– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದ ಭರವಸೆಯ ನಟ ಶ್ರೀನಗರ ಕಿಟ್ಟಿ ಕೊನೆಯದಾಗಿ ಬಹುನಿರೀಕ್ಷಿತ ‘ಸಂಜು ವೆಡ್ಸ್ ಗೀತಾ 2′ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಮತ್ತೊಂದೆಡೆ, ಜನಪ್ರಿಯ ಪೋಷಕ ನಟ ಪ್ರಮೋದ್ ಶೆಟ್ಟಿ ಬಹುತಾರಾಗಣದ ’45’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರೀನಗರ ಕಿಟ್ಟಿ, ಪ್ರಮೋದ್ ಶೆಟ್ಟಿ ‘ಲವ್ ಕೇಸ್’ ಶೀರ್ಷಿಕೆಯ ಸಿನಿಮಾಗೆ ಕೈಜೋಡಿಸಿದ್ದಾರೆ. ಆದ್ರೆ ಇವರು ಚಿತ್ರದ ನಾಯಕರಲ್ಲ. ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ಜೈಶ್ ನಿರ್ದೇಶನದ ‘ಲವ್ ಕೇಸ್’ ಚಿತ್ರ ಸೆಟ್ಟೇರಿತು. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ, ಶ್ರೀನಗರ ಕಿಟ್ಟಿ, ಪ್ರಮೋದ್ ಶೆಟ್ಟಿ ಜೊತೆಗೆ ಸುಧಾರಾಣಿ, ನಾಗಭೂಷಣ್ ಸೇರಿ ಹಲವರು ಹಾಜರಿದ್ದರು. ಮಹಾನಟಿ ಖ್ಯಾತಿಯ ವಂಶಿ, ಸ.ಹಿ.ಪ್ರಾ.ಶಾಲೆ ಸಿನಿಮಾ ಖ್ಯಾತಿಯ ರಂಜನ್ ಕೂಡಾ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ರಿಯಾಲಿಟಿ ಶೋ ಮಹಾನಟಿ ಖ್ಯಾತಿಯ ವಂಶಿ ಈ ಚಿತ್ರದ ನಾಯಕಿಯಾದ್ರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತಿಯ ರಂಜನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವ ಶೂಟಿಂಗ್ನಲ್ಲಿ ಶ್ರೀನಗರ ಕಿಟ್ಟಿ, ಪ್ರಮೋದ್ ಶೆಟ್ಟಿ, ನಾಗಭೂಷಣ್ ಭಾಗಿಯಾಗಿದ್ದಾರೆ.
ಕೆ.ಎಸ್ ಚಂದ್ರಶೇಖರ್ ಕ್ಯಾಮರಾ ವರ್ಕ್, ಅನುಕೃಷ್ಣ ಸಂಕಲನವಿರುವ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಸದ್ಯ ಎರಡನೇ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಮಂಗಳೂರಿನತ್ತ ಹೊರಡಲಿದೆ ಚಿತ್ರತಂಡ.
ಲವ್ ಕೇಸ್ ಸಿನಿಮಾದ ಶೀರ್ಷಿಕೆಗೆ ಪ್ಯೂರ್ ಲವ್ ಸ್ಟೋರಿ ಎಂಬ ಅಡಿ ಬರಹವಿದೆ. ಸಿನಿಮಾಗೆ ವಿ.ಹರಿಕೃಷ್ಣ ಅವರ ಪುತ್ರ ಆದಿ ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಮಾಸ್ತಿ ಸಂಭಾಷಣೆ, ಅನುಕೃಷ್ಣ ಅವರ ಸಂಕಲನ ಈ ಚಿತ್ರಕ್ಕಿದೆ. ಜೈಶ್ ನಿರ್ದೇಶನದ ಈ ಚಿತ್ರವನ್ನು ಎಂ.ಬಿ ಕ್ರಿಯೇಷನ್ಸ್ ಮೂಲಕ ಮೋಹನ್ ಬಾಬು ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ ಯುಗಾದಿ ವೇಳೆಗೆ ತಮ್ಮ ಸಿನಿಮಾವನ್ನು ಬಿಡುಗಡೆಗೊಳಿಸಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.
ಈ ಚಿತ್ರದ ಪಾತ್ರವೊಂದನ್ನು ನಿರ್ವಹಿಸಿತ್ತಿರುವ ಪ್ರಮೋದ್ ಶೆಟ್ಟಿ ಇತ್ತೀಚೆಗಷ್ಟೇ ಬಿಡುಗಡೆ ಆಗ ’45’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರಂತಹ ಘಟಾನುಘಟಿಗಳ ಜೊತೆ ಸ್ಕ್ರೀನ್ ಶೇರ್ ಮಾಡಿ ಗಮನ ಸೆಳೆದಿದ್ದಾರೆ. ಇನ್ನೂ, ಕೊನೆಯದಾಗಿ ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಶ್ರೀನಗರ ಕಿಟ್ಟಿ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘ವೇಷಗಳು’. ಇದು ಪತ್ರಕರ್ತ ರವಿ ಬೆಳಗೆರೆ ಅವರ ‘ವೇಷಗಳು’ ಎಂಬ ಸಣ್ಣ ಕಥೆಯನ್ನಾಧರಿಸಿದ್ದು, ಜೋಗತಿಯರ ಕಷ್ಟ-ಸುಖಗಳನ್ನಾಧರಿಸಿದೆ. ಶ್ರೀನಗರ ಕಿಟ್ಟಿ ಅವರು ಬಸಪ್ಪ ಹಾಗೂ ಬಸಮ್ಮ ಜೋಗತಿಯಾಗಿ 2 ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.





