ಕಲೆಯ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗೀತಾ ಸುನೀಲ್, ಕಸದಿಂದ ರಸ ಮಾಡಿ, ಅದನ್ನೇ ಹವ್ಯಾಸವಾಗಿ ಬೆಳೆಸಿಕೊಂಡು ಇಂದು ಯಶಸ್ವಿ ವೃತ್ತಿಯಾಗಿ ನಡೆಸುತ್ತಿದ್ದಾರೆ. ಇವರ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ……?
ಬುದ್ಧಿಜೀವಿಗಳದ್ದು ಆಲೋಚನೆ…. ಹೃದಯ ಜೀವಿಗಳದ್ದು ರಸಾನುಭವ. `ಬಲ್ಲವನೇ ಬಲ್ಲ ಬೆಲ್ಲದ ರುಚಿಯ’ ಎನ್ನುವ ಹಾಗೆ ಚಿತ್ರಕಲೆಯ ಸವಿಯ ಸವಿದವನಿಗೇ ಗೊತ್ತು. ಮನುಷ್ಯ ಹುಟ್ಟಿದಾಗಲೇ ಗುಹಾಂತರಗಳಲ್ಲಿ ಚಿತ್ರ ರಚಿಸುತ್ತಾ ಆನಂದವಾಗಿ ಬದುಕಿದ್ದನ್ನು ನಾವು ಇತಿಹಾಸದಲ್ಲಿ ಓದಿ ತಿಳಿದಿದ್ದೇವೆ. ಆಗಿನಿಂದ ಪ್ರಾರಂಭವಾದ ಚಿತ್ರ ರಚನೆಯು ಎಲ್ಲಿಯೂ ನಿಂತ ನೀರಾಗಿಲ್ಲ ಎಂಬುದು ಕಾರ್ಯ ನಿರ್ವಹಿಸುತ್ತಾ ಬಂದಿದೆ.
ಭಾಷೆಯ ಕಷ್ಟ, ಚಿತ್ರ ಸುಲಭ! ಮಕ್ಕಳ ಚಿತ್ರಗಳು ಅಮೂಲ್ಯವಾದವು. ಮಕ್ಕಳು ಕಲ್ಪನೆಯ ಮೂಲಕ ಚಿತ್ರಿಸುತ್ತಾರೆ. ಅವರ ಚಿತ್ರಗಳಲ್ಲಿ ಒಂದು ಶಕ್ತಿ ಇರುತ್ತದೆ. ಹಾಗಾಗಿ ಮಕ್ಕಳನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು.
ಕಲೆ ಸೃಜನಶೀಲತೆಯ ಪ್ರತಿಫಲನ. ಸೆರೆಹಿಡಿಯಲು ಆಲೋಚನೆಗಳು, ಕಲ್ಪನೆಗಳು ಮತ್ತು ರಿಯಾಲಿಟಿ, ವಿಶೇಷ ಕೌಶಲ್ಯಗಳ ಅಗತ್ಯವಿರುತ್ತದೆ. ಮಾನವನ ಜೀವನದಲ್ಲಿ ಕಲೆಯು ಪ್ರಮುಖ ಸ್ಥಾನಗಳಲ್ಲಿ ಒಂದನ್ನು ತೆಗೆದುಕೊಳ್ಳುತ್ತದೆ.
ಅಸಾಧಾರಣ ಪ್ರತಿಭೆ
ಇದೇನು ಕಲೆಯ ಬಗ್ಗೆ ಇಷ್ಟೊಂದು ವಿವರಣೆ ಅಂದ್ಕೊಂಡ್ರಾ….? ಕಲೆಯನ್ನು ಮೈಗೂಡಿಸಿಕೊಂಡು, ಅದನ್ನೆ ವೃತ್ತಿಯಾಗಿಸಿಕೊಂಡು ಈ ಕಲೆ, ಕಸುಬು ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವ ಯಶಸ್ವಿ ಗೃಹಿಣಿ ಗೀತಾ ಸುನೀಲ್. ಸಕಲೇಶಪುರ ತಾಲ್ಲೂಕು, ಹಾನುಬಾಳು ಹೋಬಳಿಯಲ್ಲಿ ವಾಸವಾಗಿದ್ದಾರೆ. ಇವರು ಕಲೆಯಲ್ಲಿ ಸಾಕಷ್ಟು ಆಸಕ್ತಿಯನ್ನು ಹೊಂದಿದವರಾಗಿದ್ದಾರೆ. ತನ್ನ ಆಸಕ್ತಿ ಮತ್ತು ಅಭಿವ್ಯಕ್ತಿ ಎರಡನ್ನೂ ಬಳಸಿಕೊಂಡು ಇಂದು ಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡು ಹಣವನ್ನು ಸಂಪಾದಿಸುತ್ತಿದ್ದಾರೆ. ಮಹಿಳೆಯರು ಕೇವಲ ಅಡುಗೆ, ಮನೆಗೆಲಸಗಳಿಗಷ್ಟೇ ಸೀಮಿತವಾಗಿಲ್ಲದೆ…. ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎನ್ನುತ್ತಾರೆ.
ತನ್ನ ಭಾವನೆ, ತುಡಿತ, ನೋವುನಲಿವುಗಳನ್ನೆಲ್ಲಾ ಕಲೆಗೆ ರೂಪು ಕೊಟ್ಟು ಭಾವನೆಗಳನ್ನು ತುಂಬಿ ಅಭಿವ್ಯಕ್ತಿಗೊಳಿಸಿದ್ದಾರೆ. ಇದೇ ಇವರ ಕಲಾ ವೈಶಿಷ್ಟ್ಯ! ಮೊದಮೊದಲು ಆಸಕ್ತಿಯಿಂದ ಮಾಡಲು ಹೊರಟಿದ್ದ ಈ ಕರಕುಶಲತೆ ಈಗ ವೃತ್ತಿಯಾಗಿದೆ ಎಂದು ಗೀತಾ ಸಂತೋಷದಿಂದ ಹೇಳಿಕೊಳ್ಳುತ್ತಾರೆ. ವೃತ್ತಿಗೆ ಬೇಕಾದ ಟ್ರೈನಿಂಗ್ ಅವಶ್ಯಕತೆ ಇದ್ದುದರಿಂದ ಬೇಕಾದ ಪದವಿಯನ್ನು ಪಡೆದುಕೊಂಡಿದ್ದಾರೆ. ಫೈನ್ ಆರ್ಟ್ಸ್ ನಲ್ಲಿಯೂ ಕೂಡ ಪರಿಣಿತಿ ಹೊಂದಿದ್ದಾರೆ. ಈಗಾಗಲೇ ಗ್ರಾಹಕರ ಅವಶ್ಯಕತೆ ಮತ್ತು ಆಸಕ್ತಿಗೆ ಅನುಗುಣವಾಗಿ ಸಾಕಷ್ಟು ಪೇಂಟಿಂಗ್ ಗಳು, ಮದುವೆ ಅಲಂಕಾರ ವಸ್ತುಗಳು, ಕ್ಯಾನ್ ವಾಸ್ ಪೇಂಟಿಂಗ್, ಮಿನಿಯೇಚರ್‌ಆರ್ಟ್ ಇತ್ಯಾದಿಗಳನ್ನು ಮಾಡಿಕೊಡುತ್ತಿದ್ದಾರೆ.
ಕಸದಿಂದ ರಸ
`ಕಸದಿಂದ ಕಲೆ’ ಇವರ ಕಲೆಯ ವೈಶಿಷ್ಟ್ಯತೆ! ಇವರು ತಮ್ಮ ಕಾಫಿ ತೋಟದಲ್ಲಿ ಒಣಗಿದ ಹೂ, ಬಳ್ಳಿ, ಕಾಫಿ ಮರದ ಬೊಡ್ಡೆಗಳು, ತೆಂಗಿನ ಮರದ ಹೂಗಳು…. ಯಾವುದು ಬೇಡ ಎಂದು ಹಾಗೆ ಉಳಿದಿರುತ್ತವೆಯೋ ಅವುಗಳನ್ನೇ ಬಳಸಿಕೊಂಡು ವಿವಿಧ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದರು. ಕಸದಿಂದ `ಕಲೆ’ ತಯಾರಿಸುವುದು ಗೀತಾರ ಹವ್ಯಾಸ. ದಿನನಿತ್ಯದ ಅಡುಗೆಗೆ ಬಳಸುವ ತರಕಾರಿ ಬೀಜಗಳನ್ನು ಕಸದ ಬುಟ್ಟಿಗೆ ಹಾಕುವ ಬದಲು ಅದನ್ನೇ ಬಳಸಿ ಕಲೆಯಾಗಿಸಿ ಮನೆಯ ಅಂದ ಹೆಚ್ಚಿಸುವುದು, ಇವರ ಕೆಲಸ. ಬಿಡುವಿನ ವೇಳೆಯಲ್ಲಿ ಕುಂಚ ಹಿಡಿಯುವುದನ್ನೇ ನಿತ್ಯದ ಕಾಯಕವನ್ನಾಗಿಸಿಕೊಂಡಿದ್ದಾರೆ ಗೀತಾ. ಕುಂಬಳಕಾಯಿ ಬೀಜಗಳನ್ನು ಜೋಡಿಸಿ ಗಣಪತಿ, ಸೌತೇಕಾಯಿ ಬೀಜ, ರಾಗಿ ಅಲ್ಲದೆ ತಮ್ಮ ತೋಟದಲ್ಲಿನ ಮರ ಹಾಗೂ ಬಳ್ಳಿಗಳಲ್ಲಿ ಅರಳಿ ಒಣಗಿ, ಉದುರಿದ ವಿವಿಧ ಹೂ, ಒಣ ಎಲೆ ಹಾಗೂ ಕಾಯಿಗಳಿಗೆ ಮೆಟಾಲಿಕ್ ಬಣ್ಣ ನೀಡಿ, ಹೂದಾನಿಗಳಲ್ಲಿ ಇಡಬಹುದಾದ ಅಲಂಕಾರಿಕ ಕಲೆಯನ್ನಾಗಿಸುವುದು. ಒಣಹೂ ಕಾಯಿಗಳಿಗೆ ವಾರ್ನಿಶ್ ಹಚ್ಚಿ ಅಥವಾ ತಂತಿಯಿಂದ ಜೋಡಿಸಿ ಹೊಸ ವಿನ್ಯಾಸಗಳನ್ನು ರೂಪಿಸುವ ಚಾಕಚಕ್ಯತೆ ಇವರಿಗಿದೆ.
ಕಾಫಿ ಬೆಳೆಗಾರರ ಕುಟುಂಬದ ಹಿನ್ನೆಲೆ ಇರುವ ಗೀತಾರಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯ ಮೇಲೆ ಎಲ್ಲಿಲ್ಲದ ಆಸಕ್ತಿ. ಸಮಯ ಸಿಕ್ಕಾಗಲೆಲ್ಲಾ ಖಾಲಿ ಹಾಳೆಯ ಮೇಲೆ ಚಿತ್ರಕಲೆ ಬಿಡಿಸುತ್ತಾ, ಅಂದ ಹೆಚ್ಚಿಸಲು ಬಣ್ಣ ಹಚ್ಚುತ್ತಾ ಕಲಿತ ಕಲೆ, ಈಗ ಈ ಕಲೆಯಿಂದಲೇ ತನ್ನನ್ನು ಎಲ್ಲರೂ ಗುರುತಿಸುವ ಮಟ್ಟಕ್ಕೆ ಸಾಧನೆ ಮಾಡಿದ್ದಾರೆ.
ಪ್ರಮುಖ ಸಾಧನೆಗಳು
ಗೀತಾ ಪ್ರಮುಖವಾಗಿ ಮಾಡಿರುವ ಆರ್ಟ್ ಗಳ ಪಟ್ಟಿ ಹೀಗಿದೆ :
ತಂಜಾವೂರ್ ಪೇಂಟಿಂಗ್
ಕ್ಯಾನ್ ವಾಸ್ ಪೇಂಟಿಂಗ್
ವಾರ್ಲಿ ಆರ್ಟ್
ಚಾರ್ಕೋಲ್ ಆರ್ಟ್ ವರ್ಕ್
ಗ್ಲಾಸ್ ಪೇಂಟಿಂಗ್
ಮಿನಿಯೇಚರ್ ಆರ್ಟ್
ಪಾರ್ಟೆಸ್ ವರ್ಕ್
ಪ್ಯಾಚ್ ವರ್ಕ್
ಮಂಡಲ್ ಆರ್ಟ್
ಕ್ರಾಫ್ಟ್ ವರ್ಕ್
ಅಬ್ಬಬ್ಬಾ….. ದೊಡ್ಡ ಪಟ್ಟಿಯೇ ಇದೆ ಅಲ್ವಾ…..? ಇವೆಲ್ಲದರಲ್ಲಿ ಪರಿಣಿತಿ ಇರೋದರಿಂದಲೇ ಇವರು ಈ ಭಾಗದ `ಕಲಾ ಕುಸುಮ’ ಎಂದು ಗುರುತಿಸಿಕೊಂಡಿದ್ದಾರೆ.
ಹಾಗೆಯೇ ನಿತ್ಯಬಳಕೆ ವಸ್ತುಗಳನ್ನು ಸಾಕಷ್ಟು ಮಾಡುತ್ತಿದ್ದಾರೆ. ಅಡುಗೆಮನೆಯ ನಿತ್ಯಬಳಕೆ ವಸ್ತುಗಳಾದ ಏಪ್ರನ್, ಒರಸುವ ಬಟ್ಟೆ, ಸ್ಪೆಷಲ್ ನ್ಯಾಪ್ ಕಿನ್ಸ್, ಫ್ರಿಡ್ಸ್ ಹ್ಯಾಂಡ್ ಪೌಚ್, ಹ್ಯಾಂಡ್ ಟವೆಲ್ಸ್ ಇವುಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾಡಿಕೊಡುತ್ತಿದ್ದಾರೆ.
ಕೇವಲ ಕಲೆಯಷ್ಟೇ ಅಲ್ಲದೇ ಗೀತಾ, ವೈನ್ ತಯಾರಿಕೆಯಲ್ಲಿಯೂ ಸಹ ವಿಶೇಷ ಆಸಕ್ತಿ ಉಳ್ಳವರಾಗಿದ್ದಾರೆ. ಇವರು ತಯಾರಿಸಿದ ದ್ರಾಕ್ಷಿ, ವೀಳ್ಯದೆಲೆ, ಶುಂಠಿ, ಗುಲಾಬಿ, ಪೈನಾಪಲ್, ಕರಬೂಜ, ಪ್ಯಾಷನ್‌ಫ್ರೂಟ್, ದಾಳಿಂಬೆ ವೈನ್ ಗಳು ಗ್ರಾಹಕರಿಂದ ಬಹಳ ಮೆಚ್ಚುಗೆಯನ್ನು ಪಡೆದಿವೆ. ಇದಕ್ಕೆಲ್ಲಾ ಸಂಪೂರ್ಣ ಸಹಕಾರ ನೀಡುತ್ತಿರುವವರು ಇವರ ಪತಿ ಸುನೀಲ್.
ಕರಕುಶಲ ಕಲೆಗಳ ಎಕ್ಸ್ ಪರ್ಟ್
ಕರಕುಶಲ ಕಲೆಗಳಾದ ಫಾಯಿಲ್ ವರ್ಕ್, ತರಕಾರಿಗಳಿಂದ ಹೂ ಅರಳಿಸುವ ಕಲೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ವಿವಿಧ ನಮೂನೆಯ ಕಲಾಕೃತಿ, ಕೊಬ್ಬರಿ ಮೇಲೆ ಕೆತ್ತನೆ, ಚಾಕಲೇಟ್ ನಿಂದ ಗಾರ್ಡನ್, ವಿವಿಧ ಧಾನ್ಯಗಳಿಂದ ರಂಗೋಲಿ, ಸ್ಯಾಂಡಲ್ ವರ್ಕ್, ಡಿಸೈನ್ ಪಿಲ್ಲೋ, ಎಂಬ್ರಾಯಿಡರಿ, ಹೊಲಿಗೆ, ಹೂ ಕುಂಡದ ಮೇಲೆ ಡಿಸೈನ್ ಹಾಗೂ ಪೇಂಟಿಂಗ್, ಥರ್ಮಾಕೋಲ್ ನಿಂದ ವಿವಿಧ ಬಗೆಯ ಕಲಾಕೃತಿ, ಟೆಡ್ಡಿಬೇರ್…. ಹೀಗೆ ಅವರ ಕಲೆಗೆ ಕೊನೆಯೇ ಇಲ್ಲ.
ಫ್ಯಾಬ್ರಿಕ್ ಪೇಂಟಿಂಗ್ ಗೆ ಹೆಚ್ಚಿನ ಒತ್ತು ನೀಡುತ್ತಿದ್ದ ಇವರು ಈ ಕರಕುಶಲ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದು, ಇದರಲ್ಲಿಯೂ ಹೊಸ ಹೊಸ ಪ್ರಯೋಗಗಳಲ್ಲಿ ನಿರತರಾಗಿದ್ದಾರೆ. ಶಾಲಾ ಅವಧಿಯಲ್ಲಿಯೇ ಕಲೆಯ ಹವ್ಯಾಸ ಮೈಗೂಡಿಸಿಕೊಂಡಿದ್ದ ಇವರು, ವಿವಾಹದ ನಂತರ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಒಬ್ಬ ಗೃಹಿಣಿಯ ಬಿಡುವಿಲ್ಲದ ಸಮಯದ ನಡುವೆಯೂ ಕಲೆಯೇ ತನ್ನ ಉಸಿರು ಎಂದುಕೊಂಡು ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಹವ್ಯಾಸ ಕಲೆಯು ಈಗ ವೃತ್ತಿಯಾಗಿ ರೂಪುಗೊಂಡು ಸಾಕಷ್ಟು ಜನಮನ್ನಣೆಯನ್ನು ಗಳಿಸಿದ್ದಾರೆ.
– ಕೀರ್ತಿ ಕಿರಣ್ ಕುಮಾರ್





