ರಾಘವೇಂದ್ರ ಅಡಿಗ ಎಚ್ಚೆನ್.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರಾವಳಿ ಜಿಲ್ಲೆ ಉಡುಪಿಗೆ ಭೇಟಿ ನೀಡಿದ್ದು, ಶ್ರೀಕೃಷ್ಣ ಮಠದಲ್ಲಿ ನಡೆದ ಮಹತ್ವದ ಕಾರ್ಯಕ್ರಮಗಳು ಹಾಗೂ ರೋಡ್‌ಶೋನಲ್ಲಿ ಭಾಗವಹಿಸಿ ಲಕ್ಷಾಂತರ ಜನರ ಗಮನ ಸೆಳೆದರು. ಪ್ರಧಾನಿ ಮೋದಿ ಅವರು ಉಡುಪಿ ನಗರಕ್ಕೆ ಆಗಮಿಸುತ್ತಿದ್ದಂತೆಯೇ, 2 ಕಿ.ಮೀ ಉದ್ದದ ಬೃಹತ್ ರೋಡ್‌ಶೋ ರಥಬೀದಿಯಲ್ಲಿ ಆರಂಭವಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಜನರ ಸಾಗರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಕೈಬೀಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಜಯಘೋಷ ಮುಗಿಲು ಮುಟ್ಟಿತ್ತು.

modiji 1
ರೋಡ್‌ಶೋ ಮುಕ್ತಾಯದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದರು. ಪ್ರಧಾನಿಯಾದ ನಂತರ ಅವರು ಶ್ರೀಕೃಷ್ಣ ಮಠಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ. ಪ್ರಧಾನಿ ಮೋದಿ ಅವರು ಬಂಗಾರದ ತೀರ್ಥ ಮಂಟಪವನ್ನು ಉದ್ಘಾಟಿಸಿದರು. ಚಿನ್ನದ ಕವಚ ಅಳವಡಿಸಿರುವ ‘ಕನಕನ ಕಿಂಡಿ’ಯನ್ನು ಪ್ರಧಾನಿಯವರು ಲೋಕಾರ್ಪಣೆಗೊಳಿಸಿದರು. ಈ ಕಿಂಡಿಯ ಮೂಲಕವೇ ಅವರು ಕೃಷ್ಣನ ದರ್ಶನ ಪಡೆದರು. ಶ್ರೀಕೃಷ್ಣ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಐತಿಹಾಸಿಕ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿ, ಭಗವದ್ಗೀತೆಯ 15ನೇ ಅಧ್ಯಾಯದ 10 ಶ್ಲೋಕಗಳನ್ನು ಪಠಿಸಿದರು. ಈ ವೇಳೆ ಪುತ್ತಿಗೆ ಶ್ರೀಗಳಿಂದ ಪ್ರಧಾನಿ ನರೇಂದ್ರ ಮೋದಿಯವರು ಆಶೀರ್ವಾದ ಪಡೆದರು.
ಪ್ರಧಾನಿ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಉಡುಪಿ ನಗರದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿತ್ತು ಮತ್ತು ಮಠದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ