ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಮುಂಭಾಗವೇ ಗುರುವಾರ ರಾತ್ರಿ ಆಘಾತಕಾರಿ ಘಟನೆ ನಡೆದಿದೆ. ಸೈಕಲ್ನಲ್ಲಿ ಬಲೂನ್ ಮಾರುತ್ತಿದ್ದ ಉತ್ತರಪ್ರದೇಶ ಮೂಲದ ವ್ಯಕ್ತಿಯೊಬ್ಬ ಹೀಲಿಯಂ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿ ದುರ್ಮರಣಕ್ಕೀಡಾಗಿದ್ದಾನೆ.
ಕಳೆದ ಒಂದು ವಾರದ ಹಿಂದಷ್ಟೇ ಮೈಸೂರಿಗೆ ಬಂದಿದ್ದ ಉತ್ತರಪ್ರದೇಶ ಸಲೀಂ ಎಂಬಾತ ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ತುಂಬಿಸಿ ಬಲೂನ್ ತುಂಬಿಸಿ ಮಾರಾಟ ಮಾಡುತ್ತಿದ್ದ. ಒಂದು ವಾರದಿಂದ ಅರಮನೆ ಸುತ್ತಲೂ ವಸ್ತುಪ್ರದರ್ಶನದ ಆವರಣದಲ್ಲಿ ಬಲೂನ್ ಮಾರುತ್ತಿದ್ದ. ರಾತ್ರಿ 8.30 ಗಂಟೆ ವರಾಹ ಗೇಟ್ ಬಳಿ ಬಲೂನ್ ಮಾರಾಟ ಮಾಡುತ್ತಾ ಜಯಮಾರ್ತಾಂಡ ಗೇಟ್ ಬಳಿ ಬಂದಿದ್ದ.
ದೊಡ್ಡಕೆರೆ ಮೈದಾನದ ಎದುರುಗಡೆ ಇರುವ ಜಯಮಾರ್ತಾಂಡ ಗೇಟ್ ನಲ್ಲಿ ಬಲೂನ್ ತೆಗೆದುಕೊಳ್ಳಲು ಸಾರ್ವಜನಿಕರೂ ಕೂಡ ಆಗಮಿಸಿದ್ದರು. ಸುಮಾರು ಐದಾರು ಮಂದಿಗೆ ಬಲೂನ್ ಮಾರುವಾಗ ಸತತವಾಗಿ ಬಲೂನ್ ಗೆ ಹೀಲಿಯಂ ಗ್ಯಾಸ್ ತುಂಬಿದ್ದರಿಂದ ಹೀಲಿಯಂ ತುಂಬಿದ್ದ ಸಿಲಿಂಡರ್ ಹೀಟ್ ಆಗಿ ಸ್ಪಾರ್ಕ್ ಉಂಟಾಗಿದೆ. ಏನಾಗಿದೆ ಎಂದು ನೋಡೋವಷ್ಟರಲ್ಲಿ ಏಕಾಏಕಿ ಹೀಲಿಯಂ ತುಂಬಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಸ್ಫೋಟದ ತೀವ್ರತೆಗೆ ಬಲೂನ್ ಮಾರುತ್ತಿದ್ದ ಸಲೀಂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಸಲೀಂ ಉತ್ತರ ಪ್ರದೇಶದ ತೊಫಿಯಾ ಗ್ರಾಮದ ಖಮರುದ್ದೀನ್ ಮಗ ಎಂದು ಹೇಳಲಾಗಿದೆ.
ನಾಲ್ವರು ಗಂಭೀರ, ಇಬ್ಬರು ಸೀರಿಯಸ್: ಸಲೀಂ ಪಕ್ಕದಲ್ಲೇ ನಿಂತಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಲ್ಲಿ ಒಬ್ಬರಿಗೆ ಜೆಎಸ್ಎಸ್ ಆಸ್ಪತ್ರೆಯಲ್ಲಿ, ಇನ್ನು ಮೂವರಿಗೆ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದ ಸೋಕೋ ಟೀಂ ಹಾಗೂ ಎಫ್ಎಸ್ಎಲ್ ತಂಡದಿಂದ ಸ್ಥಳ ಪರಿಶೀಲನೆ ನಡೆಸಿ ಇದು ಸಿಲಿಂಡರ್ ಸ್ಫೋಟನಾ ಅನ್ನೋದನ್ನು ದೃಢಪಡಿಸಲಿದ್ದಾರೆ.
ಮೈಸೂರಿನ ಬೆಳವಾಡಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ರಾಜೇಶ್ ಅವರ ಪತ್ನಿ 45 ವರ್ಷದ ಲಕ್ಷ್ಮೀ ಸ್ಥಿತಿ ಗಂಭೀರವಾಗಿದೆ. ಇನ್ನು ನಂಜನಗೂಡಿನ 29 ವರ್ಷದ ಮಂಜುಳಾ ಸ್ಥಿತಿ ಕೂಡ ಸೀರಿಯಸ್ ಆಗಿದೆ. ಉಳಿದಂತೆ ದಾವಣಗೆರೆಯ ದಾನೇಶ್ವರ ನಗರದ 35 ವರ್ಷದ ಕೊಟ್ರೇಶ್ ಗುತ್ತೆ ಅವರ ಎಡಗಾಲಿಗೆ ಗಾಯವಾಗಿದೆ. ವಿನೋದ್ ಅವರ ಪತ್ನಿ 30 ವರ್ಷದ ರಂಜಿತಾ ಕತ್ತಿನ ಭಾಗದಲ್ಲಿ ಗಾಯವಾಗಿದೆ. ಕೊಲ್ಕೊತ್ತಾ ಮೂಲದ 54 ವರ್ಷದ ಶಹನಾಜ್ ಶಬ್ಬೀರ್ ಅವರಿಗೆ ಎಡಗಾಲು ಹಾಗೂ ಎಡ ತೊಡೆಗೆ ಏಟಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.





