ಅಡುಗೆಮನೆ ಹೊಳೆಹೊಳೆಯುತ್ತಾ ಇದ್ದರಷ್ಟೇ ಸಾಲದು, ಅಲ್ಲಿ ಹೈಜೀನ್ ಗೂ ಅಷ್ಟೇ ಪ್ರಾಧಾನ್ಯತೆ ಇರಬೇಕು. ಇದಕ್ಕಾಗಿ ಈ ಸಲಹೆಗಳನ್ನು ಅಗತ್ಯ ಅನುಸರಿಸಿ......!
ಸ್ವಚ್ಛ ಶುಭ್ರತೆಗೊಂಡ, ಅತ್ಯಾಧುನಿಕ ಉಪಕರಣಗಳಿಂದ ಸುಸಜ್ಜಿತ ಅಡುಗೆಮನೆ ಪ್ರತಿಯೊಬ್ಬ ಗೃಹಿಣಿಯ ಕನಸು. ನಾವು ಯಾರದೇ ಮನೆಗೆ ಹೋದಾಗಲೂ, ಆ ಮನೆಯ ಅರೇಂಜ್ ಮೆಂಟ್ಸ್ ಕಡೆ ನೋಟ ಹರಿಸುತ್ತೇವೆ. ಯಾವ ಮನೆ ಅಚ್ಚುಕಟ್ಟಾಗಿ ಸಿಂಗರಿಸಲ್ಪಟ್ಟಿರುತ್ತದೋ ಆ ಮನೆ ಎಲ್ಲರಿಗೂ ಅಚ್ಚುಮೆಚ್ಚು ಎನಿಸುತ್ತದೆ.
ಹಾಗೆಯೇ ನಿಮ್ಮನ್ನು ಯಾರಾದರೂ ಅತಿಥಿಗಳಾಗಿ ಮನೆಗೆ ಊಟಕ್ಕೆ ಕರೆದಾಗ, ಅವರ ಅಡುಗೆಯ ವಿಧಾನ, ಅಡುಗೆಮನೆ ಎಷ್ಟು ನೀಟಾಗಿದೆ ಎಂಬುದರತ್ತ ಹೆಂಗಸರು ಖಂಡಿತಾ ಗಮನಿಸುತ್ತಾರೆ. ಧಾನ್ಯ ಸಂಗ್ರಹಿಸುವ ಕಂಟೇನರ್, ಅಡುಗೆ ತಯಾರಿಗಾಗಿ ಬಳಸುವ ಪಾತ್ರೆಪಡಗ, ಗ್ಯಾಸ್ ಸ್ಟವ್ ನಿಂದ ಡೈನಿಂಗ್ ಟೇಬಲ್ ಮೇಲಿಟ್ಟ ಡಿನ್ನರ್ ಸೆಟ್, ಕೈ ಒರೆಸುವ ನ್ಯಾಪ್ ಕಿನ್, ಕಿಚನ್ ಟವೆಲ್ ಇತ್ಯಾದಿಗಳೆಲ್ಲ ನಮ್ಮ ಆಕರ್ಷಣೆಯ ಕೇಂದ್ರಬಿಂದುಗಳಾಗುತ್ತವೆ. ಹಾಗಿರುವಾಗ ಎಲ್ಲರೂ ಮೆಚ್ಚುವಂತೆ ಮನೆ, ಅದರಲ್ಲೂ ಅಡುಗೆಮನೆ ಲಕಲಕ ಎಂದು ನೀಟಾಗಿರಬೇಕೇ ಹೊರತು, ಎಲ್ಲೆಂದರಲ್ಲಿ ಸಾಮಗ್ರಿ ಬಿಸಾಡಿದ್ದರೆ, ಸ್ಟೋರ್ ರೂಂ ಹಾಗಿರುವ ಫ್ರಿಜ್, ಗಲೀಜು ನ್ಯಾಪ್ ಕಿನ್, ಸೀದುಹೋದ ತವಾ/ಬಾಣಲೆ, ಮುಸುರೆ ಪಾತ್ರೆ ತುಂಬಿದ ಸಿಂಕ್ ಇತ್ಯಾದಿಗಳಿದ್ದರೆ ಅದನ್ನು ಗೃಹಿಣಿ ಇರುವ ಮನೆ ಎನ್ನಲಾದೀತೇ?
ಕಿಚನ್ ಮತ್ತು ಪಾತ್ರೆಗಳ ಸ್ವಚ್ಛತೆ ಶುಭ್ರತೆ ನೇರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಬಲು ಎಚ್ಚರಿಕೆಯಿಂದ ಇದರ ಸ್ವಚ್ಛತೆ ಶುಭ್ರತೆಯತ್ತ ಗಮನ ಕೊಡಬೇಕು. ಆಗ ಮಾತ್ರ ಹೊಳೆ ಹೊಳೆಯುವ ಕಿಚನ್ ಗೆ ಹೈಜೀನ್ ಜೊತೆಗೂಡುತ್ತದೆ.
ಮನೆಯ ಕೇಂದ್ರಬಿಂದು ಕಿಚನ್. ಅದು ಸದಾ ಸ್ವಚ್ಛ ಶುಭ್ರವಾಗಿರಬೇಕು. ಆಗ ಮಾತ್ರ ಅಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಉತ್ಸಾಹ, ಹುಮ್ಮಸ್ಸು ತುಂಬಿರುತ್ತದೆ. ಅಡುಗೆಮನೆಯಲ್ಲಿ ಪಾತ್ರೆಗಳು ಸಹ ನಮ್ಮ ಹೆಲ್ದಿ ಆಹಾರದಷ್ಟೇ ಪ್ರಾಧಾನ್ಯತೆ ಪಡೆಯುತ್ತವೆ. ಎಷ್ಟೇ ಇಷ್ಟಪಟ್ಟು ಅಡುಗೆ ಮಾಡಿದ್ದರೂ, ಅದನ್ನು ಹೊಳೆಹೊಳೆಯುವ ಸ್ವಚ್ಛ ಶುಭ್ರ ಪಾತ್ರೆಗಳಲ್ಲಿ ತಂದು ತಟ್ಟೆಗೆ ಬಡಿಸದಿದ್ದರೆ, ಅದು ರಸಹೀನ ಎನಿಸುತ್ತದೆ. ಹೀಗಾಗಿ ಹಳೆಯ ಪಾತ್ರೆಗಳನ್ನು ಸಹ ಹೊಳೆಹೊಳೆಯುವಂತೆ ಇಟ್ಟುಕೊಳ್ಳಬೇಕಾದದು ಬಲು ಮುಖ್ಯ.
ಪಾತ್ರೆಗಳಿಗೆ ಅಂಟಿದ ಜಿಡ್ಡು, ಕಿಗಳು, ಗೃಹಿಣಿ ಎಷ್ಟು ನಿರ್ಲಕ್ಷ್ಯ ವಹಿಸುತ್ತಿದ್ದಾಳೆ ಎಂದು ತೋರಿಸಿ ಕೊಡುತ್ತದೆ. ಹೀಗಾಗಿ ಅತಿ ಎಚ್ಚರಿಕೆಯಿಂದ, ಅಡುಗೆಮನೆಯ ಪ್ರತಿ ಮೂಲೆ ಮೂಲೆಯನ್ನೂ ಶುಚಿಯಾಗಿಡಿ. ನಿಮ್ಮ ಈ ಶುಭ್ರತೆ ಗಮನಿಸಿ ಅತಿಥಿಗಳು ಮಾರುಹೋಗದೆ ಇರಲಾರರು.
ಹೈಜೀನ್ ಮೇಂಟೇನ್ ಮಾಡಿ
ತವಾ, ಬಾಣಲೆ, ಸೌಟು, ಸ್ಪಾಟುಲಾ, ತಟ್ಟೆ, ಬಟ್ಟಲು, ಚಮಚ..... ಯಾವುದೇ ಇರಲಿ, ಎಲ್ಲವನ್ನೂ ಆಗಾಗ ಬಿಸಿ ನೀರು ತುಂಬಿಸಿ, ಒಂದು ದೊಡ್ಡ ಟಬ್ ನಲ್ಲಿ ಮುಳುಗಿಸಿ, ಅದಕ್ಕೆ ತುಸು ಡಿಟರ್ಜೆಂಟ್ ಪೌಡರ್, ನಿಂಬೆರಸ, ಕಲ್ಲುಪ್ಪು, ಸೋಡ ಇತ್ಯಾದಿ ಸೇರಿಸಿ 1 ಗಂಟೆ ಕಾಲ ನೆನೆಸಿ ನಂತರ ನೀಟಾಗಿ ತೊಳೆಯಿರಿ. ಏಕೆಂದರೆ ಅಡುಗೆ ನಂತರ ಮುಸುರೆ ಪಾತ್ರೆಗಳನ್ನು ಎಷ್ಟೇ ನೀಟಾಗಿ ತೊಳೆದಿದ್ದರೂ, ಎಲ್ಲೋ ಮೂಲೆಯಲ್ಲಿ ಏನೋ ಒಂದು ಚೂರು ಜಿಡ್ಡು ಕರೆ ಕಾಣಿಸಿದರೆ ಕಸಿವಿಸಿ ಎನಿಸುತ್ತದೆ. ಅವನ್ನು ಹೀಗೆ ಮಾಡಿ ಸ್ವಚ್ಛಗೊಳಿಸಿ. ಇದರಿಂದಾಗಿ ಅದಕ್ಕೆ ತಗುಲಿದ ಬ್ಯಾಕ್ಟೀರಿಯಾ ಸಂಪೂರ್ಣ ತೊಲಗುತ್ತದೆ.





