ ಕವನದಲ್ಲಿ ಯುಗಾದಿಯ ಬಗ್ಗೆ ಸುಂದರವಾಗಿ ವರ್ಣಿಸಿದ್ದಾರೆ. ಕೆ.ಎಸ್. ನರಸಿಂಹಸ್ವಾಮಿ ತಾವು ಕಂಡ ಯುಗಾದಿ ಸಂಭ್ರಮವನ್ನು ತಮ್ಮ ಕವನದಲ್ಲಿ `ಹೆಜ್ಜೆಗೊಂದು ಹೊಸ ಯುಗಾದಿ, ಚೆಲುವು ನಮ್ಮ ಜೀವನ, ಪಯಣವೆಲ್ಲ ಪಾವನ,’ ಎಂದು ಸುಂದರವಾಗಿ ಚಿತ್ರಿಸಿದ್ದಾರೆ.
ಮರಗಳ ತುಂಬಾ ಹೂಗಳು ಶೋಭಿಸುವುದನ್ನು ಕಂಡಾಗ, `ಮೈತುಂಬ ಹೂ ಮುಡಿದು ಹುಚ್ಚಾದ ಸರ ಚೈತ್ರದಲಿ, ಬೇಸರವೇ ಇಲ್ಲ ಈ ನಿಸರ್ಗಕ್ಕೆ, ಸದಾ ಹೊಚ್ಚ ಹೊಸದಾಗಿ ಹೊಮ್ಮುವುದಕ್ಕೆ,’ ಎಂದು ಜಿ.ಎಸ್. ಶಿವರುದ್ರಪ್ಪ ಬಣ್ಣಿಸಿದ್ದಾರೆ.
ಮಹಾಕವಿ ಕುವೆಂಪು ತಮ್ಮ ಯುಗಾದಿ ಕವನದಲ್ಲಿ ಬೇವು ಬೆಲ್ಲಗಳ ಸಂಗಮದ ಬಗ್ಗೆ ಹೀಗೆ ಹೇಳುತ್ತಾರೆ, `ಮಾವಿನ ಬೇವಿನ ತೋರಳ ಕಟ್ಟು, ಬೇವು ಬೆಲ್ಲಗಳ ನೊಟ್ಟಿಗೆ ಕಟ್ಟು, ಜೀವನವೆಲ್ಲ ಬೇವು ಬೆಲ್ಲ ಎರಡೂ ಸವಿದವನೇ ಕವಿಮಲ್ಲ.’
ಹಾಗೆಯೇ ಹೊಸ ಬಟ್ಟೆ ತೊಟ್ಟು ಹೋಳಿಗೆ ಹೂರಣ ತಿಂದ ಮಾತ್ರಕ್ಕೆ ಯುಗಾದಿಯ ಆಶಯ ಪೂರ್ಣವಾಗುವುದಿಲ್ಲ. ಮಾನವನೊಳಗೆ ಸೇರಿರುವ ದ್ವೇಷ. ಮತ್ಸರಗಳು ತೊಲಗಬೇಕು. ಪ್ರೀತಿ ಸ್ನೇಹಗಳು ಮೂಡಬೇಕು. `ತೊಲಗಲಿ ದುಃಖ, ತೊಲಗಲಿ ಮತ್ಸರ. ಪ್ರೇಮಕ್ಕೆ ಮೀಸಲು ನವ ಸಂವತ್ಸರ,’ ಎಂದು ಸುಂದರವಾಗಿ ವರ್ಣಿಸಿದ್ದಾರೆ.
ಜನಜೀವನದಲ್ಲಿ ಬೆರೆತಿರುವ ವಿರಸವೆಂಬ ವಿಷಯನ್ನು ಕಳೆದು, ಸೌಹಾರ್ದತೆಯನ್ನು ಯುಗಾದಿ ನೆಲೆಗೊಳಿಸಲಿ ಎನ್ನುತ್ತಾರೆ ಕೆ.ಎಸ್. ನಿಸಾರ್ ಅಹಮದ್.
ಡಾ. ಕೆ. ಷರೀಫ್ ತಮ್ಮ ಮಗುವಿನಂತೆ, `ಬಾ ಯುಗಾದಿ’ ಎಂಬ ಕವನದಲ್ಲಿ ಹಳೆಯ ವರ್ಷಗಳ ಭೂಕಂಪ ಸುನಾಮಿಯಂಥ ವಿಪ್ಲವಗಳಲ್ಲಿ ಮಾವು ಬೇವುಗಳೆಲ್ಲ ಕೊಚ್ಚಿ ಹೋದದ್ದನ್ನು ನೆನಪಿಸಿಕೊಳ್ಳುತ್ತಾ, ಬರುವುದಾದರೆ ಪುಟ್ಟ ಮಗುವಿನಂತೆ ಬಾ ಎಂದು ಯುಗಾದಿಗೆ ಕರೆ ನೀಡುತ್ತಾರೆ. ಬರುವುದಾದರೆ ಬಾ ಯುಗಾದಿ ಮೆಲ್ಲಗೆ ನನ್ನ ಕೈ ಬೆರಳು ಹಿಡಿದು ನಡೆ ಪುಟ್ಟ ಮಗುವಿಂತೆ ನಡೆದು ಬಾ ಹೊಸ ವರ್ಷವೇ ಅಬ್ಬರಿಸಿ ಗದ್ದರಿಸದಿರು ನನಗೆ ಬರುವುದೇ ಆದರೆ ಮೆಲ್ಲಗೆ ಬಾ, ನಾವು ಬೇವಿನ ಹೂ ಉದರದಂತೆ ಹೂನಡಿಗೆಯ ಮಗುವಿನಂತೆ ನಡೆದು ಬಾ ಯುಗಾದಿಯೇ,’ ಎಂದು ಪ್ರೀತಿಯಿಂದ ಕರೆದಿದ್ದಾರೆ.
ಜಿ.ಪಿ. ರಾಜರತ್ನಂ ಜೀವನದ ಸುಖ ದುಃಖದ ಬಗ್ಗೆ ಹೀಗೆ ಹೇಳಿದ್ದಾರೆ, `ಲೋಕದಲಿ ಸೂರ್ಯ ಚಂದ್ರರಿದ್ದಂತೆ ಅವರಿಗೆ ಉದಯಾಸ್ತಗಳಿದ್ದಂತೆ. ಅದರಿಂದ ಆಗುವ ಹಗಲು ರಾತ್ರಿಗಳಿದ್ದಂತೆ, ಬೆಳಕು ಕತ್ತಲೆಗಳಂತೆ, ಮನುಷ್ಯರ ಬದುಕಿನಲ್ಲಿ ಸುಖ ದುಃಖಗಳು ಯಾವ ಕಾಲಕ್ಕೂ ಇರುವುದೇ! ಇವು ಒಂದನ್ನು ಬಿಟ್ಟು ಒಂದು ಇಲ್ಲ. ಒಂದಾದ ಮೇಲೆ ಒಂದು ಉಂಟು. ಎರಡೂ ಜೊತೆಯಲ್ಲಿಲ್ಲ. ಇರುವುದು ಉಂಟು ಎಂಬ ಅರಿವು ಯಾವಾಗ ನಮಗೆ ಆಗುತ್ತದೋ ಅಂದೇ ನಮಗೆ ನಿಜವಾದ ಯುಗಾದಿ.’ ಡಾ. ದ.ರಾ. ಬೇಂದ್ರೆ `ಹೊಂಗೆ ಹೂ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿ….’ ಎಂದು ಸೊಗಸಾಗಿ ವರ್ಣಿಸಿದ್ದಾರೆ. ಹಾಗೆಯೇ ಮುಖ್ಯವಾಗಿ ಯುಗಾದಿಯ ಆಚರಣೆಗಳೊಂದಿಗೆ ಅವಿಭಾಜ್ಯ ಅಂಗವಾಗಿ ಹೆಣೆದುಕೊಂಡಿದೆ ಬೇಂದ್ರೆಯವರ ಕವಿತೆ.
`ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ!’ ಎಂಬ ಈ ಕವಿತೆ ಭಕ್ತಿಗೀತೆ, ಭಾವದೀತೆ, ಚಿತ್ರಗೀತೆ, ನಾಡಗೀತೆ ಎಲ್ಲವೂ ಆಗಿದೆ. ಯುಗಾದಿ ಮಹತ್ವವನ್ನು ಸಾರುವ ಬೇಂದ್ರೆಯವರ ಈ ಕವಿತೆ, ಯುಗಾದಿಯಂದು ಪಂಚಾಂಗ ಶ್ರವಣದಷ್ಟೇ ಕಡ್ಡಾಯವೆನಿಸಿದೆ.
ಹಬ್ಬದ ಆಚರಣೆಗೆ ಕೆಲವು ಸೂತ್ರಗಳು
ಮನೆಯವರೆಲ್ಲರೂ ಸೇರಿಕೊಂಡು ಹಬ್ಬದ ಸಿದ್ಧತೆ ಆಚರಣೆಗಳು ಹೇಗಿರಬೇಕು ಎಂದು ಸಮಾಲೋಚಿಸಿ ತೀರ್ಮಾನಿಸಿಕೊಳ್ಳಿ. ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಮುಂಚೆಯೇ ಕೊಂಡುಕೊಳ್ಳಿ. ಹಬ್ಬದ ಹಿಂದಿನ ದಿನ ಬೆಲೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ರೀತಿ ಮಾಡಿದರೆ ದುಡ್ಡು ಉಳಿತಾಯವಾಗುತ್ತದೆ. ಹಬ್ಬಕ್ಕೆ ಯಾರಿಗೆ ಯಾವ ಹೊಸ ಬಟ್ಟೆಗಳು ಖರೀದಿಸಬೇಕು ಎಂಬುದನ್ನು ಮೊದಲೇ ತೀರ್ಮಾನಿಸಿ. ಪೂಜೆಗೆ ಬೇಕಾದ ಹೂವು, ಹಣ್ಣು, ತರಕಾರಿಗಳನ್ನು ನಿಮ್ಮ ಅಂಗಳದಲ್ಲಿ ಸಿಗುತ್ತಿದ್ದರೆ ಅದನ್ನೇ ಬಳಸಿ. ಹೀಗೆ ಮಾಡುವುದರಿಂದ ಖರ್ಚು ಕಡಿಮೆ ಆಗುವುದಲ್ಲದೆ, ನಮ್ಮ ಮನೆಯಂಗಳದಲ್ಲಿ ಬೆಳೆದಿದ್ದು ಎಂಬ ತೃಪ್ತಿ ಕೊಡುತ್ತದೆ.
ಕೆಲವರು ಹಬ್ಬಕ್ಕೆ ತಿಂಡಿಗಳನ್ನು ಮಾಡಲು ಸೋಮಾರಿಗಳಾಗಿ ಅಂಗಡಿಯಿಂದಲೇ ಒಬ್ಬಟ್ಟು, ಕರಿದ ತಿಂಡಿಗಳನ್ನು ತಂದುಬಿಡುತ್ತಾರೆ. ಇದರಿಂದ ಖರ್ಚು ಹೆಚ್ಚಾಗುತ್ತದೆ. ಹಾಗಾಗಿ ಹೀಗೆ ಮಾಡಬೇಡಿ. ಮನೆಯಲ್ಲಿರುವ ಎಲ್ಲಾ ಸದಸ್ಯರು ಸೇರಿಕೊಂಡು ತಿಂಡಿ ಮಾಡಿ, ಅದು ರುಚಿಯಾಗಿರುವುದೇ ಅಲ್ಲದೆ, ಆರೋಗ್ಯಕರ ಆಗಿರುತ್ತದೆ. ಜೊತೆಗೆ ನಾವೇ ಮಾಡಿದ ತೃಪ್ತಿ ಸಿಗುತ್ತದೆ. ಅಡುಗೆ ತಯಾರಿಸುವಾಗ ಹೆಚ್ಚಾಗಿ ಪೌಷ್ಟಿಕಾಂಶಗಳಿರುವ ಪದಾರ್ಥಗಳನ್ನು ಬಳಸಿ, ಆರೋಗ್ಯಕ್ಕೆ ಒಳ್ಳೆಯದು.
ಮನೆಯ ಒಳಗೆ ಮತ್ತು ಹೊರಗೆ ಸ್ವಚ್ಛ ಮಾಡುವುದು, ರಂಗೋಲಿ ಬಿಡಿಸುವುದು, ತೋರಣ ಕಟ್ಟುವುದು, ಪೂಜೆಗಾಗಿ ಸಿದ್ಧತೆ ಮಾಡಿಕೊಳ್ಳುವುದು ಇವೆಲ್ಲವನ್ನೂ ಹಿಂದಿನ ದಿನವೇ ಮಾಡಿಟ್ಟುಕೊಂಡರೆ ಹಬ್ಬದ ದಿನ ಎಲ್ಲ ಸುಲಭವಾಗುತ್ತದೆ. ಹಬ್ಬದ ಆಚರಣೆಯ ಮೂಲಕ ಮನೆಯ ವಾತಾವರಣದಲ್ಲಿ ನೆಮ್ಮದಿ, ಸಂತೋಷ ಇರುವಂತೆ ಆಚರಣೆ ಮಾಡಬೇಕೆಂಬುದು ನಿಮ್ಮ ಸಂಕಲ್ಪವಾಗಿರಲಿ.
ಹಬ್ಬದ ದಿನ ಗಡಿಬಿಡಿ ಮಾಡಿಕೊಳ್ಳದೆ, ಆರಾಮವಾಗಿ ಅಡುಗೆ ಮಾಡಿ, ಪ್ರೀತಿ ತುಂಬಿದ ಅಡುಗೆಯಲ್ಲಿ ರುಚಿ ಹೆಚ್ಚಾಗುತ್ತದೆ. ಮನೆಯಲ್ಲಿ ಹಿರಿಯರಿದ್ದರೆ ಅವರ ಸಲಹೆಯಂತೆ ನಡೆದುಕೊಳ್ಳಿ. ಇತ್ತೀಚೆಗೆ ಹಿರಿಯರ ಪಾದಗಳಿಗೆ ನಮಸ್ಕಾರ ಮಾಡುವುದು ಬಿಟ್ಟೇ ಹೋಗಿದೆ. ಪೂಜೆ ಆದ ನಂತರ ಅವರ ಕಾಲಿಗೆ ನಮಸ್ಕಾರ ಮಾಡಿ, ಆಶೀರ್ವಾದ ಪಡೆಯಿರಿ.
ಸಂಜೆ ಸಮಯದಲ್ಲಿ ಮೊಬೈಲ್ ನೋಡುತ್ತಾ ಕುಳಿತುಕೊಳ್ಳುವ ಬದಲು ಸ್ವಲ್ಪ ಹೊತ್ತು ಹಿರಿಯರೊಂದಿಗೆ ಮಾತನಾಡಿ. ಇದರಿಂದ ಹೆಚ್ಚಿನ ವ್ಯವಹಾರ ಜ್ಞಾನ ತಿಳಿಯುತ್ತದೆ. ಹಳೆಯ ದ್ವೇಷ, ಅಸೂಯೆಗಳನ್ನು ಬಿಟ್ಟು ಬಂಧು ಮಿತ್ರರೊಂದಿಗೆ ಸೌಹಾರ್ದತೆಯಿಂದ ಇರಿ. ಹೀಗೆ ಯುಗಾದಿ ಹಬ್ಬವನ್ನು ಸಂತೋಷದಿಂದ ಬರಮಾಡಿಕೊಂಡು, ಪೂಜಿಸಿ ಬಗೆ ಬಗೆಯ ಭಕ್ಷ್ಯಗಳನ್ನು ಮಾಡಿ ಎಲ್ಲರೊಂದಿಗೆ ಹಬ್ಬದ ಆಚರಣೆಯನ್ನು ಸಂತೋಷವಾಗಿ, ಅರ್ಥಪೂರ್ಣವಾಗಿ ಸೌಹಾರ್ದತೆಯಿಂದ ಮಾಡೋಣ.
ಅಂತೂ ಯುಗಾದಿ ಸೃಷ್ಟಿಯ ಸಂಕೇತ. ಸೃಷ್ಟಿ ಹೊಸತವನ್ನು ಪ್ರತಿನಿಧಿಸುತ್ತದೆ. ಸಿಹಿಕಹಿ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ದಿವ್ಯ ಸಂದೇಶವನ್ನು ಸಾರುವ ಈ ಯುಗಾದಿ ಸಮಸ್ತರಿಗೂ ಸನ್ಮಂಗಳವನ್ನು ಉಂಟು ಮಾಡಲಿ. ಭಗವಂತನ ಕೃಪೆ ಎಲ್ಲರ ಮೇಲಿರಲಿ ಎಂದು ಹಾರೈಸುತ್ತಾ, ಹೊಸ ವರುಷಕೆ ಹೊಸ ಹರುಷಕೆ `ಕ್ರೋಧಿ ಸಂವತ್ಸರ’ ಯುಗಾದಿ ಸಂಭ್ರಮಕ್ಕೆ, ಓದುಗರಿಗೆ ಗೃಹಶೋಭಾ ಶುಭ ಸ್ವಾಗತ ಕೋರುತ್ತಾಳೆ.
– ರಾಜೇಶ್ವರಿ ವಿಶ್ವನಾಥ್





