ಸಂಬಂಧಗಳಿಗೆ ಹೊಸ ದೃಷ್ಟಿಕೋನ ನೀಡುವ ಮೂಲಕ ಈ ಹಬ್ಬವನ್ನು ಹೇಗೆ ಆಚರಿಸಬಹುದು ಎಂಬ ಮಾಹಿತಿ ಇಲ್ಲಿದೆ.....
ಹಬ್ಬದ ಸೀಸನ್ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ, ಕೆಲವು ಮನೆಗಳಲ್ಲಿ ವೈಟ್ ವಾಶ್ ಮಾಡುವ ಬಗ್ಗೆ ಚರ್ಚೆ ನಡೆಸುತ್ತಾರೆ. ಕೆಲವರು ಡೆಕೋರೇಶನ್ ಕೆಲಸಗಳನ್ನು ಹಂಚಿಕೊಳ್ಳುವಲ್ಲಿ ತಯಾರಿ ನಡೆಸುತ್ತಿದ್ದರೆ, ಮತ್ತೆ ಕೆಲವರು ಉಡುಗೊರೆಗಳ ಬಗ್ಗೆ ಚಿಂತಿತರಾಗಿರುತ್ತಾರೆ. ಯಾರಿಗೆ ಏನು ಕೊಡಬೇಕು? ನಾವು ಕೊಡುವ ಉಡುಗೊರೆ ಅವರಿಗೆ ಇಷ್ಟವಾಗುತ್ತದೆಯೇ? ನಿಜ ಹೇಳಬೇಕೆಂದರೆ ಕಳೆದ ವರ್ಷದ ಹಬ್ಬದಲ್ಲಿ ರೀಟಾ ತನ್ನ ಅತ್ತೆ ಮತ್ತು ಅತ್ತಿಗೆಗೆ ನೀಡಿದ ಉಡುಗೊರೆಗಳು ಅವರಿಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ.
ಅತ್ತೆಗೆ ಬನಾರಸಿ ಸೀರೆ ಇಷ್ಟ. ಆದರೆ ರೀಟಾ ಅವರಿಗೆ ಕಾಟನ್ ಸೀರೆ ಉಡುಗೊರೆಯಾಗಿ ನೀಡಿದ್ದಳು. ಇದರಿಂದ ಅತ್ತೆಗೆ ಬಹಳ ಬೇಸರವಾಗಿತ್ತು. ಅವರ ಇಷ್ಟಾನಿಷ್ಟಗಳನ್ನು ಚೆನ್ನಾಗಿ ಅರಿತಿದ್ದ ರೀಟಾ ಏಕೆ ಅಂತಹ ಉಡುಗೊರೆಯನ್ನು ಕೊಟ್ಟಳು?
ಮತ್ತೊಂದೆಡೆ, ರೀಟಾಳ ಮೂಡ್ ಕೂಡಾ ಹಾಳಾಯಿತು. ಇಡೀ ದಿನ ಮನೆಯನ್ನು ಅಲಂಕರಿಸುವುದರಲ್ಲಿ, ವಿವಿಧ ಭಕ್ಷ್ಯಗಳನ್ನು ತಯಾರಿಸುವುದರಲ್ಲಿ ಕಳೆದು ಹೋಗಿತ್ತು. ಇದರೊಂದಿಗೆ ಆಕೆ ನೀಡಿದ ಉಡುಗೊರೆಯೂ ಸರಿಯಾಗಿರಲಿಲ್ಲ. ಇಷ್ಟು ಮಾತ್ರವಲ್ಲ, ಅವರ ಅತ್ತೆ ಸಹ ತನ್ನ ಸೊಸೆಯದು ಹಾಗೂ ನನ್ನ ಆಲೋಚನೆಗಳು ವಿಭಿನ್ನ ಎಂದು ಹೇಳುವ ಮೂಲಕ ಎಲ್ಲಾ ಸಂಬಂಧಿಕರ ಮುಂದೆ ತಮಗೆ ಉಡುಗೊರೆ ಇಷ್ಟವಾಗದಿದ್ದರ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಹೀಗಿರುವಾಗ, ಸಂಬಂಧಿಕರು ಮತ್ತು ಸ್ನೇಹಿತರಿಂದ ತುಂಬಿದ್ದ ಮನೆಯ ವಾತಾವರಣ ಸ್ವಲ್ಪ ಬೇಸರ ತಂದಿತ್ತು. ರೀಟಾ ಹಬ್ಬಕ್ಕಾಗಿ ಅಷ್ಟೊಂದು ಕಷ್ಟಪಟ್ಟು ತಯಾರಿ ನಡೆಸಿದ್ದರೂ ಸಹ ಹಬ್ಬವನ್ನು ಆನಂದಿಸಲು ಅವಳಿಗೆ ಸಾಧ್ಯವಾಗಲಿಲ್ಲ. ಅತಿಥಿಗಳ ಆತಿಥ್ಯದಲ್ಲಿ ಯಾವುದೇ ಕೊರತೆ ಆಗದಂತೆ ಅವಳು ಅಡುಗೆಮನೆ ಮತ್ತು ಊಟದ ಕೋಣೆಯನ್ನು ಸರಿಯಾಗಿ ನಿರ್ವಹಿಸಿದ್ದಳು.
ಇಂತಹ ಸ್ಥಿತಿಗಳನ್ನು ಒಂದಲ್ಲಾ ಒಂದು ಬಾರಿ ನೀವು ಎದುರಿಸಿರುತ್ತೀರಿ. ಆದರೆ ಮುಂದೆ ಇಂತಹ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳಲು ಒಂದಷ್ಟು ಸಲಹೆಗಳು ಇಲ್ಲಿವೆ :
ಸ್ನೇಹದ ಹಸ್ತ ಚಾಚಿ
ಹಬ್ಬಗಳು ನಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದು ಸಂಭವಿಸುತ್ತದೆ ಎನ್ನುವ ಭರವಸೆ ನೀಡುತ್ತವೆ. ಆ ಸಮಯದಲ್ಲಿ ನಾವು ನಮ್ಮ ವಿಶೇಷ ಜನರನ್ನು ಭೇಟಿ ಮಾಡಲು ಮತ್ತು ಸಂತೋಷ ಹಂಚಿಕೊಳ್ಳಲು ಅವಕಾಶ ಸಿಗುತ್ತದೆ. ಅವರಿಗೆ ಒಂದಿಷ್ಟು ಉಡುಗೊರೆ ನೀಡುವ ಮೂಲಕ ಅವರ ಮುಖದಲ್ಲಿ ಸಂತೋಷ ಹೆಚ್ಚಿಸಲು ಬಯಸುತ್ತೇವೆ. ಇಷ್ಟೆಲ್ಲಾ ಅಲಂಕಾರ, ಉಡುಗೊರೆ, ಬಟ್ಟೆಗಳ ಹುಡುಕಾಟದಲ್ಲಿ ಹಬ್ಬಗಳು ಭೌತಿಕ ವಸ್ತುಗಳಿಂದ ಮಾತ್ರವಲ್ಲ, ಸಂಬಂಧಗಳಿಂದ ಕೂಡಾ ವಿಶೇಷವಾಗಿಸಲ್ಪಡುತ್ತವೆ ಎಂಬುದನ್ನು ನಾವು ಮರೆತುಬಿಡುತ್ತೇವೆ.
ಹಾಗಾದರೆ ಈ ಬಾರಿ ಸಂಬಂಧಗಳಿಗೆ ಹೊಸ ದೃಷ್ಟಿಕೋನವನ್ನು ಏಕೆ ನೀಡಬಾರದು? ಅತ್ತೆಯನ್ನು ಅತ್ತೆ ಎಂದು ಪರಿಗಣಿಸುವ ಬದಲು ಅವರನ್ನು ನಿಮ್ಮ ಸ್ನೇಹಿತೆಯನ್ನಾಗಿ ಮಾಡಿಕೊಳ್ಳಿ. ಅತ್ತಿಗೆಯನ್ನು ಅತಿಥಿ ಎಂದು ಪರಿಗಣಿಸುವ ಬದಲು, ಅವರನ್ನು ಸ್ನೇಹಿತೆಯಂತೆ ನೋಡಿಕೊಳ್ಳಿ. ಹೇಗಾದರೂ, ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಂದು ಸಂಬಂಧಕ್ಕೂ ಸ್ನೇಹದ ಹಸ್ತ ಚಾಚುವ ಅಭ್ಯಾಸ ಮಾಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿ ಸಂಬಂಧಗಳ ಮೇಲೆ ಯಾವುದೇ ನಿರ್ಬಂಧಗಳು ಇಲ್ಲದಿದ್ದರೆ ಹೇಗೆ ಎಂದು ಊಹಿಸಿ ನೋಡಿ. ಎಲ್ಲರೂ ಪರಸ್ಪರ ಸ್ನೇಹಿತರಂತೆ ಇದ್ದರೆ ಮನೆಯಲ್ಲಿನ ಜನರ ದೃಷ್ಟಿಕೋನವೇ ಬದಲಾಗಿಬಿಡುತ್ತದೆ.





