–  ರಾಘವೇಂದ್ರ ಅಡಿಗ ಎಚ್ಚೆನ್.

ಸಿನಿಮಾ ಬಗ್ಗೆ ಆಸಕ್ತಿ ಇದ್ದರೆ ಯಾರು ಬೇಕಾದರೂ ಈ ಕ್ಷೇತ್ರಕ್ಕೆ ಬರಬಹುದು ಎಂಬುದಕ್ಕೆ ‘ಇವನೇ ಶ್ರೀನಿವಾಸ’ ಸಿನಿಮಾ ಸಾಕ್ಷಿ. ಬಿಬಿಎಂಪಿಯಲ್ಲಿ ಡ್ರೈವರ್, ಅಂದರೆ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಪ್ರತಾಪ್ ಅವರು ಈ ಸಿನಿಮಾಗೆ ಹೀರೋ ಆಗಿದ್ದಾರೆ. ಅವರಿಗೆ ನಟನೆ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಸಿನಿಮಾದಲ್ಲಿ ಹೀರೋ ಆಗಬೇಕು ಎಂಬ ಅವರ ಆಸೆ ಈಗ ಈಡೇರಿದೆ. ಅದಕ್ಕೆ ಮನೆಯವರು ಸಹಕಾರ ನೀಡಿದ್ದಾರೆ. ಇತ್ತೀಚೆಗೆ ಶಿವರಾಜ್​​ಕುಮಾರ್ ಅವರು ‘ಇವನೇ ಶ್ರೀನಿವಾಸ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ.
ಇವನೇ ಶ್ರೀನಿವಾಸ’ ಸಿನಿಮಾಗೆ ಎಸ್. ಕುಮಾರ್ ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ವೇಳೆ ಸಿನಿಮಾ ಬಗ್ಗೆ ತಂಡದವರು ಮಾಹಿತಿ ಹಂಚಿಕೊಂಡರು. ನಿರ್ದೇಶಕ ಕುಮಾರ್ ಅವರು ಮಾತನಾಡಿ, ‘ಸೋಷಿಯಲ್ ಮೀಡಿಯಾದಿಂದ ಏನೇನೆಲ್ಲ ತೊಂದರೆ ಆಗುತ್ತಿದೆ ಅನ್ನೋದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಬೆಂಗಳೂರು, ಮೈಸೂರು, ಕೋಲಾರ, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ’ ಎಂದು ಹೇಳಿದರು.
ಪ್ರತಾಪ್ ಅವರು ಹೀರೋ ಆಗಿ ಅಭಿನಯಿಸುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ನಾಯಕಿಯಾಗಿ ಪ್ರಿಯಾ ಆರಾಧ್ಯ ಅಭಿನಯಿಸಿದ್ದಾರೆ. ರೋಹಿತ್ ಕುಮಾರ್ ಅವರು ಕಥೆ ಬರೆದಿದ್ದಾರೆ. ‘ಪ್ರತಿದಿನ ಸಾಮಾಜಿಕ‌ ಜಾಲತಾಣಗಳ ಮೂಲಕ ನಡೆಯುತ್ತಿರುವ ಕ್ರೈಂ ಬಗ್ಗೆ ಇವನೇ ಶ್ರೀನಿವಾಸ ಸಿನಿಮಾದ ಮೂಲಕ ಹೇಳಹೊರಟಿದ್ದೇವೆ. ಮೋಹನ್ ಜುನೇಜಾ ಅವರು ನಟಿಸಿದ ಕೊನೆಯ ಸಿನಿಮಾ ಇದು’ ಎಂದು ನಿರ್ದೇಶಕರು ಹೇಳಿದರು.
ಚಿಲ್ಲರ್ ಮಂಜು, ಸುಶ್ಮಿತಾ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ನಾಯಕ ನಟ ಪ್ರತಾಪ್ ಮಾತನಾಡಿ, ‘ನಾನೊಬ್ಬ ಪೌರ ಕಾರ್ಮಿಕ. ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದಿದ್ದೇನೆ. ಶ್ರೀನಿವಾಸ ಯಾರು ಎನ್ನುವುದೇ ಈ ಸಿನಿಮಾದ ಸಸ್ಪೆನ್ಸ್. ನಮ್ಮ ಸಿನಿಮಾದ ಮೂಲಕ ಸಮಾಜಕ್ಕೆ ಒಂದು ಮೆಸೇಜ್ ನೀಡಲಿದ್ದೇವೆ’ ಎಂದರು.
ಹರ್ಷ ಕೋಗೂಡ್, ಶ್ರೀಹರಿ, ಸುಭಾಶ್ ಅವರು ತಲಾ ಒಂದು ಹಾಡಿಗೆ ಸಂಗೀತ ನೀಡಿದ್ದಾರೆ. ‘ಲಕ್ಷ್ಮಿ ನರಸಿಂಹಸ್ವಾಮಿ ಮೂವೀ ಮೇಕರ್ಸ್’ ಮತ್ತು ‘ಎಲ್.ಎನ್.ಡಿ. ಕ್ರಿಯೇಶನ್ಸ್’ ಮೂಲಕ ಪ್ರತಾಪ್ ಎನ್. ಹಾಗೂ ನವೀನ್ ಕುಮಾರ್ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶಿವಣ್ಣ ಅವರು ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟಿದ್ದಕ್ಕೆ ಮತ್ತೊಬ್ಬ ನಿರ್ಮಾಪಕ ನವೀನ್ ಕುಮಾರ್ ಹಿರಿಯೂರಿ ಅವರು ಸಂತಸ ವ್ಯಕ್ತಪಡಿಸಿದರು. ಮುಂಜಾನೆ ಮಂಜು ಅವರ ಛಾಯಾಗ್ರಹಣ, ಅರವಿಂದ ರಾಜ್ ಅವರ ಸಂಕಲನ, ರಮೇಶ್ ರಂಜಿತ್ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ