ಕಥೆ - ಜಾನಕಿ ರಾವ್
ಕೆಸರಿನ ಕಮಲವಾಗಿದ್ದ ಪುಷ್ಪಾ ಜಗದೀಶರ ಕೈ ಹಿಡಿದು ಆ ಮನೆಗೆ ನಂದಾದೀಪವಾಗಿ ಬಾಳಿ ಬದುಕಿದರು. ಆ ದೀಪದಡಿಯಲ್ಲೂ ಒಂದು ಕತ್ತಲೆ ಇತ್ತು ಎಂಬುದು ರಾಯರಿಗೆ ಮುಂದಾದರೂ ತಿಳಿಯಿತೇ......?
ಸಂಕಲ್ಪದ ಸಮಯ ಮೀರುತ್ತಾ ಇದೆ, ಅಮ್ಮಾವರನ್ನ ಕರೀರಿ ರಾಯರೇ ಎಂಬ ಪುರೋಹಿತರ ಮಾತು ಕಿವಿಗೆ ಬಿದ್ದ ಕ್ಷಣಕ್ಕೆ ಹೋಮ ಕುಂಡದ ಮುಂದೆ ಕುಳಿತಿದ್ದ ಜಗದೀಶರ ಕಣ್ಣು ಅಸಹನೆಯಿಂದ ಹೆಂಡತಿಯನ್ನು ಅರಸತೊಡಗಿತು.
ಅಷ್ಟರಲ್ಲಿ, ಗಾಢ ಹಸಿರು ಬಣ್ಣದ ಬಂಗಾರದೆಳೆಯ ಸೀರೆ.... ಎತ್ತಿ ಕಟ್ಟಿದ ತುರುಬು, ತುರುಬಿನ ಸುತ್ತ ಸುತ್ತಿದ ಮಲ್ಲಿಗೆಯ ದಂಡೆ, ಪಚ್ಚೆ ನೆಕ್ಲೇಸ್, ಪಚ್ಚೆ ಬಳೆ, ಪಚ್ಚೆಯೋಲೆ ಧರಿಸಿ ದೇವಿಯಂತೆ ಕಂಗೊಳಿಸುತ್ತಾ ಬಂದ ಮಡದಿ ಪುಷ್ಪಾರತ್ತ ತಿರುಗಿ, ``ಟೈಂ ಸೆನ್ಸ್ ಇಲ್ಲ ನಿನಗೆ,'' ಎನ್ನುತ್ತಾ ವಟಗುಟ್ಟಲು ಆರಂಭಿಸಿದರು.
``ತಾಳ್ಮೆ ರಾಯರೇ.... ಇನ್ನೇನು ಅಮ್ಮಾವರು ಬಂದಾಯ್ತಲ್ಲ..... ಗಂಡ ಹೆಂಡತಿ ಒಂದೇ ಮನಸ್ಸಿನಿಂದ ಆ ದೇವಿಯನ್ನು ಪ್ರಾರ್ಥನೆ ಮಾಡಿಕೊಳ್ಳಿ. ಇವತ್ತಿಗೆ ನಿಮ್ಮ ದಾಂಪತ್ಯಕ್ಕೆ 30 ವರ್ಷ.... ಹಾಗೆ ನಿಮ್ಮ 60ನೇ ಜನ್ಮದಿನ. ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಕೂಡಾ ಆಚರಿಸಿಕೊಳ್ಳುವಂತಾಗಲಿ ಅಂತ ಬೇಡಿಕೊಳ್ಳಿ,'' ಎನ್ನುತ್ತಾ,
``ಅಮ್ಮಾವರೇ, ಬನ್ನಿ... ರಾಯರ ಬಲಭಾಗದ ಮಣೆ ಮೇಲೆ ಕೂತ್ಕೊಳ್ಳಿ....'' ಎಂದರು ಪುರೋಹಿತರು. ಕೀಲಿ ಗೊಂಬೆಯಂತೆ ಬಂದ ಪುಷ್ಪಾ, ಜಗದೀಶ್ ರ ಪಕ್ಕದಲ್ಲಿ ಕುಳಿತರು. ಧಗಧಗ ಉರಿಯು ಹೋಮ ಕುಂಡದ ಅಗ್ನಿ ದಿಟ್ಟಿಸುತ್ತಾ ಕುಳಿತವರ ಮನ ಬೇಡ ಬೇಡವೆಂದರೂ ಹಿಂದಕ್ಕೆ ಜಾರಿತ್ತು. ಧೀಮಂತ ವ್ಯಕ್ತಿ ವೇಣುಗೋಪಾಲರ ಮುಖ ಕಣ್ಮುಂದೆ. ಅಂಥ ತಂದೆಯ ಮಗಳೆಂಬ ಭಾವ ಈ ಕ್ಷಣಕ್ಕೂ ತನಗೆ ಹೆಮ್ಮೆ ತರುವ ವಿಷಯ. ಚಿನ್ನದ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟಿದ ಜಮೀನ್ದಾರ್ ವೇಣುಗೋಪಾಲರು ದೇವದಾಸಿ ಕಮಲಾಬಾಯಿಯ ಮಗಳು ಗಂಗಾಳಲ್ಲಿ ಅನುರಕ್ತರಾಗಿದ್ದು ಅಂದಿನ ದಿನಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ತಂದೆ, ತಾಯಿ, ಸಮಾಜ ಯಾರ ಮಾತಿಗೂ ಮಣಿಯದ ವೇಣು, ಜೀವನದಲ್ಲಿ ಹೆಣ್ಣು ಅಂತ ಸ್ವೀಕಾರ ಮಾಡುವುದಾದರೆ ಅದು ಗಂಗಾ ಮಾತ್ರ ಎಂದಾಗ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಗಂಗಾ, ಹಠಕ್ಕೆ ಬಿದ್ದು ಕುಲೀನ ಮನೆತನದ ಗಿರಿಜಾ ಜೊತೆ ಮದುವೆಗೆ ಒಪ್ಪಿಸಿ, ತಾನು ಜೀವನವಿಡೀ ಉಪಪತ್ನಿಯಾಗೇ ಉಳಿದಿದ್ದಳು.

ತಾಳಿ, ಸಪ್ತಪದಿ, ಅಗ್ನಿಸಾಕ್ಷಿ ಎಲ್ಲವನ್ನೂ ಮೀರಿದ ಅದ್ಭುತ ಬೆಸುಗೆ ವೇಣುಗೋಪಾಲ್-ಗಂಗಾರದ್ದು. ಇಡೀ ಸಮಾಜದ ಮುಂದೆ ರಾಜಾರೋಷಾಗಿ ಗಂಗಾ ತನ್ನವಳೆಂದು ಒಪ್ಪಿ ಅಪ್ಪಿ ಬದುಕು ಕಟ್ಟಿಕೊಟ್ಟಿದ್ದರು. ಆಸ್ತಿ ಅಂತಸ್ತು ಪ್ರೀತಿ ಎಲ್ಲದರಲ್ಲೂ ಗಿರಿಜಾ- ಗಂಗಾರಿಗೆ ಸಮಪಾಲು. ವೇಣುಗೋಪಾಲ್ ಮತ್ತು ಗಂಗಾರ ಒಲವಿನ ಕುಡಿಯೇ ಪುಷ್ಪಾ. ಹೆಸರಿಗೆ ತಕ್ಕಂತೆ ಮೃದು ಮನದ ಸೌಂದರ್ಯದ ಗಣಿ. ಅಪ್ಪ.... ಈ ಪದವೇ ಎಷ್ಟು ಚೇತೋಹಾರಿ!! ಪ್ರೀತಿ ಮಮತೆ ಜವಾಬ್ದಾರಿ ಎಲ್ಲದರಲ್ಲೂ ಅಪ್ಪನಿಗೆ ಅಪ್ಪನೇ ಸಾಟಿ. ಅಪ್ಪನ ಪಾಲಿಗೆ ಅಮ್ಮ ಮತ್ತು ನಾನು ಸರ್ವಸ್ವವಾಗಿದ್ದೆವು. ಅಮ್ಮನಿಗೋ ಅಪ್ಪನೇ ಪ್ರಪಂಚ, ಅಪ್ಪನೇ ದೇವರು. ದಿನಗಳು ಕ್ಷಣಗಳಾಗಿ ಓಡಿದ ಕಾಲಘಟ್ಟವದು. ಅಪ್ಪನ ಅಪ್ಪ, ಅಮ್ಮ, ಅಕ್ಕ ತಂಗಿಯರು ಮನಃಪೂರ್ವಕವಾಗಿ ಒಪ್ಪಿಕೊಳ್ಳದಿದ್ದರೂ ಎಂದೂ ಅಮ್ಮನನ್ನಾಗಲಿ, ನನ್ನನ್ನಾಗಲಿ ಆಡಿ ನೋಯಿಸುವ ಎದೆಗಾರಿಕೆ ತೋರಿದವರಲ್ಲ. ಅಪ್ಪ ಅದಕ್ಕೆ ಆಸ್ಪದ ಕೊಟ್ಟವರೂ ಅಲ್ಲ. ಅಂಥ ಸ್ಥಿತಿ ಬಂದರೆ ಉಳಿದ ಎಲ್ಲಾ ಸಂಬಂಧಗಳನ್ನೂ ನಮಗಾಗಿ ತ್ಯಜಿಸಲು ಅಪ್ಪ ಸಿದ್ಧರಾಗಿದ್ದರು. ಹಬ್ಬ ಹರಿದಿನಗಳಲ್ಲಿ ಅಪ್ಪನ ಮನೆಗೆ ಹೋಗಲು ಚಾತಕಪಕ್ಷಿಯಂತೆ ಕಾಯುತ್ತಿದ್ದೆ. ಕಾರಣ ಜಗದೀಶ್. ಅಪ್ಪನ ಕೊನೆ ತಂಗಿಯ ಮಗ. ಅತ್ತೆ, ಮಾತು ಕಥೆ ಆಡದೆ ಅಂತರ ಕಾಯ್ದುಕೊಂಡರೂ ಜಗದೀಶ್ ಹೇಗೊ ನನ್ನ ಮನದಲ್ಲಿ ಸ್ಥಾನ ಪಡೆದಿದ್ದ. ಜಗದೀಶನ ಹೃದಯದಲ್ಲಿ ನಾನು ನಿಂತಿದ್ದೆ. ಇತಿಹಾಸ ಮರುಕಳಿಸಿತು. ವ್ಯತ್ಯಾಸವಿಷ್ಟೇ ಅಮ್ಮ ತಾಳಿ, ಸಪ್ತಪದಿ, ಅಗ್ನಿಸಾಕ್ಷಿ ಇಲ್ಲದೆ ಅಪ್ಪನ ಅರಮನೆಗೆ ರಾಣಿಯಾದರೆ ನಾನು ಅಗ್ನಿಸಾಕ್ಷಿಯಾಗಿ, ತೀವ್ರ ವಿರೋಧದ ನಡುವೆ ಜಗದೀಶನ ಮಡದಿಯಾಗಿ ಅರಮನೆಯಂಥ ಮನೆಗೆ ಬಲಗಾಲಿಟ್ಟು ಬಂದೆ.





