ಇರಾನ್ ಸರ್ಕಾರದ ವಿರುದ್ದ ಜನಾಕ್ರೋಶ ಭುಗಿಲೆದಿದ್ದು, 13 ದಿನಗಳಿಂದ ಜನ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಇರಾನ್ ಸರ್ಕಾರ ದೇಶದಾದ್ಯಂತ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿದರೂ ಸಹ ಉದ್ವಿಗ್ನತೆ ಕಡಿಮೆಯಾಗಿಲ್ಲ.
ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ನಡೆಸಿದ ಗುಂಡಿನ ದಾಳಿಯಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಸಾವಿನ ಸಂಖ್ಯೆ ಹೆಚ್ಚುತ್ತಿದೆ. ರಾಜಧಾನಿ ಟೆಹ್ರಾನ್‌ನ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಗುಂಡಿನ ದಾಳಿಯೇ ಹೆಚ್ಚಿನ ಸಾವುಗಳಿಗೆ ಕಾರಣ ಎನ್ನಲಾಗುತ್ತಿದೆ.
ಉತ್ತರ ಟೆಹ್ರಾನ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಭದ್ರತಾ ಪಡೆಗಳು ಏಕಾಏಕಿ ಗುಂಡಿನ ಮಳೆ ಸುರಿಸಿದ್ದು, 30ಕ್ಕೂ ಹೆಚ್ಚು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪ್ರತಿಭಟನೆ ಹೆಚ್ಚುತ್ತಿದ್ದಂತೆ ಸರ್ಕಾರ ದೇಶಾದ್ಯಂತ ಇಂಟರ್ನೆಟ್, ದೂರವಾಣಿ ಸಂಪರ್ಕ ಸ್ಥಗಿತಗೊಳಿಸಿದೆ. ಆದರೂ ಹೋರಾಟಗಳು ಮುಂದುವರೆದಿವೆ ಎಂದು ತಿಳಿದುಬಂದಿದೆ.
ಆರ್ಥಿಕತೆ ಕುಸಿತದಿಂದ ಡಿ.28ರಂದು ತೆಹ್ರಾನ್ ನಲ್ಲಿ ಆರಂಭವಾದ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ʼಸರ್ವಾಧಿಕಾರಿಗೆ ಸಾವಾಗಲಿʼ ಹಾಗೂ “ಖಮೇನಿ ನಾಶವಾಗಲಿ” ಎಂದು ಘೋಷಣೆ ಕೂಗುತ್ತಿದ್ದಾರೆ.
ಈ ನಡುವೆ ಇರಾನ್ ಪ್ರತಿಭಟನಾಕಾರರನನ್ನು ಹಿಂಸಾತ್ಮಕವಾಗಿ ಕೊಂದರೆ ಅಮೆರಿಕಾ ಮಧ್ಯಪ್ರವೇಶಿಸಿ ಅವರ ರಕ್ಷಣೆಗೆ ಮುಂದಾಗಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ಯುದ್ದಕ್ಕೆ ಸಿದ್ದ ಎಂಬ ಸಂದೇಶ ನೀಡಿದ್ದಾರೆ.
ನಿನ್ನೆ ಹೇಳಿಕೆ ನೀಡಿದ್ದ ಇರಾನ್ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ, ಡೊನಾಲ್ಡ್ ಟ್ರಂಪ್ ವಿರುದ್ಧ ಕಿಡಿಕಾರಿದ್ದರು. ನಿಮ್ಮ ದೇಶದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿ, ಬೇರೆ ದೇಶಗಳ ಆಡಳಿತದಲ್ಲಿ ಕೈಹಾಕದಿರಿ ಎಂದು ಎಚ್ಚರಿಕೆ ನೀಡಿದ್ದರು.
ಇರಾನ್‌ನಲ್ಲಿ ವಿದೇಶಿ ಬೆಂಬಲಿತ ಪ್ರತಿಭಟನೆ ಅಥವಾ ಭಯೋತ್ಪಾದಕ ಏಜೆಂಟ್‌ಗಳನ್ನು ಸಹಿಸುವುದಿಲ್ಲ. ಕೆಲವು ಗಲಭೆಕೋರರು ಸರ್ಕಾರಿ ಆಸ್ತಿಗೆ ಹಾನಿ ಮಾಡುವ ಮೂಲಕ ಟ್ರಂಪ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇರಾನ್ ವಿದೇಶಿ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದರು.
ಇರಾನ್ ಯುವಕರು ದೇಶದ ಪರವಾಗಿ ಒಂದಾಗಿ ನಿಲ್ಲಬೇಕು. ಬಾಹ್ಯ ಒತ್ತಡಗಳಿಗೆ ಮಣಿಯದೆ ಏಕತೆ ಕಾಪಾಡಿಕೊಳ್ಳಿ. ಯಾವುದೇ ಸ್ಥಿತಿ ಎದುರಿಸಲು ಸಿದ್ಧರಾಗಿ. ಒಗ್ಗಟ್ಟಿನ ಬಲ ಹೊಂದಿರುವ ರಾಷ್ಟ್ರವು ಯಾವುದೇ ಶತ್ರು ದೇಶವನ್ನು ಸೋಲಿಸುವ ಶಕ್ತಿ ಹೊಂದಿರುತ್ತದೆ ಎಂದು ಹೇಳುವ ಮೂಲಕ ಅವರು ಇರಾನಿನ ಯುವಕರನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದಾರೆ.





