ಪರಿವಾ ಪ್ರಣತಿ ಬ್ಯೂಟಿಫುಲ್ ವಿನಮ್ರ ನಟಿ ಮಾತ್ರವಲ್ಲದೆ ಅತ್ಯಂತ ಗುಣಸಂಪನ್ನೆ ಎನಿಸಿದ್ದಾಳೆ. ಆಕೆ ಬಾಲಿವುಡ್‌ ಚಿತ್ರಗಳ ಜೊತೆಗೆ ಅನೇಕ ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದ್ದಾಳೆ. `ತುಜ್‌ ಕೋ ಹೈ ಸಲಾಂ ಝಿಂದಗಿ, ಹಮಾರಿ ಬೇಟಿಯೋಂಕಾ ವಿವಾಹ್‌, ಅರ್ಮಾನೋಂ ಕಾ ಬಲಿದಾನ್‌, ಹಲ್ಲಾ ಬೋಲ್, ಹಮಾರಿ ಸಿಸ್ಟರ್‌ ದೀದೀ, ಬಡೀ ದೂರ್‌ ಸೇ ಆಯೇ ಹೈ’ ಇತ್ಯಾದಿ ಧಾರಾವಾಹಿಗಳಿಂದ ಆಕೆ ಎಲ್ಲರ ಮನೆ ಮಾತಾಗಿದ್ದಾಳೆ.

ಬಿಹಾರ್‌ ರಾಜ್ಯದ ಪಾಟ್ನಾ ಈಕೆಯ ತವರೂರು. ಈಕೆಯ ತಂದೆ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿ, ತಾಯಿ ಅಪ್ಪಟ ಗೃಹಿಣಿ. ತಂದೆಯ ವರ್ಗಾವಣೆಯ ನೌಕರಿಯಿಂದ ಪರಿವಾ ಇಡೀ ಭಾರತದ ಎಲ್ಲಾ ಪ್ರಮುಖ ನಗರಗಳನ್ನೂ ಸುತ್ತಿಬಂದಿದ್ದಾಳೆ. ದೆಹಲಿಯಲ್ಲಿ ಅವಳ ಉನ್ನತ ವ್ಯಾಸಂಗ ಪೂರ್ಣಗೊಂಡಿತು.

ಹೀಗೆ ಧಾರಾವಾಹಿಗಳಲ್ಲಿ ನಟಿಸುವಾಗ ಈಕೆ, ವೈಲ್ಡ್ ಲೈಫ್‌ ಫೋಟೋಗ್ರಾಫರ್‌ ಪುನೀತ್‌ ಸಚ್‌ ದೇವ್ ಜೊತೆ ಪ್ರೇಮದಿಂದ ಒಂದಾಗಿ, ಮದುವೆಯಾದಳು. ಇವರ ಮಗ ರುಶಾಂಕ್‌ ನಿಗೆ ಈಗ 6 ವರ್ಷ. ಈಕೆ ತನ್ನ ಬಿಡುವಿನ ವೇಳೆಯನ್ನು ಪೇಂಟಿಂಗ್‌, ರೈಟಿಂಗ್‌, ಸೂಫಿ ಸಂಗೀತಾಭ್ಯಾಸಕ್ಕಾಗಿ ಮೀಸಲಿಡುತ್ತಾಳೆ. ಪ್ರಾಣಿಪ್ರಿಯೆಯಾದ ಪರಿವಾ ಅನೇಕ ನಾಯಿ, ಬೆಕ್ಕುಗಳನ್ನು ಸಾಕುತ್ತಿದ್ದಾಳೆ. ಇತ್ತೀಚೆಗೆ ಈಕೆಯ `ವಾಗ್ಲೇ ಕೀ ದುನಿಯಾ’ ಸೀರಿಯಲ್ ಸೋನಿ ಸಬ್‌ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದ್ದು, ಈಕೆಯ ವಂದನಾ ವಾಗ್ಲೆ ಪಾತ್ರ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ತನ್ನ ಕೆಲಸ ಕಾರ್ಯಗಳ ಜೊತೆ ಪರಿವಾ ಹೇಗೆ ಯಶಸ್ವಿ ಗೃಹಿಣಿ ಎನಿಸುತ್ತಾಳೆ? ಬನ್ನಿ, ಅವಳಿಂದಲೇ ತಿಳಿಯೋಣ :

PARIVA

ತಾಯಿಯ ಡ್ಯೂಟಿ ಅನುಪಮ

`ವಾಗ್ಲೆ ಕೀ ದುನಿಯಾ’ದಲ್ಲಿ ತಾಯಿ ಪಾತ್ರ ನಿರ್ವಹಿಸುತ್ತಿರುವ ಪರಿವಾ, ರಿಯಲ್ ಲೈಫ್‌ ನಲ್ಲೂ ತಾಯಿ ಆಗಿರುವುದರಿಂದ, ಲೀಲಾಜಾಲವಾಗಿ ಆ ಪಾತ್ರದಲ್ಲಿ ಯಶಸ್ವಿ ಎನಿಸಿದ್ದಾಳೆ. ವಂದನಾ ಆಗಿ ಆ ಧಾರಾವಾಹಿಯಲ್ಲಿ ನಟಿಸುವುದು ನನಗೆ ಬಲು ಸಲೀಸು, ಸಹಜ ಎನಿಸಿತು. ಇದರಲ್ಲಿ ನಾನು ಸಖೀ, ಅಪೂರ್ವಾರ ತಾಯಿ. ಇದರಲ್ಲಿ ನನ್ನ ಮಗಳು ಸಖೀ ಬಲು ಜಾಣೆ, ಮಗ ಅಪೂರ್ವ ಮಹಾ ತರಲೆ! ರಿಯಲ್ ಲೈಫ್‌ ನಲ್ಲೂ ಹೆಣ್ಣುಮಕ್ಕಳು ಗಂಡು ಮಕ್ಕಳಿಗಿಂತ ಬಲು ಗಂಭೀರ, ಮೆಚ್ಯೂರ್ಡ್‌ ಆಗಿರುತ್ತಾರೆ. ಈ ಧಾರಾವಾಹಿಯಲ್ಲೂ ಹಾಗೇ ಇರುವುದರಿಂದ ಅದು ನನಗೆ ಬಹಳ ಸಹಜವಾಗಿ ಒಗ್ಗಿ ಹೋಗಿದೆ. ನಿಜ ಜೀವನದಲ್ಲೂ 6 ವರ್ಷದ ನನ್ನ ಮಗ ಬಲು ತುಂಟ, ಮಹಾ ತರಲೆ! ಅಸಲಿಗೆ ನಾನು ತಾಯಿಯಾದಾಗ, ಈಗಾಗಲೇ ಅಂಥ ಪಾತ್ರಗಳನ್ನು ರೀಲಿನಲ್ಲಿ ಮಾಡಿದ್ದರಿಂದ, ರಿಯಲ್ ನಲ್ಲೂ ನೈಜವಾಗಿ ಇರಲು ಸಹಕಾರಿ ಆಯಿತು. ಮಾತೃಪ್ರೇಮ, ಪ್ರೀತಿವಾತ್ಸಲ್ಯ, ಮಮಕಾರಗಳ ಸಾಕಾರ ಮೂರ್ತಿಯಾಗಿ ರೀಲ್ ‌ನಲ್ಲಿ ಇದೀಗ ಸುಲಭವಾಗಿ ಮಿಂಚುತ್ತಿದ್ದೇನೆ! ನಾನು ಮೊದ ಮೊದಲು ಮುಂಬೈಗೆ ಶೂಟಿಂಗ್ ಗೆಂದು ಬಂದಾಗ, ಇಡೀ ದಿನ ತಾಯಿಯಿಂದ ದೂರ ಇರುತ್ತಿದ್ದೆ. ನಾನು ತಡರಾತ್ರಿ ಎಷ್ಟು ಹೊತ್ತಿಗೇ ಬಂದರೂ, ಅಮ್ಮ ನನ್ನೊಂದಿಗೆ ಅರ್ಧ ಗಂಟೆ ಹರಟಿ, ನಂತರವೇ ಮಲಗುತ್ತಿದ್ದಳು. ಮಾತೃವಾತ್ಸಲ್ಯದ ಬೆಲೆಯನ್ನು ಆಗ ನಾನು ಗುರುತಿಸಿದೆ!

ಕೆಲಸದ ಪ್ಲಾನಿಂಗ್ಅಚ್ಚುಕಟ್ಟಾಗಿರಲಿ

ಕೆಲಸ ಮತ್ತು ಮನೆವಾರ್ತೆ ಎರಡನ್ನೂ ನಾನು ಸಮಾನಾಂತರವಾಗಿ ಅಚ್ಚುಕಟ್ಟಾಗಿ ಸಂಭಾಳಿಸುತ್ತಿದ್ದೇನೆ. ನಾನು ಕೆಲಸಕ್ಕೆ ಹೋಗಬೇಕಾದುದು ಅನಿವಾರ್ಯ ಎಂಬುದನ್ನು ನನ್ನ ಮಗ ಗುರುತಿಸುವಂತೆ ಮಾಡಿದ್ದೇವೆ. ನಾನು ಮನೆಯಲ್ಲಿರುವಾಗೆಲ್ಲ ಅವನೊಂದಿಗೆ ಹೆಚ್ಚಿನ ಕ್ಯಾಲಿಟಿ ಟೈಂ ಕಳೆಯುತ್ತಾ, ಅವನು ಏನಾದರೂ ಹೊಸತನ್ನು ಕಲಿಯಲು ಪ್ರೇರೇಪಿಸುತ್ತೇನೆ. ಇದರಿಂದ ಅವನು ಸಹ ಸದಾ ಬಿಝಿ ಆಗಿರುತ್ತಾನೆ. ಓದು, ಕಲಿಕೆ, ಹವ್ಯಾಸ ಜೊತೆ ಜೊತೆಯಲಿ ನಡೆಯುತ್ತದೆ. ನಿಧಾನವಾಗಿ ಅವನೀಗ ಎಲ್ಲವನ್ನೂ ಗ್ರಹಿಸಬಲ್ಲವನಾಗಿದ್ದಾನೆ, ನನ್ನ ನೌಕರಿಯ ಅಗತ್ಯ ಎಷ್ಟಿದೆ ಎಂದು ತಿಳಿದುಕೊಂಡಿದ್ದಾನೆ. ಜೊತೆಗೆ ನನ್ನ ಪತಿ ಸದಾ ಹೆಲ್ಪಿಂಗ್‌ ಹ್ಯಾಂಡ್‌ ಆಗಿದ್ದು, ಮಗನನ್ನು ಸಂಭಾಳಿಸುವುದರಲ್ಲಿ ಸದಾ ಮುಂದು. ಅಗತ್ಯ ಬಿದ್ದಾಗ ನನ್ನ ಪೇರೆಂಟ್ಸ್ ಬಳಿ ಅವನನ್ನು ಬಿಟ್ಟಿದ್ದೂ ಇದೆ. ಪತಿಯ ಸಹಕಾರವಿಲ್ಲದೆ ಇವೆಲ್ಲನ್ನೂ ನಾನು ಯಶಸ್ವಿಯಾಗಿ ನಿಭಾಯಿಸಲಾರೆ!

ನನ್ನ ಪತಿ, ಮಗುವಿಗೆ ಏನಾದರೊಂದು ಹೊಸತನ್ನು ಕಲಿಸುತ್ತಾ ಇರುತ್ತಾರೆ. ಅವನನ್ನು ಈಗ ಟೆನಿಸ್‌ ಕಲಿಯಲು ರೆಗ್ಯುಲರ್‌ ಆಗಿ ಕರೆದೊಯ್ಯುತ್ತಾರೆ. ನಾನು ಬರಲು ತಡವಾದಾಗ, ಮಗರಾಯ ಬಯಸಿದ್ದನ್ನು ಅವರೇ ಮಾಡಿಕೊಟ್ಟಿದ್ದೂ ಉಂಟು! ನಾವಿಬ್ಬರೂ ಕೂಡಿ ಮಗುವಿನ ಬೆಳವಣಿಗೆಗೆ ಸರ್ವತೋಮುಖವಾಗಿ ದುಡಿಯುತ್ತಿದ್ದೇವೆ. ಅವರು ನಟ ಮಾತ್ರವಲ್ಲದೆ, ವೈಲ್ಡ್ ಲೈಫ್ ಫೋಟೋಗ್ರಾಫರ್‌ ಸಹ ಹೌದು, ಹೀಗಾಗಿ ಮಗನಿಗೆ ಕ್ರಿಯೇಟಿವ್ ಆಗಿ ಏನಾದರೂ ಕಲಿಸುತ್ತಿರುತ್ತಾರೆ.

ಪ್ರಿತಿವಾತ್ಸಲ್ಯ ಅತಿ ಮುದ್ದಾಗದಿರಲಿ!

ಮಕ್ಕಳು ಊಟ ಮಾಡುವ ವಿಷಯಕ್ಕೆ ತಾಯಿ ತಂದೆಯರನ್ನು ಬಹಳ ಗೋಳುಗುಟ್ಟಿಸುತ್ತಾರೆ. ವಿಷಯದಲ್ಲಿ ನೀನು ಹೇಗೆ ನಿಭಾಯಿಸುತ್ತೀಯಾ?

ನಾನು ಸದಾ ಮಗುವಿಗೆ ಮನೆಯ ಊಟ ತಿಂಡಿಯನ್ನು ಮಾತ್ರ ಕೊಡುತ್ತೇನೆ, ಹೊರಗಿನ ತಿನಿಸು ಬಹಳ ಅಪರೂಪ. ಅವನು ತರಕಾರಿ ತಿನ್ನಲು ಹಿಂಜರಿದಾಗೆಲ್ಲ, ಅದನ್ನು ನೇರವಾಗಿ ನಾನು ರೈಸ್‌ ಭಾತ್‌, ಗೋಧಿ ಹಿಟ್ಟಿನ ಜೊತೆ ಪರೋಟ ತರಹ ಮಾಡಿ ಉಣಿಸುತ್ತೇನೆ. ಒಮ್ಮೊಮ್ಮೆ ಹಠ, ತರಲೆ ಜಾಸ್ತಿ ಆದಾಗ ನನ್ನ ತಾಯಿ ತಂದೆ ಬಳಿ ಬಿಟ್ಟಿದ್ದೂ ಉಂಟು, ಅವರ ಶಿಸ್ತಿಗೆ ಹೆದರಿ ಅವನು ಬೇಗ ದಾರಿಗೆ ಬರುತ್ತಾನೆ. ಅಲ್ಲಿಗೆ ಹೋದಾಗ ಅವನು ಬಾಲ ಬಿಚ್ಚುವ ಹಾಗಿಲ್ಲ. ನಾನು ಮಗನ ಕುರಿತಾಗಿ ಅತ್ಯಧಿಕ ಪ್ರೊಟೆಕ್ಟಿವ್ ತಾಯಿ ಅಲ್ಲ, ಆರತಿ ತಗೊಂಡ್ರೆ ಉಷ್ಣ, ತೀರ್ಥ ತಗೊಂಡ್ರೆ ಶೀತ ಎಂಬಂತೆ ಅವನನ್ನು ಬೆಳೆಸಿಲ್ಲ! ಅವನ ಸುರಕ್ಷತೆಯ ಕಡೆ ಹೆಚ್ಚಿನ ನಿಗಾ ವಹಿಸುತ್ತೇನೆ, ಅವನಲ್ಲಿ ಆತ್ಮವಿಶ್ವಾಸ ಸಹಜವಾಗಿ ಬೆಳೆಯುವಂತೆ ಮಾಡುತ್ತೇನೆ.

ನಾವಿಬ್ಬರೂ ನಮ್ಮ ಆಸೆ ಆಕಾಂಕ್ಷೆಗಳನ್ನು ಅವನ ಮೇಲೆ ಎಂದೂ ಹೇರಲು ಬಯಸುವುದಿಲ್ಲ. ತಾನೇ ನಿರ್ಧಾರ ಕೈಗೊಳ್ಳಲಿ ಎಂದು ಅವನಿಗೆ ಅವಕಾಶ ನೀಡಿ, ಅದಕ್ಕೆ ಬದ್ಧನಾಗಿರುವಂತೆ ಬೆಳೆಸುತ್ತಿದ್ದೇವೆ. ಎಷ್ಟೋ ಸಲ ಪೇರೆಂಟ್ಸ್ ತಮ್ಮ ಮಗುವಿನ ತಪ್ಪುಗಳನ್ನು ನಿರ್ಲಕ್ಷಿಸುತ್ತಾರೆ. ಇದು ಸರಿಯಲ್ಲ, ನಮ್ಮ ಮಗು ಎಂದು ಅವನು ಮಾಡಿದ್ದೆಲ್ಲ ಸರಿ ಎಂದು ತರ್ಕಿಸಬಾರದು. ತಪ್ಪಾದಾಗೆಲ್ಲ ಖಂಡಿಸಿ, ಗದರಿಸಿ ತಿದ್ದಬೇಕು. ನಾನು ಬಾಲ್ಯದಲ್ಲಿ ಅತಿ ಜವಾಬ್ದಾರಿಯುತವಾಗಿ, ಅತಿ ಸುರಕ್ಷಿತ ವಾತಾವರಣದಲ್ಲಿ ಬೆಳೆದು ಬಂದವಳು.

ಇತ್ತೀಚಿನ ಮಕ್ಕಳಂತೂ ಅಗತ್ಯಕ್ಕಿಂತ ಹೆಚ್ಚು ಸೆನ್ಸಿಟಿವ್ ‌ಎಂದೇ ಹೇಳಬೇಕು. ಹಿರಿಯರು `ಬೇಡ’ ಎಂದದ್ದನ್ನು ವಾದ ಮಾಡದೆ ಒಪ್ಪಿಕೊಳ್ಳಬೇಕಾದ ಅಗತ್ಯವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ನನ್ನ ಪೇರೆಂಟ್ಸ್ ಸಹ ಎಂದೂ ನನ್ನ ಮೇಲೆ ಹೆಚ್ಚಿನ ಒತ್ತಡ ಹೇರಿದವರಲ್ಲ. ನಾನು ನಟನೆಯನ್ನು ಕೆರಿಯರ್‌ ಆಗಿಸಿಕೊಳ್ಳುತ್ತೇನೆ ಎಂದಾಗ, ಅವರು ನಿರಾಕರಿಸಲಿಲ್ಲ ಬದಲಿಗೆ ಪ್ರೋತ್ಸಾಹ ನೀಡಿದರು.

ನಟನೆ ಆಕಸ್ಮಿಕವಲ್ಲ

ನಾನು ಬಾಲ್ಯದಿಂದ ಮುಂದೆ ಹಾಗಾಗಬೇಕು, ಹೀಗಾಗಬೇಕು ಎಂದೆಲ್ಲ ಬಗೆಬಗೆಯ ಕನಸು ಕಂಡಿದ್ದೆ. ಪ್ರತಿ ವರ್ಷ ನನ್ನ ಗುರಿ ಬದಲಾಯಿಸಿಕೊಳ್ಳುತ್ತಿದ್ದೆ. ನಟನೆಯ ಮೂಲಕ ನಾವು ಹೆಚ್ಚಿನದನ್ನು ಸಾಧಿಸಬಹುದು ಎಂಬುದನ್ನು ಕಂಡುಕೊಂಡೆ. ಹಾಗಾಗಿಯೇ ಇದನ್ನೇ ನನ್ನ ಅಂತಿಮ ಕೆರಿಯರ್‌ ಆಗಿ ಆರಿಸಿದೆ. ನಟನೆ ನನ್ನ ವೃತ್ತಿ ಮಾತ್ರವಲ್ಲದೆ, ಪ್ರವೃತ್ತಿಯೂ ಹೌದು. ಭಾವುಕಳಾದ ನಾನು ಅದನ್ನು ಬಹಳ ಡೀಪಾಗಿ ತೆಗೆದುಕೊಂಡಿದ್ದೇನೆ!

ಸಂತೃಪ್ತಿ ತಂದ ಕೆರಿಯರ್

ನಾನು ನನ್ನ ಕೆರಿಯರ್‌ ನಿಂದ ಸಂತೃಪ್ತಿ ಕಂಡುಕೊಂಡಿದ್ದೇನೆ. ನಾನು ಬಯಸಿದ್ದಕ್ಕಿಂತ ಎಲ್ಲ ನನಗೆ ಹೆಚ್ಚಾಗಿಯೇ ಸಿಗುತ್ತಿದೆ ನಟನೆ ಮಾತ್ರವಲ್ಲದೆ, ಕಥೆ, ಕಾದಂಬರಿ ಬರೆಯುವುದು ನನ್ನ ಅಚ್ಚುಮೆಚ್ಚಿನ ಹವ್ಯಾಸ! ಹಿರಿತೆರೆಗಿಂತಲೂ ನನಗೆ ಕಿರುತೆರೆ ಎಂದರೆ ಪಂಚಪ್ರಾಣ!

ಜಿ. ಸುಮಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ