– ರಾಘವೇಂದ್ರ ಅಡಿಗ ಎಚ್ಚೆನ್.
ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಬೆಂಗಳೂರಿನಲ್ಲಿ ಆಯೋಜಿಸಿದ್ದ “ಬೆಂಗಳೂರು ಟೆಕ್ ಸಮ್ಮಿಟ್” ನ 28ನೇ ಆವೃತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಐಟಿ, ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೇಗೌಡ ಸೇರಿದಂತೆ ದೇಶ ವಿದೇಶಗಳಿಂದ ಆಗಮಿಸಿದ್ದ ತಂತ್ರಜ್ಞಾನ ವಲಯದ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ 28ನೇ ಆವೃತ್ತಿಯ ಟೆಕ್ ಸಮ್ಮಿಟ್‌ನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಡೀಪ್ ಟೆಕ್, ಎಐ, ಸೆಮಿಕಾನ್, ಡಿಜಿ-ಆರೋಗ್ಯ ಮತ್ತು ಜೈವಿಕ ತಂತ್ರಜ್ಞಾನ, ನವೋದ್ಯಮ ಪರಿಸರ, ರಕ್ಷಣೆ ಮತ್ತು ಬಾಹ್ಯಾಕಾಶ ಹೀಗೆ 9 ವಿಭಿನ್ನ ಪರಿಕಲ್ಪನೆಗಳ ಅಡಿಯಲ್ಲಿ ಪ್ರದರ್ಶನಗಳು ಮತ್ತು ಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಈ ಬಾರಿಯ ಸಮ್ಮಿಟ್‌ನಲ್ಲಿ ‘ಫ್ಯೂಚರ್ ಮೇಕರ್ಸ್ ಕಾನ್‌ಕ್ಲೇವ್’ ಪ್ರಮುಖ ಆಕರ್ಷಣೆಯಾಗಲಿದೆ. ಇದು ನವೋದ್ಯಮಿಗಳಿಗೆ ಬೃಹತ್ ವೇದಿಕೆಯಾಗಲಿದೆ.

1,200ಕ್ಕೂ ಅಧಿಕ ಮಳಿಗೆಗಳಲ್ಲಿ ಪ್ರದರ್ಶನಗಳು ನಡೆಯಲಿದ್ದು, ನವೋದ್ಯಮಗಳು, ಸಂಶೋಧಕರು ಮತ್ತು ಹೂಡಿಕೆದಾರರನ್ನು ಒಂದೆಡೆ ಸೇರಿಸುವ ವಿವಿಧ ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸ್ಟಾರ್ಟ್‌ಅಪ್, ತಂತ್ರಜ್ಞಾನ ಉದ್ಯಮಗಳು ತಮ್ಮ ಉತ್ಪನ್ನಗಳನ್ನು ಅನಾವರಣಗೊಳಿಸಲು ಮತ್ತು ಮಾರುಕಟ್ಟೆಗೆ ಬಿಡುಗಡೆ ಮಾಡಲು ‘ಬೆಂಗಳೂರು ಟೆಕ್ ಸಮ್ಮಿಟ್ 2025’ ಅವಕಾಶ ಕಲ್ಪಿಸಿದೆ.





