“ಏಯ್ ಅವನಿನ್ನೂ ಎಳಸು… ಅವನಿಗೆ ಹೊಡಿಬಡಿ ಆಟ ಅಷ್ಟೇ ಗೊತ್ತು.. ಇವರೆಲ್ಲಾ ಮಿಂಚಿ ಮರೆಯಾಗ್ತಾರೆ ಅಷ್ಟೆ…”
ಅಬ್ಬಬ್ಬಾ.. ಒಬ್ಬರಾ ಇಬ್ಬರ ಈ ಮಾತು ಹೇಳಿದವರು!!!
ಅವರೆಲ್ಲರಿಗೂ ಬ್ಯಾಟ್ಅಲ್ಲೇ ಬಡಿದು ಬಾಯಿ ಮುಚ್ಚಿಸಿದ್ದಾನೆ ವೈಭವ!
ಕ್ರೀಸ್‌ನ ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಪಟಪಟನೇ ಉರುಳುತ್ತಿದ್ದರೆ,
ಕೋಟಿ ಕೋಟಿ ಅಭಿಮಾನಿಗಳ ನಂಬಿಕೆ ಆ ಮುಗ್ಧ ಕಣ್ಣುಗಳ ಮೇಲೆ ಬಂದು ನಿಂತಿತ್ತು.
ಎದುರಿಗೆ ನಿಂತಿದ್ದ ಬೌಲರ್‌ಗಳು ಬೆಂಕಿ ಉಗುಳುತ್ತಿದ್ದರು,
ಆದರೆ ಆ 15 ವರ್ಷದ ಮಗುವಿನ ಬ್ಯಾಟ್ ಮಾತ್ರ ವಿಧಿಗೆ ಸವಾಲು ಹಾಕುವಂತೆ ಬೀಸುತ್ತಿತ್ತು.
ಗುಜರಾತ್ ಟೈಟನ್ಸ್ ಬೌಲರ್‌ಗಳು ಪ್ಲಾನ್ ಮಾಡಿಕೊಂಡೇ ಬಂದಿದ್ದರು.
ನೋ ಡೌಟ್
ಹಾರ್ಡ್ ಲೆಂತ್ ಎಸೆತಗಳನ್ನು ಎಸೆಯುತ್ತಾ,
ಕೈಕಾಲು ಆಡಿಸಲು ಜಾಗವೇ ಸಿಗದಂತೆ ಆತನನ್ನು ಕಟ್ಟಿಹಾಕಲು ಇಡೀ ಜಿಟಿ ಪಡೆ ಮುಗಿಬಿದ್ದಿತ್ತು.
ಆದರೆ ಆ ಹುಡುಗ ಇಟ್ಟ ಗುರಿಯಿಂದ ಅಲುಗಾಡಲಿಲ್ಲ..
ರಬಾಡನಂಥಾ ರಬಾಡನೇ ತನ್ನ ಲೈನ್ ಅಂಡ್ ಲೆಂತ್ ಬದಲಿಸಿ ಆಡಬೇಕಾಗಿ ಬಂತು.
ಆತನ ಅನುಭವದ ಗರ್ವಕ್ಕೆ ಈ ಹುಡುಗನ ಆಟವೇ ಸವಾಲಾಗಿತ್ತು.

ಬ್ಲೈಂಡ್ ಸ್ಲಾಗಿಂಗ್ ಇಲ್ಲ..
ಕಣ್ಣುಮುಚ್ಚಿ ಬ್ಯಾಟ್ ಬೀಸುವ ಆತುರವಿಲ್ಲ..
ಪ್ಯೂರ್ ಕ್ಲಾಸ್..
ಅಪ್ರತಿಮ ಸಂಯಮ..
ಆತನ ಪ್ರತಿ ಹೊಡೆತದಲ್ಲೂ ಎದ್ದು ಕಾಣುತ್ತಿತ್ತು.
ಒಬ್ಬನೇ… ಹೌದು, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು ಸಿಂಗಲ್ ಹ್ಯಾಂಡೆಡ್ ಆಗಿ ಗೆಲ್ಲಿಸಿದ್ದ ಅದೇ ವೈಭವ್ ಸೂರ್ಯವಂಶಿ, ಈ ಮಹತ್ವದ ಪಂದ್ಯದಲ್ಲೂ ಮತ್ತೊಮ್ಮೆ ಹೋರಾಟಗಾರನಂತೆ ನಿಂತಿದ್ದ.
ಸಾಥ್ ಕೊಟ್ಟವನು ರವೀಂದ್ರ ಜಡೇಜಾ..
ಉಳಿದ ಘಟಾನುಘಟಿ ಬ್ಯಾಟರ್‌ಗಳೆಲ್ಲಾ ಜವಾಬ್ದಾರಿಯನ್ನೇ ಮರೆತು ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿದ್ದರೆ, ಈ 15 ವರ್ಷದ ಬಾಲಕ ಇಡೀ ತಂಡದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಒಂಟಿ ಸಲಗದಂತೆ ಹೋರಾಡುತ್ತಿದ್ದ.
ಇಷ್ಟು ಚಿಕ್ಕ ವಯಸ್ಸಿಗೆ ಇಂತಹ ನಾಕೌಟ್ ಪಂದ್ಯದಲ್ಲಿ,
ಇಡೀ ಇನ್ನಿಂಗ್ಸ್ ಕಣ್ಣೆದುರೇ ಕುಸಿಯುತ್ತಿದ್ದರೂ ಆತ ತೋರಿಸಿದ ಗೇಮ್ ಅವೇರ್ನೆಸ್ ನಿಜಕ್ಕೂ ನಂಬಲಸಾಧ್ಯವಾಗಿತ್ತು.
ತಂಡದ ಹಿರಿಯ ಆಟಗಾರರೇ ಕ್ರೀಸ್‌ನಲ್ಲಿ ನಿಲ್ಲದೇ ಇದ್ದಾಗ,
ಈ ಮಗು ಕ್ರಿಕೆಟ್ ಲೋಕದ ಧ್ರುವತಾರೆಯಂತೆ ಪ್ರಕಾಶಿಸುತ್ತಿತ್ತು.
ಅಷ್ಟಾದರೂ ಮತ್ತೆ 90ರ ಹೊಸಲಿಲ್ಲಿ ಎಡವಿದ್ದಾನೆ..
ಅದ್ಭುತ ಶತಕವೊಂದು, ಮತ್ತೆ ಅರ್ಧದಲ್ಲೇ ಉಳಿದಿದೆ..
ಆದರೆ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಎಸೆತಗಳನ್ನು ಎದುರಿಸಿ 1000 ರನ್‌ಗಳನ್ನು ಪೂರೈಸಿದ ಜಗತ್ತಿನ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರನಾಗಿದ್ದಾನೆ.
ಈ ವಂಡರ್‌ಕಿಡ್ ಇದುವರೆಗೆ ಕೇವಲ ಪವರ್‌ಪ್ಲೇನಲ್ಲೇ 500ಕ್ಕೂ ಹೆಚ್ಚು ರನ್ ಚಚ್ಚಿ ಅಬ್ಬರಿಸಿದ್ದ.
ಇಡೀ ಟೂರ್ನಿಯಲ್ಲಿ 700+ ರನ್ ಗಳಿಸಿದ್ದರೂ, ಡೆತ್ ಓವರ್‌ಗಳಲ್ಲಿ ಬ್ಯಾಟ್ ಮಾಡಲು ಬಂದಿದ್ದು ಇದೇ ಮೊದಲು.

ವೈಭವ್ ತನ್ನ ಹೋರಾಟದ ಅಸೈನ್ಮೆಂಟ್ ಸಂಪೂರ್ಣವಾಗಿ ಮುಗಿಸಿ ಸಬ್ಮಿಟ್ ಮಾಡಿದ್ದ,!
ವೈಭವ್ ಸೂರ್ಯವಂಶಿ ಎಂಬ ಈ ಅದ್ಭುತ ಪ್ರತಿಭೆಯ ವಯಸ್ಸನ್ನು ಮಾತ್ರ ನೀವು ಅನುಮಾನಿಸಬಹುದು, ಆದರೆ ಆತನ ಕೌಶಲ್ಯ, ಮನಸ್ಥಿತಿ, ಆಡಲೇ ಬೇಕು, ಗೆದ್ದೇ ಗೆಲ್ಲಬೇಕು ಅನ್ನೋ ಅಪ್ರತಿಮ ಜಿದ್ದನ್ನ ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ.
ಆತ ಕ್ರಿಕೆಟ್ ಲೋಕ ಕಂಡ ವಿಶಿಷ್ಟ ರತ್ನ.
ಅಪ್ಪಳಿಸುವ ಈ ಅಪಾರ ಜನಪ್ರಿಯತೆ, ಹೆಸರನ್ನು ಆತ ಹೇಗೆ ನಿಭಾಯಿಸುತ್ತಾನೆ ಎಂಬುದಷ್ಟೇ ಆತನ ಮುಂದಿರುವ ನಿಜವಾದ ಸವಾಲು.
ಉಳಿದೆಲ್ಲವನ್ನೂ ಆತ ಈಗಾಗಲೇ ಮೈದಾನದಲ್ಲಿ ಸಾಬೀತುಪಡಿಸಿದ್ದಾನೆ.
ಇನ್ನೇನಾದರೂ ಪ್ರೂವ್ ಮಾಡೋದು ಬಾಕಿ ಇದೆಯಾ ಆ ಹುಡುಗ?





