ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ಹರ್ಷವರ್ಧಿನಿ ಅಲಿಯಾಸ್ ರನ್ಯಾ ರಾವ್‌ಗೆ ಹೈಕೋರ್ಟ್‌ನಿಂದ ರಿಲೀಫ್ ದೊರೆತಿಲ್ಲ.
ಆರೋಪಿಗಳಾದ ರನ್ಯಾ, ತರುಣ್ ಕೊಂಡೂರು ರಾಜು ಮತ್ತು ಸಾಹಿಲ್ ಜೈನ್ ತಮ್ಮ ಬಂಧನ ಅಕ್ರಮವೆಂದು ಬಿಡುಗಡೆ ಕೋರಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಅನು ಸಿವರಾಮನ್ ಮತ್ತು ವಿಜಯಕುಮಾರ್ ಎ. ಪಾಟೀಲ್ ವಿಭಾಗೀಯ ಪೀಠ, ಶುಕ್ರವಾರ ಈ ತೀರ್ಪು ನೀಡಿದೆ.
ಜೈಲೇ ಗತಿ: ವಿದೇಶಿ ವಿನಿಮಯ ನಿಯಂತ್ರಣ, ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆ (ಕಾಪಿಪೋಸಾ)ಯಡಿ ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಸರಕಾರದ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಹಾಗಾಗಿ, ರನ್ಯಾ ಮತ್ತಿತರೆ ಆರೋಪಿಗಳು ಸದ್ಯ ಜೈಲಿನಲ್ಲೇ ಕಾಲ ಕಳೆಯಬೇಕಿದೆ.
ತಮ್ಮ ಬಂಧನ ಕಾನೂನುಬಾಹಿರವೆಂದು ಘೋಷಿಸುವಂತೆ ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ, ರನ್ಯಾ ಮಲತಾಯಿ ಎಚ್.ಎಸ್. ರೋಹಿಣಿ, ತರುಣ್ ತಾಯಿ ರಮಾ ರಾಜು ಮತ್ತು ಸಾಹಿಲ್ ಜೈನ್ ತಾಯಿ ಪ್ರಿಯಾಂಕಾ ಸರ್ಕಾರಿಯಾ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.
ವಿಚಾರಣೆ ವೇಳೆ ರನ್ಯಾ ಪರ ವಕೀಲರು, ''ಬಂಧನ ಆದೇಶ ಹೊರಡಿಸುವುದಕ್ಕೆ ಪೂರಕವಾಗಿ ಡಿಆರ್‌ಐ ಪೆನ್‌ಡ್ರೈವ್ (ರನ್ಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗಿನ ವಿಡಿಯೊ ದಾಖಲೆ) ಆಧರಿಸಿದೆ. ಆದರೆ, ಅದನ್ನು ರನ್ಯಾರಿಗೆ ಒದಗಿಸಿಲ್ಲ. ಅವರನ್ನು ವಶಕ್ಕೆ ಪಡೆದಾಗಲೇ ಪಾಸ್‌ಪೋರ್ಟ್ ಜಪ್ತಿ ಮಾಡಿದ್ದು, ಅದು ಸದ್ಯ ವಿಶೇಷ ನ್ಯಾಯಾಲಯದ ಕಸ್ಟಡಿಯಲ್ಲಿದೆ. ಹಾಗಾಗಿ, ರನ್ಯಾ ದೇಶ ತೊರೆಯುವ ಪ್ರಶ್ನೆಯೇ ಇಲ್ಲ,' ಎಂದು ವಾದಿಸಿದ್ದಾರೆ.
ಕೇಂದ್ರ ಸರಕಾರದ ಪರ ವಕೀಲರು, 'ರನ್ಯಾಗೆ ಪೆನ್‌ಡ್ರೈವ್ ತಲುಪಿಸಲು ಎಲ್ಲಾ ಪ್ರಯತ್ನ ಮಾಡಲಾಗಿದೆ. ಅವರು ಬಂಧಿತರಾಗಿ ಜೈಲಿನಲ್ಲಿದ್ದರಿಂದ ಜೈಲು ಕೈಪಿಡಿಯ ಪ್ರಕಾರ ಡಿಜಿಟಲ್ ಸಾಧನವಾದ ಪೆನ್‌ಡ್ರೈವ್ ಅವರಿಗೆ ನೀಡಿಲ್ಲ. ಬದಲಿಗೆ ಅವರು ಸೂಚಿಸಿದಂತೆ ವಕೀಲ ಶಾಶ್ವತ್‌ಗೆ ನೀಡಲು ಪ್ರಯತ್ನಿಸಲಾಗಿತ್ತು. ಅದನ್ನು ಶಾಶ್ವತ್ ಸ್ವೀಕರಿಸದಿರುವುದರಿಂದ ರನ್ಯಾ ಸೂಚನೆ ಮೇರೆಗೆ ಮಲತಾಯಿ ರೋಹಿಣಿಗೆ ನೀಡಲಾಗಿದೆ. ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಇದ್ದು ಅವರನ್ನು ಬಿಡುಗಡೆ ಮಾಡಬಾರದು ಎಂದು ವಾದಿಸಿದರು.





