ಹೈದರಾಬಾದ್‌ನಲ್ಲಿ ನಡೆದ ‘ದಿ ರಾಜಾ ಸಾಬ್’ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮವು ನಟಿ ನಿಧಿ ಅಗರ್‌ವಾಲ್ ಅವರಿಗೆ ಕಹಿ ಅನುಭವ ನೀಡಿದೆ. ಕಾರ್ಯಕ್ರಮದ ವೇಳೆ ಜನಸಂದಣಿಯಲ್ಲಿ ನಿಧಿ ಅಗರ್‌ವಾಲ್ ಅವರೊಂದಿಗೆ ಕೆಲವು ವ್ಯಕ್ತಿಗಳು ಅನುಚಿತವಾಗಿ ವರ್ತಿಸಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದೀಗ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ದಿ ರಾಜಾ ಸಾಬ್’ನ ‘ಸಹನಾ ಸಹನಾ..’ ಹಾಡು ಬಿಡುಗಡೆ ಕಾರ್ಯಕ್ರಮವನ್ನು ಹೈದರಾಬಾದ್‌ನ ಖಾಸಗಿ ಮಾಲ್‌ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಭಾಸ್ ಮತ್ತು ನಿಧಿ ಅಗರ್‌ವಾಲ್ ಅಭಿನಯದ ಹಾಡನ್ನು ಬಿಡುಗಡೆ ಮಾಡುವ ಉದ್ದೇಶದಿಂದ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕಾರ್ಯಕ್ರಮಕ್ಕೆ ನಿಧಿ ಅಗರ್‌ವಾಲ್ ಆಗಮಿಸಿದ್ದರು.ಕಾರ್ಯಕ್ರಮ ನಡೆಯುವ ವೇಳೆ ನಿಧಿ ಅಗರ್‌ವಾಲ್ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆದರೆ ಈ ವೇಳೆ ಜನಸಂದಣಿ ನಿಯಂತ್ರಣ ತಪ್ಪಿದ್ದು, ಕೆಲವರು ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ. ಜನರು ನಿಧಿ ಅಗರ್‌ವಾಲ್ ಅವರನ್ನು ಮುತ್ತಿಗೆ ಹಾಕಿಕೊಂಡಿರುವ ದೃಶ್ಯಗಳಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಜನಸಂದಣಿಯಿಂದ ತೀವ್ರ ಕಿರಿಕಿರಿ ಅನುಭವಿಸಿದ ನಿಧಿ ಅಗರ್‌ವಾಲ್ ಅವರನ್ನು ಬಾಡಿಗಾರ್ಡ್‌ಗಳು ರಕ್ಷಿಸಿ, ಕಷ್ಟಪಟ್ಟು ಕಾರಿನವರೆಗೆ ಕರೆದುಕೊಂಡು ಹೋಗಿದ್ದಾರೆ. ಕಾರಿನೊಳಗೆ ಕುಳಿತ ನಂತರ ನಿಧಿ ತೀವ್ರ ಬೇಸರ ಮತ್ತು ಕೋಪದಲ್ಲಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.ಈ ಘಟನೆ ವೈರಲ್ ಆದ ಬಳಿಕ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದು, ಕಾರ್ಯಕ್ರಮಕ್ಕೆ ಸೂಕ್ತ ಅನುಮತಿ ಪಡೆಯದೇ ನಡೆಸಲಾಗಿದೆ ಎಂಬ ಆರೋಪದ ಮೇಲೆ ಆಯೋಜಕರು ಮತ್ತು ಖಾಸಗಿ ಮಾಲ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಮಾಹಿತಿ ಪ್ರಕಾರ, ಹಾಡು ಬಿಡುಗಡೆ ಕಾರ್ಯಕ್ರಮ ಬುಧವಾರ (ಡಿಸೆಂಬರ್ 17) ಸಂಜೆ 5 ಗಂಟೆಗೆ ನಡೆಯಬೇಕಾಗಿತ್ತು. ಆದರೆ ತಾಂತ್ರಿಕ ಮತ್ತು ಸಂಘಟನಾ ಕಾರಣಗಳಿಂದ ಕಾರ್ಯಕ್ರಮಕ್ಕೆ ಕೆಲ ಗಂಟೆಗಳು ತಡವಾಗಿದೆ. ಈ ವಿಳಂಬದ ಅವಧಿಯಲ್ಲೇ ಸಾವಿರಾರು ಅಭಿಮಾನಿಗಳು ಮಾಲ್ ಬಳಿ ಸೇರಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪಲು ಕಾರಣವಾಯಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ