ಸರಸ್ವತಿ *
ಹೆಸರಾಂತ ನಿರ್ದೇಶಕ ಡಾ||ಎಸ್ ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು - ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಬಹು ನಿರೀಕ್ಷಿತ ಚಿತ್ರ "ಮಾರುತ" ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಇದೇ ನವೆಂಬರ್ 21ರಂದು ಬಹು ನಿರೀಕ್ಷಿತ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಗೂ ಪೂರ್ವದಲ್ಲಿ ಪೊಲೀಸ್ ಇಲಾಖೆಯವರಿಗಾಗಿ ಚಿತ್ರತಂಡ ವಿಶೇಷ ಪ್ರದರ್ಶನ ಆಯೋಜಿಸಿತ್ತು. ಮಂಜುನಾಥ ಬಾಬು ಉಪ ಪೊಲೀಸ್ ಆಯುಕ್ತರು, ಭದ್ರತೆ ಬೆಂಗಳೂರು ನಗರ, ನಾರಾಯಣ ಸ್ವಾಮಿ ಅವರು ಹಾಗೂ ಅನೇಕ ಪೊಲೀಸ್ ಸಿಬ್ಬಂದಿಗಳು ಈ ಚಿತ್ರವನ್ನು ವೀಕ್ಷಿಸಿದರು.

ಚಿತ್ರ ವೀಕ್ಷಣೆ ನಂತರ ಮಾತನಾಡಿದ ಪೊಲೀಸ್ ಅಧಿಕಾರಿ ಮಂಜುನಾಥ್ ಬಾಬು ಅವರು, ಮೊದಲು ಸಮಾಜಕ್ಕೆ ಇಂತಹ ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿಕೊಟ್ಟ ನಿರ್ಮಾಪಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಿರ್ದೇಶಕ ಎಸ್ ನಾರಾಯಣ್ ಅವರು ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿಷಯವನ್ನಿಟ್ಟುಕೊಂಡು ಅದ್ಭುತವಾದ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ದುನಿಯಾ ವಿಜಯ್ ಅವರದಂತೂ ಅದ್ಭುತ ಅಭಿನಯ. ಸಮಾಜಿಕ ಜಾಲತಾಣಗಳಿಂದ ಎಷ್ಟು ಅನುಕೂಲ ಇದೆಯೊ, ಅಷ್ಟೇ ತೊಂದರೆ ಕೂಡ ಇದೆ. ಅನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಇದು ಹಿರಿಯರು, ಕಿರಿಯರು ಎಂಬ ಭೇದಭಾವವಿಲ್ಲದೆ ಎಲ್ಲಾ ವಯಸ್ಸಿನವರು ಅವಶ್ಯವಾಗಿ ನೋಡುವ ಸಿನಿಮಾ. ಅದರಲ್ಲೂ ಹೆಣ್ಣುಮಕ್ಕಳಿಗೆ ಎಚ್ಚರಿಕೆಯ ಗಂಟೆ. ಈಗಿನ ಯುವಪೀಳಿಗೆ ಈ ಚಿತ್ರ ನೋಡಿ ತಿಳಿದುಕೊಳ್ಳುವುದು ಬಹಳಷ್ಟಿದೆ. ಎಲ್ಲರೂ ತಪ್ಪದೆ ಕುಟುಂಬ ಸಮೇತ ಈ ಚಿತ್ರ ನೋಡಿ ಎಂದರು.
ಎಂತಹುದೊ ಚಿತ್ರಗಳು ಬರುತ್ತಿರುವ ಈ ಕಾಲದಲ್ಲಿ ಸಾಮಾಜಿಕ ಕಳಕಳಿಯಿಟ್ಟುಕೊಂಡು ಒಂದು ಉತ್ತಮ ಚಿತ್ರವನ್ನು ಮಾಡಿರುವ ನಿರ್ದೇಶಕರಿಗೆ, ಚಿತ್ರಕ್ಕೆ ಬಂಡಾವಳ ಹೂಡಿರುವ ನಿರ್ಮಾಪಕರಿಗೆ , ಉತ್ತಮವಾಗಿ ಅಭಿನಯಿಸಿರುವ ಕಲಾವಿದರಿಗೆ ಅಭಿನಂದನೆ ತಿಳಿಸುತ್ತೇನೆ. ಎಲ್ಲರೂ ಈ ಚಿತ್ರವನ್ನು ನೋಡಿ ಎಂದರು ಪೊಲೀಸ್ ಅಧಿಕಾರಿ ನಾರಾಯಣಸ್ವಾಮಿ.
ನಿರ್ದೇಶಕ ಎಸ್ ನಾರಾಯಣ್ ಹಾಗೂ ನಿರ್ಮಾಪಕರಾದ ಕೆ.ಮಂಜು ಮತ್ತು ರಮೇಶ್ ಯಾದವ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





