ಕಾಕ್ಟೇಲ್ ಸಿನಿಮಾ ಮೂಲಕ ಹೀರೋ ಆಗಿ ಗುರುತಿಸಿಕೊಂಡ ಸ್ಯಾಂಡಲ್ವುಡ್ ನಟ ವಿರೇನ್ ಕೇಶವ್ ಇದೀಗ ಕಾಲಿವುಡ್ಗೆ ನಾಯಕರಾಗಿ ಎಂಟ್ರಿ ಕೊಟ್ಟಿದ್ದಾರೆ.
ಪ್ಯಾಶನ್ ಮೂವೀ ಮೇಕರ್ಸ್ ಅಡಿ ಸಂತೋಷ್ ಕುಮಾರ್ ನಿರ್ದೇಶನದ “ಯುವನ್ ರಾಬಿನ್ಹುಡ್ “ ತಮಿಳು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
“ಯುವರತ್ನ” ಸಿನಿಮಾದಲ್ಲಿ ಪುಟ್ಟ ಪಾತ್ರ ನಿರ್ವಹಿಸಿದ್ದ ವಿರೇನ್, “ಕಾಕ್ಟೇಲ್” ಸಿನಿಮಾದಲ್ಲಿ ಭರವಸೆಯ ನಾಯಕರಾಗಿ ಹೊರಹೊಮ್ಮಿದ್ದರು.
ಈ ಕುರಿತು ಮಾತನಾಡಿರುವ ವಿರೇನ್ ಕೇಶವ್, “ಇದು ಒಂದು ಆಕ್ಷನ್ ಜಾನರ್ ಚಿತ್ರವಾಗಿದ್ದು, ಕನ್ನಡ, ತಮಿಳು ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ. ರಗಡ್ ಲುಕ್ ನಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ.” ಎಂದಿದ್ದಾರೆ.
ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಇದರ ಜೊತೆಗೆ ವಿರೇನ್ ನಟನೆಯ ಕನ್ನಡದ “ಬಾಸ್” ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಇದರೊಂದಿಗೆ ವೈಭವ್ ನಿರ್ದೇಶನದ ಹೊಸ ಸಿನಿಮಾ “ಬಸಿಕಟ್ಟೆ” ಸಿನಿಮಾದಲ್ಲೂ ವಿರೇನ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಛಾಯಾಗ್ರಾಹಣವಿದ್ದು, ರಾಧಾಕೃಷ್ಣ ಸಂಗೀತ ನೀಡಲಿದ್ದಾರೆ.
ಅವತಾರ್ ಮೀಡಿಯಾಸ್ ಪೋಸ್ಟ್ ಪ್ರೊಡಕ್ಷನ್ ಕೆಲಸದ ಜವಬ್ದಾರಿ ತೆಗೆದುಕೊಂಡಿದ್ದು, ಖ್ಯಾತ ನಟರು ಇದರಲ್ಲಿ ಅಭಿನಯಿಸಲಿದ್ದು, 2026ರ ಜನವರಿ 2ರಿಂದ ಶೂಟಿಂಗ್ ಆರಂಭವಾಗಲಿದೆ.





