ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಸಾಹಿತ್ಯದ ಮೇರು ಕೃತಿಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿರುವ ಕುವೆಂಪು ಅವರ  ಮಲೆಗಳಲ್ಲಿ ಮದುಮಗಳು ಕಾದಂಬರಿ ಎಲ್ಲ ಕಾಲಕ್ಕೂ ಸಲ್ಲುವ ಕಾಲಾತೀತ ಕಾದಂಬರಿಗಳಲ್ಲಿ ಒಂದು ಎಂದು ಪ್ರಸಿದ್ಧ ನಾಟಕಕಾರ ,ಕವಿ ಡಾ.ಕೆ ವೈ ನಾರಾಯಣಸ್ವಾಮಿ ಹೇಳಿದರು.

ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಡಾ. ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ಮಲೆಗಳಲ್ಲಿ ಮದುಮಗಳು ಕೃತಿಯ ಪಾತ್ರಾವಲೋಕನ ವಿಷಯ ಕುರಿತು ಮಾತನಾಡುತ್ತಿದ್ದರು.

FB_IMG_1767184793889

ಕುವೆಂಪು ಅವರಿಗೆ ಮಲೆಗಳಲ್ಲಿ ಮದುಮಗಳು ಕೃತಿ ಒಂದು ಜೀವನ ದರ್ಶನ ಮಾಡಿಸಿದಂತಹ ಕೃತಿಯಾಗಿದೆ. ಮನುಷ್ಯ ಮತ್ತು ಪ್ರಕೃತಿಯ ಮುಖಾಮುಖಿ ಯಲ್ಲಿ ಬದುಕಿನ ತಲ್ಲಣಗಳು ಹಾಗೂ ಸಮಾಜ ಜೀವನದ ಇತಿಹಾಸವನ್ನು ಕಟ್ಟಿಕೊಡುವ ಈ ಕಾದಂಬರಿ ಇಡೀ ಜಾಗತಿಕ ಸಾಹಿತ್ಯದಲ್ಲಿಯೇ ಯಾವ ಭಾಷೆಯಲ್ಲಿ ಕಾಣಸಿಗದಂತಹ ಅದ್ಭುತ ಅನುಭವ ದ್ರವ್ಯ ಒಳಗೊಂಡಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಈ ಕಾದಂಬರಿಯ ಪ್ರತಿ ಪಾತ್ರಕ್ಕೂ ಕುವೆಂಪು ಅವರು ಪ್ರಾಣೋಕ್ರಣ ಮಾಡಿದ್ದಾರೆ ಪ್ರಕೃತಿಗಿರುವ ನಿತ್ಯ ನೂತನ ಚಿರಂತನ ಶಕ್ತಿಯನ್ನು ಇಲ್ಲಿನ ಕಾದಂಬರಿ ಬೆರಗಾಗಿಸುವ ಹಾಗೆ ಚಿತ್ರಿಸಿದೆ ಹಾಗಾಗಿಯೇ ಕುವೆಂಪು ಜಗದ ಕವಿ ಯುಗದ ಕವಿಯಾಗಿದ್ದಾರೆ ಎಂದು ಅವರು ಹೇಳಿದರು. ಏಳು ದಶಕಗಳಲ್ಲಿ ಲೆಕ್ಕವಿಲ್ಲದಷ್ಟು ಮುದ್ರಣಗಳನ್ನು ಕಂಡಿರುವ ಈ ಕಾದಂಬರಿ ಇಂದಿಗೂ ಸಹ ಮತ್ತೆ ಮತ್ತೆ ಮುದ್ರಣಗೊಂಡು ಓದುಗರನ್ನು ಸೆಳೆಯುತ್ತಿದೆ ಎಂದರೆ ಅದು ಆ ಕೃತಿಯಲ್ಲಿರುವ ಶಕ್ತಿಗೆ ಸಾಕ್ಷಿಯಾಗಿದೆ. ಪ್ರಕೃತಿ ಮನುಷ್ಯ ಮತ್ತು ಪ್ರಾಣಿ ಇವುಗಳ ನಡುವಿನ ಸಂಬಂಧಗಳನ್ನು ಕುವೆಂಪು ಅವರು ಬೆಸೆದು ನಿಲ್ಲಿಸಿರುವ ರೀತಿ ಅನನ್ಯವಾದದ್ದು. ಅಲಕ್ಷಿತರ ಮೂಲಕ ಸಮಾಜವನ್ನು ನೋಡಿದ ಈ ಕೃತಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದರು 40 ವರ್ಷಗಳ ಇತಿಹಾಸವನ್ನು ಅದು ತೆರೆದಿಡುತ್ತದೆ. ಆಧುನಿಕತೆಯ ಪ್ರವೇಶ, ಅನ್ಯ ಧರ್ಮಗಳ ಪ್ರಭಾವ ಆರಂಭವಾಗಿದ್ದ ಕಾಲಘಟ್ಟ ಹಾಗೂ ಜಾಗತಿಕ ಮಟ್ಟದಲ್ಲಾಗುತ್ತಿದ್ದ ಬದಲಾವಣೆಗಳು ಈ ಎಲ್ಲವುಗಳನ್ನು ಮಲೆಗಳಲ್ಲಿ ಮದುಮಗಳು ಕಾದಂಬರಿ ಒಳಗೊಳ್ಳುವ ರೀತಿಯೇ ಆಶ್ಚರ್ಯಕರವಾಗಿದೆ. ಹಾಗಾಗಿ ಇದು ಒಂದು ಕಾಲಘಟ್ಟದ ಚರಿತ್ರೆಯನ್ನು ತೆರೆದಿಡುತ್ತದೆ. ಇಲ್ಲಿನ ಪ್ರತಿಭಾ ಪ್ರಭು ಅತ್ಯಂತ ವಿಶಿಷ್ಟ ಮತ್ತು ಮನೋಜ್ಞವಾದದ್ದು, ಒಂದೊಂದು ಪಾತ್ರದಲ್ಲೂ  ಜೀವ ಚೈತನ್ಯ ತುಂಬಿದೆ. ಅದರಲ್ಲೂ ಗುತ್ತಿ ನಾಯಿಯೇ ಇಡೀ ಕಾದಂಬರಿಯ ನಾಯಕನಾಗಿ ವಿಜೃಂಭಿಸುವ ರೀತಿ ಓದುಗರನ್ನು ವಿಸ್ಮಯಕ್ಕೆ ದೂಡುತ್ತದೆ ಎಂದು ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ಇದು ಜೀವನ ದರ್ಶನ ಮಾಡಿಸುವ ಕಾದಂಬರಿ ಎಂದು ಬಣ್ಣಿಸಿದ ಅವರು ಕುವೆಂಪು ಅವರ ಆಧ್ಯಾತ್ಮಿಕತೆ ,ಜೀವನ ದೃಷ್ಟಿಕೋನ ಹಾಗೂ ಅವರ ಬರಹದ ಚೈತನ್ಯ ಒಂದು ವಿಶಿಷ್ಟ ದರ್ಶನ ಮಾಡಿಸುತ್ತದೆ ಎಂದರು.

FB_IMG_1767184755375

ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರ ದ ಅಧ್ಯಕ್ಷ ಡಾ. ಮಾನಸ ಅವರು ಸಮರ್ಥ ಅನುವಾದಕರೊಬ್ಬರು ಕುವೆಂಪು ಅವರಿಗೆ ಸಿಕ್ಕಿದ್ದರೆ ಕನ್ನಡಕ್ಕೆ ಎಂದೊ ನೋಬೆಲ್ ಮತ್ತು ಬೂಕರ್ ಪ್ರಶಸ್ತಿಗಳು ಬರುತ್ತಿದ್ದವು. ಕುವೆಂಪು ಅವರ ಬರಹದ ಸಾಮರ್ಥ್ಯಕ್ಕೆ ಎಣೆಯೇ ಇಲ್ಲ, ಇಂದಿನ ಯುವ ಜನತೆ ಪುಸ್ತಕ ಪ್ರೀತಿಯನ್ನು ಬೆಳೆಸಿಕೊಂಡು ಇಂತಹ ಮಹಾನ್ ಲೇಖಕರ ಕೃತಿಗಳನ್ನು ಓದುವಂತಾದರೆ ಪುಸ್ತಕ ಪ್ರಾಧಿಕಾರ ಕೈಗೊಂಡಿರುವ ಇಂತಹ ಯೋಜನೆಗಳು ಅರ್ಥಪೂರ್ಣವಾಗುತ್ತದೆ ಎಂದರು.

FB_IMG_1767184779109

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ ಎಂ ಗಾಯಿತ್ರಿ ಅವರು ಮಾತನಾಡಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕುವೆಂಪು ಅವರು ಕೊಟ್ಟ ಕೊಡುಗೆ ಅತ್ಯಂತ ಮಹತ್ವದ್ದು ಅವರು ಚಿತ್ರಿಸಿದ ಪಾತ್ರಗಳು ನಮ್ಮ ಮನಸ್ಸಿನಿಂದ ಮರೆಯಾಗಲು ಸಾಧ್ಯವಿಲ್ಲ ಪ್ರತಿ ಪಾತ್ರವೂ ಜೀವಿಸುತ್ತದೆ ,
ಇಂತಹ ಸಾಹಿತ್ಯದ ಓದು ಯುವ ಪೀಳಿಗೆಗೆ ಅತ್ಯಂತ ಅಗತ್ಯ ವಿದ್ಯಾರ್ಥಿಗಳು ಸಾಹಿತ್ಯಾಸಕ್ತಿ ಬೆಳೆಸಿಕೊಂಡಲ್ಲಿ ಪುಸ್ತಕ ಪ್ರಾಧಿಕಾರ ಮಾಡುತ್ತಿರುವ  ಪ್ರಯತ್ನಗಳು ಸಹ ಸಾರ್ಥಕವಾಗುತ್ತದೆ ಎಂದರು.

FB_IMG_1767184752579

ಡಾ. ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ ದ ಕುಲಪತಿ ಪ್ರೊ. ರಮೇಶ್ ಬಿ ಅವರು ಮಾತನಾಡಿ ಕುವೆಂಪು ಅವರು ಎಲ್ಲರನ್ನು ಪ್ರಭಾವಿಸುವಂತಹ ಮಹತ್ವದ ಬರಹಗಾರರು. ಅವರನ್ನು ಓದದ ಕನ್ನಡಿಗರೇ ವಿರಳ, ಅವರು ತಲೆಮಾರುಗಳನ್ನು ಪ್ರಭಾವಿಸಿದ ರೀತಿ ಅತ್ಯಂತ ಆಶ್ಚರ್ಯಕರ ಎಂದರು. ವಿಶ್ವವಿದ್ಯಾಲಯ ಪುಸ್ತಕ ಪ್ರಾಧಿಕಾರದ  ಜೊತೆ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲು ಬಯಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆಂಗ್ಲ ಸಹಪ್ರಾಧ್ಯಾಪಕರು ಹಾಗೂ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರು ಆದ ಡಾ. ತಂಡವ ಗೌಡ ಟಿ ಎನ್ ಅವರು ಉಪಸ್ಥಿತರಿದ್ದರು.

FB_IMG_1767184781516

ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್  ಪ್ರಸ್ತಾವಿಕ ಮಾತನಾಡಿ ಪ್ರಾಧಿಕಾರದ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ